ಸಾಲಮುಕ್ತರಾಗಿ ಆರ್ಥಿಕ ಸ್ವಾತಂತ್ರ್ಯ ಪಡೆಯಬೇಕು ಎಂಬುದು ಇಂದಿನ ಯುವಕರ ಕನಸು. ಆದರೆ ಅದಕ್ಕಾಗಿ ದೊಡ್ಡ ಸಂಬಳವೊಂದೇ ಸಾಕಾಗುವುದಿಲ್ಲ. ಉಳಿತಾಯ, ಹೂಡಿಕೆ, ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮತ್ತು ಹಣಕಾಸಿನ ಶಿಸ್ತು ಬಹಳ ಮುಖ್ಯ. ಇದಕ್ಕೆ ಬೆಂಗಳೂರಿನ ಟೆಕ್ಕಿಯೊಬ್ಬರ ಕಥೆ ಇದೀಗ ಗಮನ ಸೆಳೆಯುತ್ತಿದೆ.
ಚಿಕ್ಕ ವಯಸ್ಸಿನಲ್ಲೇ ಕೋಟ್ಯಂತರ ರೂಪಾಯಿ ಆಸ್ತಿ ಗಳಿಸಿ, ಸಾಲಮುಕ್ತರಾಗಿ, ಆರ್ಥಿಕ ಸ್ವಾತಂತ್ರ್ಯ ಪಡೆಯಬೇಕು ಎಂಬುದು ಇಂದಿನ ಯುವಕರ ಕನಸು. ಆದರೆ ಅದಕ್ಕಾಗಿ ದೊಡ್ಡ ಸಂಬಳವೊಂದೇ ಸಾಕಾಗುವುದಿಲ್ಲ. ಉಳಿತಾಯ, ಹೂಡಿಕೆ, ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮತ್ತು ಹಣಕಾಸಿನ ಶಿಸ್ತು ಬಹಳ ಮುಖ್ಯ. ಇದಕ್ಕೆ ಬೆಂಗಳೂರಿನ ಟೆಕ್ಕಿಯೊಬ್ಬರ ಕಥೆ ಇದೀಗ ಗಮನ ಸೆಳೆಯುತ್ತಿದೆ. ರೆಡಿಟ್‌ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಈ ಟೆಕ್ ವೃತ್ತಿಪರರು 26ನೇ ವಯಸ್ಸಿನಲ್ಲಿ ₹1 ಕೋಟಿ ನಿವ್ವಳ ಆಸ್ತಿ, 29ನೇ ವಯಸ್ಸಿನಲ್ಲಿ ₹5 ಕೋಟಿ ಮತ್ತು 31ನೇ ವಯಸ್ಸಿಗೆ ಸುಮಾರು ₹7 ಕೋಟಿ ನಿವ್ವಳ ಆಸ್ತಿ ಹೊಂದಿದ್ದಾರೆ. ಆದರೆ ಈ ಸಂಪತ್ತು ಒಂದೇ ಹೂಡಿಕೆಯಿಂದ ಬಂದಿದ್ದಲ್ಲ.
ಕಾಲೇಜು ಮುಗಿದ ಕೂಡಲೇ ಹೂಡಿಕೆ ಶುರು
ಈ ಟೆಕ್ಕಿಯ ಹಣಕಾಸಿನ ಪ್ರಯಾಣ ದೊಡ್ಡ ಸಂಬಳದಿಂದ ಆರಂಭವಾಗಿರಲಿಲ್ಲ. ಕಾಲೇಜು ಮುಗಿಸಿದ ನಂತರವೇ ಸಣ್ಣ ಮೊತ್ತದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಆರಂಭಿಸಿದ್ದಾಗಿ ಅವರು ತಿಳಿಸಿದ್ದಾರೆ. ಆರಂಭದಲ್ಲೇ ಹಣಕಾಸಿನ ಸ್ವಾತಂತ್ರ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದು, ಕ್ರಮೇಣ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ. 26ನೇ ವಯಸ್ಸಿಗೆ ₹1 ಕೋಟಿ ನಿವ್ವಳ ಆಸ್ತಿ ತಲುಪಿದ್ದು, ನಂತರ ಕೇವಲ ಮೂರು ವರ್ಷಗಳಲ್ಲಿ ಅದು ₹5 ಕೋಟಿಗೆ ಏರಿದೆ.
