ಆಪಲ್ ಸಂಸ್ಥೆಯು ತನ್ನ ಹೊಸ 'ಐಫೋನ್ 18 ಪ್ರೊ' ಮತ್ತು 'ಐಫೋನ್ 18 ಪ್ರೊ ಮ್ಯಾಕ್ಸ್' ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಫೋನ್‌ಗಳು ಐಫೋನ್ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಟರಿ, ಮೊದಲ 'ವೇರಿಯೇಬಲ್ ಅಪರ್ಚರ್' ಕ್ಯಾಮೆರಾ, ಮತ್ತು ಅತ್ಯಾಧುನಿಕ 2nm 'A20 ಪ್ರೊ' ಚಿಪ್‌ಸೆಟ್ ಅನ್ನು ಹೊಂದಿವೆ.

ಕ್ಯೂಪರ್ಟಿನೊ (ಕ್ಯಾಲಿಫೋರ್ನಿಯಾ):ಜಾಗತಿಕ ತಂತ್ರಜ್ಞಾನ ದೈತ್ಯ 'ಆಪಲ್' (Apple) ಸಂಸ್ಥೆಯು ತನ್ನ ಮುಂದಿನ ಪೀಳಿಗೆಯ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳಾದ 'ಐಫೋನ್ 18 ಪ್ರೊ' (iPhone 18 Pro) ಮತ್ತು 'ಐಫೋನ್ 18 ಪ್ರೊ ಮ್ಯಾಕ್ಸ್' (iPhone 18 Pro Max) ಮಾದರಿಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಹೊಸ ಪ್ರೊ ಸರಣಿಯ ಫೋನ್‌ಗಳು ಐಫೋನ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಮರ್ಥ್ಯದ ಬ್ಯಾಟರಿ, ಸುಧಾರಿತ ಕ್ಯಾಮೆರಾ ವ್ಯವಸ್ಥೆ ಮತ್ತು ಅಲ್ಯೂಮಿನಿಯಂ ಸೈಡ್ ರೇಲ್ ವಿನ್ಯಾಸವನ್ನು ಹೊಂದಿವೆ. ಹೊಸ ಐಫೋನ್ 18 ಪ್ರೊ ಸರಣಿಯು ಬರ್ಗಾಂಡಿ (Burgundy), ಸಿಲ್ವರ್ (Silver) ಮತ್ತು ಬ್ಲ್ಯಾಕ್ (Black) ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಇದರೊಂದಿಗೆ, ಹೊಸ ಐಫೋನ್ ಮಾದರಿಗಳು ಆನ್-ಡಿವೈಸ್ ಪ್ರೊಸೆಸಿಂಗ್ (On-device processing) ಸಾಮರ್ಥ್ಯ ಹೊಂದಿರುವ ಸುಧಾರಿತ 'ಆಪಲ್ ಇಂಟೆಲಿಜೆನ್ಸ್' (Apple Intelligence) ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುವ ಹೊಸ ಆವೃತ್ತಿಯ 'ಸಿರಿ' (Siri) ವಾಯ್ಸ್‌ ಅಸಿಸ್ಟೆಂಟ್‌ಅನ್ನೂ ಹೊಂದಿದೆ.

2nm ತಂತ್ರಜ್ಞಾನದ 'A20 ಪ್ರೊ' ಚಿಪ್‌ಸೆಟ್

ಐಫೋನ್ 18 ಪ್ರೊ ಸರಣಿಯು ಅತ್ಯಾಧುನಿಕ 2 ನಾನೋಮೀಟರ್ (2nm) ಪ್ರಕ್ರಿಯೆಯ ಆಧಾರಿತ ಹೊಚ್ಚಹೊಸ 'A20 ಪ್ರೊ' (A20 Pro) ಚಿಪ್‌ನೊಂದಿಗೆ ಚಾಲನೆಗೊಳ್ಳುತ್ತದೆ. ಫೋನ್‌ನ ಕಾರ್ಯಕ್ಷಮತೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲು ಆಪಲ್ ಇದರ ಥರ್ಮಲ್ ಆರ್ಕಿಟೆಕ್ಚರ್ ಅನ್ನು (Thermal Architecture) ಗಮನಾರ್ಹವಾಗಿ ಸುಧಾರಿಸಿದೆ. ಇದರಲ್ಲಿರುವ ಶಕ್ತಿಯುತ 'ನ್ಯೂರಲ್ ಎಂಜಿನ್' (Neural Engine) ಭಾರೀ ಪ್ರಮಾಣದ ಆನ್-ಡಿವೈಸ್ AI ಕೆಲಸಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲಿದೆ.

