ವಿಜಯಪುರದ ಭೂತನಾಳ ಕೆರೆಯಲ್ಲಿ ಐವರು ಮಕ್ಕಳೊಂದಿಗೆ ತಾಯಿ ಶೋಭಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಗಂಡ ಮಲಕಾರಿಯ ವಿಕೃತ ದೈಹಿಕ ಹಿಂಸೆ ಮತ್ತು ಆತನ ಅನೈತಿಕ ಸಂಬಂಧವೇ ಈ ಸಾಮೂಹಿಕ ಆತ್ಮಹತ್ಯೆಗೆ ಕಾರಣ ಎಂದು ಮೃತ ಶೋಭಾಳ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರ: ವಿಜಯಪುರದ ಭೂತನಾಳ ಕೆರೆಗೆ ಹಾರಿ ಒಂದೇ ಕುಟುಂಬದ 6 ಜನರು ಸಾಮೂಹಿಕ ಆತ್ಮಹತ್ಯೆ ಶರಣಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿರುವ ಮೃತ ಶೋಭಾ ಸಹೋದರಿ ಅಶ್ವಿನಿ ಶಾಕಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಶೋಭಾ ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ವಿಜಯಪುರ ದುರಂತ: ಗಂಡನ ವಿಕೃತಿಯ ಕರಾಳ ಸತ್ಯ ಬಯಲು?
ವಿಜಯಪುರ ತಾಲೂಕಿನ ತೊರವಿ ಗ್ರಾಮದ ಶೋಭಾ ತನ್ನ 5 ಮಕ್ಕಳ ಸಮೇತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಶ್ರಾವಣ ಸೋಮವಾರ ನೈವೇದ್ಯ ಅಡುಗೆ ಸಲುವಾಗಿ ಗಂಡ ಮಲಕಾರಿ ಜಾಲಗೇರಿ ಜೊತೆಗೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿತ್ತು. ಆದರೆ ಈಗ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ತಾಯಿ, ಮಕ್ಕಳ ಸಾಮೂಹಿಕ ಆತ್ಮಹತ್ಯೆಗೆ ಕಾರಣವೆ ಗಂಡನ ವಿಕೃತ ಟಾರ್ಚರ್ ಕಾರಣ ಎಂದು ಆರೋಪಿಸಿದ್ದಾರೆ.
'ಶೋಭಾಗೆ ವಿಕೃತ ಟಾರ್ಚರ್'
ಈ ಸಾಮೂಹಿಕ ಆತ್ಮಹತ್ಯೆ ಕಾರಣ ಮೃತ ಶೋಭಾ ಗಂಡ ಮಲಕಾರಿ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಗಂಡನ ವಿಕೃತ ಟಾರ್ಚರ್‌ಗೆ ಬೇಸತ್ತು ಶೋಭಾ ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿತ್ಯ ಗಂಡ ಮಲಕಾರಿಯಿಂದ ಪತ್ನಿ ಶೋಭಾಗೆ ವಿಕೃತ ಟಾರ್ಚರ್ ನೀಡುತ್ತಿದ್ದ. ಕುಡಿದು ಬಂದು ಶೋಭಾಗೆ ಹಲ್ಲಿನಿಂದ ಕಚ್ಚುತ್ತಿದ್ದ, ಆಕೆಯ ಮೈಗೆಲ್ಲ ಕಚ್ಚಿ ಗಾಯಗೊಳಿಸಿ ವಿಕೃತವಾಗಿ ಟಾರ್ಚರ್ ಮಾಡುತ್ತಿದ್ದ. ಕೈಗೆ ಸಿಕ್ಕ ವಸ್ತುಗಳಿಂದ ಹೊಡೆದು ಹಿಂಸೆ ನೀಡುತ್ತಿದ್ದ ಎಂದು ಶೋಭಾ ಸಹೋದರಿ ಅಶ್ವಿನಿ ಗಂಭೀರ ಆರೋಪ ಮಾಡಿದ್ದಾರೆ.
'ಪತ್ನಿ ಪ್ರಶ್ನಿಸಿದಾಗಲೆಲ್ಲ ಹಲ್ಲೆ ಮಾಡಿ ಕಿರುಕುಳ!'
ಇದೇ ವೇಳೆ ಮಲಕಾರಿಗೆ ಬೇರೆ ಮಹಿಳೆ ಜೊತೆಗೆ ಅನೈತಿಕ ಸಂಬಂಧ ಇತ್ತು ಎಂದು ಆರೋಪಿಸಿರುವ ಅವರು, ಇದೇ ಕಾರಣಕ್ಕೆ ಪತ್ನಿ ಶೋಭಾಗೆ ನಿತ್ಯ ಕಿರುಕುಳ ನೀಡುತ್ತಿದ್ದನಂತೆ. ಆತನ ಅನೈತಿಕ ಸಂಬಂಧ ಬಗ್ಗೆ ಪತ್ನಿ ಪ್ರಶ್ನಿಸಿದಾಗಲೆಲ್ಲ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದ. ಇದೇ ಕಿರುಕುಳ ಸಹಿಸಿಕೊಳ್ಳಲಾಗದೆ ಶೋಭಾ, ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿದ್ದಾರೆ.
'ಪತ್ನಿ ವಾಪಸ್ ಬಂದರೆ ಅವಳ ಕಥೆಯೇ ಬೇರೆ ಆಗುತ್ತದೆ'
ಇನ್ನು, ಪತ್ನಿ ಶೋಭಾ ಮಕ್ಕಳ ಜೊತೆ ನಾಪತ್ತೆಯಾದರೂ ಆತ ಹುಡುಕಾಟ ನಡೆಸಿರಲಿಲ್ಲ. ಪತ್ನಿ ವಾಪಸ್ ಬಂದರೆ ಅವಳ ಕಥೆಯೇ ಬೇರೆ ಆಗುತ್ತದೆ ಎಂದು ಶೋಭಾ ತವರು ಮನೆಯವರಿಗೆ ಆರೋಪಿ ಧಮ್ಕಿ ಹಾಕಿದ್ದನಂತೆ. ಕೊನೆಗೆ ಶೋಭಾ ತವರು ಮನೆಯವರ ಒತ್ತಾಯಕ್ಕೆ ಪೊಲೀಸ್ ಠಾಣೆಗೆ ಬಂದು ನಾಪತ್ತೆ ಪ್ರಕರಣ ದಾಖಲು ಮಾಡಿದ್ದನಂತೆ. ಸದ್ಯ ಮಗಳು ಹಾಗೂ ಆಕೆಯ ಐವರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಮಲಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


