12 ವರ್ಷಗಳ ಕಾಯುವಿಕೆಯ ನಂತರ ಆಪಲ್ ಪೇ ಶೀಘ್ರದಲ್ಲೇ ಆಕ್ಸಿಸ್ ಬ್ಯಾಂಕ್ ಸಹಯೋಗದೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಆರಂಭದಲ್ಲಿ ಇದು ಕೇವಲ ಕ್ರೆಡಿಟ್ ಕಾರ್ಡ್ ಆಧಾರಿತ ಟ್ಯಾಪ್ ಆಂಡ್ ಪೇ ಸೌಲಭ್ಯವನ್ನು ಹೊಂದಿರಲಿದ್ದು, ಯುಪಿಐ ಮತ್ತು ಕ್ಯೂಆರ್ ಕೋಡ್ ಬೆಂಬಲವಿಲ್ಲದೆ ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ.
ಟೆಕ್ ದೈತ್ಯ ಆಪಲ್ (Apple) ತನ್ನ ಬಹುನಿರೀಕ್ಷಿತ 'ಆಪಲ್ ಪೇ' (Apple Pay) ಸೇವೆಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. 2014 ರಲ್ಲಿ ಅಮೆರಿಕದಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಈ ಡಿಜಿಟಲ್ ಪಾವತಿ ಸೇವೆ, ಬರೋಬ್ಬರಿ 12 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅಕ್ಟೋಬರ್ ಆರಂಭದಲ್ಲಿ ಭಾರತೀಯ ಐಫೋನ್ (iPhone) ಬಳಕೆದಾರರ ಕೈಸೇರುವ ನಿರೀಕ್ಷೆಯಿದೆ. ವಿಶ್ವದ ಅತ್ಯಂತ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಭಾರತೀಯ ಡಿಜಿಟಲ್ ಪಾವತಿ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಆಪಲ್ ಸಂಸ್ಥೆ ಬೃಹತ್ ಯೋಜನೆ ರೂಪಿಸಿದೆ.
ಕ್ಸಿಸ್ ಬ್ಯಾಂಕ್ ಜೊತೆ ಕೈಜೋಡಿಸಿದ ಆಪಲ್
ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಆಪಲ್ ಸಂಸ್ಥೆಯು ಖಾಸಗಿ ರಂಗದ ಪ್ರಮುಖ ಆಕ್ಸಿಸ್ ಬ್ಯಾಂಕ್ (Axis Bank) ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಆರಂಭಿಕ ಹಂತದಲ್ಲಿ ಆಪಲ್ ಪೇ ಸೇವೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ದಾರರಿಗೆ ಮಾತ್ರ ಲಭ್ಯವಾಗಲಿದೆ.
ಜುಲೈ 2026 ರ ವೇಳೆಗೆ ಆಕ್ಸಿಸ್ ಬ್ಯಾಂಕ್ ಹೊಂದಿರುವ 16.3 ಮಿಲಿಯನ್ ಸಕ್ರಿಯ ಕ್ರೆಡಿಟ್ ಕಾರ್ಡ್ ಬಳಕೆದಾರರು ನೇರವಾಗಿ ಆಪಲ್ ಪೇ ಬಳಸಲು ಅರ್ಹರಾಗಲಿದ್ದಾರೆ. ಆರಂಭದಲ್ಲಿ ಕ್ರೆಡಿಟ್ ಕಾರ್ಡ್-ಕೇಂದ್ರಿತ ಸೇವೆಯಾಗಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇತರ ಪ್ರಮುಖ ಬ್ಯಾಂಕ್‌ಗಳಿಗೂ ಇದನ್ನು ವಿಸ್ತರಿಸುವ ಆಲೋಚನೆ ಕಂಪನಿಯಾಗಿದೆ.
QR ಕೋಡ್ ಮತ್ತು UPI ಬೆಂಬಲದ ಸವಾಲುಗಳು!
ಭಾರತದಲ್ಲಿ ಡಿಜಿಟಲ್ ಪಾವತಿ ಎಂದರೆ ಅದು 'ಯುಪಿಐ' (UPI). ಆದರೆ, ಆಪಲ್ ಪೇ ಆರಂಭದಲ್ಲಿ ಯುಪಿಐ ಬೆಂಬಲವಿಲ್ಲದೆ ಬಿಡುಗಡೆಯಾದರೆ ಐಫೋನ್ ಬಳಕೆದಾರರಿಗೆ ಕೆಲವು ಅಡಚಣೆಗಳು ಎದುರಾಗಬಹುದು.
1. ಸಂಪರ್ಕವಿಲ್ಲದ ಪಾವತಿ (Contactless Pay); ಬಳಕೆದಾರರು ಸ್ವೈಪಿಂಗ್ ಯಂತ್ರಗಳಿಗೆ (PoS Machines) ತಮ್ಮ ಐಫೋನ್ ಅಥವಾ ಆಪಲ್ ವಾಚ್ ಟ್ಯಾಪ್ ಮಾಡುವ ಮೂಲಕ 'ಕಾಂಟ್ಯಾಕ್ಟ್‌ಲೆಸ್ ಕಾರ್ಡ್' ಪಾವತಿ ಮಾಡಬಹುದು.
