ಕೆಜಿಎಫ್ 2 ಬಳಿಕ ಭರ್ಜರಿ ಆರಂಭ ಪಡೆದಿರುವ ಯಶ್ ಅವರ 'ಟಾಕ್ಸಿಕ್' ಸಿನಿಮಾ, ಮೊದಲ ದಿನವೇ ವಿಶ್ವಾದ್ಯಂತ 140 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ, ಬಿಡುಗಡೆಯಾದ ಮೊದಲ ದಿನವೇ ನೂರು ಕೋಟಿ ಗಳಿಸಿದ ಎರಡು ಸಿನಿಮಾಗಳನ್ನು ನೀಡಿದ ಭಾರತದ ಏಕೈಕ ನಟ ಎಂಬ ಐತಿಹಾಸಿಕ ದಾಖಲೆಯನ್ನು ಯಶ್ ಬರೆದಿದ್ದಾರೆ.

ಕೆಜಿಎಫ್ 2 ಸಿನಿಮಾ ಬಳಿಕ ನಾಲ್ಕು ವರ್ಷ ಗ್ಯಾಪ್ ತೆಗೆದುಕೊಂಡ ನಟ ಯಶ್, ಈಗ 'ಟಾಕ್ಸಿಕ್' ಸಿನಿಮಾದೊಂದಿಗೆ ಪ್ರೇಕ್ಷಕರ ಮನಗೆದಿದ್ದಾರೆ. ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಈ ಸಿನಿಮಾ ಮೊದಲ ಶೋದಿಂದಲೇ ಭರ್ಜರಿ ಪ್ರದರ್ಶನ ಪಡೆದುಕೊಂಡಿದೆ. ಸಿನಿಮಾ ಮೇಲಿನ ಭಾರೀ ನಿರೀಕ್ಷೆ, ಅಡ್ವಾನ್ಸ್ ಬುಕ್ಕಿಂಗ್ ಗಳೊಂದಿಗೆ ಭಾರೀ ಕಲೆಕ್ಷನ್ ಮಾಡಿದ್ದು, ಇದರೊಂದಿಗೆ ಮೊದಲ ದಿನವೇ ಬಾಕ್ಸ್ ಆಫೀಸ್ ಬಳಿ ಭರ್ಜರಿ ಆರಂಭ ಪಡೆದುಕೊಂಡಿದೆ.

ಬಾಕ್ಸ್ ಆಫೀಸ್ ಚಿಂದಿ

ಟಾಕ್ಸಿಕ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಬಂದರೂ, ಮೊದಲ ದಿನದ ನಂಬರ್ಸ್ ಬಗ್ಗೆ ಎಲ್ಲರೂ ಆಸಕ್ತಿಯಿಂದ ಎದುರು ನೋಡುತ್ತಿದ್ದರು. ಟ್ರೆಂಡ್ ಮಾಹಿತಿಯ ಅನ್ವಯ, ಮೊದಲ ದಿನ ಭಾರತದಲ್ಲಿ 120 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದೆ. ವಿಶ್ವದಾದ್ಯಂತ 140 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ ಅತೀ ಹೆಚ್ಚು ಅಂದರೆ 55 ಕೋಟಿ ರೂಪಾಯಿ, ತೆಲುಗಿನಲ್ಲಿ 16 ಕೋಟಿ ರೂಪಾಯಿ, ಕನ್ನಡದಲ್ಲಿ 23.3 ಕೋಟಿ ರೂಪಾಯಿ, ತಮಿಳಿನಲ್ಲಿ 5.5 ಕೋಟಿ ರೂಪಾಯಿ, ಮಲಯಾಳಂನಲ್ಲಿ 1.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಆದರೆ ಈ ಮೊದಲ ದಿನದ ಗಳಿಕೆ ಕುರಿತು ಸಿನಿಮಾ ನಿರ್ಮಾಪಕರು ಯಾವುದೇ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ.

ಮೊದಲ ದಿನವೇ ಭಾರತದಲ್ಲಿ 100 ಕೋಟಿ ಪ್ಲಸ್ ಗಳಿಕೆ ಮಾಡುವುದರೊಂದಿಗೆ ಟಾಕ್ಸಿಕ್ ದಾಖಲೆ ಬರೆದಿದ್ದು, ಹಿಂದಿನ ದಾಖಲೆಗಳನ್ನು ಅಳಿಸಿ ಹಾಕಿದೆ. ಅದರಲ್ಲೂ ನಟ ಯಶ್‌ ಅವರು ಭಾರತೀಯ ಚಿತ್ರರಂಗ ಇತಿಹಾಸದಲ್ಲಿಯೇ ಐತಿಹಾಸ ದಾಖಲೆ ಬರೆದಿದ್ದು, ಬಿಡುಗಡೆಯಾದ ಮೊದಲ ದಿನವೇ ನೂರು ಕೋಟಿ ಪ್ಲಸ್ ಗಳಿಕೆ ಮಾಡಿದ ಎರಡು ಸಿನಿಮಾಗಳನ್ನು ಕೊಟ್ಟ ನಟ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಯಶ್ 'ಟಾಕ್ಸಿಕ್' ಮೊದಲ ದಿನದ ರಹಸ್ಯ!

