ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ನೀಟ್ ಪತ್ರಿಕೆ ಸೋರಿಕೆ ಚರ್ಚೆಯ ವೇಳೆ ಸಂಸತ್ತಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಗಂಭೀರ ಭದ್ರತಾ ವಿಷಯಗಳಿದ್ದಾಗ ಮಾತ್ರ ಕಾಣಿಸಿಕೊಳ್ಳುವ ದೋವಲ್ ಅವರ ಈ ಭೇಟಿಯು, ನೀಟ್ ಪ್ರತಿಭಟನೆಗಳ ಹಿಂದೆ ವಿದೇಶಿ ಕೈವಾಡದಂತಹ ರಾಷ್ಟ್ರೀಯ ಭದ್ರತೆಯ ಆಯಾಮವಿರಬಹುದೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
ಸಂಸತ್ತಿನ ಉಭಯ ಸದನಗಳಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಈ ಸಮಯದಲ್ಲಿ ಸಂಸದರು, ಸಚಿವರು ಎಲ್ಲರೂ ಬರುವುದು ಸಹಜವೇ. ಅಗತ್ಯ ಬಿದ್ದರೆ ಪ್ರಧಾನಿಯೂ ಬರಬೇಕು. ಆದರೆ, ಇದಾವುದೇ ನಿಯಮ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಅನ್ವಯ ಆಗುವುದಿಲ್ಲ. ಎಲ್ಲಿ, ಯಾವಾಗ ಬೇಕಾದರೂ ಸ್ವಯಂ ಪ್ರೇರಿತವಾಗಿ ಹೋಗುವ ಹಕ್ಕು ಇರುವುದು ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ. ಅದೇ ರೀತಿ, ಭಾರತದ ಜೇಮ್ಸ್ಬಾಂಡ್ ಎಂದೇ ಫೇಮಸ್ ಆಗಿರೋ, ಪಾಕಿಸ್ತಾನದಲ್ಲಿ ಹತ್ತಾರು ವರ್ಷ ಇದ್ದು, ಪಾಕಿಗಳಿಗೇ ಚಳ್ಳೆಹಣ್ಣು ತಿನ್ನಿಸಿ, ಭಾರತದ ಭದ್ರತೆ ಕಾಪಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಇಂದು ಸಂಸತ್ ಪ್ರವೇಶಿಸಿದ್ದು, ವಿರೋಧ ಪಕ್ಷಗಳಲ್ಲಿ ತಲ್ಲಣ ಹುಟ್ಟಿಸಿದ ಘಟನೆ ನಡೆದಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಏಕಾಏಕಿ ಅಜಿತ್ ದೋವಲ್ ಅವರು ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿ ಮಾಡಿದೆ. ಏಕೆಂದರೆ, ರಾಷ್ಟ್ರೀಯ ಭದ್ರತಾ ಸಲಹೆಗಾರರು ಸಾಮಾನ್ಯವಾಗಿ ಸಂಸತ್ತಿನ ಒಳಗೆ ಕಾಣಿಸಿಕೊಳ್ಳುವುದಿಲ್ಲ. ದೇಶದ ಆಂತರಿಕ ಅಥವಾ ಬಾಹ್ಯ ಭದ್ರತೆಗೆ, ದೇಶಕ್ಕೆ ಅಪಾಯ ಇದೆ ಎನ್ನುವ ಸೂಚನೆಗಳು ಇದ್ದ ಸಂದರ್ಭಗಳಲ್ಲಿ, ಇಂಥ ಅತಿ ಗಂಭೀರ ವಿಚಾರಗಳಿದ್ದಾಗ ಮಾತ್ರ ಅವರು ಕಾಣಿಸಿಕೊಳ್ಳುತ್ತಾರೆ, ಅದು ಕೂಡ ಸಂಸತ್ತಿನಲ್ಲಿ ಅಲ್ಲ, ಬದಲಿಗೆ ಪ್ರಧಾನಿಗಳ ಕಚೇರಿ ಅಥವಾ ಗೃಹ ಸಚಿವಾಲಯದಲ್ಲಿ ಈ ಮಾತುಕತೆ ನಡೆಯುತ್ತದೆ. ಆದರೆ ನೀಟ್ ಪ್ರತಿಭಟನೆಯ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಇವರು ಸಂಸತ್ತಿಗೆ ಎಂಟ್ರಿ ಕೊಟ್ಟಿರುವುದು ವಿವಿಧ ಊಹಾಪೋಹಗಳಿಗೆ ಕಾರಣವಾಗಿದೆ.
