ದಿನಗೂಲಿ ಕಾರ್ಮಿಕ ಮೊಹಮ್ಮದ್ ಇರ್ಫಾನ್, ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಕಾರ್ಮಿಕರ ಹಕ್ಕುಗಳು ಮತ್ತು ಸಂವಿಧಾನದ ಬಗ್ಗೆ ಚರ್ಚಿಸಿದರು. ಈ ಭೇಟಿಯ ಹಿಂದೆ, ರಾಹುಲ್ ಗಾಂಧಿಯವರ ಮದುವೆಗೆ ಅವರನ್ನು ಒಪ್ಪಿಸುವಂತೆ ಪ್ರಿಯಾಂಕಾ ಗಾಂಧಿ ತಮಾಷೆಯಾಗಿ ಇರ್ಫಾನ್‌ಗೆ ಹೇಳಿದ್ದ ಸ್ವಾರಸ್ಯಕರ ಘಟನೆಯೂ ಇದೆ. ನಂತರ ರಾಹುಲ್ ಗಾಂಧಿ ಇರ್ಫಾನ್ ಅವರ ಮನೆಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ಬಳಿಕ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ನೀಡಾಯ್ತು. ಪಿಚ್ಚರ್​ ಅಭೀ ಭೀ ಬಾಕಿ ಹೈ ಎಂದಿದ್ದಾರೆ ಸಂಸ್ಥಾಪಕ ಅಭಿಜೀತ್​ ದೀಪ್ಕೆ. ಪಂಜಾಬ್​ ಪರೀಕ್ಷೆ ಪತ್ರಿಕೆ ಲೀಕ್​ ಬಗ್ಗೆ ಹೋಗಿ ಪ್ರತಿಭಟನೆ ಮಾಡಿ ಎಂದು ಬಿಜೆಪಿ ಬೆಂಬಲಿಗರು ಕೇಳಿರುವ ಕಾರಣ, ಸ್ವಲ್ಪಕಾಲ ತಣ್ಣಗಾಗಿದ್ದಾರೆ ಜಿರಳೆಗಳು. ಇದರಿಂದ ಇವರ ಪ್ರತಿಭಟನೆಯ ಹಿಂದಿನ ಉದ್ದೇಶ ವಿದ್ಯಾರ್ಥಿಗಳ ಹಿತದೃಷ್ಟಿಯೋ ಅಥವಾ ಕೇಂದ್ರದ ವಿರುದ್ಧ ಯಾರದ್ದೋ ಕೈವಾಡದಿಂದ ನಡೆಸಿರುವ ಪಿತೂರಿಯೋ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ನಡುವೆಯೇ, 56 ವರ್ಷಗಳ ರಾಹುಲ್​ ಗಾಂಧಿ ಮದುವೆಯನ್ನು ಟಾಸ್ಕ್​ ಆಗಿ ಕೊಟ್ಟಿದ್ದಾರೆ ಅಕ್ಕ ಪ್ರಿಯಾಂಕಾ ಗಾಂಧಿ.

ಪ್ರತಿಭಟನೆಯ ಸಮಯದಲ್ಲಿ, ಮದುವೆಗೆ ರಾಹುಲ್ ಗಾಂಧಿ ಅವರ ಮನವೊಲಿಸುವಂತೆ ಪ್ರಿಯಾಂಕಾ ಮೇಡಂ ತಮಗೆ ಹೇಳಿರುವುದಾಗಿ ದಿನಗೂಲಿ ಕಾರ್ಮಿಕ ಮೊಹಮ್ಮದ್ ಇರ್ಫಾನ್ ಮಾಧ್ಯಮಗಳಿಗೆ ಹೇಳಿದ್ದಾರೆ. 'ದಿ ಲಲ್ಲಂಟಾಪ್' ಗೆ ನೀಡಿರುವ ಸಂದರ್ಶನದಲ್ಲಿ, ಈ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಮನೆಗೆ ಬರುವ ಮೊದಲು, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಇರ್ಫಾನ್ ಹೇಳಿದ್ದಾರೆ. ಸಂಭಾಷಣೆಯ ಸಮಯದಲ್ಲಿ, ಪ್ರಿಯಾಂಕಾ ಗಾಂಧಿ ತಮಾಷೆಯಾಗಿ ಇರ್ಫಾನ್‌ಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗ ಅವರನ್ನು ಮದುವೆಯಾಗುವಂತೆ ಮನವೊಲಿಸಲು ಪ್ರಯತ್ನಿಸುವಂತೆ ಹೇಳಿದರು, ಏಕೆಂದರೆ ರಾಹುಲ್ ಗಾಂಧಿ ಅವರ ಮಾತನ್ನು ಕೇಳುವುದಿಲ್ಲ. ಅದಕ್ಕೇ ನನಗೆ ಹೇಳಿದರು ಎಂದಿದ್ದಾರೆ.

