ಜರ್ಮನಿಯಲ್ಲಿ ನಡೆದ IFA 2026 ಟೆಕ್ ಶೋನಲ್ಲಿ ಶಿಯೋಮಿ ತನ್ನ ಹೊಸ 'ಶಿಯೋಮಿ 18 ಫೋಲ್ಡ್' ಸ್ಮಾರ್ಟ್‌ಫೋನ್ ಅನ್ನು ಪ್ರದರ್ಶಿಸಿದೆ. ಈ ಫೋನ್ ಜೊತೆಗೆ, ಕಂಪನಿಯು ತನ್ನ ಸ್ಮಾರ್ಟ್ ಕಾರುಗಳು, ಸೈಬರ್‌ಒನ್ ರೋಬೋಟ್ ಮತ್ತು ಹೊಸ AI ತಂತ್ರಜ್ಞಾನಗಳನ್ನು ಅನಾವರಣಗೊಳಿಸಿದ್ದು, ಯುರೋಪ್ ಮಾರುಕಟ್ಟೆಗೆ ಲಗ್ಗೆ ಇಡುವ ಯೋಜನೆಗಳನ್ನು ಘೋಷಿಸಿದೆ.

ಬರ್ಲಿನ್: ಶಿಯೋಮಿ ತನ್ನ ಹೊಸ ತಲೆಮಾರಿನ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಜರ್ಮನಿಯಲ್ಲಿ ನಡೆಯುತ್ತಿರುವ IFA 2026 ಟೆಕ್ ಶೋನಲ್ಲಿ ಕಂಪನಿಯು ತನ್ನ ಹೊಚ್ಚಹೊಸ 'ಶಿಯೋಮಿ 18 ಫೋಲ್ಡ್' ಫೋನನ್ನು ಮೊದಲ ಬಾರಿಗೆ ಪ್ರದರ್ಶಿಸಿದೆ. ಇದು ಕಂಪನಿಯದೇ ಆದ ನೆಕ್ಸ್ಟ್-ಜೆನ್ ಚಿಪ್ ಬಳಸುವ ಮೊದಲ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಶಿಯೋಮಿ ಸ್ಪಷ್ಟಪಡಿಸಿದೆ. ಈ ತಿಂಗಳಲ್ಲೇ ಫೋನ್ ಮಾರುಕಟ್ಟೆಗೆ ಬರಲಿದ್ದು, ಸೆಪ್ಟೆಂಬರ್ 7 ರಂದು ಚೀನಾದಲ್ಲಿ ಶಿಯೋಮಿ 18 ಫೋಲ್ಡ್ ಅನ್ನು ಅಧಿಕೃತವಾಗಿ ಲಾಂಚ್ ಮಾಡಲಿದೆ. ಇದರ ಜೊತೆಗೆ ಶಿಯೋಮಿ ಪ್ಯಾಡ್ 9 ಪ್ರೊ ಮ್ಯಾಕ್ಸ್ ಕೂಡ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

ಕೆಂಪು ಬಣ್ಣದಲ್ಲಿ ಹೊಸ ಫೋಲ್ಡ್ ಫೋನ್

IFA ವೇದಿಕೆಯಲ್ಲಿ ಶಿಯೋಮಿ ಕೆಂಪು ಬಣ್ಣದ ಶಿಯೋಮಿ 18 ಫೋಲ್ಡ್ ಅನ್ನು ಪ್ರದರ್ಶನಕ್ಕೆ ಇಟ್ಟಿತ್ತು. ಇದು ಕಂಪನಿಯ ಹೊಸ Xring O3 ಚಿಪ್ ಬಳಸುವ ಮೊದಲ ಶಿಯೋಮಿ ಸ್ಮಾರ್ಟ್‌ಫೋನ್ ಆಗಲಿದೆ. ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಫೋನಿನ ಇತರ ತಾಂತ್ರಿಕ ವಿವರಗಳನ್ನು ಕಂಪನಿ ಸದ್ಯದಲ್ಲೇ ಬಹಿರಂಗಪಡಿಸುವ ನಿರೀಕ್ಷೆ ಇದೆ. ಈ ಹೊಸ ಚಿಪ್ ಮೂಲಕ ಪರ್ಫಾರ್ಮೆನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಫೀಚರ್‌ಗಳಲ್ಲಿ ದೊಡ್ಡ ಸುಧಾರಣೆ ತರುವುದಾಗಿ ಶಿಯೋಮಿ ಹೇಳಿಕೊಂಡಿದೆ.

