ಮನೆ ಮುಂದೆ ಹೂವಿನ ಗಿಡಗಳು, ಹಸಿರು ಗಿಡಮರಗಳು, ಕುಂಡಿಗಳ ಸಾಲು... ಇಂತಹ ಸುಂದರ ವಾತಾವರಣದ ನಡುವೆ ಏಕಾಏಕಿ ಹಾವು ಕಾಣಿಸಿಕೊಂಡರೆ ಸಹಜವಾಗಿಯೇ ಭಯವಾಗುತ್ತದೆ. ಆದರೆ, ಹೂವಿನ ಕುಂಡಿಗಳ ಬಳಿ ಹಾವುಗಳು ಕಾಣಿಸಿಕೊಳ್ಳುವುದಕ್ಕೆ ಗಿಡಗಳೇ ನೇರ ಕಾರಣವಾಗಬೇಕೆಂದಿಲ್ಲ.

ಮನೆ ಮುಂದೆ ಹೂವಿನ ಗಿಡಗಳು, ಹಸಿರು ಗಿಡಮರಗಳು, ಕುಂಡಿಗಳ ಸಾಲು... ಇಂತಹ ಸುಂದರ ವಾತಾವರಣದ ನಡುವೆ ಏಕಾಏಕಿ ಹಾವು ಕಾಣಿಸಿಕೊಂಡರೆ ಸಹಜವಾಗಿಯೇ ಭಯವಾಗುತ್ತದೆ. ಆದರೆ, ಹೂವಿನ ಕುಂಡಿಗಳ ಬಳಿ ಹಾವುಗಳು ಕಾಣಿಸಿಕೊಳ್ಳುವುದಕ್ಕೆ ಗಿಡಗಳೇ ನೇರ ಕಾರಣವಾಗಬೇಕೆಂದಿಲ್ಲ. ಕುಂಡಿಯಲ್ಲಿರುವ ತೇವಾಂಶ, ತಂಪಾದ ಮಣ್ಣು, ನೆರಳು ಮತ್ತು ಅಲ್ಲಿ ಬೆಳೆಯುವ ಸಣ್ಣ ಕೀಟಗಳು ಹಾಗೂ ಸರೀಸೃಪಗಳು ಹಾವುಗಳನ್ನು ಆಕರ್ಷಿಸಬಹುದು. ವಿಶೇಷವಾಗಿ ಸಡಿಲವಾದ ಮಣ್ಣು, ನಿರಂತರ ತೇವಾಂಶ ಮತ್ತು ಸಣ್ಣ ಜೀವಿಗಳಿಗೆ ಸೂಕ್ತ ವಾತಾವರಣವಿರುವ ಹೂವಿನ ಕುಂಡಿಗಳು ಚಿಕ್ಕ ಹಾವುಗಳಿಗೆ ಸಣ್ಣ ಪರಿಸರ ವ್ಯವಸ್ಥೆಯಂತಾಗಬಹುದು. ಹಾಗಾಗಿ ನಿಮ್ಮ ಮನೆಯ ಗಾರ್ಡನ್‌ನಲ್ಲೂ ಹಾವು ಕಾಣಿಸಿಕೊಂಡರೆ ಗಾಬರಿಯಾಗುವ ಮೊದಲು ಅದು ಯಾವ ಜಾತಿಗೆ ಸೇರಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

