ಸಾಮಾನ್ಯವಾಗಿ ಅತ್ತೆ-ಸೊಸೆ ಸಂಬಂಧ ಎಂದಾಗ ಮನಸ್ತಾಪ, ಭಿನ್ನಾಭಿಪ್ರಾಯಗಳೇ ನೆನಪಿಗೆ ಬರುತ್ತವೆ. ಆದರೆ ಧಾರವಾಡದ ಈ ಅತ್ತೆ-ಸೊಸೆ ಜೋಡಿ ಅದಕ್ಕೆ ಸಂಪೂರ್ಣ ವಿಭಿನ್ನ ಉದಾಹರಣೆಯಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಮನೆಯಲ್ಲೇ ತಯಾರಿಸಿದ ಹೆಲ್ತ್ ಮಿಕ್ಸ್ ಇಂದು ಉದ್ಯಮವಾಗಿ ಬೆಳೆದಿದೆ.

ಸಾಮಾನ್ಯವಾಗಿ ಅತ್ತೆ-ಸೊಸೆ ಸಂಬಂಧ ಎಂದಾಗ ಮನಸ್ತಾಪ, ಭಿನ್ನಾಭಿಪ್ರಾಯಗಳೇ ನೆನಪಿಗೆ ಬರುತ್ತವೆ. ಆದರೆ ಧಾರವಾಡದ ಈ ಅತ್ತೆ-ಸೊಸೆ ಜೋಡಿ ಅದಕ್ಕೆ ಸಂಪೂರ್ಣ ವಿಭಿನ್ನ ಉದಾಹರಣೆಯಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಮನೆಯಲ್ಲೇ ತಯಾರಿಸಿದ ಹೆಲ್ತ್ ಮಿಕ್ಸ್ ಇಂದು ಉದ್ಯಮವಾಗಿ ಬೆಳೆದು, ವರ್ಷಕ್ಕೆ ₹25 ಲಕ್ಷದಷ್ಟು ವಹಿವಾಟು ನಡೆಸುತ್ತಿದೆ. ಧಾರವಾಡದ ನಾರಾಯಣಪುರ ಬಡಾವಣೆಯ ಶಾರದಾ ಹೊಸಮನಿ ಮತ್ತು ಅವರ ಸೊಸೆ ಸ್ಮಿತಾ ಹೊಸಮನಿ ತಮ್ಮ ಆಸಕ್ತಿ, ಅನುಭವ ಮತ್ತು ವ್ಯವಹಾರ ಜ್ಞಾನವನ್ನು ಒಟ್ಟುಗೂಡಿಸಿ Hosamanis ಎಂಬ ಆರ್ಗ್ಯಾನಿಕ್ ಮಿಲೆಟ್ ಹೆಲ್ತ್ ಮಿಕ್ಸ್ ಬ್ರ್ಯಾಂಡ್‌ನ್ನು ಕಟ್ಟಿದ್ದಾರೆ. ಮನೆಯ ಅಡುಗೆಮನೆಯಿಂದ ಆರಂಭವಾದ ಈ ಉದ್ಯಮ ಇಂದು ಸ್ವಂತ ಫ್ಯಾಕ್ಟರಿ, ಏಳು ಉದ್ಯೋಗಿಗಳು ಹಾಗೂ ದೇಶದಾದ್ಯಂತ ಗ್ರಾಹಕರನ್ನು ಹೊಂದುವ ಹಂತಕ್ಕೆ ಬೆಳೆದಿದೆ.

