95 year old doctor lifestyle: ಇಂದಿನ ಆಧುನಿಕ ಯುಗದಲ್ಲಿ ಆರೋಗ್ಯವಾಗಿರಲು ಜಿಮ್, ದುಬಾರಿ ಸಪ್ಲಿಮೆಂಟ್‌ಗಳು ಮತ್ತು ಆ್ಯಪ್‌ಗಳ ಅವಶ್ಯಕತೆಯಿದೆ ಎಂದು ನಾವು ಭಾವಿಸುತ್ತೇವೆ. ಆದರೆ 95 ವರ್ಷದ ನಿವೃತ್ತ ವೈದ್ಯರೊಬ್ಬರು ನಮ್ಮ ಈ ಆಲೋಚನೆಯೇ ತಪ್ಪು ಎಂಬುದನ್ನು ಸಾಬೀತುಪಡಿಸಿದ್ದಾರೆ. 

28 ವರ್ಷದ ಕಂಟೆಂಟ್ ಕ್ರಿಯೇಟರ್ ಸಿಂಧು ಎಂಬುವವರು ತಮ್ಮ ತಾತ ಡಾ. ವಿಶ್ವನಾಥನ್ ಅವರ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇಂದಿನ ಆಧುನಿಕ ವೆಲ್ನೆಸ್ ಹಮ್ಮು-ಬಿಮ್ಮುಗಳಿಲ್ಲದೆ ಶಿಸ್ತು, ಸಂತೋಷ ಮತ್ತು ಸರಳ ಜೀವನದ ಮೂಲಕ ಹೇಗೆ ಆರೋಗ್ಯವಾಗಿರಬಹುದು ಎಂಬುದಕ್ಕೆ ಇವರ ಜೀವನವೇ ಸಾಕ್ಷಿ. ಫೆಬ್ರವರಿ 15ರಂದು ಅಪ್ರಿಸಿಯೇಷನ್ ಪೋಸ್ಟ್ ಆಗಿ ಹಂಚಿಕೊಳ್ಳಲಾದ ಈ ಲೇಖನವು, 95 ವರ್ಷದ ಈ ನಿವೃತ್ತ ಅರಿವಳಿಕೆ ತಜ್ಞರ (Anaesthetist) ದಿನಚರಿ ಮತ್ತು ಕಲಿಯುವ ಹಂಬಲವನ್ನು ಎತ್ತಿ ತೋರಿಸುತ್ತದೆ.

ಸಿಂಧು ಅವರ ಪೋಸ್ಟ್‌ನಲ್ಲೇನಿದೆ?

ಸಿಂಧು ಅವರ ಪ್ರಕಾರ, ಅವರ ತಾತನ ದಿನವು ಬೆಳಗ್ಗೆ 5:30ಕ್ಕೆ ಯೋಗದೊಂದಿಗೆ ಆರಂಭವಾಗುತ್ತದೆ. ಕಳೆದ ಎರಡು ದಶಕಗಳ ಹಿಂದೆಯೇ ನಿವೃತ್ತರಾಗಿದ್ದರೂ, ಇಂದಿಗೂ ಅವರು ವೈದ್ಯಕೀಯ ಸಾಹಿತ್ಯವನ್ನು ಓದುವುದು ಮತ್ತು ಲ್ಯಾಪ್‌ಟಾಪ್ ಬಳಸುವಂತಹ ಹೊಸ ತಾಂತ್ರಿಕ ಕೌಶಲ್ಯಗಳನ್ನು ಕಲಿಯುವಲ್ಲಿ ಆಸಕ್ತಿ ಹೊಂದಿದ್ದಾರೆ. ತಮಿಳುನಾಡಿನ ಮಧುರೈನಲ್ಲಿ ಹಲವು ವರ್ಷಗಳ ಕಾಲ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸಿದ ಇವರು ಇತ್ತೀಚೆಗಷ್ಟೇ 95ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಎಂದು ಸಿಂಧು ತಿಳಿಸಿದ್ದಾರೆ.

ಅವರ ದಿನಚರಿಯಲ್ಲಿ ಏನೇನಿದೆ?
*ಬೆಳಗ್ಗೆ ಯೋಗ ಮತ್ತು ಆಗೊಮ್ಮೆ ಈಗೊಮ್ಮೆ ಮಾರುಕಟ್ಟೆಗೆ ಹೋಗುವುದು.
*ಯಾವುದೇ ಆ್ಯಪ್‌ಗಳ ಸಹಾಯವಿಲ್ಲದೆ ನಿತ್ಯ ಪೂಜೆ ಮತ್ತು ಧ್ಯಾನ ಮಾಡುವುದು.
*ತಮಗಾಗಿ ತಾವೇ ಸಣ್ಣಪುಟ್ಟ ಅಡುಗೆ ಮಾಡಿಕೊಳ್ಳುವುದು (ಇತ್ತೀಚೆಗೆ ಅವರು ತಯಾರಿಸಿದ "ಮಿನಿ ಇಡ್ಲಿ" ಬಗ್ಗೆ ಅವರಿಗೆ ತುಂಬಾ ಹೆಮ್ಮೆ ಇತ್ತು!).
*ವೃತ್ತಿಯಿಂದ ನಿವೃತ್ತರಾದರೂ ವೈದ್ಯಕೀಯ ವಿಷಯಗಳ ಬಗ್ಗೆ ಓದುವುದು ಮತ್ತು ಬರೆಯುವುದನ್ನು ಮುಂದುವರಿಸಿದ್ದಾರೆ.

