ಮನೆಯಲ್ಲಿರುವ ಹಿಟ್ಟಿನಲ್ಲಿ ಹುಳು ಕಾಣಿಸಿಕೊಳ್ಳೋದು ಸಾಮಾನ್ಯ. ಬೇರೆ ಬೇರೆ ಪದಾರ್ಥಕ್ಕೆ ಬರುವ ಹುಳುಗಳು ಬೇರೆ ಬೇರೆ. ಆದ್ರೆ ಇವು ನಿಮ್ಮ ಕಣ್ಣಿಗೆ ಬಿದ್ದ ತಕ್ಷಣ ಏನು ಮಾಡ್ಬೇಕು ಗೊತ್ತಾ?

ಮನೆಗೆ ತಂದ ಕೆಲವೊಂದು ಹಿಟ್ಟನ್ನು ನಾವು ಅಪರೂಪಕ್ಕೆ ಬಳಸ್ತೇವೆ. ನಿತ್ಯ ಬಳಸುವ ಹಿಟ್ಟಿನಲ್ಲೂ ಕೆಲವೊಮ್ಮೆ ಕೀಟಗಳು ಕಾಣಿಸಿಕೊಳ್ತವೆ. ಹುಳು ಕಾಣಿಸಿಕೊಳ್ತಿದ್ದಂತೆ ಹಿಟ್ಟು ಹಾಳಾಗಿದೆ ಎನ್ನುವ ಅನುಮಾನ ನಮ್ಮನ್ನು ಕಾಡುತ್ತದೆ. ಹಿಟ್ಟಿನಲ್ಲಿ ಹುಳು ಕಾಣಿಸಿಕೊಳ್ಳಲು ಕಾರಣ ಏನು? ಏನು ಮಾಡ್ಬೇಕು ?

ಹಿಟ್ಟಿಗೆ ಯಾವ ಹುಳು ಬರುತ್ತೆ?

ಗೋಧಿ, ರವೆ, ಕಡಲೆಹಿಟ್ಟು, ಅಕ್ಕಿ, ಮೈದಾ, ಮಸಾಲೆ, ಡ್ರೈ ಫ್ರೂಟ್ಸ್ ಸೇರಿದಂತೆ ಹಲವು ಒಣ ಆಹಾರ ಪದಾರ್ಥಗಳಲ್ಲಿ ಪ್ಯಾಂಟ್ರಿ ಪೆಸ್ಟ್ಸ್ ಎಂದು ಕರೆಯುವ ಕೀಟಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಈ ಹುಳುಗಳು ಮೊಟ್ಟೆ ಅಥವಾ ಲಾರ್ವಾ ಆಹಾರದ ಪ್ಯಾಕೆಟ್ನಲ್ಲೇ ಇದ್ದರೆ ಮನೆಗೆ ತಂದ ನಂತರ ಅವುಗಳ ಸಂಖ್ಯೆ ಹೆಚ್ಚಾಗಬಹುದು.

ಹಿಟ್ಟಿನಲ್ಲಿ ಸಣ್ಣ ಕೆಂಪು-ಕಂದು ಅಥವಾ ಕಪ್ಪು ಬಣ್ಣದ ಕೀಟಗಳು ಕಾಣಿಸಬಹುದು. ಇನ್ನು ಕೆಲವೊಮ್ಮೆ ಬಿಳಿ ಅಥವಾ ಕ್ರೀಮ್ ಬಣ್ಣದ ಸಣ್ಣ ಹುಳುಗಳು ಹಾಗೂ ಜೇಡರ ಬಲೆಯಂತಿರುವ ಅಂಟು ಜಾಲವೂ ಕಾಣಿಸಬಹುದು.

ಹುಳು ಕಂಡರೆ ಮೊದಲು ಏನು ಮಾಡಬೇಕು?

ಹಿಟ್ಟಿನಲ್ಲಿ ಹುಳು, ಲಾರ್ವಾ ಅಥವಾ ಜಾಲ ಸ್ಪಷ್ಟವಾಗಿ ಕಾಣಿಸುತ್ತಿದ್ದರೆ, ಆ ಹಿಟ್ಟನ್ನು ಬಳಸದೆ ಚೆನ್ನಾಗಿ ಮುಚ್ಚಿ ಹೊರಗಿನ ಕಸದ ಬುಟ್ಟಿಗೆ ಹಾಕುವುದು ಉತ್ತಮ. ನಂತರ ಹಿಟ್ಟು ಇಟ್ಟಿದ್ದ ಜಾಗ ಮಾತ್ರವಲ್ಲದೆ, ಅದರ ಸುತ್ತಮುತ್ತ ಇರುವ ಅಕ್ಕಿ, ಬೇಳೆ, ರವೆ, ಮಸಾಲೆ, ಬಿಸ್ಕತ್ ಮತ್ತು ಇತರ ಒಣ ಆಹಾರಗಳನ್ನೂ ಪರಿಶೀಲಿಸಿ. ಶೆಲ್ಫ್ನ ಮೂಲೆಗಳು, ಬಿರುಕುಗಳು ಮತ್ತು ಡಬ್ಬಿಗಳ ಸುತ್ತಮುತ್ತ ಆಹಾರದ ಕಣಗಳು ಉಳಿದಿದ್ದರೆ ಅವುಗಳನ್ನು ಚೆನ್ನಾಗಿ ವ್ಯಾಕ್ಯೂಮ್ ಮಾಡಿ ಸ್ವಚ್ಛಗೊಳಿಸಿ.

ಹುಳು ಬರದಂತೆ ಹೀಗೆ ಮಾಡಿ

ಹಿಟ್ಟು ಮತ್ತು ಧಾನ್ಯಗಳನ್ನು ತೆರೆದ ಪ್ಯಾಕೆಟ್ನಲ್ಲಿ ಇಡುವ ಬದಲು ಏರ್ಟೈಟ್ ಡಬ್ಬಿಗಳಲ್ಲಿ ಸಂಗ್ರಹಿಸಿ. ಸಾಮಾನು ಖರೀದಿಸುವಾಗ ಪ್ಯಾಕೆಟ್ ಹರಿದಿದೆಯೇ ಅಥವಾ ಹಾನಿಯಾಗಿದೆಯೇ ಎಂದು ಪರಿಶೀಲಿಸಿ. ಹಳೆಯ ಹಿಟ್ಟು ಮತ್ತು ಧಾನ್ಯಗಳನ್ನು ಮೊದಲು ಬಳಸಿ. ಅಡುಗೆಮನೆಯಲ್ಲಿ ಹಿಟ್ಟು ಅಥವಾ ಧಾನ್ಯಗಳು ಚೆಲ್ಲಿದರೆ ತಕ್ಷಣ ಸ್ವಚ್ಛಗೊಳಿಸಿ. ಶೆಲ್ಫ್ ಮತ್ತು ಅದರ ಮೂಲೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಕೀಟಗಳ ಸಮಸ್ಯೆಯನ್ನು ಬಹಳಷ್ಟು ಕಡಿಮೆ ಮಾಡಬಹುದು.