ಮಧ್ಯಪ್ರದೇಶದ ಗ್ವಾಲಿಯರ್ ಹೈಕೋರ್ಟ್‌ನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಕಿಡ್ನಾಪ್ ಪ್ರಕರಣವೆಂದು ಆರಂಭವಾದ ಕೇಸ್, ಇಬ್ಬರು ಸಹೋದರಿಯರು ತಮ್ಮ ಗಂಡಂದಿರನ್ನು ವಿನಿಮಯ ಮಾಡಿಕೊಳ್ಳಲು ಬಯಸುವುದರೊಂದಿಗೆ ಅಂತ್ಯಗೊಂಡಿದೆ. ಕೋರ್ಟ್​ ಕೊಟ್ಟ ತೀರ್ಪೇನು?

ಪತ್ನಿಯರ ಎಕ್ಸ್​ಚೇಂಜ್​ (Wife swapping) ಭಾರತಕ್ಕೂ ಕಾಲಿಟ್ಟು ಹಲವು ವರ್ಷಗಳೇ ಕಳೆದಿವೆ. ಶ್ರೀಮಂತಿಕೆ ಹೆಚ್ಚಾದಾಗ ಬುದ್ಧಿಯೂ ಅತಿಯಾಗಿ ವರ್ತಿಸುವ ಕಾರಣದಿಂದ ಇಂಥ ಪದ್ಧತಿಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಕೆಲವರಿಗೆ ಇದು ಕಾಮನ್​ ಎನ್ನಿಸಿದರೂ ಸಾಮಾನ್ಯಜನರಿಗೆ ಇದು ಅಚ್ಚರಿ ತರುವಂಥ ವಿಷಯವಾಗಿದೆ. ಇಂಥದ್ದೆಲ್ಲಾ ನಿಜಕ್ಕೂ ನಡೆಯತ್ತಾ ಎನ್ನುವುದು ಕೇಳಿದರೆನೇ ಅಸಹ್ಯ ಪಟ್ಟುಕೊಳ್ಳುವ ದೊಡ್ಡ ವರ್ಗವೇ ಇದೆ. ಆದರೆ, ಬೇರೆಯವರ ಪತಿಯ ಜೊತೆ ಮಲಗಲು ನನ್ನದೇನೂ ಆಬ್ಜೆಕ್ಷನ್​ ಇಲ್ಲ, ಇವೆಲ್ಲಾ ಕಾಮನ್​ ಎನ್ನುವ ಮಟ್ಟಿಗೆ ಒಂದು ವರ್ಗ ಬೆಳೆದು ನಿಂತಿದ್ದು, ಗಂಡ-ಹೆಂಡತಿ ಇಬ್ಬರೂ ಬೇರೆ ಬೇರೆಯವರ ಜೊತೆ ರಾತ್ರಿ ಕಳೆಯಲು ಮುಕ್ತಮನಸ್ಸಿನಿಂದ ಒಪ್ಪಿಗೆ ಸೂಚಿಸುವ ಟ್ರೆಂಡ್​ ಭಾರತಕ್ಕೂ ಬಂದು ದಶಕಗಳೇ ಕಳೆದುಹೋಗಿವೆ.

