ಖೇಲೋ ಇಂಡಿಯಾ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಭಾರತವು ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದು ಒತ್ತಿ ಹೇಳಿದರು. ಸರ್ಫಿಂಗ್ ಮತ್ತು ಸ್ಪೋರ್ಟ್ಸ್ ಕ್ಲೈಂಬಿಂಗ್‌ನಂತಹ ಹೊಸ ಕ್ರೀಡೆಗಳಲ್ಲಿ ಪ್ರಾವೀಣ್ಯತೆ ಸಾಧಿಸುವ ಮೂಲಕ ಪದಕಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ನವದೆಹಲಿ: ‘ಭಾರತವು ಒಲಿಂಪಿಕ್ಸ್‌ನ ಅರ್ಧದಷ್ಟು ಕ್ರೀಡೆಯಲ್ಲೂ ಸ್ಪರ್ಧಿಸುತ್ತಿಲ್ಲ. ನಾವು ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ. ಸರ್ಫಿಂಗ್, ಸ್ಪೋರ್ಟ್ಸ್ ಕ್ಲೈಂಬಿಂಗ್‌ನಂತಹ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಾಗ ಪದಕಗಳ ಸಂಖ್ಯೆ ಹೆಚ್ಚಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಖೇಲೋ ಇಂಡಿಯಾ ಸಂವಾದದಲ್ಲಿ ಮೋದಿ ಮಾತು
ಯುವ ಜನತೆ, ಕ್ರೀಡಾಪಟುಗಳ ಜೊತೆ ಆನ್‌ಲೈನ್ ಮೂಲಕ ನಡೆಸಿದ ‘ಖೇಲೋ ಇಂಡಿಯಾ ಸಂವಾದ’ದಲ್ಲಿ ಮಾತನಾಡಿದ ಮೋದಿ, ‘ಒಲಿಂಪಿಕ್ಸ್‌ನಲ್ಲಿ ಹಲವು ವಿಭಿನ್ನ ಕ್ರೀಡೆಗಳಿವೆ. ಭಾರತ ಅದರ ಅರ್ಧದಷ್ಟು ವಿಭಾಗದಲ್ಲಿ ಇದುವರೆಗೆ ಭಾಗವಹಿಸಿಲ್ಲ. 2012ರಲ್ಲಿ ನಾವು ಕೇವಲ 13 ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದೆವು. 20ಕ್ಕೂ ಹೆಚ್ಚು ಈವೆಂಟ್‌ಗಳಲ್ಲಿ ಭಾಗವಹಿಸಿಯೇ ಇರಲಿಲ್ಲ. ಹಲವರಿಗೆ ಈ ಸ್ಪರ್ಧೆಗಳ ಬಗ್ಗೆ ತಿಳಿದೇ ಇಲ್ಲ. ಇತರ ದೇಶಗಳು ಆ ಕ್ರೀಡೆಗಳಲ್ಲಿ ಪದಕಗಳನ್ನು ಗೆಲ್ಲುತ್ತವೆ. ನಾವು ಭಾಗವಹಿಸುವುದೇ ಇಲ್ಲ. ನಮ್ಮ ಪದಕಗಳನ್ನು ಹೆಚ್ಚಿಸಲು, ನಾವು ಈ ಕ್ರೀಡೆಗಳಲ್ಲಿ ಸುಧಾರಣೆ ಕಾಣಬೇಕಿದೆ’ ಎಂದು ಕಿವಿಮಾತು ಹೇಳಿದರು.
ಮುಂದುವರೆದಂತೆ, ‘ಸರ್ಫಿಂಗ್ ಮತ್ತು ಸ್ಪೋರ್ಟ್ ಕ್ಲೈಂಬಿಂಗ್ ಕ್ರೀಡೆಗಳಿಗೆ ನಮ್ಮಲ್ಲಿ ವಿಶಾಲವಾದ ಕರಾವಳಿ, ಗುಡ್ಡಗಾಡು ಪ್ರದೇಶಗಳಿವೆ. ಅದಕ್ಕಾಗಿಯೇ ನಾವು ವಿವಿಧ ಪ್ರದೇಶಗಳಲ್ಲಿ ಈ ಕ್ರೀಡೆಗಳನ್ನು ಬೆಳೆಸುವ ಅವಕಾಶಗಳನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು, ನಾವು ಈ ಕ್ರೀಡೆಗಳಲ್ಲಿಯೂ ಕರಗತ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಮುಂದಿನ ವರ್ಷ ಪಾಕ್‌ನಲ್ಲಿ ದಕ್ಷಿಣ ಏಷ್ಯನ್ ಗೇಮ್ಸ್: ಭಾರತ ಭಾಗಿ ಅನುಮಾನ
ಕರಾಚಿ: ಮುಂದಿನ ವರ್ಷ ಏ.3ರಿಂದ 11ರ ವರೆಗೆ ಪಾಕಿಸ್ತಾನದ ಇಸ್ಲಾಮಾಬಾದ್, ಲಾಹೋರ್ ಹಾಗೂ ಪೇಶಾವರದಲ್ಲಿ 14ನೇ ಆವೃತ್ತಿಯ ದಕ್ಷಿಣ ಏಷ್ಯನ್ ಗೇಮ್ಸ್ ನಡೆಯಲಿದೆ. ಇತ್ತೀಚೆಗೆ ದಕ್ಷಿಣ ಏಷ್ಯಾ ಒಲಿಂಪಿಕ್ ಕೌನ್ಸಿಲ್ ಕ್ರೀಡಾಕೂಟದ ದಿನಾಂಕ ಅಂತಿಮಗೊಳಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಭಾರತದ ಪ್ರತಿನಿಧಿಗಳು ಕೂಡಾ ಪಾಲ್ಗೊಂಡಿದ್ದರು. ಆದರೆ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳುವುದು ಅನುಮಾನವೆನಿಸಿದೆ. ಈ ಕ್ರೀಡಾಕೂಟ 6 ವರ್ಷಗಳ ಬಳಿಕ ನಡೆಯುತ್ತಿದೆ. ಕೊನೆಯದಾಗಿ 2021ರಲ್ಲಿ ಆಯೋಜನೆಗೊಂಡಿತ್ತು.


