ಗುಜರಾತ್ ವಿಮಾನ ದುರಂತವು ಕೆಲವು ಕುಟುಂಬಗಳಲ್ಲಿನ ಮನಸ್ತಾಪಗಳನ್ನು ಕಡಿಮೆ ಮಾಡಿ, ಸಂಬಂಧಗಳನ್ನು ಗಟ್ಟಿಗೊಳಿಸಿದೆ ಎಂದು ನಟಿ ರಾಗೇಶ್ವರಿ ಲೂಂಬಾ ಅಭಿಪ್ರಾಯಪಟ್ಟಿದ್ದಾರೆ. ಅದು ಹೇಗೆ?
ಗುಜರಾತ್‌ನ ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಜೀವಗಳಿಗೆ ದೇಶವೇ ಶೋಕ ವ್ಯಕ್ತಪಡಿಸುತ್ತಿದೆ. ಶಾರುಖ್ ಖಾನ್‌ನಿಂದ ಹಿಡಿದು ಅಮಿತಾಬ್ ಬಚ್ಚನ್ ವರೆಗೆ, ಬಾಲಿವುಡ್ ತಾರೆಯರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಗಾಯಕಿ ಮತ್ತು ನಟಿ ರಾಗೇಶ್ವರಿ ಲೂಂಬಾ ಅವರು ಈ ಕುರಿತು ಒಂದು ವಿಶಿಷ್ಟ ಅಭಿಪ್ರಾಯ ಹೊರಹಾಕಿದ್ದಾರೆ. ಈ ದುರಂತ ಕೆಲವು ಕುಟುಂಬಗಳಲ್ಲಿದ್ದ ಮನಸ್ತಾಪಗಳನ್ನು ಹೋಗಲಾಡಿಸಿ ಮನಸ್ಸುಗಳನ್ನು ಹೇಗೆ ಹತ್ತಿರ ತಂದಿದೆ ಎಂಬುದನ್ನು ಹಂಚಿಕೊಂಡಿದ್ದಾರೆ.
ರಾಗೇಶ್ವರಿ ಇನ್‌ಸ್ಟಾಗ್ರಾಮ್ ತಾಣದಲ್ಲಿ ಅಹಮದಾಬಾದ್ ವಿಮಾನ ದುರಂತದ ನಂತರದ ಪರಿಣಾಮಗಳನ್ನು ಪ್ರತಿಬಿಂಬಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ನಿಮಗೆ ತಿಳಿದಿದೆಯೇ? ಹೃದಯವಿದ್ರಾವಕ ವಿಮಾನ ಅಪಘಾತದ ನಂತರ ಕೆಲವು ಜನ ತಮ್ಮ ಕುಟುಂಬಗಳಿಗೆ ಕರೆ ಮಾಡಲು ಪ್ರಾರಂಭಿಸಿದ್ದಾರೆ. ನನಗೆ ಪರಿಚಿತರಾದ ಇಬ್ಬರು ದಂಪತಿಗಳು, ತಾವು ಮಾಡಬೇಕೆಂದುಕೊಂಡಿದ್ದ ವಿಚ್ಛೇದನವನ್ನು ಕೈಬಿಡಲು ನಿರ್ಧರಿಸಿದ್ದಾರೆ. ಕೆಲವು ಕುಟುಂಬಗಳು ಇದ್ದಕ್ಕಿದ್ದಂತೆ ತಮ್ಮ ಅಹಂಕಾರವನ್ನು ಮೃದುಗೊಳಿಸಲು, ತಮ್ಮ ವಿವಾದಗಳನ್ನು ಪರಿಹರಿಸುವ ಮಾತುಕತೆಗೆ ಅವಕಾಶ ಮಾಡಿಕೊಟ್ಟಿವೆ. ಏನು ಬದಲಾಯಿತು? ನಮ್ಮ ಸುಖ, ಆನಂದ ಎಲ್ಲಿದೆ ಎಂಬುದನ್ನು ನಿಜವಾಗಿ ಅರಿತುಕೊಳ್ಳಬೇಕಾದರೆ ಮನುಷ್ಯ ಒಂದಲ್ಲ ಒಂದು ದೊಡ್ಡ ವಿಪತ್ತನ್ನು ಕಾಣಬೇಕಾಗುತ್ತದೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಹೀಗಾಗಿಯೇ ಜೀವನದಲ್ಲಿ ವೈಪರೀತ್ಯಗಳು ಅತ್ಯಗತ್ಯವಾಗಿವೆ" ಎಂದು ರಾಗೇಶ್ವರಿ ಬರೆದಿದ್ದಾರೆ.
"ನಾವು ಎತ್ತರವನ್ನು ಅನುಭವಿಸಲು ಕೆಳಗಿನ ಹಂತದಿಂದ ಹೋಗಬೇಕು. ಯಶಸ್ಸಿನ ಸಂತೋಷಗಳನ್ನು ನಿಜವಾಗಿಯೂ ಅನುಭವಿಸಲು ವೈಫಲ್ಯಗಳ ಮೂಲಕ ಹೋಗಬೇಕು. ಈ ರೀತಿಯ ವಿಪತ್ತು ನಮ್ಮನ್ನು ನಿಜವಾಗಿಯೂ ಮುಖ್ಯವಾದುದನ್ನು - ಬದುಕು ಕ್ಷಣಿಕ ಮತ್ತು ಸಂಬಂಧಗಳು ಪವಿತ್ರ ಎಂಬುದರ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ನೀವು ಈಗ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತೀರಿ ಎಂದಿದ್ದರೆ, ನಿಜವಾಗಿಯೂ ಅವರನ್ನು ಅಮೂಲ್ಯ ಮತ್ತು ವಿಶೇಷವೆಂದು ಭಾವಿಸುತ್ತೀರಿ ಎಂದರ್ಥ. ಜನರು ನೀವು ಏನು ಧರಿಸುತ್ತೀರಿ ಅಥವಾ ನೀವು ಹೇಗೆ ಕಾಣುತ್ತೀರಿ ಎಂಬುದನ್ನು ಮರೆತುಬಿಡುತ್ತಾರೆ- ಆದರೆ ನೀವು ಅವರನ್ನು ಹೇಗೆ ಕಾಣುತ್ತೀರಿ ಎಂಬುದನ್ನು ಮರೆಯುವುದಿಲ್ಲ. ಆದ್ದರಿಂದ, ಜನರನ್ನು ಅಮೂಲ್ಯವೆಂದು ಭಾವಿಸಿ. ನಿಮ್ಮ ಕುಟುಂಬವನ್ನು ಅಮೂಲ್ಯವೆಂದು ಭಾವಿಸಿ" ಎಂದಿದ್ದಾರೆ.
