ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಮೊದಲ ಸಿಎಲ್‌ಪಿ ಸಭೆಗೆ ಸಿದ್ದರಾಮಯ್ಯ ಗೈರಾಗಿದ್ದು, ಮಂತ್ರಿಗಿರಿ ಹಂಚಿಕೆ ವಿಚಾರದಲ್ಲಿನ ಅಸಮಾಧಾನ ಇನ್ನೂ ತಣಿದಿಲ್ಲ ಎಂಬ ಸೂಚನೆ ನೀಡಿದೆ. ಈ ಕುರಿತ ಸ್ಟೋರಿ ಇಲ್ಲಿದೆ..

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಸಕ್ತಿದಾಯಕ ಬೆಳವಣಿಗೆ ನಡೆದಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ನಡೆದ ಮೊದಲ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆಯೇ ಎಂಬ ಅನುಮಾನ ಮೂಡಿದೆ. ಅರಮನೆ ರಸ್ತೆಯ ರ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ನಡೆದ ಈ ಮಹತ್ವದ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರಾಗುವ ಮೂಲಕ ಮತ್ತೆ ಚರ್ಚೆ ಹುಟ್ಟುಹಾಕಿದ್ದಾರೆ.

ಅಪ್ಪ ಗೈರು, ಮಗ ಲೇಟು!

ಸಭೆಗೆ ಸಿದ್ದರಾಮಯ್ಯ ಅವರು ದೂರ ಉಳಿದಿದ್ದರೆ, ಅವರ ಪುತ್ರ, ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸಭೆಗೆ ತಡವಾಗಿ ಆಗಮಿಸಿದರು. ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯ ಆಪ್ತರಿಗೆ ಡಿಕೆಶಿ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಕಾರಣ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೂ ಗೈರಾಗಿದ್ದ ಸಿದ್ದು, ಈಗ ಸಿಎಲ್‌ಪಿ ಸಭೆಗೂ ಬಾರದಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಸರಣಿ ಗೈರು: ಯಾರ್ಯಾರು ಬಂದಿಲ್ಲ?

ಕೇವಲ ಸಿದ್ದರಾಮಯ್ಯ ಮಾತ್ರವಲ್ಲದೆ ಹಲವು ಹಿರಿಯ ನಾಯಕರು ಸಭೆಯಿಂದ ದೂರ ಉಳಿದಿದ್ದಾರೆ. ಎಚ್‌.ಸಿ.ಮಹದೇವಪ್ಪ, ಎಂ. ಕೃಷ್ಣಪ್ಪ, ಪ್ರಿಯಾ ಕೃಷ್ಣ, ಶಿವಾನಂದ ಪಾಟೀಲ್ ಗೈರಾಗಿದ್ದಾರೆ. ಬಂಗಾರಪೇಟೆ ನಾರಾಯಣಸ್ವಾಮಿ ಮತ್ತು ಸಚಿವ ಎಂ.ಸಿ. ಸುಧಾಕರ್ ಕೂಡ ಸಭೆಗೆ ಹಾಜರಾಗಿಲ್ಲ. ಸಚಿವ ಜಮೀರ್ ಅಹಮದ್ ಸಭೆಗೆ ತಡವಾಗಿ ಎಂಟ್ರಿ ನೀಡಿದ್ದಾರೆ.

ಎಂಎಲ್‌ಸಿ ಶಿವಣ್ಣ ವಿರುದ್ಧ ಗುಡುಗಿದ ಡಿಕೆಶಿ!

ಸಭೆಯಲ್ಲಿ ನೂತನ ಎಂಎಲ್‌ಸಿಗಳನ್ನು ಅಭಿನಂದಿಸುವ ವೇಳೆ ಹೈಡ್ರಾಮಾ ನಡೆದಿದೆ. ಎಂಎಲ್‌ಸಿ ಮಳವಳ್ಳಿ ಶಿವಣ್ಣ ಅವರು ಕನಕಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಗರಂ ಆಗಿದ್ದಾರೆ. ಏನಯ್ಯ, ನೀನು ಕನಕಪುರದ ಬಗ್ಗೆಯೇ ಪ್ರಶ್ನೆ ಹಾಕಿದ್ದೀಯಲ್ಲಾ? ಎಂದು ಏರುಧ್ವನಿಯಲ್ಲಿ ಕಿಡಿಕಾರಿದ್ದಾರೆ. ಶಿವಣ್ಣ ಸಬೂಬು ನೀಡಲು ಮುಂದಾದರೂ ಡಿಕೆಶಿ ಸುಮ್ಮನಾಗಲಿಲ್ಲ. ಇಂದು ಬೆಳಿಗ್ಗೆಯಷ್ಟೇ ಮೈಸೂರಿನವರು ಕನಕಪುರದವರ ಮೇಲೆ, ಕನಕಪುರದವರು ಬೆಂಗಳೂರಿನವರ ಮೇಲೆ ಸ್ಪರ್ಧೆ ಮಾಡಬಾರದು, ನಮ್ಮ ಸ್ಪರ್ಧೆ ಜಾಗತಿಕ ಮಟ್ಟದಲ್ಲಿರಲಿ ಎಂದು ಮಾರ್ಮಿಕವಾಗಿ ಮಾತನಾಡಿದ್ದ ಡಿಕೆಶಿ, ಸಭೆಯಲ್ಲಿ ತಮ್ಮದೇ ಕ್ಷೇತ್ರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಡಿಕೆಶಿ ನಾಯಕತ್ವದಲ್ಲಿ ನಡೆದ ಮೊದಲ ಸಭೆಯಲ್ಲೇ ಸಿದ್ದರಾಮಯ್ಯ ಮತ್ತು ಅವರ ಆಪ್ತರ ಗೈರುಹಾಜರಿ, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನಿಸುತ್ತಿದೆ.