1. ಬ್ರಾಹ್ಮಿಣಿ ಬ್ಲೈಂಡ್ ಸ್ನೇಕ್

ಹೂವಿನ ಕುಂಡಿಗಳಲ್ಲಿ ಕಾಣಿಸಿಕೊಳ್ಳುವ ಹಾವುಗಳ ಪೈಕಿ ಬ್ರಾಹ್ಮಿಣಿ ಬ್ಲೈಂಡ್ ಸ್ನೇಕ್ ಪ್ರಮುಖವಾದದ್ದು. ಇದನ್ನು ಕೆಲವೊಮ್ಮೆ ‘ಫ್ಲವರ್‌ಪಾಟ್ ಸ್ನೇಕ್’ ಎಂದೂ ಕರೆಯಲಾಗುತ್ತದೆ. ಇದು ತುಂಬಾ ಸಣ್ಣದಾಗಿದ್ದು, ಸಾಮಾನ್ಯವಾಗಿ ಸುಮಾರು 15 ಸೆಂಟಿಮೀಟರ್‌ಗಿಂತ ಹೆಚ್ಚು ಬೆಳೆಯುವುದಿಲ್ಲ. ಕಪ್ಪು ಅಥವಾ ಹೊಳೆಯುವ ದೇಹವಿರುವುದರಿಂದ ಹಲವರು ಇದನ್ನು ಎರೆಹುಳವೆಂದು ತಪ್ಪಾಗಿ ಭಾವಿಸುತ್ತಾರೆ. ಸಡಿಲವಾದ ತೇವಾಂಶಭರಿತ ಮಣ್ಣಿನಲ್ಲಿ ಬಿಲ ಮಾಡಿಕೊಳ್ಳುವ ಈ ಹಾವು ಇರುವೆ ಮತ್ತು ಗೆದ್ದಲುಗಳ ಮೊಟ್ಟೆ ಹಾಗೂ ಲಾರ್ವಾಗಳನ್ನು ಆಹಾರವಾಗಿ ಸೇವಿಸುತ್ತದೆ. ಮುಖ್ಯವಾಗಿ ಇದು ವಿಷರಹಿತ ಹಾವು.

2. ಕಾಮನ್ ವುಲ್ಫ್ ಸ್ನೇಕ್

ಮನೆಗಳ ಗಾರ್ಡನ್‌ಗಳು ಹಾಗೂ ಹೂವಿನ ಕುಂಡಿಗಳ ಸುತ್ತ ಕಾಣಿಸಿಕೊಳ್ಳುವ ಮತ್ತೊಂದು ಹಾವು ಕಾಮನ್ ವುಲ್ಫ್ ಸ್ನೇಕ್. ಕಂದು ಅಥವಾ ಬೂದು ಬಣ್ಣದ ದೇಹದ ಮೇಲೆ ತಿಳಿ ಬಣ್ಣದ ಪಟ್ಟೆಗಳಿರುವ ಈ ಹಾವನ್ನು ಕೆಲವೊಮ್ಮೆ ಕಾಳಿಂಗ ಸರ್ಪದ ಮರಿಯೆಂದು ತಪ್ಪಾಗಿ ಗುರುತಿಸಲಾಗುತ್ತದೆ. ಇದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಮೂಡುತ್ತದೆ. ಆದರೆ ಕಾಮನ್ ವುಲ್ಫ್ ಸ್ನೇಕ್ ವಿಷರಹಿತವಾಗಿದ್ದು, ಹಲ್ಲಿಗಳು, ಗೆಕ್ಕೊಗಳು ಸೇರಿದಂತೆ ಸಣ್ಣ ಸರೀಸೃಪಗಳನ್ನು ಬೇಟೆಯಾಡುತ್ತದೆ. ಹಗಲಿನಲ್ಲಿ ತಂಪಾದ, ನೆರಳಿನ ಸ್ಥಳಗಳಲ್ಲಿ, ವಿಶೇಷವಾಗಿ ಕುಂಡಿಗಳ ಕೆಳಗೆ ಅಥವಾ ದಟ್ಟವಾದ ಗಿಡಗಳ ನಡುವೆ ಅಡಗಿರುತ್ತದೆ.

