ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾಯಿತು. ಆದರೆ, ಪಂಜಾಬ್‌ನಲ್ಲಿ ಇದೇ ರೀತಿಯ ಪೇಪರ್ ಲೀಕ್ ಆದಾಗ, ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರತಿಭಟನೆಯ ನಾಯಕ ಅಭಿಜೀತ್ ದೀಪ್ಕೆ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾದರು, ಇದು ಅವರ ಹೋರಾಟದ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದಿಂದ ಲಕ್ಷಾಂತರ ಅಮಾನಕ ವಿದ್ಯಾರ್ಥಿಗಳಿಗೆ ನೋವಾಗಿದೆ. ಇದರಿಂದ ಜೀವನವನ್ನೇ ಎದುರಿಸಲಾಗದೇ ವೈದ್ಯರಾಗಲು ಹೊರಟಿದ್ದ ಕೆಲವರು ಜೀವ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕೋಲಾಹಲ ಸೃಷ್ಟಿಯಾಗಿದ್ದ ನಡುವೆಯೇ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವುದಾಗಿ ಕಾಕ್ರೋಚ್ ಜನತಾ ಪಕ್ಷ ಮಾಡಿದ ಪ್ರತಿಭಟನೆಯಲ್ಲಿ ನಡೆದ ಕಲ್ಲು ತೂರಾಟ, ವಿದೇಶಿ ಬಾವುಟಗಳ ಹಾರಾಟ, ಖಲೀಸ್ತಾನಿಗಳ ಬೆಂಬಲ... ಎಲ್ಲವೂ ಈ ಪಕ್ಷ ಹಾಗೂ ಪ್ರತಿಭಟನೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತದ ವಿದ್ಯಾರ್ಥಿಗಳಿಗೆ ಬೆಂಬಲ ಕೊಡುವುದಾಗಿ ಅಮೆರಿಕದಿಂದ ಬಂದಿರುವ ಉದ್ದೇಶದ ಬಗ್ಗೆ ಇದಾಗಲೇ ಹಲವಾರು ಭಯಾನಕ ಸುದ್ದಿಗಳು ಸದ್ದು ಮಾಡುತ್ತಿರುವ ನಡುವೆಯೇ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಾಯ್ತು.
ಪಿಚ್ಚರ್ ಅಭೀ ಭೀ ಬಾಕಿ ಹೈ ಎಂದವರೇ...
ಆದರೆ, ಈ ರಾಜೀನಾಮೆ ನೀಡಿದ್ರೆ ಸಾಕಾಗಲ್ಲ, ಇದು ಟ್ರೈಲರ್ ಅಷ್ಟೇ, ಪಿಚ್ಚರ್ ಅಭೀ ಭೀ ಬಾಕಿ ಹೈ ಎಂದು ಮುಂದೆ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹಾಗೂ ಅವರ ಬೆಂಬಲಿಗರು ಘಂಟಾಘೋಷವಾಗಿ ಹೇಳಿದ್ದಾರೆ. ಆದರೆ ಅದೇ ಅವರಿಗೆ ಈಗ ಮುಳುವಾಗಿಬಿಟ್ಟಿದೆ. ಇದಕ್ಕೆ ಕಾರಣ, ವಿದ್ಯಾರ್ಥಿಗಳ ಹಿತದೃಷ್ಟಿಯೇ ಮುಖ್ಯವಾಗಿದ್ದರೆ, ಅವರೀಗ ಪಂಜಾಬ್ ಶಿಕ್ಷಣ ಸಚಿವರ ರಾಜೀನಾಮೆ ಕೇಳಬೇಕಿದೆ. ಏಕೆಂದರೆ ಪಂಜಾಬ್ನಲ್ಲಿಯೂ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ತಲ್ಲಣಗೊಂಡಿದ್ದಾರೆ. ಆಮ್ ಆದ್ಮಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ದೀಪ್ಕೆ ಈಗ ತಮ್ಮದೇ ಪಕ್ಷದ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಅವರ ಪಿಚ್ಚರ್ ಬಿಟ್ಟುಹೋಗುವ ಭಯವಿದೆ.
ಪ್ರಶ್ನೆಗೆ ಉತ್ತರಿಸಲಾಗದೇ ತತ್ತರ!
ಇವರು ಕಾರಿನಲ್ಲಿ ಹೋಗುತ್ತಿರುವಾಗ ಎಎನ್ಐ ಸುದ್ದಿಸಂಸ್ಥೆಯ ಪತ್ರಕರ್ತರೊಬ್ಬರು ಕೇಳಿದ ಇದೇ ಪ್ರಶ್ನೆಗೆ ದೀಪ್ಕೆ ಅವರ ಮುಖ ಸಪ್ಪಗಾಯಿತು. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗುತ್ತಿದೆ. ವಿದ್ಯಾರ್ಥಿಗಳ ಪರವಾಗಿ ಅಮೆರಿಕದಿಂದ ಪಾಪ ಭಾರತಕ್ಕೆ ಬಂದು ಇಷ್ಟೆಲ್ಲಾ ಪ್ರತಿಭಟನೆ ಮಾಡಿರುವ ನೀವು, ಅದೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆದಂತೆ, ಪಂಜಾಬ್ನಲ್ಲಿಯೂ ಮಾಡ್ತೀರಾ ಎಂದು ಪ್ರಶ್ನಿಸಿದರು. ಅನಿರೀಕ್ಷಿತವಾಗಿ ತೂರಿ ಬಂದ ಪ್ರಶ್ನೆ ಕೇಳುತ್ತಿದ್ದಂತೆಯೇ ದೀಪ್ಕೆ ಸುಸ್ತಾಗಿ ಹೋದರು. ಏನು ಹೇಳಬೇಕು ಎಂದು ತಿಳಿಯದೇ ಬಡಬಡಿಸಿ ಹಾಂ ಹೂಂ. ನೋಡೋಣ ಎನ್ನುತ್ತಾ ಹಿಂದೆ ತಿರುಗಿ ಹೋಗೋಣ್ವಾ ಎಂದು ಪ್ರಶ್ನಿಸಿದ್ರು.
ಪತ್ರಕರ್ತರು ಮೈಕ್ ಹಿಡಿದಾಕ್ಷಣ ದೊಡ್ಡದಾಗಿ ಭಾಷಣ ಬಿಗಿಯಬಹುದು, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಿಂದ ಹೀರೋ ಆಗಿ ಮೆರೆದ ತಾವು ಇನ್ನಷ್ಟು ಇದರ ಬಗ್ಗೆ ಹೇಳಬಹುದು ಎಂದೆಲ್ಲಾ ಕಲ್ಪನೆಯಿಂದ ಪ್ರಶ್ನೆಗೆ ಕಾತರದಿಂದ ಕಾಯುತ್ತಿದ್ದ ದೀಪ್ಕೆ ಅವರ ಪಿಚ್ಚರ್ ಬಿಟ್ಟೋಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್ ಆಗುತ್ತಿದೆ.


