ಕಸ್ತೂರಿ ರಂಗನ್ ವರದಿ ಕೈಬಿಡುವಂತೆ ಆಗ್ರಹಿಸಿ ತೀರ್ಥಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಸಿತು. ಕೇಂದ್ರ ಸರ್ಕಾರದ ವರದಿಯನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ನಾಟಕೀಯ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ವರದಿಯ ವಿರುದ್ಧ ತಮ್ಮ ಪಕ್ಷದ ನಿರಂತರ ಹೋರಾಟವನ್ನು ಪುನರುಚ್ಚರಿಸಿದ್ದಾರೆ.

ತೀರ್ಥಹಳ್ಳಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಹೇರಿಕೆ ಮಾಡಿರುವ ಕಸ್ತೂರಿ ರಂಗನ್ ವರದಿಯನ್ನು ಕೈಬಿಡುವಂತೆ ಜನ ಹೋರಾಟವನ್ನು ಆಯೋಜಿಸುವುದು ಅನಿವಾರ್ಯವಾಗಿದೆ. ಈ ವರದಿಯ ಮೂಲಕ ಪಶ್ಚಿಮಘಟ್ಟದ ಅನ್ನದಾತರನ್ನು ತುಳಿಯುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸುವುದಾಗಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಕಾಂಗ್ರೆಸ್ ಪಕ್ಷದ ವತಿಯಿಂದ ಕಸ್ತೂರಿರಂಗನ್ ವರದಿಯನ್ನು ಕೈಬಿಡುವಂತೆ ಆಗ್ರಹಿಸಿ ಭಿಂತಳ ಗ್ರಾಮದಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಪಾಲ್ಗೊಂಡು ನಂತರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ರಕ್ಷಣೆಗೆ ಸಂಬಂಧಿಸಿ ಕಾಂಗ್ರೆಸ್ ಬದ್ದತೆಯನ್ನು ಹೊಂದಿದೆ. ಕೇಂದ್ರ ಸರ್ಕಾರವೇ ಹೇರಿಕೆ ಮಾಡಿರುವ ವರದಿಯ ಬಗ್ಗೆ ಬಿಜೆಪಿ ಸಂಸದರು ಮತ್ತು ಶಾಸಕರು ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿಕೊಂಡೇ ಬಂದಿದೆ:

ಕಸ್ತೂರಿರಂಗನ್ ವರದಿಯನ್ನು ಲಾಗಾಯ್ತಿನಿಂದಲೂ ಕಾಂಗ್ರೆಸ್ ವಿರೋದಿಸಿಕೊಂಡು ಬಂದಿದೆ. 2013ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಉಪಸಮಿತಿ ಶಿಫಾರಸಿನಂತೆ ಈ ವರದಿಯನ್ನು ಸಾರಸಗಟಾಗಿ ವಿರೋದಿಸಲಾಗಿದೆ. ಈ ವರದಿಯನ್ನು ವಿರೋದಿಸಿ 1555 ಹಳ್ಳಿಗಳನ್ನು ಒಳಗೊಂಡು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿ ಈ ವರದಿ ಜಾರಿಗೆ ನಮ್ಮ ಪೂರ್ಣ ವಿರೋದವಿದ್ದು, ಕಾನೂನು ಹೋರಾಟದ ಬಗ್ಗೆಯೂ ಯೋಚಿಸುವ ಅಗತ್ಯವಿದೆ ಎಂದರು.

ತಾಲೂಕಿನಲ್ಲಿ ಈ ಮೊದಲು 139 ಗ್ರಾಮಗಳಿದ್ದು, 7ನೇ ಅಧಿಸೂಚನೆಯಲ್ಲಿ 157 ಗ್ರಾಮಗಳಿಗೆ ಹೆಚ್ಚಿಸಲಾಗಿದೆ. ಈ ವರದಿಯ ವಿಚಾರವಾಗಿ 2016ರಲ್ಲಿ ಕೇಂದ್ರ ಸರ್ಕಾರ ಕರೆದಿದ್ದ ಮಹತ್ವದ ಸಭೆಯಲ್ಲಿ ಭಾಗವಹಿಸದ ಸಂಸದರಾದ ಬಿ.ವೈ.ರಾಘವೇಂದ್ರ ಮತ್ತು ಶೋಭಾ ಕರಂದ್ಲಾಜೆ ಮತ್ತು ವರದಿಯ ಬಗ್ಗೆ ನಾಟಕವಾಡುತ್ತಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.

ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮಾತನಾಡಿ, ಮಲೆನಾಡಿಗೆ ಮಾರಕವಾಗಿರುವ ವರದಿಯನ್ನು ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ವಿರೋದದ ನಾಟಕವಾಡುತ್ತಿದ್ದಾರೆ. ಈ ವರದಿಯನ್ನು ವಿರೋದಿಸಿ ಜಿಲ್ಲಾ ವ್ಯಾಪ್ತಿಯ ಪ್ರತಿ ಹೋಬಳಿ ಮಟ್ಟದಲ್ಲಿ ಜನಜಾಗೃತಿ ಮೂಡಿಸುತ್ತೇವೆ. ನಮ್ಮೊಳಗಿನ ಒಡಕು ಬಿಜೆಪಿಗೆ ವರವಾಗಿದೆ. ಮತ ಯಾರಿಗೆ ಕೇಳ್ತೀರಿ ಎಂದು ಮಾರ್ಮಿಕವಾಗಿ ಹೇಳಿದರು.

ನಾನು ಬದುಕಿರುವವರೆಗೂ ಬಿಜೆಪಿ ಸಖ್ಯ ಮಾಡೊಲ್ಲಾ. ನಮ್ಮ ಕಾರ್ಯಕರ್ತರು ಈ ಕ್ಷೇತ್ರದ ಶಾಸಕರಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದಾರೆ. ಆದರೆ ಪಕ್ಷ ಸಂಘಟನೆಗೆ ವಿರುದ್ಧವಾಗಿ ಬಿಜೆಪಿ ಜೊತೆ ಹೆಜ್ಜೆ ಹಾಕುವವರಿದ್ದಾರೆ. ಅಂತವರಿಂದ ಎದುರಿಗಿರುವ ಚುನಾವಣೆ ಎದುರಿಸೋದೇ ಕಷ್ಟವಾಗಿದೆ. ಕಾಲು ಹಿಡೀತೀನಿ ಪಕ್ಷದ ದೃಷ್ಟಿಯಿಂದ ಬಿಜೆಪಿ ಸಖ್ಯ ಬಯಸುವವರು ಇಂದೇ ಹೊರ ಹೋಗುವುದು ಸೂಕ್ತ. ಶ್ರೀರಾಮನ ಹುಂಡಿಯನ್ನೇ ಕದ್ದವರಿಂದ ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಮಾತನಾಡಿ, ಹೋರಾಟದ ಹಿನ್ನೆಲೆಯ ಈ ಜಿಲ್ಲೆಯಲ್ಲಿ ನಡೆದಿರುವ ಹೋರಾಟ ತಾರ್ಕಿಕ ಅಂತ್ಯ ಕಾಣಬೇಕಿದೆ. ಬಿಜೆಪಿ ಮುಖಂಡರು ಸಂಸದರು ಮತ್ತು ಶಾಸಕರು ಎಲ್ಲಿ ಅಡಗಿದ್ದಾರೆ. ಬಳ್ಳಾರಿಗೆ ಪಾದಯಾತ್ರೆ ನಡೆಸುತ್ತಿರುವ ಬಿಜೆಪಿಯವರು ಕಸ್ತೂರಿರಂಗನ್ ವರದಿಯ ಬಗ್ಗೆ ಚಕಾರ ಎತ್ತಿಲ್ಲ. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರಿಂದ ಬಳ್ಳಾರಿ ಪಾದಯಾತ್ರೆಯನ್ನು ಉದ್ಘಾಟಿಸಲಾಗಿದೆ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ, ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ಎಂ.ಎ.ರಮೇಶ್ ಹೆಗ್ಡೆ, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಚೇತನ್ ಗೌಡ, ಕೆಸ್ತೂರು ಮಂಜುನಾಥ್, ಮುಡುಬಾ ರಾಘವೇಂದ್ರ, ಡಾ. ಶ್ರೀನಿವಾಸ್ ಕರಿಯಣ್ಣ ಮುಂತಾದವರು ಇದ್ದರು.

ಭಿಂತಳ ಗ್ರಾಮದಲ್ಲಿ ಆರಂಭಗೊಂಡ ಪಾದಯಾತ್ರೆಯ ಆರಂಭದಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಪಾಲ್ಗೊಂಡಿದ್ದರು.

