- Home
- Karnataka Districts
- Karnataka Rains: ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ 30-40KM ವೇಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಎಚ್ಚರಿಕೆ
Karnataka Rains: ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ 30-40KM ವೇಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಎಚ್ಚರಿಕೆ
ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಸೆಪ್ಟೆಂಬರ್ 19ರವರೆಗೆ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿಯಲಿದೆ.

ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ಸಿಗುತ್ತಾ ಬರದಿಂದ ರಿಲೀಫ್?
ಬೆಂಗಳೂರು: ಹಲವು ದಿನಗಳಿಂದ ಮಳೆ ಇಲ್ಲದೆ ಆಕಾಶದತ್ತ ಕೈಮಾಡಿ ಎದುರು ನೋಡುತ್ತಿದ್ದ ರೈತರಿಗೆ ವರುಣ ದೇವ ರಿಲೀಫ್ ನೀಡಿದ್ದು, ನಿನ್ನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದೆ. ಇಂದು ಕೂಡ ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅಲರ್ಟ್
ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ ಅಲರ್ಟ್ ನೀಡಲಾಗಿದೆ. ಅದರಲ್ಲೂ ಮುಂದಿನ ಮೂರು ಗಂಟೆಯಲ್ಲಿಯೇ ಈ ಎಂಟು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮಳೆ ಬರುವ ಸಂದರ್ಭದಲ್ಲಿ ಎಚ್ಚರ
8 ಜಿಲ್ಲೆಗಳಲ್ಲಿ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಸಾಧಾರಣ ಮಳೆ ಜೊತೆ ಗುಡುಗು, ಬಿರುಗಾಳಿ ಎಚ್ಚರಿಕೆ ನೀಡಲಾಗಿದೆ. ಮಳೆಯಾಗುವ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ವಿದ್ಯುತ್ ವ್ಯತ್ಯಯ, ಸಂಚಾರ ದಟ್ಟಣೆ ಸಾಧ್ಯತೆ ಇದ್ದು, ದುರ್ಬಲ ಮರದ ಕೊಂಬೆಗಳು ಬೀಳುವ ಸಾಧ್ಯತೆ ಇದೆ. ಇದರಿಂದ ಮಳೆಯಾಗುವ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಹವಾಮಾನ ಇಲಾಖೆ ಇಲಾಖೆ ತಿಳಿಸಿದೆ.
ಮಳೆ ಸಂದರ್ಭ ಮನೆಯೊಳಗೆ ಸುರಕ್ಷಿತವಾಗಿರಿ
ರೈತರಿಗೆ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಕಟಾವು ಮಾಡಿದ ಬೆಳೆ ತೆರೆದ ಸ್ಥಳದಲ್ಲಿ ಇಡಬೇಡಿ. ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ. ಮಳೆ ಸಂದರ್ಭ ಮನೆಯೊಳಗೆ ಸುರಕ್ಷಿತವಾಗಿರಿ. ಮರದ ಕೆಳಗೆ ಆಶ್ರಯ ಪಡೆಯಬೇಡಿ, ವಿದ್ಯುತ್ ಉಪಕರಣಗಳನ್ನು ಅನ್ಪ್ಲಗ್ ಮಾಡಿ, ಜಲಮೂಲಗಳಿಂದ ದೂರವಿರಿ ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.
ಈ ವರ್ಷ ಬೆಂಗಳೂರಿನಲ್ಲಿ ಒಟ್ಟು ಮಳೆಯ ಪ್ರಮಾಣ 566 ಮಿ.ಮೀ
ಇನ್ನು, ಬೆಂಗಳೂರು ನಗರದಲ್ಲಿ ಬೆಳಗ್ಗೆ 5:30ರವರೆಗೆ IMD ವರದಿಯಂತೆ 56 ಮಿ.ಮೀ. ಮಳೆಯಾಗಿದೆ. ಪೂರ್ವ ಮುಂಗಾರು ಅವಧಿಯ ನಂತರ ಬೆಂಗಳೂರಿನಲ್ಲಿ ದಾಖಲಾದ ಅತಿ ಹೆಚ್ಚು ಮಳೆ ಇದಾಗಿದೆ. ಮುಂಗಾರು ಪೂರ್ವ ಅವಧಿಯಲ್ಲಿ 340 ಮಿ.ಮೀ. ಮಳೆ ಸುರಿದ ನಂತರ, ಜೂನ್ 1ರಿಂದ ಇಲ್ಲಿಯವರೆಗೆ ನಗರದಲ್ಲಿ 170 ಮಿ.ಮೀ. ಮಳೆಯಾಗಿತ್ತು. ಇಂದಿನ 56 ಮಿ.ಮೀ. ಮಳೆಯೊಂದಿಗೆ, ಈ ವರ್ಷ ನಗರದಲ್ಲಿ ದಾಖಲಾದ ಒಟ್ಟು ಮಳೆಯ ಪ್ರಮಾಣ 566 ಮಿ.ಮೀ ಗೆ ತಲುಪಿದೆ.
ಕೆಲವೆಡೆ ಮೋಡ ಕವಿದ ವಾತಾವರಣ
ಬೆಂಗಳೂರಿನಲ್ಲಿ ಮುಂದಿನ ಏಳು ದಿನಗಳ ವರೆಗೂ ಮಳೆಯಾಗುವ ಮುನ್ಸೂಚನೆ ಇದ್ದು, ಅದರಲ್ಲೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಸೆಪ್ಟೆಂಬರ್ 19ರ ವರೆಗೂ ಭರ್ಜರಿ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ. ಉಳಿದಂತೆ ಮುಂದಿನ 7 ದಿನಗಳ ಕಾಲ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಪ್ರದೇಶಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನದ ನಂತರ ಕೆಲವೆಡೆ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಗರಿಷ್ಠ ತಾಪಮಾನವು ಸಾಮಾನ್ಯ ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಲಿದೆ.
ಸೆಪ್ಟೆಂಬರ್ 19ರಿಂದ ಕರ್ನಾಟಕದಾದ್ಯಂತ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ
ಆದರೆ, ದಕ್ಷಿಣ ಒಳನಾಡು ಪ್ರದೇಶದಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಸೆಪ್ಟೆಂಬರ್ 19ರಿಂದ ಕರ್ನಾಟಕದಾದ್ಯಂತ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