ಆದರೆ, ಇಲ್ಲೊಂದು ಕುತೂಹಲದ ಘಟನೆಯಲ್ಲಿ, ಮಧ್ಯಪ್ರದೇಶ ಗ್ವಾಲಿಯರ್‌ನಲ್ಲಿ ನಡೆದಿರುವ ಘಟನೆ ಮಾತ್ರ ಎಲ್ಲರ ಹುಬ್ಬೇರಿಸಿದೆ. ಗ್ವಾಲಿಯರ್​ ಹೈಕೋರ್ಟ್​ಗೆ ಅಚ್ಚರಿಯ ಪ್ರಕರಣವೊಂದು ಬಂದಿದೆ. ಇದರಲ್ಲಿ ಇಬ್ಬರು ಸಹೋದರಿಯರು ಗಂಡಂದಿರನ್ನು ವಿನಿಮಯ ಮಾಡಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕಿಡ್​ನ್ಯಾಪ್​ ಕೇಸ್​ನಿಂದ ಆರಂಭವಾದ ಈ ಪ್ರಕರಣ ಕೊನೆಯಲ್ಲಿ ಗಂಡಂದಿರ ಅದಲು- ಬದಲಿನವರೆಗೆ ಬಂದು ನಿಂತಿದ್ದು, ಇದು ಖುದ್ದು ನ್ಯಾಯಾಲಯವನ್ನೇ ದಂಗು ಬಡಿಸಿದೆ. ತಮ್ಮ ತಮ್ಮ ಪತಿಯ ಜೊತೆ ತಾವು ಸುಖವಾಗಿ ಇಲ್ಲ ಎನ್ನುವ ಕಾರಣಕೊಟ್ಟಿರುವ ಈ ಸಹೋದರಿಯರು ಪತಿಯಂದಿರ ಬದಲಿಗೆ ಕೋರಿರುವ ಘಟನೆ ಇದಾಗಿದೆ.

ಏನಿದು ಕೇಸ್​

ಇದು ಆರಂಭವಾಗಿದ್ದು, ದಾತಿಯಾ ಮೂಲದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಗಳನ್ನು, ಹೆಂಡತಿಯ ಅಕ್ಕನ ಗಂಡ ಮಾಯಾರಾವ್​ ಕಿಡ್​ನ್ಯಾಪ್​ ಮಾಡಿಕೊಂಡು ಹೋಗಿದ್ದಾನೆ ಎಂದು ದೂರು ದಾಖಲು ಮಾಡಿದ್ದ. ಪೊಲೀಸರು ಅವನ ಪತ್ನಿಯನ್ನು ಹುಡುಕಲು ವಿಫಲವಾದ ಹಿನ್ನೆಲೆಯಲ್ಲಿ, ಆಕೆಯನ್ನು ಹುಡುಕಿಕೊಡುವಂತೆ ಕೋರಿ ಪತಿ ಹೈಕೋರ್ಟ್​ಗೆ ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿದ್ದ. ಕಾಣೆಯಾದವರನ್ನು ಪೊಲೀಸರು ಹುಡುಕಿ ಕೋರ್ಟ್​ಗೆ ಹಾಜರುಪಡಿಸುವುದು ಈ ಅರ್ಜಿಯ ಉದ್ದೇಶ.

ಕೋರ್ಟ್​ಗೆ ಬಂದ ಪತ್ನಿ

ಅದರಂತೆ ಪೊಲೀಸರು ಆತನ ಪತ್ನಿಯನ್ನು ಕೋರ್ಟ್​ಗೆ ಹಾಜರು ಪಡಿಸಿದರು. ಅಲ್ಲಿಯೇ ನಡೆದದ್ದು ಹೈಡ್ರಾಮಾ. ವಿಚಾರಣೆ ಸಮಯದಲ್ಲಿ ಆ ಪತ್ನಿ ನನ್ನ ಅಕ್ಕನ ಗಂಡ ನನ್ನನ್ನು ಕಿಡ್​ನ್ಯಾಪ್​ ಮಾಡಲಿಲ್ಲ. ಬದಲಿಗೆ ಆತನ ಜೊತೆ ನಾನು ಸ್ವಂತ ಇಚ್ಛೆಯಿಂದ ಹೋಗಿರುವುದಾಗಿ ಹೇಳಿದಳು. ನನ್ನ ಗಂಡನ ಜೊತೆ ನನಗೆ ಸುಖವಿಲ್ಲ. ಆತನಿಗೆ ಡಿವೋರ್ಸ್​ ಕೋರಿ ಇದಾಗಲೇ ಅರ್ಜಿ ಸಲ್ಲಿಸಿದ್ದೇನೆ. ಆದ್ದರಿಂದ ನಾನು ಸ್ವಂತ ಇಚ್ಛೆಯಿಂದ ಹೋಗಿದ್ದು, ಪತಿಯ ಜೊತೆ ವಾಪಸ್​ ಹೋಗಲು ಇಷ್ಟವಿಲ್ಲ ಎಂದು ಬಿಟ್ಟಳು.