----ಕಾಂಗ್ರೆಸ್‍ನ ಟೀಕೆ ಮಾಡಲು ಪಾದಯಾತ್ರೆ: ಮಧು ಕಿಡಿ

ಶಿವಮೊಗ್ಗ: ಬಿಜೆಪಿ ಪಾದಯಾತ್ರೆ ಮಾಡುತ್ತಿರುವುದು ಜನರ ಸಮಸ್ಯೆಯನ್ನು ಬಗೆಹರಿಸಲು ಅಲ್ಲ. ಕಾಂಗ್ರೆಸ್ ನಾಯಕರನ್ನು ವೈಯಕ್ತಿಕವಾಗಿ ಟೀಕೆ ಮಾಡಲು ಎಂದು ಸಚಿವ ಮಧು ಬಂಗಾರಪ್ಪ ಕುಟುಕಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ವೈ.ವಿಜಯೇಂದ್ರ ಮೋದಿ ಅವರ ಶೈಲಿಯಲ್ಲಿ ಮಾತನಾಡುವುದನ್ನು ಕಲಿತಿದ್ದಾರೆ. ಪಾದಯಾತ್ರೆಯಲ್ಲಿ ಜನರ ಸಮಸ್ಯೆಯನ್ನು ಕೇಳುವುದನ್ನು ಬಿಟ್ಟು, ನಮ್ಮ ನಾಯಕರನ್ನು ಟೀಕೆ ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಅವರನ್ನುಟೀಕೆ ಮಾಡಿತ್ತು. ಈಗ ಕಾಂಗ್ರೆಸ್‍ನಲ್ಲಿ ಬಣ ರಾಜಕೀಯ ಇದೆಯೆಂದು ಕಲ್ಪಿಸಿಕೊಂಡು ಅವರನ್ನು ಹೊಗಳುತ್ತಿದ್ದಾರೆ. ತಲತಲಾಂತರದಿಂದ ಬಿಜೆಪಿ ಇಂತಹ ಒಡೆದು ಆಳುವ ನೀತಿಯನ್ನೇ ಅನುಸರಿಸಿಕೊಂಡು ಬಂದಿದೆ ಎಂದು ಕಿಡಿಕಾರಿದರು.

ಯಡಿಯೂರಪ್ಪನವರು ಬಿಜೆಪಿಯನ್ನು ತಿರಸ್ಕರಿಸಿ ಕೆಜೆಪಿ ಕಟ್ಟಿದ್ದರು. ಈ ಬಗ್ಗೆ ಬಿಜೆಪಿ ಅವರು ಮಾತನಾಡಲಿ. ದೇವರಾಜ ಅರಸು ಅವರ ಭೂ ಯೋಜನೆಯನ್ನು ಕಿತ್ತಾಕಿದವರು ಇದೇ ಯಡಿಯೂರಪ್ಪ ಸರ್ಕಾರ, ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಹಾಳು ಮಾಡಿದ್ದು ಬಸವರಾಜ ಬೊಮ್ಮಾಯಿ ಸರ್ಕಾರ, ಹಸಿರು ಶಾಲು ಹಾಕಿಕೊಂಡು ರೈತರಿಗೆ ಗುಂಡು ಹೊಡೆದಿದ್ದನ್ನು ಮರಿಯಬೇಕಾ? ಯಡಿಯೂರಪ್ಪನವರಿಗೆ ದೇವೇಗೌಡರು ಎಂತಹ ಮಾತುಗಳನ್ನಾಡಿದ್ದಾರೆ ನೀವೆಲ್ಲಾ ಮರೆತ್ತಿದ್ದಿರಾ ಎಂದು ಪ್ರಶ್ನಿಸಿದರು.

ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಬೇಕು. ಇಲ್ಲದೆ ಹೋದರೆ ಬುಡಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ.ಇದನ್ನು ಚುನಾವಣೆಯೊಳಗೆ ಬಗೆ ಹರಿಸುತ್ತೇವೆ ಎಂದರು.

ಕಸ್ತೂರಿರಂಗನ್ ವರದಿಯನ್ನು ರಾಜ್ಯ ಸರ್ಕಾರ ವಿರೋಧ ಮಾಡಿದೆ. ಆದರೆ ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದೆಯೆಲ್ಲಾ ನೀವೇನು ಮಾಡುತ್ತಿದ್ದಿರಾ. ಈ ಕುರಿತು 2016 ಆ. 11ರಂದು ಸಭೆಗೆ ಕರೆದಿದ್ದರಲ್ಲ ಆಗ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಉಡುಪಿ ಮತ್ತು ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ ಯಾಕೆ ಹಾಜರಾಗಿಲ್ಲ. ಎಲ್ಲಿ ಹೋಗಿದ್ದರು. ಬಿ.ವೈ. ವಿಜಯೇಂದ್ರ ಅವರು ಇಂದು ಪಾದಯಾತ್ರೆ ಮಾಡುವ ಮೂಲಕ ರೈತರ ಹೊಲಕ್ಕೆ ಹೋಗುತ್ತಿದ್ದಾರೆ. ಆದರೆ ಇದುವರೆಗೂ ಶಿಕಾರಿಪುರದಲ್ಲಿ ಬಗರ್ ಹುಕುಂ ಸಂಬಂಧಿಸಿದಂತೆ ಎಷ್ಟು ಸಭೆ ಮಾಡಿದ್ದಾರೆ ಎಂದು ಗುಡುಗಿದರು.