1980ರಲ್ಲಿ ನಕಲಿ ದಾಖಲೆ ಬಳಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಿದ ಆರೋಪದಡಿ ಸೋನಿಯಾ ಗಾಂಧಿ ವಿರುದ್ಧದ ಎಫ್‌ಐಆರ್ ಅರ್ಜಿಯನ್ನು ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶವನ್ನು ದೆಹಲಿ ಸೆಷನ್ಸ್ ಕೋರ್ಟ್ ರದ್ದುಗೊಳಿಸಿದೆ. ಪ್ರಕರಣದ ಮರು ವಿಚಾರಣೆಗೆ ಸೂಚಿಸಲಾಗಿದ್ದು, ಸೆಪ್ಟೆಂಬರ್ 29ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮುನ್ನವೇ ಅಂದರೆ 1980ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಳ್ಳಲು ನಕಲಿ ಹಾಗೂ ಫೋರ್ಜರಿ ದಾಖಲೆಗಳನ್ನು ಬಳಸಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಲಭಿಸಿದೆ. ಈ ಪ್ರಕರಣದಲ್ಲಿ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ದೆಹಲಿಯ ಸೆಷನ್ಸ್ ನ್ಯಾಯಾಲಯ ರದ್ದುಗೊಳಿಸಿದೆ. ದೆಹಲಿ ದ್ವಾರಕಾ ನ್ಯಾಯಾಲಯದ ಈ ಮಹತ್ವದ ತೀರ್ಪಿನಿಂದಾಗಿ ಸೋನಿಯಾ ಗಾಂಧಿ ಅವರಿಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ.
'ಕಾರಣ ನೀಡದೆ ವಜಾ'; ಮ್ಯಾಜಿಸ್ಟ್ರೇಟ್ ಆದೇಶ ರದ್ದು!
ಮ್ಯಾಜಿಸ್ಟ್ರೇರಿಯಲ್ ನ್ಯಾಯಾಲಯವು ಸೆಪ್ಟೆಂಬರ್ 11, 2025 ರಂದು ನೀಡಿದ್ದ ಆದೇಶವನ್ನು ಪರಿಶೀಲಿಸಿದ ದ್ವಾರಕಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು, ದೂರನ್ನು ತಿರಸ್ಕರಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಯಾವುದೇ ಸೂಕ್ತ ಹಾಗೂ ಸ್ಪಷ್ಟ ಕಾರಣಗಳನ್ನು ನೀಡಿಲ್ಲ ಎಂದು ಅಭಿಪ್ರಾಯಪಟ್ಟರು. ಈ ಆದೇಶವು ಸಂಪೂರ್ಣ ಕಾರಣರಹಿತವಾಗಿದೆ (non-speaking order) ಎಂದು ತಿಳಿಸಿದ ನ್ಯಾಯಾಧೀಶರು, ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಿ, ಕಾಯ್ದೆಯನ್ವಯ "ಸಮಂಜಸ ಹಾಗೂ ಕಾರಣಸಹಿತ ಆದೇಶ (Reasoned Order) ಹೊರಡಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಏನಿದು 'ಫೋರ್ಜರಿ' ವೋಟರ್ ಐಡಿ ಪ್ರಕರಣ?
ರೌಸ್ ಅವೆನ್ಯೂ ಕೋರ್ಟ್ ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ವಿಕಾಸ್ ತ್ರಿಪಾಠಿ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿದಾರರ ಆರೋಪದ ಪ್ರಕಾರ, ಸೋನಿಯಾ ಗಾಂಧಿ ಅವರು ಏಪ್ರಿಲ್ 1983ರಲ್ಲಿ ಭಾರತೀಯ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಆದರೆ, ಅವರು ಭಾರತದ ನಾಗರಿಕಳಾಗುವ ಮೂರು ವರ್ಷಗಳ ಮುನ್ನವೇ, ಅಂದರೆ 1980 ರ ಜನವರಿಯಲ್ಲೇ ನವದೆಹಲಿ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಅಕ್ರಮವಾಗಿ ನಮೂದಿಸಲಾಗಿತ್ತು. ನಂತರ ಚುನಾವಣಾ ಆಯೋಗವು ಈ ಅಕ್ರಮಗಳನ್ನು ಪತ್ತೆಹಚ್ಚಿ 1982 ರಲ್ಲಿ ಆ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿತ್ತು. ಸುಳ್ಳು ಮತ್ತು ನಕಲಿ ದಾಖಲೆಗಳನ್ನು ನೀಡಿ ಹೆಸರು ಸೇರಿಸಿದ್ದರಿಂದಲೇ ಈ ರೀತಿ ಹೆಸರು ಅಳಿಸಿಹಾಕಲಾಗಿತ್ತು ಎಂಬುದು ಅರ್ಜಿದಾರರ ಮುಖ್ಯ ಆರೋಪವಾಗಿದೆ. ಬಳಿಕ ಅವರು ಪೌರತ್ವ ಪಡೆದ ವರ್ಷವಾದ ೧೯೮೩ ರಲ್ಲಿ ಮತ್ತೆ ಅವರ ಹೆಸರನ್ನು ಸೇರ್ಪಡೆ ಮಾಡಲಾಗಿತ್ತು.
