ನಿವೇಶನಕ್ಕಾಗಿ ಸರ್ಕಾರಿ ವ್ಯವಸ್ಥೆಯ ವಿರುದ್ಧ ಹೋರಾಡಿ ಗೆದ್ದಿದ್ದ ಶಿರಾ ಮೂಲದ ರುಬಿಯಾ, ತನ್ನ ಇಬ್ಬರು ಮಕ್ಕಳಿಗೆ ವಿಷವಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಸೂರು ಪಡೆದಿದ್ದರೂ, ಈ ದುರಂತ ಅಂತ್ಯ ಕಂಡಿದ್ದೇಕೆ?
ತುಮಕೂರು: ನಿವೇಶನ ಹಾಗೂ ಮನೆಗಾಗಿ ಹೋರಾಟ ನಡೆಸಿ ಯಶಸ್ವಿಯಾಗಿದ್ದ ಶಿರಾ ಮೂಲದ ಮಹಿಳೆ ರುಬಿಯಾ ತನ್ನ ಇಬ್ಬರು ಮಕ್ಕಳಿಗೆ ವಿಷವಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಶಿರಾನಗರವನ್ನೇ ಬೆಚ್ಚಿ ಬೀಳಿಸಿದೆ. ಇನ್ನು ಈಕೆ ಸಾವಿಗೆ ಕಾರಣ ತಿಳಿದು ಬಂದಿದೆ. ನಿವೇಶನಕ್ಕಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಜನಸ್ಪಂದನ ಸಭೆಯಲ್ಲಿ ಹೋರಾಟ ನಡೆಸಿ ಸುದ್ದಿಯಾಗಿದ್ದ ಈ ಮಹಿಳೆ, ಸರ್ಕಾರ ಮಂಜೂರು ಮಾಡಿದ್ದ ಜಾಗದಲ್ಲೇ ಮನೆ ಕಟ್ಟಿ ವಾಸವಿದ್ದರು. ಆದರೆ, ಸರ್ಕಾರ ಸೂರು ನೀಡಿದ ಮೇಲೂ ರಾಬಿಯಾ ಇಷ್ಟೊಂದು ಕಠೋರ ನಿರ್ಧಾರ ಕೈಗೊಂಡಿದ್ದೇಕೆ? ಎಂಬ ವಿಷಯ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಹೋರಾಟ ಗೆದ್ದ ಶಿರಾ ಮಹಿಳೆ: ಸಾವಿನ ಹಿಂದಿನ ನಿಗೂಢ ಸತ್ಯ
ತುಮಕೂರು ಜಿಲ್ಲೆಯ ಶಿರಾ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆ ಪಡೆಯಲು ವ್ಯವಸ್ಥೆ ವಿರುದ್ಧ ಸುದೀರ್ಘ ಹೋರಾಟ ನಡೆಸಿದ್ದ ರಾಬಿಯಾ ಅಸ್ಲಾಂ ಪಾಷ, ಇಂದು ತಮ್ಮ ಇಬ್ಬರು ಮುದ್ದು ಮಕ್ಕಳಿಗೆ ವಿಷ ನೀಡಿ, ಬಳಿಕ ತಾವೂ ಸೇವಿಸಿ ಜೀವ ತೊರೆದಿದ್ದಾರೆ. ವಿಷಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡಿದ್ದ ತಾಯಿ ರಾಬಿಯಾ ಹಾಗೂ ಇಬ್ಬರು ಮಕ್ಕಳು ಕೊನೆಯುಸಿರೆಳೆದಿದ್ದಾರೆ.
ಸಿದ್ದರಾಮಯ್ಯ ಭೇಟಿ, ನಿವೇಶನಕ್ಕೆ ಬೇಡಿಕೆ
ಅಷ್ಟಕ್ಕೂ ಈ ರಾಬಿಯಾ ಸಾಮಾನ್ಯ ಮಹಿಳೆಯಾಗಿರಲಿಲ್ಲ. ಸೂರು ಪಡೆದುಕೊಳ್ಳಲು ವ್ಯವಸ್ಥೆಯ ವಿರುದ್ಧವೇ ಸಮರ ಸಾರಿದ್ದ ಮಹಿಳೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ನಿಂತು ತಮ್ಮ ನೋವು ತೋಡಿಕೊಂಡಿದ್ದಾಗ, ತಕ್ಷಣ ನಿವೇಶನ ನೀಡುವಂತೆ ಸಿಎಂ ಆದೇಶಿಸಿದ್ದರು. ಆದರೂ ಅಧಿಕಾರಿಗಳು ಒಂದೂವರೆ ವರ್ಷಗಳ ಕಾಲ ಸೈಟು ನೀಡದೆ ಅಲೆದಾಡಿಸಿ ಸತಾಯಿಸಿದ್ದರು ಎಂದು ಆರೋಪಿಸಲಾಗಿತ್ತು.
ಪರಮೇಶ್ವರ್‌ಗೆ ದಯಾಮರಣಕ್ಕಾಗಿ ಮನವಿ
ಅಧಿಕಾರಿಗಳ ಈ ನಿರ್ಲಕ್ಷ್ಯದ ಧೋರಣೆಯಿಂದ ಬೇಸತ್ತ ರಾಬಿಯಾ, ತುಮಕೂರಿನಲ್ಲಿ ನಡೆದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಜನಸ್ಪಂದನ ಸಭೆಯಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ಗೃಹ ಸಚಿವರಿಗೆ ನೇರವಾಗಿ ದಯಾಮರಣ ಕೋರಿ ಮನವಿ ಸಲ್ಲಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದರು. ಆಗ ಗೃಹ ಸಚಿವರು ಸ್ವತಃ ಕರೆಸಿ ಅವರ ಕಷ್ಟ ಆಲಿಸಿ, ನಿವೇಶನ ನೀಡುವಂತೆ ಸೂಚಿಸಿದ್ದರು.
ಸರ್ಕಾರಿ ವ್ಯವಸ್ಥೆಯ ವಿರುದ್ಧ ಸುದೀರ್ಘ ಹೋರಾಟ
ಸುದೀರ್ಘ ಹೋರಾಟದ ಫಲವಾಗಿ ಸರ್ಕಾರ ಕೊನೆಗೂ ಶಿರಾದಲ್ಲಿ ನಿವೇಶನ ಮಂಜೂರು ಮಾಡಿತ್ತು. ರಾಬಿಯಾ ಆ ಜಾಗದಲ್ಲಿ ಸಣ್ಣ ಮನೆ ಕೂಡ ನಿರ್ಮಿಸಿಕೊಂಡು ವಾಸವಾಗಿದ್ದರು. ಆದರೆ, ಸರ್ಕಾರದಿಂದ ಸೂರು ಸಿಕ್ಕ ಮೇಲೂ ರಾಬಿಯಾ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇಬ್ಬರ ಜೀವ ಬಲಿ ಪಡೆದ ಈ ಕಠೋರ ನಿರ್ಧಾರದ ಹಿಂದಿರುವ ನೈಜ ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ.
ರಾಬಿಯಾ ಅಮಾನವೀಯ ನಿರ್ಧಾರಕ್ಕೆ ಕಾರಣವೇನು?
ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಕೆ.ವಿ ಹಾಗೂ ಶಿರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಆತ್ಮಹತ್ಯೆಗೆ ಅಧಿಕಾರಿಗಳ ಕಿರುಕುಳ ಕಾರಣವೇ ಅಥವಾ ಕುಟುಂಬದ ಆಂತರಿಕ ಕಲಹವೇ ಎಂಬ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. (ವರದಿ ಮಹಾಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು)