ಅತ್ತೆಯ ಆರೋಗ್ಯ ಸಮಸ್ಯೆಯೇ ಉದ್ಯಮಕ್ಕೆ ಮುನ್ನುಡಿ

ಈ ಉದ್ಯಮದ ಹಿಂದೆ ಒಂದು ಆರೋಗ್ಯ ಸಮಸ್ಯೆಯ ಕಥೆಯಿದೆ. ಶಾರದಾ ಹೊಸಮನಿ ಅವರು ಕೀಲು ನೋವು ಹಾಗೂ ಆರ್ಥ್ರೈಟಿಸ್‌ನಿಂದ ಬಳಲುತ್ತಿದ್ದರು. ಒಂದು ಹಂತದಲ್ಲಿ ಮೆಟ್ಟಿಲು ಹತ್ತುವುದಕ್ಕೂ ಕಷ್ಟವಾಗುತ್ತಿತ್ತು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಅವರು ಯೂಟ್ಯೂಬ್ ಮೂಲಕ ಮಾಹಿತಿ ಪಡೆದು ವಿವಿಧ ಸಿರಿಧಾನ್ಯಗಳು, ಕಾಳುಗಳು, ಬೀಜಗಳು ಮತ್ತು ಇತರ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮನೆಯಲ್ಲೇ ಹೆಲ್ತ್ ಮಿಕ್ಸ್ ತಯಾರಿಸಲು ಆರಂಭಿಸಿದರು. ತಮ್ಮ ಬಳಕೆಗಾಗಿ ತಯಾರಿಸಿಕೊಂಡ ಈ ಮಿಶ್ರಣವನ್ನು ಸೇವಿಸಿದ ಬಳಿಕ ತಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ಶಾರದಾ ಅವರು ಅನುಭವ ಹಂಚಿಕೊಂಡರು. ನಂತರ ಇದೇ ಮಿಶ್ರಣವನ್ನು ತಮ್ಮ ವಯೋಸಹಜ ಆರೋಗ್ಯ ಸಮಸ್ಯೆ ಹೊಂದಿದ್ದ ಸ್ನೇಹಿತರಿಗೂ ನೀಡಿದರು.

ಅವರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಾಗ, “ಇದನ್ನು ಮನೆಯಲ್ಲೇ ಇಟ್ಟುಕೊಳ್ಳುವುದೇಕೆ? ಉದ್ಯಮವನ್ನಾಗಿ ಮಾಡಬಾರದೇ?” ಎಂಬ ಆಲೋಚನೆ ಮೂಡಿತು.ಬೆಂಗಳೂರಿನ ಉದ್ಯೋಗ ಬಿಟ್ಟು ಧಾರವಾಡಕ್ಕೆ ಬಂದ ಸೊಸೆ ಕೋವಿಡ್ ಲಾಕ್‌ಡೌನ್ ಈ ಕುಟುಂಬದ ಬದುಕಿನಲ್ಲಿ ಮತ್ತೊಂದು ತಿರುವು ತಂದಿತು. ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಎಂ.ಬಿ.ಎ ಪದವೀಧರೆ ಸ್ಮಿತಾ ಹೊಸಮನಿ ಹಾಗೂ ಅವರ ಪತಿ, ಧಾರವಾಡದಲ್ಲಿರುವ ತಮ್ಮ ಮನೆಗೆ ಮರಳಿದರು. ಅತ್ತೆ ತಯಾರಿಸುತ್ತಿದ್ದ ಹೆಲ್ತ್ ಮಿಕ್ಸ್‌ನ ಗುಣಮಟ್ಟ ಮತ್ತು ರುಚಿಯನ್ನು ಗಮನಿಸಿದ ಸ್ಮಿತಾ, ತಮ್ಮ ವ್ಯವಹಾರ ಜ್ಞಾನವನ್ನು ಬಳಸಿಕೊಂಡು ಅದನ್ನು ವಾಣಿಜ್ಯ ಉತ್ಪನ್ನವಾಗಿ ರೂಪಿಸುವ ನಿರ್ಧಾರ ಕೈಗೊಂಡರು. 2020ರಲ್ಲಿ ಮನೆಯ ಕಿಚನ್‌ನಿಂದ ಆರಂಭವಾದ ಪ್ರಯತ್ನ 2021ರಲ್ಲಿ ಬ್ರ್ಯಾಂಡ್ ರೂಪ ಪಡೆಯಿತು. ಅಗತ್ಯ ಲೈಸೆನ್ಸ್ ಹಾಗೂ ಟ್ರೇಡ್‌ಮಾರ್ಕ್ ಪಡೆದು ‘ಹೊಸಮನಿಸ್’ ಹೆಸರಿನಲ್ಲಿ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ಸ್ಮಿತಾ ಅವರ ಉದ್ದೇಶ ಕೇವಲ ಸ್ವಂತ ಆದಾಯ ಗಳಿಸುವುದಾಗಿರಲಿಲ್ಲ. ತಮ್ಮ ಊರಿನಲ್ಲೇ ಉದ್ಯೋಗ ಸೃಷ್ಟಿಸುವ ಕನಸೂ ಇತ್ತು. “ಉದ್ಯೋಗಕ್ಕಾಗಿ ಹುಡುಕಾಡುವ ಬದಲು, ನಾವೇ ಉದ್ಯೋಗ ಸೃಷ್ಟಿಸಿದರೆ ನಮ್ಮ ಜೊತೆಗೆ ನಾಲ್ಕಾರು ಕುಟುಂಬಗಳಿಗೆ ಸಹಾಯವಾಗುತ್ತದೆ. ಸಣ್ಣ ಮಟ್ಟದಲ್ಲಾದರೂ ಉದ್ಯಮ ಆರಂಭಿಸಿದರೆ ಉದ್ಯೋಗ ಅರಸಿ ಎಲ್ಲರೂ ಬೆಂಗಳೂರಿಗೆ ಹೋಗುವ ಅಗತ್ಯವಿರುವುದಿಲ್ಲ.”