380ಕ್ಕೂ ಹೆಚ್ಚು ಪ್ರಾಡಕ್ಟ್‌ಗಳ ಪ್ರದರ್ಶನ

IFA 2026 ರಲ್ಲಿ ಶಿಯೋಮಿ ಬರೋಬ್ಬರಿ 3,300 ಚದರ ಮೀಟರ್ ವಿಸ್ತೀರ್ಣದ ಪ್ರದರ್ಶನ ಪ್ರದೇಶದಲ್ಲಿ 380ಕ್ಕೂ ಹೆಚ್ಚು ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಅನಾವರಣಗೊಳಿಸಿದೆ. 'AI Tomorrow', 'AI Today', ಮತ್ತು 'Human × Car × Home' ಎಂಬ ಮೂರು ವಿಭಾಗಗಳಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. 'AI Tomorrow' ವಿಭಾಗದಲ್ಲಿ ಸ್ಮಾರ್ಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಮತ್ತು ಶಿಯೋಮಿ ವಿಷನ್ ಗ್ರಾನ್ ಟ್ಯುರಿಸ್ಮೊ ಎಲೆಕ್ಟ್ರಿಕ್ ಹೈಪರ್‌ಕಾರ್ ಕಾನ್ಸೆಪ್ಟ್ ಮುಖ್ಯ ಆಕರ್ಷಣೆಯಾಗಿದ್ದವು. 'AI Today' ವಿಭಾಗದಲ್ಲಿ ಶಿಯೋಮಿ ಎಸ್‌ಯು7 ಮ್ಯಾಕ್ಸ್ ಮತ್ತು ಸ್ಮಾರ್ಟ್ ಹೋಮ್ ಸಿಸ್ಟಮ್‌ಗಳನ್ನು ಪ್ರದರ್ಶಿಸಲಾಯಿತು. ವೈಯಕ್ತಿಕ ಗ್ಯಾಜೆಟ್‌ಗಳು, ಕಾರುಗಳು ಮತ್ತು ಸ್ಮಾರ್ಟ್ ಹೋಮ್ ಉತ್ಪನ್ನಗಳನ್ನು AI ಸಹಾಯದಿಂದ ಒಂದಕ್ಕೊಂದು ಸಂಪರ್ಕಿಸುವ ತಂತ್ರಜ್ಞಾನವನ್ನು ಕಂಪನಿ ಇಲ್ಲಿ ಪರಿಚಯಿಸಿತು.

ಸ್ಮಾರ್ಟ್ ಹೋಮ್ ಕ್ಷೇತ್ರದಲ್ಲೂ ಶಿಯೋಮಿ ಅಬ್ಬರ

ಅಡುಗೆ, ಆಹಾರ ಸಂಗ್ರಹಣೆ, ಮನೆ ಕ್ಲೀನಿಂಗ್, ಏರ್ ಕಂಟ್ರೋಲ್, ಮನರಂಜನೆ, ಭದ್ರತೆ, ವೈಯಕ್ತಿಕ ಗ್ಯಾಜೆಟ್‌ಗಳು ಮತ್ತು ಸ್ಮಾರ್ಟ್ ಸಾರಿಗೆಯಂತಹ ಹಲವು ಕ್ಷೇತ್ರಗಳ ಉತ್ಪನ್ನಗಳನ್ನು ಶಿಯೋಮಿ ಪ್ರದರ್ಶಿಸಿತು. ತನ್ನ 'ಮಿಜಿಯಾ' (Mijia) ಸ್ಮಾರ್ಟ್ ಹೋಮ್ ಸಿಸ್ಟಮ್‌ಗೆ ಕಂಪನಿ ವಿಶೇಷ ಪ್ರಾಮುಖ್ಯತೆ ನೀಡಿದೆ. ಯುರೋಪ್‌ನಾದ್ಯಂತ ಮಿಜಿಯಾ ಉತ್ಪನ್ನಗಳ ಮಾರಾಟವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸುವುದಾಗಿ ಶಿಯೋಮಿ ತಿಳಿಸಿದೆ.