2.QR ಕೋಡ್ ಸಮಸ್ಯೆ; ಅಂಗಡಿಗಳಲ್ಲಿರುವ ಯುಪಿಐ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಪಾವತಿಸಲು ಆಪಲ್ ಪೇ ನಲ್ಲಿ ತಕ್ಷಣವೇ ಅವಕಾಶ ಸಿಗದೇ ಇರಬಹುದು.
ಭಾರತದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಅತ್ಯಂತ ಜನಪ್ರಿಯವಾಗಿರುವುದರಿಂದ, ಆಪಲ್ ಸಂಸ್ಥೆ ಯುಪಿಐ ಬೆಂಬಲವನ್ನು ಎಷ್ಟು ಬೇಗ ಸೇರ್ಪಡೆಗೊಳಿಸುತ್ತದೆ ಎಂಬುದರ ಮೇಲೆ ಅದರ ಯಶಸ್ಸು ಆಧಾರಿತವಾಗಿದೆ.
ಗೂಗಲ್ ಪೇ, ಫೋನ್ ಪೇ ಸ್ಪರ್ಧೆ ಮತ್ತು ಯುಪಿಐ ಸಾಮ್ರಾಜ್ಯ!
ಪ್ರಸ್ತುತ ಭಾರತೀಯ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ PhonePe ಮತ್ತು Google Pay (GPay) ಮುಂಚೂಣಿಯಲ್ಲಿವೆ. ದೇಶದಲ್ಲಿ ಯುಪಿಐ ಬಳಕೆ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಆಗಸ್ಟ್ 2026 ಒಂದೇ ತಿಂಗಳಿನಲ್ಲಿ ಬರೋಬ್ಬರಿ 24.5 ಬಿಲಿಯನ್ ಯುಪಿಐ ವಹಿವಾಟುಗಳು ದಾಖಲಾಗಿವೆ. ಇಂತಹ ಬೃಹತ್ ಮಾರುಕಟ್ಟೆಯಲ್ಲಿ ಗೂಗಲ್ ಪೇ ಮತ್ತು ಫೋನ್ ಪೇ ಪ್ರತಿದಿನ ಲಕ್ಷಾಂತರ ಗ್ರಾಹಕರು ಬಳಸುವ ಪ್ರಾಥಮಿಕ ಆ್ಯಪ್‌ಗಳಾಗಿವೆ. ಆಪಲ್ ತನ್ನ ಭದ್ರವಾದ ಭದ್ರತೆ (Security) ಮತ್ತು ತಂತ್ರಜ್ಞಾನದ ಮೂಲಕ ಐಫೋನ್ ಬಳಕೆದಾರರನ್ನು ಸೆಳೆಯಲು ಮುಂದಾಗಿದ್ದರೂ, ಯುಪಿಐ ಬೆಂಬಲವಿಲ್ಲದೆ ಭಾರತೀಯ ಗ್ರಾಹಕರನ್ನು ಪೂರ್ಣಪ್ರಮಾಣದಲ್ಲಿ ತಲುಪುವುದು ಸವಾಲಿನ ಕೆಲಸವಾಗಿದೆ.
ಭಾರತದಲ್ಲಿ ಆಪಲ್ ಪೇ ಭವಿಷ್ಯವೇನು?
ಆಪಲ್ ಪ್ರಿಯರಿಗೆ ಇದು ಖಂಡಿತವಾಗಿಯೂ ದೊಡ್ಡ ಸುದ್ದಿಯಾಗಿದೆ. ಫೋನ್‌ನಿಂದಲೇ ಕಾರ್ಡ್‌ಗಳನ್ನು ಬಳಸದೆ ಸುರಕ್ಷಿತವಾಗಿ ಪಾವತಿಸುವ ಸೌಲಭ್ಯ ಆಪಲ್ ಪೇ ನೀಡುತ್ತದೆ. ಆದಾಗ್ಯೂ, ಭಾರತೀಯ ಗ್ರಾಹಕರು ಕಾರ್ಡ್ ಆಧಾರಿತ 'ಟ್ಯಾಪ್ ಆಂಡ್ ಪೇ' ಸೌಲಭ್ಯಕ್ಕಿಂತ 'ಯುಪಿಐ ಕ್ಯೂಆರ್' ಪಾವತಿಗೆ ಹೆಚ್ಚು ಅಭ್ಯಾಸವಾಗಿದ್ದಾರೆ. ಹೀಗಾಗಿ, ಆಪಲ್ ಸಂಸ್ಥೆಯು ಮುಂದಿನ ದಿನಗಳಲ್ಲಿ ಆಕ್ಸಿಸ್ ಬ್ಯಾಂಕ್ ನೆರವಿನೊಂದಿಗೆ ಯುಪಿಐ ಬೆಂಬಲವನ್ನು ನೀಡಿದರೆ ಮಾತ್ರ ಭಾರತದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಲು ಸಾಧ್ಯ.