ತಜ್ಞರಿಂದ ವಿಶ್ಲೇಷಣೆ
ಮೊದಲೇ ಹೇಳಿದಂತೆ ದೇಶದ ಭದ್ರತೆಯಂಥ ವಿಚಾರದ ಸಮಯದಲ್ಲಿ ಇವರು ಕಾಣಿಸಿಕೊಳ್ಳುವುದಾದರೆ, ನೀಟ್ ಪ್ರತಿಭಟನೆಯ ಕುರಿತಾದ ಚರ್ಚೆಯ ಸಮಯದಲ್ಲಿ ಕಾಣಿಸಿಕೊಂಡಿರುವ ಹಿಂದೆ ಇರುವ ಔಚಿತ್ಯದ ಬಗ್ಗೆ ಸಾಕಷ್ಟು ಬಗೆಯಲ್ಲಿ ತಜ್ಞರಿಂದ ವಿಶ್ಲೇಷಣೆಗಳ ಸುರಿಮಳೆಯಾಗುತ್ತಿದೆ. ದೋವಲ್ ಸಂಸತ್ತಿಗೆ ಬಂದ ತಕ್ಷಣ, ವಿವಿಧ ಊಹಾಪೋಹಗಳು ಹುಟ್ಟಿಕೊಂಡವು. ಅವರು ಪ್ರಮುಖ ಭದ್ರತಾ ವಿಷಯದ ಕುರಿತು ಸಚಿವರಿಗೆ ಮಾಹಿತಿ ನೀಡಲು ಬಂದಿದ್ದಾರೆಯೇ ಅಥವಾ ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಯಲಿದೆಯೇ ಎಂಬ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಆದರೆ ಇದರ ಗುಟ್ಟು ರಟ್ಟಾಗಲು ಸಾಧ್ಯವೇ ಇಲ್ಲ.
ಏಕಿಷ್ಟು ಪ್ರಾಮುಖ್ಯತೆ?
ಇದು ಏಕಿಷ್ಟು ಚರ್ಚೆಯಾಗುತ್ತಿದೆ ಎನ್ನುವುದಕ್ಕೆ ಕಾರಣವೂ ಇದೆ. ಏಕೆಂದರೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅದರ ಬಳಿಕ ನಡೆದ ಪ್ರತಿಭಟನೆಗಳ ಹಿಂದಿರುವ ವ್ಯವಸ್ಥಿತ ಪಿತೂರಿ, ಪ್ರತಿಭಟನೆಯ ಹೆಸರಿನಲ್ಲಿ ನಡೆದಿರುವ ವಿದೇಶಿಗಳ ಕೈವಾಡ, ಪಾಕಿಸ್ತಾನಿಗಳು, ಖಲಿಸ್ತಾನಿಗಳ ಬೆಂಬಲ, ಪ್ರತಿಭಟನೆ ಸಮಯದಲ್ಲಿ ಕಂಡು ಬಂದ ವಿವಿಧ ದೇಶಗಳ ಬಾವುಟ, ಪ್ರತಿಭಟನೆಗೆ ಬೆಂಬಲ ಸೂಚಿಸಿ, ಭಾರತದ ವಿರುದ್ಧ ಷಡ್ಯಂತ್ರ ರಚಿಸಿ ಸುಳ್ಳುಸುದ್ದಿ ಹರಡಿದ್ದ 150ಕ್ಕೂ ಅಧಿಕ ಪಾಕಿಸ್ತಾನ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳು... ಇವೆಲ್ಲವುಗಳ ಬಗ್ಗೆ ದೊಡ್ಡ ಮಟ್ಟದ ತನಿಖೆಯಾಗುತ್ತಿರುವುದಾಗಿ ವರದಿಯಾಗಿದೆ. ಇದು ದೇಶ ಭದ್ರತೆಯ ವಿಷಯವಾಗಿರುವ ಹಿನ್ನೆಲೆಯಲ್ಲಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಆ ನಂತರದ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಅಜಿತ್ ದೋವಲ್ ಅವರ ಅಪರೂಪದ ದರ್ಶನ ನಾನಾ ಚರ್ಚೆಗಳಿಗೆ ಕಾರಣವಾಗಿದೆ.