3. ಕಾಮನ್ ವೈನ್ ಸ್ನೇಕ್

ಹಸಿರು ಬಣ್ಣದ ತೆಳ್ಳಗಿನ ದೇಹ ಹಾಗೂ ಚೂಪಾದ ಮೂಗಿನ ಕಾರಣಕ್ಕೆ ವೈನ್ ಸ್ನೇಕ್ ಅನ್ನು ಸುಲಭವಾಗಿ ಗುರುತಿಸಬಹುದು. ಹೆಚ್ಚಾಗಿ ಎತ್ತರಕ್ಕೆ ಬೆಳೆದಿರುವ ಗಿಡಗಳು ಅಥವಾ ಬಳ್ಳಿಗಳ ಮೇಲೆ ಇದು ಕಾಣಿಸಿಕೊಳ್ಳುತ್ತದೆ. ಗಿಡಗಳ ನಡುವೆ ತನ್ನ ಬಣ್ಣವನ್ನು ಮರೆಮಾಚಿಕೊಂಡು ಸಣ್ಣ ಹಲ್ಲಿಗಳು ಹಾಗೂ ಕಪ್ಪೆಗಳನ್ನು ಬೇಟೆಯಾಡುತ್ತದೆ. ಇದು ತಾಂತ್ರಿಕವಾಗಿ ಸ್ವಲ್ಪ ವಿಷ ಹೊಂದಿರುವ ಹಾವಾದರೂ, ಮನುಷ್ಯರಿಗೆ ಸಾಮಾನ್ಯವಾಗಿ ಕಡಿಮೆ ಅಪಾಯಕಾರಿಯಾಗಿದೆ ಎಂದು ವರದಿ ವಿವರಿಸುತ್ತದೆ. ಇದರ ಹಲ್ಲುಗಳು ಬಾಯಿಯ ಹಿಂಭಾಗದಲ್ಲಿರುವುದರಿಂದ ಮನುಷ್ಯನಿಗೆ ಪರಿಣಾಮಕಾರಿ ಕಚ್ಚು ನೀಡುವುದು ಕಷ್ಟ. ಆದರೂ ಯಾವುದೇ ಹಾವನ್ನೂ ಕೈಯಿಂದ ಹಿಡಿಯುವುದು ಸುರಕ್ಷಿತವಲ್ಲ.

4. ಚೆಕ್ಕರ್ಡ್ ಕೀಲ್‌ಬ್ಯಾಕ್

ನಿರಂತರವಾಗಿ ನೀರು ಹಾಕುವ ಹೂವಿನ ಕುಂಡಿಗಳು, ಹತ್ತಿರದ ಚರಂಡಿ ಅಥವಾ ಸಣ್ಣ ನೀರಿನ ಪ್ರದೇಶಗಳಿರುವ ಗಾರ್ಡನ್‌ಗಳಲ್ಲಿ ಚೆಕ್ಕರ್ಡ್ ಕೀಲ್‌ಬ್ಯಾಕ್ ಕಾಣಿಸಿಕೊಳ್ಳಬಹುದು. ದೇಹದ ಮೇಲಿನ ಚೆಕರ್‌ಬೋರ್ಡ್ ರೀತಿಯ ವಿನ್ಯಾಸದಿಂದ ಇದನ್ನು ಗುರುತಿಸಬಹುದು. ತೇವಾಂಶ ಇರುವ ಪ್ರದೇಶಗಳನ್ನು ಇಷ್ಟಪಡುವ ಈ ಹಾವು ಕಪ್ಪೆಗಳು, ಗೊದಮೊಟ್ಟೆಗಳು ಹಾಗೂ ಸಣ್ಣ ಮೀನುಗಳನ್ನು ಆಹಾರವಾಗಿ ಸೇವಿಸುತ್ತದೆ. ಇದು ವಿಷರಹಿತ ಹಾವಾಗಿದ್ದರೂ, ಹೆದರಿದಾಗ ಕುತ್ತಿಗೆಯನ್ನು ಅಗಲಿಸಿ ಜೋರಾಗಿ ಹಿಸ್ ಮಾಡುವುದರಿಂದ ನಾಗರಹಾವಿನಂತೆ ಕಾಣಿಸಿಕೊಳ್ಳಬಹುದು. ಇದರಿಂದ ಜನರು ತಪ್ಪಾಗಿ ಗುರುತಿಸುವ ಸಾಧ್ಯತೆಯಿದೆ.

