ವೀರ್ಯದಾನಿಯೊಬ್ಬರು ತಮ್ಮ 19 ಮಕ್ಕಳನ್ನು ಭೇಟಿಯಾಗಿರುವ ವಿಡಿಯೋ ವೈರಲ್ ಆಗಿದೆ. ಮೈಕೆಲ್ ರುಬಿನೊ ಎಂಬ ವೀರ್ಯದಾನಿ ತಮ್ಮ ಮಕ್ಕಳನ್ನು ಮೊದಲ ಬಾರಿಗೆ ಭೇಟಿಯಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗಾಗಿ ವಿಶೇಷ ಔತಣಕೂಟವನ್ನೂ ಆಯೋಜಿಸಿದ್ದರು.
ನವದೆಹಲಿ: ವೀರ್ಯದಾನಿಯೊಬ್ಬರು ತಮ್ಮ 19 ಮಕ್ಕಳನ್ನು ಭೇಟಿಯಾಗಿರುವ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿದೇಶಗಳಲ್ಲಿ ವೀರ್ಯದಾನ ಮಾಡೋದು ವೃತ್ತಿಯಾಗಿ ಬದಲಾಗಿದೆ. ಅಮೆರಿಕೆ, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ತಾವು ವೀರ್ಯದಾನಿಗಳೆಂದು ಪುರುಷರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸಮಾಜದಲ್ಲಿ ವೀರ್ಯದಾನಿಗಳನ್ನು ಗೌರವದಿಂದ ನೋಡಲಾಗುತ್ತದೆ. ವೀರ್ಯದಾನಕ್ಕೆ ಒಂದಿಷ್ಟು ಸಂಭಾವನೆಯನ್ನು ಪಡೆಯುತ್ತಾರೆ. ಭವಿಷ್ಯದಲ್ಲಿ ಹುಟ್ಟುವ ಮಕ್ಕಳಿಗೂ ಮತ್ತು ವೀರ್ಯದಾನಿಗೂ ಯಾವುದೇ ಸಂಬಂಧವಿರಲ್ಲ. ಮಕ್ಕಳು 18 ವಯಸ್ಸು ಆದ ಬಳಿಕ ತಮ್ಮ ಬಯೋಲಾಜಿಕಲ್ ತಂದೆಯನ್ನು ಭೇಟಿಯಾಗಬಹುದು. ಇದೀಗ ಓರ್ವ ವೀರ್ಯದಾನಿ ಏಕಕಾಲದಲ್ಲಿ ತನ್ನ 19 ಮಕ್ಕಳನ್ನು ಭೇಟಿಯಾಗಿದ್ದಾನೆ.
ಲಾಸ್ ಏಂಜಲೀಸ್ ನಿವಾಸಿ ಮೈಕೆಲ್ ರುಬಿನೊ ತಮ್ಮ 19 ಮಕ್ಕಳನ್ನು ಮೊದಲ ಬಾರಿಗೆ ಭೇಟಿಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರುಬಿನೊ ಈ ಹಿಂದೆ ಒಮ್ಮೆಯೂ ತಮ್ಮ ಮಕ್ಕಳನ್ನು ಭೇಟಿಯಾಗಿರಲಿಲ್ಲ. ಮೈಕೆಲ್ ರುಬಿನೊ ಅವರ ಮಕ್ಕಳೆಲ್ಲರೂ 16 ರಿಂದ 21 ವರ್ಷದವರಾಗಿದ್ದಾರೆ. 19ರಲ್ಲಿ 11 ಮಕ್ಕಳು ರುಬಿನೋ ಅವರಂತೆಯೇ ನೀಲಿ ಕಣ್ಣುಗಳನ್ನು ಹೊಂದಿದ್ದಾರೆ. 19 ಮಕ್ಕಳ ಜೊತೆ ಮೈಕೆಲ್ ರುಬಿನೋ ಅವರ ಸಂದರ್ಶನ ಯುಟ್ಯೂಬ್‌ನಲ್ಲಿ 10 ಮಿಲಿಯನ್ ವ್ಯೂವ್ ಪಡೆದುಕೊಂಡಿದೆ.
ಮೈಕೆಲ್ ರುಬಿನೋ ವೀರ್ಯದಾನಿ ಆಗಿದ್ದೇಕೆ?
ಮೈಕೆಲ್ ರುಬಿನೋ ಒಳ್ಳೆಯ ಚಿತ್ರಕಲಾವಿದರಾಗಿದ್ದು, ಸುಂದರವಾದ ಪೇಟಿಂಗ್ ಮಾಡುತ್ತಿರುತ್ತಾರೆ. ತಮ್ಮ 30ನೇ ವಯಸ್ಸಿನಲ್ಲಿ ಮೈಕೆಲ್ ರುಬಿನೋ ವೀರ್ಯದಾನಿಯಾಗಿ ಬದಲಾದರು. ವೀರ್ಯದಾನ ಒಳ್ಳೆಯ ಕೆಲಸವಾಗಿದ್ದು, ಇದರಿಂದ ಹಲವರಿಗೆ ತಮ್ಮ ವಂಶ ಬೆಳೆಸಲು ಸಹಾಯವಾಗುತ್ತದೆ. ಆದ್ದರಿಂದ ವೀರ್ಯದಾನಿಯಾದೆ ಎಂದು ಮೈಕೆಲ್ ರುಬಿನೋ ಹೇಳುತ್ತಾರೆ.
