ಕೆಲವು ಸಂಬಂಧಗಳೇ ಹಾಗೆ.. ಅವರು ಪ್ರೀತಿಸುತ್ತಿರಲಿಲ್ಲ.. ಆದರೆ ಸ್ನೇಹಿತರಗಿಂತ ಹೆಚ್ಚಾಗಿದ್ದರು. ಇವತ್ತು ಜೊತೆಗಿಲ್ಲ. ಮನಸ್ಸಿಗೆ ಆಗುತ್ತಿರುವ ಗಾಯ ಮಾತ್ರ ಅಷ್ಟಿಷ್ಟಲ್ಲ, ಮರೆಯಲು ಸಾಧ್ಯವೇ ಆಗುತ್ತಿಲ್ಲ.. ಹೌದು, ಈ ಲವ್ ಬ್ರೇಕ್‌ ಅಪ್ ಆದವರಿಗಿಂತ ಅರ್ಧಂಬರ್ಧ ಸಂಬಂಧದಲ್ಲಿದ್ದವರು ಕೊರಗುವುದೇ ಹೆಚ್ಚು. ಹಾಗಿದ್ದರೆ ಯಾಕಿರಬಹುದು?

ಪ್ರೀತಿಸಿ ಆ ಪ್ರೀತಿ ಮುರಿದು ಬಿದ್ದರೆ ಜಗಳವಾಗಿರುತ್ತದೆ. ಸಹವಾಸವೇ ಬೇಡ ಎಂದು ದೂರ ಆಗಿರುತ್ತಾರೆ. ಆದರೆ ಯಾವುದೇ ಹೆಸರಿಲ್ಲ ಸಂಬಂಧಗಳು ಹಾಗಲ್ಲ. ದಿನವೀಡಿ ಚಾಟ್ ಮಾಡುತ್ತ, ನಗುತ್ತಾ, ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದವರು ದೂರವಾಗಿ ಬಿಟ್ಟರೆ ಹೇಗೆ? ಅವರನ್ನು ಮರೆಯಲು ಆಗದೇ ಕೊರಗುವವರು ಅನೇಕರಿದ್ದಾರೆ. ಅದು ಯಾಕೆ ಹಾಗೆ ಆಗುತ್ತದೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಹೇಗೆ ದೂರ ಆದರು ಅನ್ನೋದೇ ಗೊತ್ತಾಗಲ್ಲ

ಅವರದ್ದು ಅಧಿಕೃತ ಲವ್ ಆಗಿದ್ದರೆ, ಸಂಬಂಧದಲ್ಲಿ ಸರಿ ಬರದಿದ್ದರೆ.. ನಾವಿಬ್ಬರು ದೂರ ಆಗಿಬಿಡೋಣ ಎಂದು ಅಲ್ಲಿಗೆ ಫುಲ್ ಸ್ಟಾಪ್ ಇಡ್ತಾರೆ. ಇಲ್ಲಿ ಹಾಗಲ್ಲ. ನಿಮ್ಮೊಂದಿಗೆ ಹತ್ತಿರ ಆಗೋದು ಕಡಿಮೆ ಮಾಡ್ತಾರೆ. ಆರಂಭಲ್ಲಿ ಮೆಸೇಜ್ ಕಮ್ಮಿ ಮಾಡ್ತಾರೆ, ಕಾಲ್ ರಿಸೀವ್ ಮಾಡಲ್ಲ.. ಕೊನೆಗೆ ಒಂದು ದಿನ ಸದ್ದಿಲ್ಲದೇ ಮಾಯವಾಗಿ ಬಿಡುತ್ತಾರೆ.. ನಾನು ಏನು ತಪ್ಪು ಮಾಡಿದೆ? ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರವೇ ಸಿಗಲ್ಲ. ಈ ವಿಷಯ ಮನಸ್ಸಿಗೆ ಹೆಚ್ಚು ಕಾಡುತ್ತದೆ..

ಪ್ರೀತಿಗೆ ಯಾವ ಹೆಸರೂ ಬೇಕಾಗಿಲ್ಲ

ಇಲ್ಲಿ ನಾವು ಜನರಿಗೆ ಪ್ರೇಮಿಗಳು ಎಂದು ಹೇಳಿಕೊಳ್ಳದೆ ಇರಬಹುದು. ಆದರೆ ದಿನಾ ಬೆಳಗ್ಗೆಯಿಂದ ರಾತ್ರಿವರೆಗೂ ಮಾತಾಡಿದಾಗ..ಕಷ್ಟ-ಸುಖ ಹಂಚಿಕೊಂಡಾಗ ಸಹಜವಾಗಿಯೇ ಪ್ರೀತಿ ಹುಟ್ಟಿಕೊಳ್ಳುತ್ತದೆ. ಅದು ನಿಮಗೆ ಪ್ರೀತಿ ಅಲ್ಲ ಎಂದೆನಿಸಿರಬಹುದು. ಆದ್ರೆ ಮನಸ್ಸಲ್ಲಿ ಹುಟ್ಟಿದ ಭಾವನೆ ಮಾತ್ರ ನೂರಕ್ಕೆ ನೂರು ನಿಜವಾಗಿರುತ್ತದೆ.