ಯಾರೀ ಇರ್ಫಾನ್​?

35 ವರ್ಷದ ಇರ್ಫಾನ್ ಐಸ್ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ ಮತ್ತು ಸವ್ಡಾ ಜೆಜೆ ಕಾಲೋನಿಯಲ್ಲಿ ಚಿಕ್ಕದೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಅಂಗನವಾಡಿ ಹಂತದವರೆಗೆ ಮಾತ್ರ ಔಪಚಾರಿಕ ಶಿಕ್ಷಣವನ್ನು ಪಡೆದಿದ್ದಾರೆ ಮತ್ತು ಓದಲು ಮತ್ತು ಬರೆಯಲು ಸಾಕಷ್ಟು ತೊಂದರೆ ಅನುಭವಿಸಿ ಶಾಲೆಯನ್ನು ಬಿಟ್ಟಿದ್ದಾರೆ. ಇದರ ಹೊರತಾಗಿಯೂ, ಅವರು ಗೂಗಲ್ ವಾಯ್ಸ್ ಸರ್ಚ್ ಮತ್ತು ಯೂಟ್ಯೂಬ್ ವೀಡಿಯೊಗಳ ಮೂಲಕ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಕಾರ್ಮಿಕರ ಹಕ್ಕುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಾರೆ.

ಸಂವಿಧಾನ ಉಳಿಸೋದು ನನ್ನ ಕರ್ತವ್ಯ

ಸಂದರ್ಶನದ ಸಮಯದಲ್ಲಿ, ಇರ್ಫಾನ್, ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಅಸಂಘಟಿತ ಕಾರ್ಮಿಕರ ಗೌರವಾನ್ವಿತ ಜೀವನೋಪಾಯದ ಹಕ್ಕುಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ರಾಹುಲ್ ಗಾಂಧಿ ಅವರ ಅಭಿಪ್ರಾಯಗಳನ್ನು ಗಂಭೀರವಾಗಿ ಆಲಿಸಿರುವುದಾಗಿ ತಿಳಿಸಿದ್ದಾರೆ. ತಮ್ಮ ಕುಟುಂಬವನ್ನು ಸಂಸತ್ ಭವನಕ್ಕೆ ಭೇಟಿ ನೀಡಲು ಆಹ್ವಾನಿಸಿರುವುದಾಗಿ ತಿಳಿಸಿದ್ದಾರೆ. ಪ್ರಚಾರಕ್ಕಾಗಿ ಸಿಜೆಪಿ ಪ್ರತಿಭಟನೆ ಮಾಡಲಿಲ್ಲ, ಬದಲಾಗಿ ಅಸಂಘಟಿತ ವಲಯದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಲು ಈ ಪ್ರತಿಭಟನೆ ಎಂದಿದ್ದಾರೆ. ನಾನು ರಾಹುಲ್ ಗಾಂಧಿಯವರ ಬಳಿ ಯಾವುದೇ ವೈಯಕ್ತಿಕ ಬೇಡಿಕೆಗಳನ್ನು ಇಡಲಿಲ್ಲ. ದೇಶದ ಕಾರ್ಮಿಕರು ಮತ್ತು ಬಡವರ ಪರವಾಗಿ ಧ್ವನಿ ಎತ್ತುವುದು ನನ್ನ ಕೆಲಸ ಎಂದಿದ್ದಾರೆ.

ರಾಹುಲ್ ಗಾಂಧಿ ಇರ್ಫಾನ್ ಅವರ ಮನೆಗೆ ಭೇಟಿ ನೀಡಿದರು. ಈ ವಿಡಿಯೋ ವೈರಲ್ ಆದ ನಂತರ, ರಾಹುಲ್ ಗಾಂಧಿ ಸೋಮವಾರ ಇರ್ಫಾನ್ ಅವರ ಮನೆಗೆ ಭೇಟಿ ನೀಡಿದ್ದರು. ರಾಹುಲ್ ಗಾಂಧಿ ಅವರಿಂದ ತಮಗಾಗಿ ಏನನ್ನೂ ಕೇಳಿಲ್ಲ ಎಂದು ಇರ್ಫಾನ್ ಹೇಳಿದ್ದಾರೆ. ಬಡವರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮಾತ್ರ ಅವರು ವಿನಂತಿಸಿದರು.