32 ನೈಸರ್ಗಿಕ ಪದಾರ್ಥಗಳ ಹೆಲ್ತ್ ಮಿಕ್ಸ್

‘ಹೊಸಮನಿಸ್ ಸ್ಪ್ರೌಟ್ಸ್ ಅಂಡ್ ನಟ್ಸ್ ಹೆಲ್ತ್ ಮಿಕ್ಸ್’ನಲ್ಲಿ ಒಟ್ಟು 32 ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗುತ್ತದೆ ಎಂದು ಕುಟುಂಬ ತಿಳಿಸಿದೆ. ಊದಲು, ಕೊರಲೆ, ನವಣೆ, ಅರ್ಕ, ಸಾಮೆ, ರಾಗಿ, ಸಜ್ಜೆ ಸೇರಿದಂತೆ ಹಲವು ಸಿರಿಧಾನ್ಯಗಳ ಜೊತೆಗೆ ತೊಗರಿ, ಅಲಸಂದೆ, ಉದ್ದು ಮುಂತಾದ ಕಾಳುಗಳನ್ನು ಬಳಸಲಾಗುತ್ತದೆ. ಇದರೊಂದಿಗೆ ಶಿಯಾ ಸೀಡ್ಸ್, ಫ್ಲಾಕ್ಸ್ ಸೀಡ್ಸ್, ಪಂಪ್ಕಿನ್ ಸೀಡ್ಸ್ ಹಾಗೂ ಡ್ರೈ ಫ್ರೂಟ್ಸ್‌ಗಳನ್ನೂ ಸೇರಿಸಲಾಗುತ್ತದೆ. ಹೀಗಾಗಿ ವಿವಿಧ ಪದಾರ್ಥಗಳನ್ನು ಒಂದೇ ಮಿಶ್ರಣದಲ್ಲಿ ಸೇರಿಸಿ ತಯಾರಿಸುವುದು ಇದರ ಪ್ರಮುಖ ವಿಶೇಷತೆಯಾಗಿದೆ.

ಮೊಳಕೆಯಿಂದ ಮಣ್ಣಿನ ಮಡಿಕೆಯವರೆಗೆ: ತಯಾರಿಕೆಯ ವಿಧಾನ

ಹೊಸಮನಿಸ್ ಹೆಲ್ತ್ ಮಿಕ್ಸ್ ತಯಾರಿಕೆಯಲ್ಲಿ ಸಾಂಪ್ರದಾಯಿಕ ವಿಧಾನಗಳಿಗೆ ಒತ್ತು ನೀಡಲಾಗುತ್ತದೆ ಎಂದು ಕುಟುಂಬ ಹೇಳಿದೆ. ಮೊದಲಿಗೆ ಕಾಳುಗಳನ್ನು ಸುಮಾರು 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಲಾಗುತ್ತದೆ. ಬಳಿಕ ಅವುಗಳನ್ನು ಸುಮಾರು 12 ಗಂಟೆಗಳ ಕಾಲ ಬಿದಿರಿನ ಬುಟ್ಟಿಯಲ್ಲಿ ಇಟ್ಟು ಮೊಳಕೆ ಬರಿಸಲಾಗುತ್ತದೆ. ನಂತರ ಮೊಳಕೆ ಬಂದ ಕಾಳುಗಳನ್ನು ಪ್ರತ್ಯೇಕ ಟ್ರೇಗಳಲ್ಲಿ ಒಣಗಿಸಲಾಗುತ್ತದೆ. ಇದರ ಬಳಿಕ ಪ್ರತಿಯೊಂದು ಕಾಳನ್ನೂ ಮಣ್ಣಿನ ಮಡಿಕೆಯಲ್ಲಿ ಹುರಿಯಲಾಗುತ್ತದೆ. ಯಂತ್ರಗಳ ಬದಲು ಸಾಂಪ್ರದಾಯಿಕವಾಗಿ ಹುರಿಯುವ ಈ ವಿಧಾನದಿಂದ ಉತ್ತಮ ಕಂಪು ಮತ್ತು ರುಚಿ ಸಿಗುತ್ತದೆ ಎಂಬುದು ಕುಟುಂಬದ ಅಭಿಪ್ರಾಯ. ಕೊನೆಯಲ್ಲಿ ಸಿದ್ಧವಾದ ಮಿಶ್ರಣವನ್ನು ಪೌಡರ್ ಮಾಡಿ, ಏರ್‌ಟೈಟ್ ಜಿಪ್-ಲಾಕ್ ಪೌಚ್‌ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ.

