ಚಿಕ್ಕೋಡಿಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರದ ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನಿಗಳಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂಗಳಲ್ಲಿ ಜಾಗೃತಿ ಮೂಡಿರುವುದರಿಂದಲೇ ತಾನು ಚುನಾವಣೆಯಲ್ಲಿ ಗೆಲ್ಲುತ್ತಿದ್ದೇನೆ ಎಂದಿದ್ದಾರೆ.

ಚಿಕ್ಕೋಡಿ (ಸೆ.15): ಹಿಂದೂಗಳಲ್ಲಿ ಜಾಗೃತಿ ಬಂದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಗುಡುಗಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಚಂದೂರ ಗ್ರಾಮದಲ್ಲಿ ಬಾಲ ಗಜಾನನ ಯುವಕ ಮಂಡಳಿಯ ಶ್ರೀ ಗಣೇಶ ಮೂರ್ತಿ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನಿಗಳಿಗೆ ಹೋಲಿಸಿದ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿದ ಬಳಿಕ ಅದ್ದೂರಿ ಗಣೇಶೋತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ಅವರು ವಿಜಯಪುರದಲ್ಲಿ 1 ಲಕ್ಷ 20 ಸಾವಿರ ಜನ ಪಾಕಿಸ್ತಾನಿಗಳಿದ್ದಾರೆ. ಆದರೂ ನಾನು ಪ್ರತಿ ಬಾರಿ ವಿಜಯಪುರದಿಂದ ಹೇಗೆ ಗೆದ್ದು ಬರುತ್ತೇನೆ ಎಂದು ನನಗೆ ಗೊತ್ತಿಲ್ಲ ಎಂದ ಯತ್ನಾಳ್ ಆ ಮೂಲಕ ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನಿಗಳಿಗೆ ಹೋಲಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಹಿಂದೂಗಳು ಜಾಗೃತರಾಗಬೇಕು

ವಿಜಯಪುರದಲ್ಲಿ ವೋಟಿನ ಮಹತ್ವ ಹಿಂದೂಗಳು ತೋರಿಸಿದ್ದಾರೆ. 1.20 ಸಾವಿರ ಜನ ಪಾಕಿಸ್ತಾನಿ ಬೆಂಬಲಿಗರಿದ್ದರೂ ನಾನು ಗೆಲ್ಲುತ್ತೇನೆ. ಅದಕ್ಕೆ ಕಾರಣ ಹಿಂದೂಗಳಲ್ಲಾಗಿರುವ ಜಾಗೃತಿ. ಹಿಂದೂಗಳು ಜಾಗೃತಿಯಾದರೆ ಯಾರು ಏನೂ ಮಾಡಲಾಗುವುದಿಲ್ಲ. ಕಳೆದ ಚುನಾವಣೆಯಲ್ಲಿ ನನ್ನನ್ನ ಸೋಲಿಸಲು ಶಿವಮೊಗ್ಗ, ಬೆಳಗಾವಿ ಹಾಗೂ ಬಾಗಲಕೋಟೆ ಮುಖಂಡರು ಹಣ ಕಳಿಸಿದ್ದರು. ಆದರೂ ನಾನು ಗೆದ್ದಿದ್ದೇನೆ. ಅದಕ್ಕೆ ಕಾರಣ ಹಿಂದೂಗಳು ಜಾಗೃತರಾಗಿರುವುದು ಎಂದಿದ್ದಾರೆ.

ಭಾಷಣದ ವೇಳೆ ಯತ್ನಾಳ್ ವಿಜಯಪುರದಲ್ಲಿನ ಮುಸ್ಲಿಂ ಸಮುದಾಯವನ್ನ ಪಾಕಿಸ್ತಾನಿಗಳಿಗೆ ಹೋಲಿಸಿದ್ದಾರೆ ಎಂಬ ಆರೋಪಕ್ಕೆ ಇದೀಗ ಆಕ್ರೋಶಗಳು ಕೇಳಿಬಂದಿವೆ. ವಿಜಯಪುರದಲ್ಲಿ ನಿಜವಾಗಿಯೂ ಪಾಕಿಸ್ತಾನಿಗಳಿದ್ದಾರಾ? ಪಾಕಿಸ್ತಾನದ ಬೆಂಬಲಿಗರಿದ್ದಾರಾ? ಯತ್ನಾಳ್ ಹೇಳಿಕೆಗೆ ಸಮುದಾಯ ಹೇಗೆ ಪ್ರತಿಕ್ರಿಯಿಸಲಿದೆ ಕಾದು ನೋಡಬೇಕು.