ಖರ್ಚು ಕಡಿಮೆ ಮಾಡುವುದಕ್ಕಿಂತ ಆದಾಯ ಹೆಚ್ಚಿಸುವತ್ತ ಗಮನ
ಸಂಪತ್ತು ನಿರ್ಮಾಣಕ್ಕೆ ಕೇವಲ ಖರ್ಚು ಕಡಿಮೆ ಮಾಡುವುದು ಸಾಕಾಗುವುದಿಲ್ಲ ಎಂಬುದು ಅವರ ಪ್ರಮುಖ ಅಭಿಪ್ರಾಯ. ಉಳಿತಾಯಕ್ಕೆ ಒಂದು ಮಿತಿ ಇದೆ ಎಂಬುದನ್ನು ಅರಿತ ಅವರು ಉದ್ಯೋಗ ಬದಲಾವಣೆ, ಪ್ರಮೋಷನ್ ಹಾಗೂ ಹೆಚ್ಚುವರಿ ಆದಾಯದ ಮೂಲಗಳನ್ನು ಹುಡುಕುವತ್ತ ಗಮನಹರಿಸಿದ್ದಾರೆ. ತಂತ್ರಜ್ಞಾನ ತಮ್ಮ ಪ್ರಬಲ ಕ್ಷೇತ್ರವಾಗಿರಲಿಲ್ಲ ಎಂದು ಹೇಳಿಕೊಂಡಿರುವ ಅವರು, ಹೊಸ ಕೌಶಲ್ಯಗಳನ್ನು ಕಲಿತು ಅದನ್ನು ಉತ್ಪನ್ನಗಳಾಗಿ ಪರಿವರ್ತಿಸಿ ಹಣ ಗಳಿಸುವ ಮಾರ್ಗಗಳ ಬಗ್ಗೆ ಪ್ರಯತ್ನಿಸಿದ್ದಾರೆ.
AI ಆಪ್ ಮಾಡಿದರು... ಆದರೆ ಕೈ ಸುಟ್ಟಿತು
ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ಈ ಟೆಕ್ಕಿಯ ಪ್ರಯಾಣದಲ್ಲೂ ಸೋಲು ಎದುರಾಗಿದೆ. ತಮ್ಮ ಉದ್ಯೋಗದ ಜೊತೆಗೆ SaaS ಮತ್ತು D2C ಸೇರಿದಂತೆ ಸಣ್ಣ ಉದ್ಯಮಗಳಲ್ಲೂ ಪ್ರಯೋಗ ಮಾಡಿದ್ದಾರೆ. ಅಷ್ಟೇ ಅಲ್ಲ, ಕೆಲಸ ಮುಗಿದ ನಂತರ ರಾತ್ರಿ ಸಮಯದಲ್ಲಿ ಸುಮಾರು ಮೂರು ತಿಂಗಳು AI ಆಪ್ ಅಭಿವೃದ್ಧಿಪಡಿಸಿದ್ದರು. ಆದರೆ ಆ ಆಪ್ ಯಶಸ್ವಿಯಾಗಲಿಲ್ಲ. ಮಾರ್ಕೆಟಿಂಗ್‌ಗೆ ಖರ್ಚು ಮಾಡಿದ ಕೆಲವು ಲಕ್ಷ ರೂಪಾಯಿಗಳನ್ನು ಕಳೆದುಕೊಂಡರು. ಆದರೂ ಈ ಸೋಲನ್ನು ಅವರು ಅಂತ್ಯವೆಂದು ಪರಿಗಣಿಸಲಿಲ್ಲ. ಪ್ರಯತ್ನ ಮಾಡುವಾಗ ಎದುರಾಗುವ ವೈಫಲ್ಯಗಳು ಮುಂದೆ ಯಶಸ್ವಿಯಾಗುವ ಮಾರ್ಗ ಹುಡುಕಲು ಸಹಾಯ ಮಾಡುತ್ತವೆ ಎಂಬ ನಿಲುವು ಹೊಂದಿದ್ದಾರೆ.
15ಕ್ಕೂ ಹೆಚ್ಚು ಬಾರಿ ವಿದೇಶ ಪ್ರವಾಸ, ಆದರೂ ಹೊಸ ಕಾರು ಖರೀದಿಸಿಲ್ಲ
ಇವರ ಜೀವನಶೈಲಿಯಲ್ಲಿರುವ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, 15ಕ್ಕೂ ಹೆಚ್ಚು ಬಾರಿ ಅಂತಾರಾಷ್ಟ್ರೀಯ ಪ್ರವಾಸ ಮಾಡಿದ್ದರೂ ಹೊಸ ಕಾರು ಖರೀದಿಸಲು ಹೆಚ್ಚಿನ ಆಸಕ್ತಿ ಇಲ್ಲ. ಈಗಲೂ ತಂದೆಯ 15 ವರ್ಷ ಹಳೆಯ ಕಾರನ್ನೇ ಬಳಸುತ್ತಿರುವುದಾಗಿ ಅವರು ಹೇಳಿದ್ದಾರೆ. ಅಂದರೆ, ಹಣ ಉಳಿಸುವುದಕ್ಕಾಗಿ ಎಲ್ಲ ಖರ್ಚುಗಳನ್ನೂ ನಿಲ್ಲಿಸುವ ಬದಲು, ತಮಗೆ ನಿಜವಾಗಿಯೂ ಸಂತೋಷ ನೀಡುವ ವಿಷಯಗಳಿಗಷ್ಟೇ ಹಣ ಖರ್ಚು ಮಾಡುವುದು ಅವರ ಹಣಕಾಸಿನ ತಂತ್ರವಾಗಿದೆ.