ಯಶ್ ನಟನೆ ಟಾಕ್ಸಿಕ್ ಸಿನಿಮಾ ಮೊದಲ ದಿನ 120 ಕೋಟಿ ರೂಪಾಯಿ ಗಳಿಸಿದರೆ, ನಾಲ್ಕು ವರ್ಷದ ಹಿಂದೆ ಬಿಡುಗಡೆಯಾದ ಯಶ್ ಅವರ ಕೆಜಿಎಫ್ 2 ಸಿನಿಮಾ ಕೂಡ ಬಿಡುಗಡೆಯಾದ ಮೊದಲ ದಿನವೇ 101.10 ಕೋಟಿ ರೂಪಾಯಿ ಗಳಿಸಿತ್ತು. ಟಾಕ್ಸಿಕ್ ಸಿನಿಮಾ ಕುರಿತು ನೆಗೆಟಿವ್ ಪ್ರಚಾರ ನಡೆದರೂ, ಚಿತ್ರರಂಗದಲ್ಲಿ ಬ್ಲ್ಯಾಕ್ ಕ್ಲಾಶ್ ಎದುರಾದರೂ ಟಾಕ್ಸಿಕ್ ಸಿನಿಮಾ ಮೊದಲ ದಿನವೇ ಜಗತ್ತಿನಾದ್ಯಂತ 140 ಪ್ಲಸ್ ಕೋಟಿ ರೂಪಾಯಿ ಗಳಿಕೆ ಮಾಡಿ ಇತಿಹಾಸ ನಿರ್ಮಾಣ ಮಾಡಿದೆ.

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾದಲ್ಲಿ ಯಶ್, ತಂದೆ-ಮಗನ ಪಾತ್ರಗಳಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ, ನಯನತಾರ, ರುಕ್ಮೀಣಿ ವಸಂತ, ಸುತಾರಿ ಸೇರಿದಂತೆ ಹಲವರು ಪ್ರಧಾನ ಪತ್ರಗಳಲ್ಲಿ ನಟಿಸಿದ್ದಾರೆ. ಕೆವಿಎನ್ ಪ್ರೋಡಾಕ್ಷನ್ಸ್, ಮಾನ್ಸ್‌ಟರ್‌ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿ ವೆಂಕಟ್ ಕೆ ನಾರಾಯಣ, ಯಶ್ ಸಂಯುಕ್ತವಾಗಿ ಭಾರೀ ಬಜೆಟ್‌ನೊಂದಿಗೆ ನಿರ್ಮಾಣ ಮಾಡಿದ್ದರು. ಏಕಕಾಲದಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಶೂಟಿಂಗ್ ನಡೆಸಿ, ವಿವಿಧ ಭಾಷೆಗಳಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಗಿತ್ತು.

ಮೊದಲ ದಿನವೇ ಬುಕ್ ಮೈ ಶೋ ಪ್ಲಾಟ್‌ಫಾರ್ಮ್ ಬುಕ್ ಮೈ ಶೋದಲ್ಲಿ 'ಟಾಕ್ಸಿಕ್' ಸಿನಿಮಾ ಅಪರೂಪದ ದಾಖಲೆ ನಿರ್ಮಿಸಿದ್ದು, ಸುಮಾರು 9,05,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಬಿಎಂಎಸ್ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಸಿಂಗಲ್ ಡೇ ಸೇಲ್ಸ್ ನಲ್ಲಿ ಇದು ಹೊಸ ದಾಖಲೆಯಾಗಿದ್ದು, ವಾರಾಂತ್ಯದಲ್ಲಿ ಟಾಕ್ಸಿಕ್ ಪ್ರದರ್ಶನ ಹೇಗೆ ಮುಂದುವರಿಯಲಿದೆ ಎಂದು ಕಾದು ನೋಡಬೇಕಿದೆ.

ಇನ್ನು, ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನವೇ 100 ಕೋಟಿ ಪ್ಲಸ್ ಗಳಿಸಿದ ಮೊದಲ ಸಿನಿಮಾ ಎಂಬ ಖ್ಯಾತಿಯನ್ನು ಬಾಹುಬಲಿ 2: ದಿ ಕನ್‌ಕ್ಲೂಷನ್ (2017) ಪಡೆದುಕೊಂಡಿದೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ನಟ ಪ್ರಭಾಸ್, ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದರು. 2017ರ ಏಪ್ರಿಲ್ 28ರಂದು ಬಿಡುಗಡೆಯಾಗಿದ್ದ ಬಾಹುಬಲಿ 2 ಸಿನಿಮಾ, ಭಾರತದಲ್ಲಿ ಮೊದಲ ದಿನ 121 ಕೋಡಿ ನೆಟ್ (152 ಕೋಟಿ ಗ್ರಾಸ್) ಕಲೆಕ್ಷನ್ ಮಾಡಿತ್ತು. ವಿಶ್ವದಾದ್ಯಂತ 217 ಕೋಟಿ ರೂಪಾಯಿಯನ್ನು ಮೊದಲ ದಿನ ಬಾಹುಬಲಿ ಗಳಿಸಿತ್ತು. ಇದರೊಂದಿಗೆ ಭಾರತದಲ್ಲಿ ಮೊದಲ ದಿನ 100 ಕೋಟಿ ಗಳಿಸಿದ ಮೊದಲ ಸಿನಿಮಾ ಎಂಬ ದಾಖಲೆ ನಿರ್ಮಿಸಿತ್ತು. ಆ ಬಳಿಕ ಬಿಡುಗಡೆಯಾದ ಕೆಜಿಎಪ್ ಚಾಪ್ಟರ್ 2, ಆರ್ಆರ್ಆರ್ ಹಾಗೂ ಪುಷ್ಪ 2 ಸಿನಿಮಾಗಳು ಬಿಡುಗಡೆಯಾದ ಮೊದಲ ದಿನವೇ 100 ಕೋಟಿ ಗಳಿಸಿ ಈ ಹಿಂದಿನ ದಾಖಲೆಗಳನ್ನು ಮೀರಿಸಿದ್ದವು.