ಇತಿಹಾಸದಲ್ಲೇ ಮೊದಲ 'ವೇರಿಯೇಬಲ್ ಅಪರ್ಚರ್' ಕ್ಯಾಮೆರಾ

ಆಪಲ್ ಸಂಸ್ಥೆಯು ಐಫೋನ್ 18 ಪ್ರೊ ಸರಣಿಯಲ್ಲಿ ತನ್ನ ಮೊದಲ 'ವೇರಿಯೇಬಲ್ ಅಪರ್ಚರ್' (Variable Aperture) ಕ್ಯಾಮೆರಾ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ತಂತ್ರಜ್ಞಾನದಿಂದಾಗಿ ಕ್ಯಾಮೆರಾ ಸೆನ್ಸಾರ್‌ಗೆ ಎಷ್ಟು ಬೆಳಕು ಪ್ರವೇಶಿಸಬೇಕು ಎಂಬುದನ್ನು ಯೂಸರ್‌ ಉತ್ತಮವಾಗಿ ನಿಯಂತ್ರಿಸಬಹುದು. ಈ ನೂತನ ಕ್ಯಾಮೆರಾ ವ್ಯವಸ್ಥೆಯು ಬೆಳಕು ಕಡಿಮೆ ಇರುವ ಪ್ರದೇಶಗಳಲ್ಲಿ (Low-light photography) ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿಯಲು ಮತ್ತು ವಿವಿಧ ಬೆಳಕಿನ ವಾತಾವರಣಕ್ಕೆ ತಕ್ಕಂತೆ ಛಾಯಾಗ್ರಹಣ ಮಾಡಲು ಅನುಕೂಲ ಮಾಡಿಕೊಡುತ್ತದೆ.

ಹೆಚ್ಚುವರಿಯಾಗಿ, ಯೂಸರ್‌ಗಳಿೆ ತಮ್ಮ ಫೋಟೋಗಳ ಶೈಲಿ ಹಾಗೂ ಫೋಕಸ್ ಮೇಲೆ ಹೆಚ್ಚಿನ ನಿಯಂತ್ರಣ ನೀಡಲು ಆಪಲ್ ಹೊಸ 'ಫೋಟೋಗ್ರಫಿ ಸ್ಟೈಲ್ಸ್' (Photography Styles) ಮತ್ತು 'ಫೋಕಸ್ ಲಾಕ್' (Focus Lock) ವೈಶಿಷ್ಟ್ಯಗಳನ್ನು ಸೇರಿಸಿದೆ.

ಫೋಟೋಗಳ ನೈಜತೆ ಪರಿಶೀಲನೆಗೆ ಆಪಲ್ ರೆಫರಲ್ ಇಮೇಜ್

ಸೋಶಿಯಲ್‌ ಮೀಡಿಯಾದಲ್ಲಿ AI-ಚಾಲಿತ ಮತ್ತು ಮಾರ್ಪಡಿಸಿದ (Manipulated) ನಕಲಿ ಚಿತ್ರಗಳ ಹಾವಳಿ ಹೆಚ್ಚುತ್ತಿರುವ ಈ ಸಮಯದಲ್ಲಿ, ಫೋಟೋಗಳ ನೈಜತೆಯನ್ನು ಸಾಬೀತುಪಡಿಸಲು ಆಪಲ್ 'ಆಪಲ್ ರೆಫರಲ್ ಇಮೇಜ್' (Apple Referral Image) ಎಂಬ ಹೊಸ ವೈಶಿಷ್ಟ್ಯವನ್ನು ತಂದಿದೆ. ಐಫೋನ್‌ಗಳ ಮೂಲಕ ಸೆರೆಹಿಡಿಯಲಾದ ಚಿತ್ರಗಳ ಮೂಲ ಮತ್ತು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ಫೀಚರ್ ಸಹಕಾರಿಯಾಗಲಿದೆ.