ವೀಡಿಯೊವನ್ನು ಹಂಚಿಕೊಂಡ ರಾಗೇಶ್ವರಿ, ಜನರಿಗೆ ನಿಜವಾಗಿಯೂ ಮುಖ್ಯವಾದದ್ದನ್ನು ನೆನಪಿಸಲು ವಿಪತ್ತೊಂದು ಬೇಕಾಗುತ್ತದೆ ಎಂಬುದನ್ನು ಹೇಳಿದ್ದಾರೆ. ಜೀವನ ದುರ್ಬಲ ಮತ್ತು ಸಂಬಂಧವೇ ಪವಿತ್ರ. ಹಾಗಂತ ದುರಂತಗಳಿಗೆ, ಅಪಾಯಗಳಿಗೆ ಕಾಯಬೇಡಿ. ಇನ್ನೊಬ್ಬರನ್ನು ತಲುಪಿ, ಕ್ಷಮಿಸಿ, ಮೃದುವಾಗಿ ಮಾತನಾಡಿ, ದಯೆಯಿಂದ ಬದುಕಲು ಮುಂದಾಗಿ.
ಒಂದೇ ದಿನ 19 ಮಕ್ಕಳನ್ನು ಭೇಟಿಯಾದ ವೀರ್ಯದಾನಿ: ವಿಡಿಯೋ ವೈರಲ್
ನೆಟಿಜನ್‌ಗಳು ಈ ಕುರಿತು ರಾಗೇಶ್ವರಿಯವರ ದೃಷ್ಟಿಕೋನವನ್ನು ಸ್ವಾಗತಿಸಿದ್ದಾರೆ. "ತುಂಬಾ ನಿಜ. ಇಷ್ಟು ದೀರ್ಘ ಸಮಯದ ನಂತರ ನಿಮ್ಮನ್ನು ನೋಡಿ ನಿಜವಾಗಿಯೂ ಸಂತೋಷವಾಯಿತು.. ಹದಿಹರೆಯದ ನಾಸ್ಟಾಲ್ಜಿಯಾ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ನಿಜ, ಜೀವನ ಮೌಲ್ಯಯುತ. ಉಳಿದೆಲ್ಲವೂ ಕೇವಲ ಪ್ರಚಾರ ಮತ್ತು ವೈಭವೀಕರಣ. ಕುಟುಂಬ, ಸಂಪರ್ಕಗಳು, ಪ್ರೀತಿಪಾತ್ರರು... ಅವರೊಂದಿಗೆ ಸಮಯ ಮುಖ್ಯʼʼ ಎಂದಿದ್ದಾರೆ ಇನ್ನೊಬ್ಬರು.
ಮನಶ್ಶಾಸ್ತ್ರಜ್ಞರು ಇದನ್ನು ಒಪ್ಪುತ್ತಾರೆ. ಒಂದು ದುರಂತದ ಬಳಿಕ ಮನುಷ್ಯನ ಮನಸ್ಸು ನಾನಾ ಭಾವನೆಗಳ ಮೂಲಕ ಹಾದುಹೋಗುತ್ತದೆ. ಆ ದುರಂತದ ಭಾಗವಾಗಿದ್ದವರು, ಅದರಲ್ಲಿ ಬದುಕುಳಿದವರಲ್ಲಿ ಅದು ಶಾಕ್, ಡಿಪ್ರೆಶನ್ ಮೊದಲಾದವುಗಳನ್ನು ಉಳಿಸಿ ಹೋಗಬಲ್ಲುದು. ಕೆಲವರು ಕಾಲಕ್ರಮೇಣ ಚೇತರಿಸಿಕೊಳ್ಳಬಹುದು, ಕೆಲವರು ಹಾಗೇ ಉಳಿಯಬಹುದು. ಆದರೆ ಈ ದುರಂತಕ್ಕೆ ಸಾಕ್ಷಿಯಾದವರಲ್ಲಿ, ಈ ಬದುಕು ಎಷ್ಟು ಕ್ಷಣಿಕ, ಯಾವುದೇ ಕ್ಷಣದಲ್ಲಿಯೂ ನಮಗೂ ಏನು ಬೇಕಿದ್ದರೂ ಆಗಬಹುದು, ಆದ್ದರಿಂದ ದೊರೆತಿರುವ ಈ ಚುರುಪಾರು ಜೀವನದಲ್ಲಿ ಆನಂದವನ್ನು ಅನುಭವಿಸೋಣ ಎಂಬ ಭಾವ ಮೂಡಬಹುದು. ಇದು ದಾಂಪತ್ಯಗಳಲ್ಲಿ ಸಾಮರಸ್ಯ ಮೂಡಲೂ ಕಾರಣವಾಗಬಹುದು.