ಕನಸುಗಳು ಕಾಡುತ್ತವೆ

ಬಹುತೇಕ ಇಂಥ ಸಂಬಂಧಗಳು ಹೆಚ್ಚು ದಿನ ಒಟ್ಟಿಗೆ ಇರೋಕೆ ಆಗೋದಿಲ್ಲ. ಹಾಗಾಗಿ ಅವರ ಕೆಟ್ಟ ಗುಣಗಳಾಗಲಿ ಅಥವಾ ಜಗಳಗಳಾಗಲಿ ಕಣ್ಣಿಗೆ ಬಿದ್ದಿರಲ್ಲ. ಅವರು ತುಂಬಾ ಒಳ್ಳೆಯವರು, ಅವರ ಜೊತೆ ಜೀವನ ಚೆನ್ನಾಗಿರುತ್ತೆ ಎಂಬ ಕಲ್ಪನೆ ಇರುತ್ತದೆ. ಅಲ್ಲಿ ಕೈತಪ್ಪಿ ಹೋಗಿರೋದು ಆ ವ್ಯಕ್ತಿ ಮಾತ್ರವಲ್ಲ ಅವರ ಜೊತೆಗೆ ನಿಮ್ಮ ಕನಸು ಕೂಡ ಹೌದು.

ಛೇ.. ಒಂದಾಗಿದ್ರೆ ಎಂಬ ಕೊರಗು..

ಇಲ್ಲಿ ನಾವು ಇಷ್ಟಪಟ್ಟ ವ್ಯಕ್ತಿ ದೂರವಾದಾಗ ಕೊರಗೋದು ನಿಜ. ಛೇ ನಾವಿಬ್ಬರೂ ಜೊತೆಯಾಗಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ? ಎಂಬ ಯೋಚನೆ ದಿನಕ್ಕೆ ನೂರಾರು ಬಾರಿ ಬಂತು ತಲೆಯನ್ನ ಕೆರೆಯುತ್ತಿರುತ್ತದೆ.

ನಿವೇದನೆಗೂ ಇಲ್ಲ ಅವಕಾಶ

ಇನ್ನೊಂದು ವಿಚಾರ ಅಂದ್ರೆ ಆ ವ್ಯಕ್ತಿ ನಿಮ್ಮಿಂದ ದೂರ ಆದ್ಮೇಲೆ ನಾವು ಅದನ್ನು ಬೇರೆಯವರ ಹತ್ತಿರ ಹೇಳಿಕೊಳ್ಳುವ ಹಾಗೆಯೂ ಇಲ್ಲ. ಒಂದು ವೇಳೆ ಹಂಚಿಕೊಂಡರೆ ನೀವಿಬ್ಬರೂ ಲವ್ ಮಾಡ್ತಿರಲಿಲ್ಲ. ಮತ್ಯಾಕೆ ಅಂತ ಕೊರಗು ಎಂದು ಜನ ಹಗುವರಾಗಿ ಮಾತಾಡ್ತಾರೆ. ಇನ್ನೊಂದು ನಿಮ್ಮ ಬಗ್ಗೆ ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.. ಹೀಗಾಗಿ ಬಿಸಿತುಪ್ಪ ಬಾಯಲ್ಲಿ ಇಟ್ಕೊಂಡ ಪರಿಸ್ಥಿತಿ ಆಗಿರುತ್ತದೆ..

ನೀವೇ ಯೋಚಿಸಿ ಯಾಗೆ ಹೀಗೆ ಆಗುತ್ತದೆ.. ನಿಮ್ಮ ಆ ಸಂಬಂಧಕ್ಕೆ ಹೆಸರಿಲ್ಲದಿದ್ದರೂ, ನಿಮ್ಮ ಕಣ್ಣೀರಂತೂ ಸುಳ್ಳಲ್ಲ. ಅಲ್ಲಿ ನಿಮ್ಮ ಭಾವನೆಗಳು ನಿಜವಾಗಿದ್ದವು. ಅದಕ್ಕೆ ಬೇರೆಯವರ ಮಾತು ಕೇಳಿ ನಿಮ್ಮನ್ನು ನೀವು ದೂಷಿಸಿಕೊಳ್ಳಬೇಡಿ. ಇಂಥ ನೋವಿನಿಂದ ಹೊರಬರಲು ಸ್ವಲ್ಪ ಸಮಯ ಬೇಕಾಗಬಹುದು.. ನಿಧಾನವಾಗಿ ನೀವೇ ಸರಿಯಾಗ್ತೀರಿ.. ಚಿಂತೆ ಮಾಡಬೇಡಿ..!