ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ, ಕಿಂಗ್‌ಪಿನ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬೇರೆ ಜಿಲ್ಲೆಗಳಿಂದ ಹುಡುಗಿಯರನ್ನು ಕರೆತಂದು ಈ ಅಕ್ರಮ ದಂಧೆ ನಡೆಸುತ್ತಿದ್ದರು.
ಬೇರೆ ಜಿಲ್ಲೆಗಳಿಂದ ಹುಡುಗಿಯರನ್ನು ಕರೆಸಿ ದಂಧೆ ನಡೆಸುತ್ತಿದ್ದ ಕಿಂಗ್‌ಪಿನ್ ಅರೆಸ್ಟ್
ರಾಯಚೂರು: ಬಿಸಿಲೂರು ರಾಯಚೂರು ಜಿಲ್ಲೆಯಲ್ಲೂ ವೇಶ್ಯಾವಾಟಿಕೆ ದಂಧೆಯೊಂದು ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಈ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲೆಯ ಸಿಂಧನೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳು ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಹಟ್ಟಿ ರಸ್ತೆಯ ನ್ಯಾಶನಲ್ ಲೇಔಟ್ ನಲ್ಲಿ ಈ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಬಂಧಿತರನ್ನ ವಿಜಯ್, ಗಂಗಾಧರ, ಮೆಹಬೂಬ್ ಎಂದು ಗುರುತಿಸಲಾಗಿದೆ.
ಬಿಸಿಲ ಧಗೆಯ ನಡುವೆ ರಾಯಚೂರಲ್ಲೂ ಮಾಂಸದಂಧೆ
ಈ ಆರೋಪಿಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹುಡುಗಿಯರನ್ನ ಇಲ್ಲಿಗೆ ಕರೆಸಿ ಗಿರಾಕಿಗಳಿಗೆ ಪೂರೈಕೆ ಮಾಡುವ ಮೂಲಕ ಹಣ ಮಾಡುತ್ತಿದ್ದರು. ಈ ಪ್ರಕರಣದ ಪ್ರಮುಖ ಕಿಂಗ್ ಪಿನ್ ವಿಜಯ್ ಎಂದು ತಿಳಿದು ಬಂದಿದ್ದು, ಪೊಲೀಸರು ಈಗ ಮೂವರನ್ನು ವಶಕ್ಕೆ ಪಡೆದು ವಿಚಾರಣ ನಡೆಸುತ್ತಿದ್ದು, ಘಟನೆ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾನ್ಯವಾಗಿ ಇಂತಹ ಚಟುವಟಿಕೆಗಳು ಕೆಲವು ಪ್ರವಾಸಿ ತಾಣಗಳಲ್ಲಿ ಕದ್ದುಮುಚ್ಚಿ ಸಾಮಾನ್ಯ ಎಂಬಂತೆ ನಡೆಯುತ್ತಿರುತ್ತವೆ. ಆದರೆ ಬಿಸಿಲಿನ ದಾಹ ಭಯಾನಕವಾಗಿರುವ ರಾಯಚೂರಿನಲ್ಲಿ ಬೇಸಿಗೆಯಲ್ಲಿ ಉಸಿರಾಡಿದರೆ ಸಾಕು ಎಂಬಂತಹ ಸ್ಥಿತಿ ಇದ್ದು, ಇಂತಹ ಸ್ಥಳದಲ್ಲೂ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ..