ಮನುಷ್ಯರಂತೆಯೇ ಕಾಣುವ ರೋಬೋಟ್ ಕೂಡಾ ಹಾಜರ್!

ಶಿಯೋಮಿಯ ಮನುಷ್ಯರಂತೆಯೇ ಇರುವ 'ಸೈಬರ್‌ಒನ್' (CyberOne) ರೋಬೋಟ್ ಕೂಡ IFA ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿತ್ತು. ಇದರ ಜೊತೆಗೆ, Mimo-V2.5-Pro, ಶಿಯೋಮಿ ಮಿಲೋಕೊ, ಮತ್ತು ಶಿಯೋಮಿ ಮಿಕ್ಲೋ ಸೇರಿದಂತೆ ಹೊಸ AI ತಂತ್ರಜ್ಞಾನಗಳನ್ನು ಕಂಪನಿ ಪರಿಚಯಿಸಿತು. ಹೈಪರ್‌ಓಎಸ್ ಪ್ಲಾಟ್‌ಫಾರ್ಮ್ ಜೊತೆಗೆ AI, ಆಪರೇಟಿಂಗ್ ಸಿಸ್ಟಮ್, ಚಿಪ್ ತಯಾರಿಕೆ ಮತ್ತು ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಲ್ಲಿ ತನ್ನ ಹೂಡಿಕೆಯ ಬಗ್ಗೆಯೂ ಶಿಯೋಮಿ ವಿವರಿಸಿತು.

ಯೂರೋಪ್ ಮಾರುಕಟ್ಟೆಗೂ ಲಗ್ಗೆ ಇಡಲಿವೆ ಶಿಯೋಮಿ ಕಾರುಗಳು

ಶಿಯೋಮಿಯ ಆಟೋಮೊಬೈಲ್ ವಿಭಾಗದಲ್ಲೂ ಹೊಸ ಘೋಷಣೆಗಳಾಗಿವೆ. ವಿಷನ್ ಗ್ರಾನ್ ಟ್ಯುರಿಸ್ಮೊ ಕಾನ್ಸೆಪ್ಟ್ ಜೊತೆಗೆ, ಹೊಸ ತಲೆಮಾರಿನ ಎಸ್‌ಯು7 ಮತ್ತು ಎಸ್‌ಯು7 ಅಲ್ಟ್ರಾ ಕಾರುಗಳನ್ನೂ ಪ್ರದರ್ಶಿಸಲಾಯಿತು.

2024ರ ಮಾರ್ಚ್‌ನಲ್ಲಿ ಕಾರುಗಳ ವಿತರಣೆ ಆರಂಭಿಸಿದ ನಂತರ ಚೀನಾದಲ್ಲಿ 700,000ಕ್ಕೂ ಹೆಚ್ಚು ವಾಹನಗಳನ್ನು ಡೆಲಿವರಿ ಮಾಡಿರುವುದಾಗಿ ಶಿಯೋಮಿ ಹೇಳಿಕೊಂಡಿದೆ. 2027ರಲ್ಲಿ ಜರ್ಮನಿ ಸೇರಿದಂತೆ ಯುರೋಪಿಯನ್ ಮಾರುಕಟ್ಟೆಗಳಿಗೆ ಶಿಯೋಮಿ ಆಟೋವನ್ನು ತರಲು ಕಂಪನಿ ಯೋಜಿಸುತ್ತಿದೆ. 2026 ರಿಂದ 2030ರ ಅವಧಿಯಲ್ಲಿ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ (R&D) ಮೇಲಿನ ಹೂಡಿಕೆ 24 ಬಿಲಿಯನ್ ಯುರೋಗಳನ್ನು ಮೀರಲಿದೆ ಎಂದು ಶಿಯೋಮಿ ನಿರೀಕ್ಷಿಸಿದೆ. ಈ ಹೂಡಿಕೆಯನ್ನು ಮುಖ್ಯವಾಗಿ AI, ಆಪರೇಟಿಂಗ್ ಸಿಸ್ಟಮ್, ಚಿಪ್ಸ್, ಸ್ಮಾರ್ಟ್ ವಾಹನಗಳು ಮತ್ತು ರೋಬೋಟಿಕ್ಸ್ ಕ್ಷೇತ್ರಗಳಲ್ಲಿ ಮಾಡಲಿದೆ.