Instagram ಡಿಲೀಟ್ ಮಾಡಿದ ಮೇಲೆ ಖರ್ಚು ಕಡಿಮೆಯಾಯ್ತಂತೆ
ಸೋಷಿಯಲ್ ಮೀಡಿಯಾದಲ್ಲಿನ ಹೋಲಿಕೆಗಳು ಖರ್ಚಿನ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನೂ ಅವರು ತಮ್ಮ ಅನುಭವದ ಮೂಲಕ ಹೇಳಿದ್ದಾರೆ. Instagram ಅನ್ನು ಡಿಲೀಟ್ ಮಾಡಿದ ನಂತರ, ಸ್ನೇಹಿತರು ಏನು ಖರೀದಿಸುತ್ತಿದ್ದಾರೆ ಅಥವಾ ಎಲ್ಲಿಗೆ ಪ್ರವಾಸ ಹೋಗುತ್ತಿದ್ದಾರೆ ಎಂಬುದನ್ನು ನಿರಂತರವಾಗಿ ನೋಡುವ ಅಭ್ಯಾಸ ಕಡಿಮೆಯಾಯಿತು. ಇದರಿಂದ ಸಾಮಾಜಿಕ ಸ್ಥಾನಮಾನಕ್ಕಾಗಿ ಮಾಡುವ ಅನಗತ್ಯ ಖರ್ಚು ಕಡಿಮೆಯಾಯಿತು ಎಂದು ತಿಳಿಸಿದ್ದಾರೆ.
₹2 ಕೋಟಿ ESOP, ₹40 ಲಕ್ಷದ ಅಪಾಯಕಾರಿ ಹೂಡಿಕೆ
ಅವರ ಸಂಪತ್ತಿನಲ್ಲಿ ಉದ್ಯೋಗದ ಭಾಗವೂ ದೊಡ್ಡದಾಗಿದೆ. ಅವರು ಕೆಲಸ ಮಾಡುತ್ತಿರುವ ಟೆಕ್ ಕಂಪನಿಯಲ್ಲಿ ಸುಮಾರು ₹2 ಕೋಟಿ ಮೌಲ್ಯದ ESOPs ಹೊಂದಿದ್ದಾರೆ. ಆದರೆ ಕಂಪನಿ ಭವಿಷ್ಯದಲ್ಲಿ IPOಗೆ ಹೋಗುತ್ತದೆಯೇ ಅಥವಾ ಷೇರುಗಳ ಮೌಲ್ಯ ಹೇಗೆ ಬದಲಾಗುತ್ತದೆ ಎಂಬ ಅನಿಶ್ಚಿತತೆಯಿಂದ, ನಿವ್ವಳ ಆಸ್ತಿ ಲೆಕ್ಕದಲ್ಲಿ ಕೇವಲ ₹1.5 ಕೋಟಿಯನ್ನು ಪರಿಗಣಿಸಿರುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಒಂದು ಅನ್‌ಲಿಸ್ಟೆಡ್ ಕಂಪನಿಯಲ್ಲಿ ಸುಮಾರು ₹40 ಲಕ್ಷ ಹೂಡಿಕೆ ಮಾಡಿದ್ದು, ಇದನ್ನು ತಾವೇ ಅಪಾಯಕಾರಿ ಹೂಡಿಕೆ ಎಂದು ಹೇಳಿದ್ದಾರೆ.
ಎರಡು ಆಸ್ತಿಗಳ ಸಾಲ ತೀರಿಸಿ ಸಾಲಮುಕ್ತ
ಕಳೆದ ಒಂದು ವರ್ಷದಲ್ಲಿ ಅವರ ಹಣಕಾಸಿನ ಮತ್ತೊಂದು ಪ್ರಮುಖ ಸಾಧನೆ ಎಂದರೆ ಎರಡು ಆಸ್ತಿಗಳ ಸಾಲವನ್ನು ಸಂಪೂರ್ಣವಾಗಿ ತೀರಿಸಿರುವುದು. ಅದರಲ್ಲೊಂದು ಫ್ಲ್ಯಾಟ್ ಅನ್ನು ಸುಮಾರು ಎರಡು ವರ್ಷಗಳ ಹಿಂದೆ ₹65 ಲಕ್ಷಕ್ಕೆ ಖರೀದಿಸಿದ್ದು, ಈಗ ಅದರ ಮೌಲ್ಯ ಸುಮಾರು ₹1 ಕೋಟಿ ಆಗಿದೆ. ಅದರಿಂದ ಸುಮಾರು ಶೇ.5ರಷ್ಟು ಬಾಡಿಗೆ ಆದಾಯವೂ ಬರುತ್ತಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಚಲನೆ ಇಲ್ಲದ ಸಂದರ್ಭದಲ್ಲಿ, ಷೇರುಗಳಲ್ಲಿ ಮತ್ತಷ್ಟು ಹಣ ಹಾಕುವುದಕ್ಕಿಂತ ಆಸ್ತಿ ಸಾಲ ತೀರಿಸುವುದು ಉತ್ತಮ ನಿರ್ಧಾರವಾಗಿತ್ತು ಎಂದು ಅವರು ಹೇಳಿದ್ದಾರೆ.
