- Home
- Karnataka Districts
- Bengaluru Urban
- ಬೆಂಗಳೂರು ಮಳೆ ಅವಾಂತರಕ್ಕೆ ಪಲ್ಟಿಯಾದ ಕಾರು; ಆಕಾಶಕ್ಕೆ ಮುಖ ಮಾಡಿದ 4 ಟೈರು! ಹೇಗಿದ್ದಾರೆ ನೋಡಿ ಡ್ರೈವರ್?
ಬೆಂಗಳೂರು ಮಳೆ ಅವಾಂತರಕ್ಕೆ ಪಲ್ಟಿಯಾದ ಕಾರು; ಆಕಾಶಕ್ಕೆ ಮುಖ ಮಾಡಿದ 4 ಟೈರು! ಹೇಗಿದ್ದಾರೆ ನೋಡಿ ಡ್ರೈವರ್?
ಬೆಂಗಳೂರು ಹೊರವಲಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೊಸೂರು ಮುಖ್ಯರಸ್ತೆಯ ಯಡವನಹಳ್ಳಿ ಗೇಟ್ ಬಳಿ ಕಾರೊಂದು ನೀರಿನ ಸೆಳೆತಕ್ಕೆ ಸಿಲುಕಿ ಪಲ್ಟಿಯಾಗಿದೆ. ಹಬ್ಬ ಮುಗಿಸಿ ಚೆನ್ನೈಗೆ ಮರಳುತ್ತಿದ್ದ ಚಾಲಕ ಶ್ರೀನಿವಾಸ್ ಅವರು ಸ್ಥಳೀಯರು ಮತ್ತು ಪೊಲೀಸರ ನೆರವಿನಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಮಳೆಯಾವಾಂತರಕ್ಕೆ ರಸ್ತೆಗಳು ತುಂಬಿ ಹರಿಯುವ ನದಿಯಂತೆ ಭಾಸವಾಗುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ ಆನೇಕಲ್ ತಾಲ್ಲೂಕಿನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತವೊಂದು ಸಂಭವಿಸಿದೆ.
ಹೆದ್ದಾರಿಯಲ್ಲಿ ಸುತ್ತಿದ್ದ ಕಾರೊಂದು ನೀರಿನ ಸೆಳೆತಕ್ಕೆ ಸಿಲುಕಿ ಪಲ್ಟಿಯಾಗಿ, ನಾಲ್ಕು ಟೈರುಗಳು ಆಕಾಶಕ್ಕೆ ಮುಖ ಮಾಡಿರುವ ಘಟನೆ ವರದಿಯಾಗಿದೆ. ಹೊಸೂರು ಮುಖ್ಯರಸ್ತೆಯ ಯಡವನಹಳ್ಳಿ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಪೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ (Ford EcoSport Titanium) ಕಾರು ಮಳೆಯಲ್ಲಿ ಪಲ್ಟಿಯಾಗಿದೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು:
ಅಪಘಾತದ ಭೀಕರತೆ ನೋಡಿದರೆ ಚಾಲಕ ಬದುಕುಳಿಯುವುದು ಕಷ್ಟ ಎಂಬಂತಿತ್ತು. ಆದರೆ, ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರು ಮೂಲದವರಾಗಿದ್ದು, ಸದ್ಯ ಚೆನ್ನೈ ನಿವಾಸಿಯಾಗಿರುವ ಶ್ರೀನಿವಾಸ್ (ಘಟನೆಯಲ್ಲಿ ಪಾರಾದ ಚಾಲಕ) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಬ್ಬದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಶ್ರೀನಿವಾಸ್, ಅಣ್ಣನ ಮನೆಯಲ್ಲಿ ಹಬ್ಬ ಆಚರಿಸಿ ವಾಪಸ್ ಚೆನ್ನೈ ಕಡೆಗೆ ಕಾರಿನಲ್ಲಿ ಹೊರಟಿದ್ದರು. ಆದರೆ ವಿಧಿ ಬೇರೆಯೇ ಆಟವಾಡಿದೆ.
ಆಗಿದ್ದೇನು?
ನಿನ್ನೆ ರಾತ್ರಿ ಬೆಂಗಳೂರು ಹೊರವಲಯದಲ್ಲಿ ಭಾರೀ ಮಳೆ ಸುರಿದಿತ್ತು. ಇದರ ಪರಿಣಾಮ ಹೊಸೂರು ಮುಖ್ಯರಸ್ತೆಯ ಹೆದ್ದಾರಿಯ ಒಂದು ಬದಿ ಸಂಪೂರ್ಣವಾಗಿ ಜಲಾವೃತವಾಗಿತ್ತು. ರಾತ್ರಿಯ ಕತ್ತಲು ಹಾಗೂ ರಸ್ತೆಯಲ್ಲಿ ನಿಂತಿದ್ದ ಮಳೆ ನೀರಿನ ಅಂದಾಜು ಸಿಗದೆ ಶ್ರೀನಿವಾಸ್ ಕಾರನ್ನು ಹಾಗೇ ಮುಂದುವರಿಸಿದ್ದಾರೆ. ಈ ವೇಳೆ ಹೆದ್ದಾರಿಯಲ್ಲಿ ನಿಂತಿದ್ದ ಮಳೆ ನೀರಿನ ಅತಿಯಾದ ಸೆಳೆತಕ್ಕೆ ಕಾರಿನ ಮುಂದಿನ ಚಕ್ರ ಸಿಲುಕಿದ್ದು, ನಿಯಂತ್ರಣ ಕಳೆದುಕೊಂಡ ಕಾರು ತಲೆಕೆಳಕಾಗಿ (ಪಲ್ಟಿ) ಬಿದ್ದಿದೆ. ಕಾರಿನ ನಾಲ್ಕು ಟೈರುಗಳು ಆಕಾಶದ ಕಡೆಗೆ ಮುಖ ಮಾಡಿದ್ದವು. ಇದನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದರು.
ಸ್ಥಳೀಯರ ಸಮಯಪ್ರಜ್ಞೆ, ಪೊಲೀಸರ ರಕ್ಷಣೆ:
ಅಪಘಾತಕ್ಕೀಡಾಗುವುದನ್ನು ಗಮನಿಸಿದ ಕೂಡಲೇ ಸ್ಥಳೀಯರು ಧಾವಿಸಿ ಬಂದು ರಕ್ಷಣಾ ಕಾರ್ಯಾಚರಣೆಗೆ ಮುಂದಾದರು. ಅಲ್ಲದೆ, ತಕ್ಷಣವೇ ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅತ್ತಿಬೆಲೆ ಪೊಲೀಸರು ಮತ್ತು ಸ್ಥಳೀಯರ ನೆರವಿನಿಂದ ಕಾರಿನೊಳಗೆ ಸಿಲುಕಿದ್ದ ಚಾಲಕ ಶ್ರೀನಿವಾಸ್ ಅವರನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು. ಬಳಿಕ ಜಖಂಗೊಂಡಿದ್ದ ಕಾರನ್ನು ಕ್ರೇನ್ ಮೂಲಕ ಹೆದ್ದಾರಿಯಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಸಣ್ಣಪುಟ್ಟ ಗಾಯಗೊಂಡಿರುವ ಶ್ರೀನಿವಾಸ್ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದು, ದೊಡ್ಡ ಅನಾಹುತವೊಂದು ತಪ್ಪಿದ್ದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ರಾತ್ರಿ ವೇಳೆ ಮಳೆನೀರು ನಿಲ್ಲುವ ಹೆದ್ದಾರಿಗಳಲ್ಲಿ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

