ಕೇಂದ್ರ ಸಚಿವ ಕುಮಾರಸ್ವಾಮಿಯವರು ತಮ್ಮ ಪತ್ನಿಯ ಫೋನ್ ಕೂಡ ಟ್ಯಾಪಿಂಗ್ ಮಾಡಿಸಿದ್ದಾರೆ ಎಂದು ಸಚಿವ ಎಚ್.ಸಿ.ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ಗನ್ ಪಾಯಿಂಟ್ ಆರೋಪವನ್ನು ನಿರಾಕರಿಸಿದ ಅವರು, ಕುಮಾರಸ್ವಾಮಿಯವರು ತಮ್ಮ ಮಗನ ಬೆಳವಣಿಗೆಯನ್ನೂ ಸಹಿಸುವುದಿಲ್ಲ ಎಂದು ಟೀಕಿಸಿದ್ದಾರೆ.
ಮಾಗಡಿ/ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿಯವರು ತಮ್ಮ ಪಿಎಗಳು, ಸ್ವಾಮೀಜಿಗಳು ಮಾತ್ರವಲ್ಲ, ಸ್ವಂತ ಪತ್ನಿಯ ಫೋನ್ ಅನ್ನೂ ಟ್ಯಾಪಿಂಗ್ ಮಾಡಿದ್ದಾರೆ. ಅಂತಹ ವ್ಯಕ್ತಿ ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಆರೋಪಿಸಿದ್ದಾರೆ.
ಬೇಕಿದ್ದರೆ ಫೋನ್ ಟ್ಯಾಪಿಂಗ್ ದಾಖಲೆ ಬಿಡುಗಡೆ ಮಾಡ್ತೇನೆ
ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸಮಾಜದ ಸ್ವಾಮೀಜಿಯವರ ಫೋನ್ ಟ್ಯಾಪಿಂಗ್ ಮಾಡಿಸಿದವರು ಈಗ ಸಮಾಜಕ್ಕೆ ಬುದ್ಧಿ ಹೇಳುತ್ತಾರೆ. ಏನಾದರೂ ಟ್ರಾನ್ಸ್‌ಫರ್ ಮಾಡಿಸಿ ಬಿಡುತ್ತಾರೆ ಅಂತ ಸ್ವಂತ ಪತ್ನಿಯ ಪೋನನ್ನೇ ಟ್ಯಾಪಿಂಗ್ ಮಾಡಿಸಿದರು. ಹೆಂಡತಿ ಮೇಲೆಯೇ ಅವರಿಗೆ ನಂಬಿಕೆ ಇಲ್ಲ. ಅಂತಹ ಮನಸ್ಥಿತಿ ಇರುವಂತಹ ವ್ಯಕ್ತಿ ಅವರು. ಬೇಕಿದ್ದರೆ ಫೋನ್ ಟ್ಯಾಪಿಂಗ್ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಸವಾಲು ಹಾಕಿದರು.
ನನ್ನ ಶೂಟ್ ಮಾಡಲಿ, ಇಲ್ಲ ಅವರೇ ಮಾಡಿಕೊಳ್ಳಲಿ
ನನ್ನ ಮೇಲೆ ಗನ್ ಪಾಯಿಂಟ್ ಆರೋಪ ಮಾಡುತ್ತಾರೆ. ಅದು ಯಾವ ಗನ್ ಎಂದು ಆ ಗನ್‌ನ್ನು ಅವರಿಗೆ ತರಲು ಹೇಳಿ. ಒಂದೋ ನನ್ನನ್ನು ಶೂಟ್ ಮಾಡಲಿ, ಇಲ್ಲ ಅವರೇ ಶೂಟ್ ಮಾಡಿಕೊಳ್ಳಲಿ. ಸುಮ್ಮನೆ ಹಿಟ್ ಆ್ಯಂಡ್ ರನ್ ಕೇಸ್, ಉಡಾಫೆ ಮಾತು ಬೇಡ. ನನ್ನ ಹತ್ತಿರ ಗನ್ನೂ ಇಲ್ಲ, ಲೈಸೆನ್ಸೂ ಇಲ್ಲ. ಇಂತಹ ಆರೋಪ ಮಾಡೋಕೆ ಅವರಿಗೆ ನಾಚಿಕೆ ಆಗಬೇಕು ಎಂದರು.
ಗನ್ ತೋರಿಸೋದು, ಕತ್ತಿ ತೋರಿಸೋದು ನನ್ನ ರಾಜಕೀಯ ಜೀವನದಲ್ಲೇ ಇಲ್ಲ. ತಮ್ಮ ಆರೋಪವನ್ನು ಅವರು ಸಾಬೀತು ಮಾಡಲಿ. ಇಲ್ಲದಿದ್ದರೆ ಕ್ಷಮೆ ಕೇಳಲಿ ಎಂದು ಕಿಡಿಕಾರಿದರು.
ಮನಸ್ಸು ಮಾಡಿದರೆ ಕುಮಾರಸ್ವಾಮಿಯವರು ತಮ್ಮ ಮಗನನ್ನು ಸಂಸದನನ್ನಾಗಿ ಮಾಡಬಹುದಿತ್ತು. ಅವರು ಮಗನ ಬೆಳವಣಿಗೆಯನ್ನೂ ಸಹಿಸದ ವ್ಯಕ್ತಿ ಎಂದು ಟೀಕಿಸಿದರು.