ಆಧುನಿಕ ಟ್ರೆಂಡ್‌ಗಳಿಗೆ ಟಾಂಗ್ ನೀಡಿದ ಮೊಮ್ಮಗಳು

ತಮ್ಮ ಪೋಸ್ಟ್‌ನಲ್ಲಿ ಸಿಂಧು ಅವರು ಇಂದಿನ ಸೌಂದರ್ಯ ಮತ್ತು ಆರೋಗ್ಯ (Wellness) ಉದ್ಯಮದ ಬಗ್ಗೆ ಲಘುವಾಗಿ ಹಾಸ್ಯ ಮಾಡಿದ್ದಾರೆ. "ದೀರ್ಘಕಾಲದ ಆರೋಗ್ಯಕ್ಕೆ ಯಾವುದೇ ದುಬಾರಿ ಟ್ರೆಂಡ್‌ಗಳ ಅಗತ್ಯವಿಲ್ಲ ಎಂಬುದಕ್ಕೆ ನನ್ನ ತಾತನೇ ಸಾಕ್ಷಿ" ಎಂದು ಬರೆದುಕೊಂಡಿದ್ದಾರೆ.

"ಸೌಂದರ್ಯ ಮತ್ತು ಯೋಗಕ್ಷೇಮದ ಉದ್ಯಮವು ಟ್ರಿಲಿಯನ್ ಡಾಲರ್‌ಗಳಷ್ಟು ದೊಡ್ಡದಾಗಿದೆ. ಆದರೆ ನನ್ನ ತಾತ ಇಂದಿಗೂ ಸ್ವತಃ ನಡೆಯುತ್ತಾರೆ, ಅಡುಗೆ ಮಾಡುತ್ತಾರೆ ಮತ್ತು ಹೊಸ ಕೌಶಲ್ಯಗಳನ್ನು (ಲ್ಯಾಪ್‌ಟಾಪ್ ಬಳಸುವಂತೆ!) ಕಲಿಯುತ್ತಿದ್ದಾರೆ. ಜಿಮ್ ಸದಸ್ಯತ್ವ, ಸಪ್ಲಿಮೆಂಟ್‌ಗಳು (ಪ್ರೋಟೀನ್ ಪೌಡರ್‌ನಲ್ಲಿ ಏನಿರುತ್ತದೆಯೋ ಯಾರಿ ಗೊತ್ತು?) ಇಲ್ಲದೆಯೇ ದೀರ್ಘಕಾಲ ಮತ್ತು ಆರೋಗ್ಯವಾಗಿ ಬದುಕಬಹುದು ಎಂಬುದಕ್ಕೆ ಇವರೇ ಜೀವಂತ ಪುರಾವೆ" ಎಂದು ಸಿಂಧು ಹೇಳಿದ್ದಾರೆ.

ಸಂಪ್ರದಾಯವೇ ಜೀವನ ವಿಧಾನ
ದೈನಂದಿನ ಜೀವನದಲ್ಲಿ ಬೆರೆತಿರುವ ಸಾಂಪ್ರದಾಯಿಕ ಮೌಲ್ಯಗಳ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ದಕ್ಷಿಣ ಏಷ್ಯಾ ಮತ್ತು ಹಿಂದೂ ಸಂಪ್ರದಾಯಗಳು ಯೋಗಕ್ಷೇಮವನ್ನು ಇನ್‌ಸ್ಟಾಗ್ರಾಮ್ ಟ್ರೆಂಡ್ ಆಗುವ ಮೊದಲೇ ಜೀವನದ ಭಾಗವಾಗಿಸಿವೆ. ಇದು ಕೇವಲ ಟ್ರೆಂಡ್ ಅಲ್ಲ, ಬದಲಾಗಿ ಶ್ರಮ ಮತ್ತು ಶಿಸ್ತಿನಿಂದ ಕೂಡಿದ ಜೀವನ ವಿಧಾನ. ನನ್ನ ತಾತನ ಗುಣಗಳಲ್ಲಿ ಸ್ವಲ್ಪ ಭಾಗವಾದರೂ ನನ್ನಲ್ಲಿ ಬರಲಿ ಎಂದು ನಾನು ಆಶಿಸುತ್ತೇನೆ" ಎಂದು ಸಿಂಧು ಬರೆದುಕೊಂಡಿದ್ದಾರೆ.

ಕೊನೆಯದಾಗಿ ಚಿಕ್ಕ ವಿಷಯಗಳಲ್ಲೂ ಸಂತೋಷ ಕಾಣುವ ತಮ್ಮ ತಾತನನ್ನು "ವೆಲ್ನೆಸ್ ಉದ್ಯಮದ ಹೊಸ ಮುಖ" (New face of wellness) ಎಂದು ಘೋಷಿಸುವಂತೆ ಸಿಂಧು ತಮಾಷೆಯಾಗಿ ಹೇಳಿದ್ದಾರೆ. 

ಡಾ. ವಿಶ್ವನಾಥನ್ ಅವರ ಕಥೆ ಕೇವಲ ವೈರಲ್ ಪೋಸ್ಟ್ ಅಲ್ಲ, ಅದು ಇಂದಿನ ಒತ್ತಡದ ಬದುಕಿನಲ್ಲಿ ನಾವು ಹೇಗೆ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಬದುಕಬಹುದು ಎಂಬುದಕ್ಕೆ ಒಂದು ಮಾರ್ಗದರ್ಶಿಯಾಗಿದೆ.

ಇಲ್ಲಿದೆ ನೋಡಿ ವೈರಲ್ ವಿಡಿಯೋ 

View post on Instagram