ತುಮಕೂರಿನ ಪಾವಗಡದಲ್ಲಿ ನಕ್ಸಲ್ ಹೆಸರಿನಲ್ಲಿ ಜನರಿಗೆ ಬೆದರಿಕೆ ಹಾಕುತ್ತಿದ್ದ ನಕಲಿ ನಕ್ಸಲ್ ವೆಂಕಟೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ ಹಾಗೂ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಎದುರಿಸುತ್ತಿದ್ದಾನೆ. 150ಕ್ಕೂ ಹೆಚ್ಚು ಪೊಲೀಸರ ಸತತ ಕಾರ್ಯಾಚರಣೆ ಬಳಿಕ ಈತನನ್ನು ಸೆರೆಹಿಡಿಯಲಾಗಿದೆ.
ತುಮಕೂರು: ಕಳೆದ ಹಲವು ತಿಂಗಳಿಂದ ಪಾವಗಡ ಜನತೆಗೆ ಹಾಗೂ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ, ನಕ್ಸಲ್ ಹೆಸರಿನಲ್ಲಿ ಕನಿಕಲಬಂಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದ ಕನಕಲಬಂಡೆ ವೆಂಕಟೇಶ್ ಅಲಿಯಾಸ್ ‘ಸುಡೋ ನಕ್ಸಲ್’ ವೆಂಕಟೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪಾವಗಡದ ಜನರನ್ನು ಬೆಚ್ಚಿಬೀಳಿಸಿದ್ದ ಆ ನಕಲಿ ನಕ್ಸಲ್ ಯಾರು?
ಪಾವಗಡ ಸಮೀಪದ ಕಡಮಲಕುಂಟೆ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಅರೆಬೆತ್ತಲೆಯಾಗಿ ಎಣ್ಣೆ ಹೊಡೆಯುತ್ತಾ ಚಿಕನ್ ಸೇವಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ನಕಲಿ ನಕ್ಸಲ್ ಕಳೆದ ಕೆಲ ತಿಂಗಳಿಂದ ಕನಕಲಬಂಡೆ ಗ್ರಾಮದಲ್ಲಿ ದೌರ್ಜನ್ಯ ಹಾಗೂ ಬೆದರಿಕೆ ಹಾಕುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ. ಆ.29ರಂದು ರೈತ ಕರಿಯಣ್ಣ ಅವರ ಪಂಪ್‌ಸೆಟ್‌ಗೆ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿದೆ.
ಇತ್ತೀಚೆಗೆ ಗಂಗಸಾಗರ ಗ್ರಾಮದ ರೈತನಿಗೆ ‘ಪೀಪಲ್ಸ್ ವಾರ್ ದಳಂ’ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಪತ್ರ ಅಂಟಿಸಿದ ಪ್ರಕರಣದಲ್ಲೂ ಈತನ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಹೆಚ್ಚುವರಿ ಎಸ್‌ಪಿ ಗೋಪಾಲಯ್ಯ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಪಾವಗಡ ಇನ್ಸ್‌ಪೆಕ್ಟರ್ ಸುರೇಶ್, ಗ್ರಾಮಾಂತರ ಇನ್ಸ್‌ಪೆಕ್ಟರ್ ಕೊಟ್ರೇಶ್, ಎಸ್‌ಐ ಸುನಿಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧನದಿಂದ ಕನಕಲಬಂಡೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈತನ ಬಂಧನಕ್ಕೆ ಅತ್ಯಾಧುನಿಕ ಡ್ರೋಣ್‌ಗಳು ಸೇರಿದಂತೆ 150ಕ್ಕೂ ಹೆಚ್ಚು ಪೊಲೀಸರಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿತ್ತು. ಈತನ ವಿರುದ್ಧ ಪಾವಗಡ ನಗರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಕಚ್ಚಾ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಈತನ ಪತ್ನಿ ಸೇರಿದಂತೆ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಇದರೊಂದಿಗೆ ಆರೋಪಿ ಪೊಲೀಸರಿಗೆ ಸಿಗದೆ ಎಸ್ಕೇಪ್ ಆಗಿದ್ದ. ಈ ವೇಳೆ ಈತ ಪಾವಗಡ ಬೆಟ್ಟದಲ್ಲಿ ಅಡಗಿ ಕುಳಿತ ಬಗ್ಗೆ ಮಾಹಿತಿ ಸಿಕ್ಕಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸತತ ಕಾರ್ಯಾಚರಣೆ ಬೆನ್ನಲ್ಲೇ ಆರೋಪಿಯನ್ನು ಕಡಮಲಕುಂಟೆ ಬೆಟ್ಟದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪಾವಗಡ ನಗರ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.


