2036ರ ಒಲಿಂಪಿಕ್ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸಲು ಸರ್ಕಾರ ಸಕಲ ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಾರಣಸಿಯಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಉದ್ಘಾಟಿಸಿ ಮಾತನಾಡಿದ ಅವರು, ಖೇಲೋ ಇಂಡಿಯಾದಂತಹ ಯೋಜನೆಗಳು ಪ್ರತಿಭೆಗಳನ್ನು ಪೋಷಿಸುತ್ತಿವೆ ಎಂದರು.
ವಾರಣಸಿ: 2036ರ ಒಲಿಂಪಿಕ್ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸಲು ನಮ್ಮ ಸರ್ಕಾರ ಸಕಲ ಪ್ರಯತ್ನ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಜೊತೆಗೆ ದೇಶದ ಹೆಚ್ಚೆಚ್ಚು ಕ್ರೀಡಾಪಟುಗಳಿಗೆ ಅವಕಾಶ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಸಿ 72ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸುತ್ತಿದ್ದು, ಭಾನುವಾರ ಕೂಟಕ್ಕೆ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದರು. ‘ಯುವ ಕ್ರೀಡಾಪಟುಗಳು ಒಲಿಂಪಿಕ್ ಕ್ರೀಡೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಲು ಸರ್ಕಾರ ಸತತ ಪರಿಶ್ರಮ ವಹಿಸುತ್ತಿದೆ. ಖೇಲೋ ಇಂಡಿಯಾದಂತಹ ಕೂಟಗಳು ಪ್ರತಿಭೆಗಳನ್ನು ಹುಡುಕಿ, ಪೋಷಿಸಲು ಗೇಮ್ ಚೇಂಜರ್ ಆಗಿವೆ’ ಎಂದು ಮೋದಿ ಹೇಳಿದರು.
‘2030ರಲ್ಲಿ ಭಾರತದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯಲಿದೆ. 2036ರ ಒಲಿಂಪಿಕ್ಸ್‌ಗೆ ಆತಿಥ್ಯ ಹಕ್ಕು ಪಡೆಯಲು ಭಾರತ ಸಕಲ ಪ್ರಯತ್ನ ನಡೆಸುತ್ತಿದೆ’ ಎಂದು ಮೋದಿ ತಿಳಿಸಿದರು.
ವಾಲಿಬಾಲ್‌ಗೂ, ದೇಶದ ಅಭಿವೃದ್ಧಿಗೂ ವಿಶೇಷ ಹೋಲಿಕೆ: ಮೋದಿ ಬಣ್ಣನೆ!
ವಾಲಿಬಾಲ್ ಅನ್ನು ಸಾಧಾರಣ ಕ್ರೀಡೆಯಲ್ಲ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಈ ಕ್ರೀಡೆಗೂ ಭಾರತದ ಅಭಿವೃದ್ಧಿಗೂ ವಿಶೇಷ ಹೋಲಿಕೆ ಇದೆ ಎಂದರು. ‘ವಾಲಿಬಾಲ್‌ನಲ್ಲಿ ಸಂತುಲನ ಬಹಳ ಮುಖ್ಯ. ಅದು ಸಹಕಾರವನ್ನು ಆಧರಿಸಿರು ಕ್ರೀಡೆ. ಸಂಕಲ್ಪ, ಶಕ್ತಿ, ಆಟಗಾರರ ನಡುವೆ ನಾವೊಂದು ತಂಡ ಎನ್ನುವ ಮನೋಭಾವನೆ, ತಂಡವೇ ಮೊದಲು ಎನ್ನುವ ಧ್ಯೇಯ ಬಹಳ ಮುಖ್ಯ. ಅದೇ ರೀತಿ ದೇಶದ ಅಭಿವೃದ್ಧಿಯಲ್ಲೂ ಈ ಅಂಶಗಳು ಪ್ರಮುಖ ಪಾತ್ರ ವಹಿಸಲಿವೆ’ ಎಂದು ಮೋದಿ ವಿವರಿಸಿದರು.
ರಾಷ್ಟ್ರೀಯ ಶೂಟಿಂಗ್: 3 ಚಿನ್ನದ ಪದಕ ಗೆದ್ದ ರಾಜ್ಯದ ಜೊನಾಥನ್
ನವದೆಹಲಿ: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಜೊನಾಥನ್ ಗ್ಯಾವಿನ್ ಆ್ಯಂಥೋನಿ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ್ದಾರೆ. ಸಬ್-ಯೂಥ್, ಯೂಥ್ ಹಾಗೂ ಜೂನಿಯರ್ ವಿಭಾಗಗಳಲ್ಲಿ ಜೊನಾಥನ್ ಚಿನ್ನದ ಪದಕ ಜಯಿಸಿದ್ದಾರೆ. ಯೂಥ್ ವಿಭಾಗದ ಫೈನಲ್‌ನಲ್ಲಿ ಜೊನಾಥನ್ 240 ಅಂಕ ಗಳಿಸಿದರೆ, ಜೂನಿಯರ್ ವಿಭಾಗದಲ್ಲಿ 240.5 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು.