ಅವಳ ಗಂಡನ ಜೊತೆ ನಾನು!

ಈ ಘಟನೆ ಇನ್ನಷ್ಟು ಕುತೂಹಲವಾಗಿದ್ದು, ಮಾಯಾರಾವ್​ ಪತ್ನಿ ಅರ್ಥಾತ್​ ಓಡಿಹೋಗಿರುವ ಈ ಪತ್ನಿಯ ಅಕ್ಕ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ತನ್ನ ಗಂಡನ ಜೊತೆ ತನ್ನ ತಂಗಿ ನೆಲೆಸುತ್ತಿದ್ದಾಳೆ ಎನ್ನುವುದಕ್ಕೆ ಅವಳಿಗೆ ಯಾವುದೇ ಬೇಸರ ಇರಲಿಲ್ಲ. ಅವಳು ಬಯಸಿದರೆ, ನನ್ನ ಗಂಡನ ಜೊತೆ ಇರಬಹುದು, ನನಗೆ ಯಾವುದೇ ಸಮಸ್ಯೆ ಇಲ್ಲ ಎಂದುಬಿಟ್ಟಳು! ಇಷ್ಟಕ್ಕೇ ಸುಮ್ಮನಾಗಲಿಲ್ಲ ಅವಳು. ನನ್ನ ತಂಗಿ ನನ್ನ ಗಂಡನ ಜೊತೆ ವಾಸಿಸಲು ಇಚ್ಛೆಪಟ್ಟರೆ ನನಗೆ ಸಮಸ್ಯೆ ಇಲ್ಲ, ನಾನು ಅವಳ ಗಂಡನ ಜೊತೆ ನೆಲೆಸುತ್ತೇನೆ. ಇದಕ್ಕೆ ಅನುಮತಿ ನೀಡಿ ಎಂದು ಕೋರ್ಟ್​ ಅನ್ನು ಕೋರಿದಳು!

ಕೋರ್ಟ್​ ಹೇಳಿದ್ದೇನು?

ವಿಚಾರಣೆ ಮುಂದುವರೆದಂತೆ, ಇಬ್ಬರೂ ಮಹಿಳೆಯರು ತಮ್ಮ ಪ್ರಸ್ತುತ ವಿವಾಹಗಳಲ್ಲಿ ಅತೃಪ್ತರಾಗಿದ್ದಾರೆ ಮತ್ತು ಪರಸ್ಪರ ಪಾಲುದಾರರನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ಜೀವನವನ್ನು ಪ್ರಾರಂಭಿಸಲು ಬಯಸುತ್ತಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇಬ್ಬರೂ ಮಹಿಳೆಯರಿಗೆ ಮಕ್ಕಳಿದ್ದಾರೆ ಎಂದು ಸಹ ಗಮನಿಸಲಾಯಿತು. ಹೇಳಿಕೆಗಳನ್ನು ಕೇಳಿದ ನಂತರ, ಇಬ್ಬರೂ ಮಹಿಳೆಯರು ವಯಸ್ಕರು ಮತ್ತು ಅವರು ತಮ್ಮ ಸ್ವಂತ ಆಯ್ಕೆಯ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ಗಮನಿಸಿ ಹೇಬಿಯಸ್​ ಕಾರ್ಪಸ್​ ಅರ್ಜಿ ವಜಾ ಮಾಡಿತು. ಈ ಪ್ರಕರಣವು ಅಪಹರಣವನ್ನು ಒಳಗೊಂಡಿಲ್ಲ ಮತ್ತು ಇದು ವೈಯಕ್ತಿಕ ಕೌಟುಂಬಿಕ ವಿಷಯವಾಗಿದೆ, ಕ್ರಿಮಿನಲ್ ವಿಷಯವಲ್ಲ ಎಂದು ತೀರ್ಪು ನೀಡಿದೆ!