ಸಾಮಾನ್ಯುವಾಗಿ ವೀರ್ಯದಾನಿಗಳು ತಮ್ಮ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸಲ್ಲ. ತಮ್ಮಿಂದ ವೀರ್ಯ ದಾನ ಪಡೆದವರನ್ನು ಸಹ ಭೇಟಿಯಾಗಲು ಇಚ್ಛಿಸಲ್ಲ. ಹಾಗೆ ಅವರಿಗೆ ತಮ್ಮ ಮಾಹಿತಿಯನ್ನು ನೀಡಲ್ಲ. ಆದ್ರೆ ಮೈಕೆಲ್ ರುಬಿನೋ, ವೀರ್ಯದಾನದ ಬ್ಯಾಂಕ್‌ನಲ್ಲಿ ತಮ್ಮ ಹೆಸರನ್ನು ನಮೂದಿಸುತ್ತಿದ್ದರು. ಭವಿಷ್ಯದಲ್ಲಿ ಒಂದಿಬ್ಬರನ್ನು ಭೇಟಿಯಾಗಬಹುದು ಎಂದು ಮೈಕೆಲ್ ರುಬಿನೋ ತಮ್ಮ ಹೆಸರು ಮತ್ತು ವಿವರವನ್ನು ದಾಖಲೆಗಳಲ್ಲಿ ದಾಖಲಿಸುತ್ತಿದ್ದರು.
19 ಮಕ್ಕಳಿಗಾಗಿ ಔತಣಕೂಟ
ಹಲವು ವರ್ಷಗಳ ನಂತರ ಮೈಕೆಲ್ ರುಬಿನೋ ಅವರ ವಿಳಾಸಕ್ಕೆ ಪತ್ರಗಳು ಬರಲಾಂಭಿಸಿದವು. ಈ ಪತ್ರ ಬರೆದವರು ಮೈಕೆಲ್ ರುಬಿನೋ ಅವರನ್ನು ಭೇಟಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದರು. ಹಾಗಾಗಿ ಒಂದೇ ದಿನ ಎಲ್ಲಾ 19 ಮಕ್ಕಳನ್ನು ಭೇಟಿಯಾಗಲು ಮೈಕೆಲ್ ರುಬಿನೋ ನಿರ್ಧರಿಸಿ, ಎಲ್ಲರನ್ನೂ ಮನೆಗೆ ಆಹ್ವಾನಿಸಿದ್ದರು. ಒಂದೇ ದಿನ ತಮ್ಮ 19 ಮಕ್ಕಳನ್ನು ನೋಡಿ ಮೈಕೆಲ್ ರುಬಿನೋ ಸಂತೋಷ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಮಕ್ಕಳಿಗಾಗಿ ಮೈಕೆಲ್ ರುಬಿನೋ ವಿಶೇಷ ಔತಣಕೂಟ ಸಹ ಆಯೋಜಿಸಿದ್ದರು. ಎಲ್ಲ ಮಕ್ಕಳೊಂದಿಗೆ ಮೈಕೆಲ್ ರುಬಿನೋ ಸುತ್ತಾಡುತ್ತಾ ಒಳ್ಳೆಯ ಸಮಯ ಕಳೆದಿದ್ದಾರೆ.
ತಂದೆಯನ್ನು ನೋಡಿ ಖುಷಿಯಾಯ್ತು
ಸಂದರ್ಶನದಲ್ಲಿ ಮಾತನಾಡಿರುವ ಯುವತಿ, ನನಗೆ ನನ್ನ ಬಯೋಲಾಜಿಕಲ್ ತಂದೆಯನ್ನು ಭೇಟಿಯಾಗಬೇಕೆಂಬ ಆಸೆ ಇತ್ತು. ಈಗ ಅದು ಈಡೇರಿದ್ದಕ್ಕೆ ಖುಷಿಯಾಗಿದೆ. ನಾವು 19 ಸೋದರ-ಸೋದರಿಯರು ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. 19 ಜನರಲ್ಲಿಯೂ ಹಲವು ಸಾಮ್ಯತ್ಯೆಗಳಿವೆ. ಕೆಲವರು ಮೈಕೆಲ್ ರುಬಿನೋ ಅವರನ್ನು ಮೈಕ್ ಅಂತಾನೂ ಕೆಲವರು ಡ್ಯಾಡ್ ಅಂತಾನೂ ಕರೆಯುತ್ತಾರೆ. ನನಗೆ ಈಗಾಗಲೇ ತಂದೆ ಇರೋದರಿಂದ ನಾನು ಸಹ ಮೈಕ್ ಅಂತಾನೇ ಕರೆಯುತ್ತೇನೆ ಎಂದು ಹೇಳಿದ್ದಾಳೆ.
ಇನ್ನು ಮೈಕೆಲ್ ರುಬಿನೋ ಮಾತನಾಡಿ, ಮಕ್ಕಳನ್ನು ನೋಡಿ ಖುಷಿಯಾಗಿದೆ. ಇದಕ್ಕಿಂತ ಹೆಚ್ಚೇನು ಸಾಧ್ಯವಿಲ್ಲ. ನಾನು 19 ಮಕ್ಕಳ ತಂದೆ. ನನ್ನ ಮನೆ ಈಗ ಚಿಕ್ಕದಾಗಿದೆ ಎಂದು ಹೇಳಿ ನಕ್ಕಿದ್ದಾರೆ. 2017ರಲ್ಲಿ ಮೈಕೆಲ್ ರುಬಿನೋ ಮತ್ತು ಅವರ ಮಕ್ಕಳ ಸಂದರ್ಶನ ವಿಡಿಯೋ ಯುಟ್ಯೂಬ್‌ನಲ್ಲಿ ಅಪ್ಲೋಡ್ ಆಗಿದೆ.

