ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗಂಗಾವರ ಗ್ರಾಮಕ್ಕೆ ಎರಡು ಮದವೇರಿದ ಕಾಡಾನೆಗಳು ನುಗ್ಗಿ ಆತಂಕ ಸೃಷ್ಟಿಸಿವೆ. ಅವುಗಳನ್ನು ಓಡಿಸಲು ಬಂದ ಇಟಿಎಫ್ ಸಿಬ್ಬಂದಿ ಹಾಗೂ ಗ್ರಾಮಸ್ಥರನ್ನೇ ಅಟ್ಟಾಡಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಹಾಸನ (ಸೆ.8): ಮದವೇರಿದ ಎರಡು ದೈತ್ಯಾಕಾರದ ಕಾಡಾನೆಗಳು ಘೀಳಿಡುತ್ತಾ ಇಟಿಎಫ್ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗಂಗಾವರ ಗ್ರಾಮದಲ್ಲಿ ನಡೆದಿದೆ.
ಕಾರ್ಯಾಚರಣೆಗೆ ಬಂದಿದ್ದ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ!
ಮದವೇರಿದ ಎರಡು ದೈತ್ಯಕಾರಾದ ಆನೆಗಳು ಗಂಗಾವರ ಗ್ರಾಮಕ್ಕೆ ನುಗ್ಗಿ ಆತಂಕ ಸೃಷ್ಟಿಸಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಇಟಿಎಫ್ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಲು ಬಂದಿದ್ದ ಸಿಬ್ಬಂದಿಯನ್ನೇ ಕಾಡಾನೆ ಅಟ್ಟಾಡಿಸಿ ಓಡಿಸಿದೆ. ಕಾಡಾನೆ ದಾಳಿಗೆ ಕಕ್ಕಾಬಿಕ್ಕಿಯಾದ ಇಟಿಎಫ್ ಸಿಬ್ಬಂದಿ ಎದ್ನೋ ಬಿದ್ನೋ ಅಂತಾ ಓಡಿಹೋಗಿದ್ದಾರೆ.
ಇತ್ತ ಕಾಡಾನೆ ಬಂದ ಸುದ್ದಿ ಕೇಳಿ ಗುಂಪುಗೊಂಡಿದ್ದ ಗ್ರಾಮಸ್ಥರ ಮೇಲೂ ಕಾಡಾನೆ ದಾಳಿ ನಡೆಸಲು ಮುಂದಾದಾಗ ಭಯದಿಂದ ನೆರೆದಿದ್ದ ಸ್ಥಳೀಯರು ಕೂಡ ದಿಕ್ಕಪಾಲಾಗಿ ಓಡಿಹೋಗಿದ್ದಾರೆ.
ಪಾಟಕಿಗೆ ಜಗ್ಗದ ಕಾಡಾನೆಗಳು
ಕಾಡಿನಿಂದ ಗ್ರಾಮಕ್ಕೆ ನುಗ್ಗಿರುವ ಎರಡು ಆನೆಗಳನ್ನು ಓಡಿಸಲು ಇಟಿಎಫ್ ಸಿಬ್ಬಂದಿ ಸ್ಥಳೀಯರು ಪಟಾಕಿ ಸಿಡಿಸಿದರೂ ಓಡಿಸಲೆತ್ನಿಸಿದರೂ ಜಗ್ಗದ ಮದಗಜಗಳು. ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಲೇ ಇದ್ದಾರೆ.
ಶಾಲೆಗಳಿಗೆ ರಜೆ ಘೋಷಣೆ
ಗ್ರಾಮಕ್ಕೆ ನುಗ್ಗಿರುವ ಕಾಡಾನೆಗಳು ಶಾಲೆ, ಮನೆಗಳ ಮುಂದೆ ಓಡಾಡುತ್ತಿವೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಗಂಗಾವರ ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಾಡಾನೆಗಳು ನುಗ್ಗಿರುವುದರಿಂದ ಗ್ರಾಮಸ್ಥರು, ಕಾರ್ಮಿಕರು ಹಾಗೂ ಮಹಿಳೆಯರಲ್ಲಿ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ ಈ ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