₹25 ಲಕ್ಷ ವಹಿವಾಟು, 7 ಮಂದಿಗೆ ಉದ್ಯೋಗ

ಮನೆಯ ಅಡುಗೆಮನೆಯಿಂದ ಆರಂಭವಾದ ಉದ್ಯಮ ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದೆ. ವರ್ಷಕ್ಕೆ ಸುಮಾರು ₹25 ಲಕ್ಷ ವಹಿವಾಟು ನಡೆಸುತ್ತಿರುವುದಾಗಿ ಹೊಸಮನಿ ಕುಟುಂಬ ತಿಳಿಸಿದೆ. ಒಮ್ಮೆ ಕಾರ್ಪೊರೇಟ್ ಉದ್ಯೋಗ ಮಾಡಿದ್ದ ಸ್ಮಿತಾ ಅವರಿಗೆ ತಿಂಗಳಿಗೆ ₹25-30 ಸಾವಿರ ಸಂಬಳ ಸಿಗುತ್ತಿತ್ತು. ಆದರೆ ಇಂದು ತಮ್ಮದೇ ಉದ್ಯಮವನ್ನು ಮುನ್ನಡೆಸುತ್ತಿರುವ ಅವರು ಏಳು ಮಂದಿಗೆ ಉದ್ಯೋಗ ನೀಡುವ ಹಂತಕ್ಕೆ ಬೆಳೆದಿದ್ದಾರೆ. ಹುಬ್ಬಳ್ಳಿ-ಧಾರವಾಡ ಭಾಗದ ವೈದ್ಯಕೀಯ ಅಂಗಡಿಗಳು, ಆಸ್ಪತ್ರೆಗಳು ಹಾಗೂ ವಿವಿಧ ಮಳಿಗೆಗಳಲ್ಲೂ ಉತ್ಪನ್ನ ಲಭ್ಯವಿದೆ ಎಂದು ಕುಟುಂಬ ತಿಳಿಸಿದೆ.

‘ಬಾಯಿಂದ ಬಾಯಿಗೆ’ ಪ್ರಚಾರವೇ ದೊಡ್ಡ ಶಕ್ತಿ

ಉತ್ಪನ್ನದ ಪ್ರಚಾರಕ್ಕೆ ದೊಡ್ಡ ಪ್ರಮಾಣದಲ್ಲಿ ಜಾಹೀರಾತು ಮಾಡುವ ಬದಲು, ಗ್ರಾಹಕರ ಪ್ರತಿಕ್ರಿಯೆ ಮತ್ತು ಮೌತ್-ಟು-ಮೌತ್ ಪ್ರಚಾರದಿಂದ ಬ್ರ್ಯಾಂಡ್ ಬೆಳೆಯುತ್ತಿದೆ ಎಂದು ಹೊಸಮನಿ ಕುಟುಂಬ ಹೇಳಿದೆ. ಸ್ಥಳೀಯ ಮಾರುಕಟ್ಟೆಯಿಂದ ಆರಂಭವಾದ ಈ ಉದ್ಯಮ ಇದೀಗ ಆನ್‌ಲೈನ್ ಮೂಲಕವೂ ಗ್ರಾಹಕರನ್ನು ತಲುಪುತ್ತಿದೆ. hosamanis.com ವೆಬ್‌ಸೈಟ್ ಮೂಲಕ ದೇಶದ ವಿವಿಧ ಭಾಗಗಳಿಗೂ ಉತ್ಪನ್ನಗಳನ್ನು ಕಳುಹಿಸಲಾಗುತ್ತಿದೆ.