ಕಾನೂನು ಪ್ರಕ್ರಿಯೆ ಉಲ್ಲಂಘನೆ ಎತ್ತಿಹಿಡಿದ ಸೆಷನ್ಸ್ ಕೋರ್ಟ್!
ವಿಚಾರಣೆಯ ವೇಳೆ ಸೆಷನ್ಸ್ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪ್ರಕ್ರಿಯೆಯಲ್ಲಿದ್ದ ಪ್ರಮುಖ ಲೋಪವನ್ನು ಬೆಟ್ಟು ಮಾಡಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಅರ್ಜಿಯನ್ನು ವಜಾ ಮಾಡುವ ಮುನ್ನ ಪೊಲೀಸರಿಂದ ಯಾವುದೇ ಸ್ಥಿತಿಗತಿ ವರದಿ (Status Report) ಕೋರದಿರುವುದು ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ತಿಳಿಸಿದೆ. ಅಲ್ಲದೆ 1980, 1982 ಮತ್ತು 1983ರ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಅಳಿಸುವಿಕೆ ಮತ್ತು ಪುನಃ ಸೇರ್ಪಡೆಯಾದ ಅನುಕ್ರಮ ಮತ್ತು ಅದರ ಗಂಭೀರತೆಯ ಬಗ್ಗೆಯೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗಮನಹರಿಸಿಲ್ಲ ಎಂದು ನ್ಯಾಯಾಧೀಶರು ಆಕ್ಷೇಪಿಸಿದ್ದಾರೆ.
ಸೆಪ್ಟೆಂಬರ್ 29ಕ್ಕೆ ಮುಂದಿನ ವಿಚಾರಣೆ!
ಈ ಹಿನ್ನೆಲೆಯಲ್ಲಿ, ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ವಿಕಾಸ್ ತ್ರಿಪಾಠಿ ಸಲ್ಲಿಸಿದ್ದ ಪರಿಷ್ಕರಣಾ ಅರ್ಜಿಯನ್ನು ಮಾನ್ಯ ಮಾಡಿರುವ ಸೆಷನ್ಸ್ ಕೋರ್ಟ್, ಪ್ರಕರಣವನ್ನು ಪುನಃ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ACJM) ಪೀಠದ ಮುಂದೆ ಸೆಪ್ಟೆಂಬರ್ 29ಕ್ಕೆ ನಿಗದಿಪಡಿಸಿದೆ.
ಸೋನಿಯಾ ಗಾಂಧಿ ವಾದವೇನು?
ಮತ್ತೊಂದೆಡೆ, ಈ ಪ್ರಕರಣದ ಕುರಿತು ನ್ಯಾಯಾಲಯದಿಂದ ನೋಟಿಸ್ ಪಡೆದಿದ್ದ ಸೋನಿಯಾ ಗಾಂಧಿ ಅವರು ಫೆಬ್ರವರಿ ೬ ರಂದು ತಮ್ಮ ವಾದ ಮಂಡಿಸಿದ್ದರು. ತಮ್ಮ ಮೇಲಿನ ದೂರು "ಸಂಪೂರ್ಣವಾಗಿ ತಪ್ಪು ಕಲ್ಪನೆ, ರಾಜಕೀಯ ಪ್ರೇರಿತ, ಕ್ಷುಲ್ಲಕ ಹಾಗೂ ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ" ಎಂದು ಪ್ರತ್ಯುತ್ತರ ನೀಡಿದ್ದರು. ಯಾವುದೇ ಮೂಲಭೂತ ಮತ್ತು ಅಧಿಕೃತ ಆಧಾರಗಳಿಲ್ಲದೆ, ಕೇವಲ ಮಾಧ್ಯಮ ವರದಿಗಳು ಹಾಗೂ ಕಾಲ್ಪನಿಕ ಊಹೆಗಳ ಮೇಲೆ ಈ ದೂರು ದಾಖಲಿಸಲಾಗಿದೆ ಎಂದು ವಾದಿಸಿದ್ದರು. ಆದರೆ, ಈಗ ಸೆಷನ್ಸ್ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸಿರುವುದರಿಂದ, ಸೋನಿಯಾ ಗಾಂಧಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಲಿದೆಯೇ ಅಥವಾ ಕಟ್ಟುನಿಟ್ಟಿನ ತನಿಖೆಗೆ ಆದೇಶ ಸಿಗಲಿದೆಯೇ ಎಂಬುದು ಸೆಪ್ಟೆಂಬರ್ ೨೯ ರ ವಿಚಾರಣೆಯ ನಂತರ ಸ್ಪಷ್ಟವಾಗಲಿದೆ.