5. ಇಂಡಿಯನ್ ರ್ಯಾಟ್ ಸ್ನೇಕ್

ದೊಡ್ಡ ಗಾರ್ಡನ್‌ಗಳು, ಖಾಲಿ ಜಾಗ ಅಥವಾ ಪೊದೆಗಳಿಂದ ಕೂಡಿದ ಪ್ರದೇಶಗಳ ಪಕ್ಕದಲ್ಲಿರುವ ಮನೆಗಳಲ್ಲಿ ಇಂಡಿಯನ್ ರ್ಯಾಟ್ ಸ್ನೇಕ್, ಅಂದರೆ ಧಾಮನ್, ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದು ಇತರ ಹಾವುಗಳಿಗಿಂತ ದೊಡ್ಡದಾಗಿದ್ದು ವೇಗವಾಗಿ ಚಲಿಸುತ್ತದೆ. ಸಾಮಾನ್ಯವಾಗಿ ಒಂದೇ ಹೂವಿನ ಕುಂಡಿಯ ಬಳಿ ಉಳಿಯುವುದಿಲ್ಲ. ಬದಲಾಗಿ ಇಲಿಗಳು, ಹಲ್ಲಿಗಳು ಮತ್ತು ಪಕ್ಷಿಗಳಂತಹ ಆಹಾರವನ್ನು ಹುಡುಕುತ್ತಾ ಆ ಪ್ರದೇಶದಲ್ಲಿ ಸಂಚರಿಸಬಹುದು. ಇಂಡಿಯನ್ ರ್ಯಾಟ್ ಸ್ನೇಕ್ ಕೂಡ ವಿಷರಹಿತ ಹಾವಾಗಿದೆ.

ಗಾರ್ಡನ್‌ನಲ್ಲಿ ಹಾವು ಕಂಡರೆ ಏನು ಮಾಡಬೇಕು?

ಹಾವು ಕಂಡ ತಕ್ಷಣ ಗಾಬರಿಯಿಂದ ಅದನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಬೇಡಿ. ಅದು ವಿಷರಹಿತ ಹಾವೆಂದು ನಿಮಗೆ ಖಚಿತವಾಗಿದ್ದರೂ ನೇರವಾಗಿ ಕೈ ಹಾಕುವುದು ಸುರಕ್ಷಿತವಲ್ಲ. ಹಾವಿಗೆ ಸ್ವಲ್ಪ ಜಾಗ ನೀಡಿ. ಗುರುತಿಸಲು ಸಾಧ್ಯವಾಗದಿದ್ದರೆ ಸ್ಥಳೀಯ ಸ್ನೇಕ್ ರೆಸ್ಕ್ಯೂ ತಂಡ ಅಥವಾ ವನ್ಯಜೀವಿ ಸಹಾಯವಾಣಿಯನ್ನು ಸಂಪರ್ಕಿಸುವುದು ಉತ್ತಮ. ಗಾರ್ಡನ್‌ನಲ್ಲಿ ಕೆಲಸ ಮಾಡುವಾಗ ಕೈಗವಸು ಧರಿಸುವುದು, ಹೂವಿನ ಕುಂಡಿಯನ್ನು ಎತ್ತುವ ಮೊದಲು ಅದರ ಕೆಳಭಾಗವನ್ನು ಪರಿಶೀಲಿಸುವುದು ಮತ್ತು ಗಿಡಗಳನ್ನು ಸ್ಥಳಾಂತರಿಸುವಾಗ ಎಚ್ಚರಿಕೆ ವಹಿಸುವುದು ಕೂಡ ಸಹಾಯ ಮಾಡುತ್ತದೆ.