ಬೆಳಗಾವಿಯ 24 ಎಕರೆ ಪ್ರದೇಶದಲ್ಲಿ ಬೃಹತ್ ಐಟಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿರುವ ಈ ಯೋಜನೆಯ ಜೊತೆಗೆ, ಆಸ್ಪತ್ರೆ, ಮಹಿಳಾ ಜಿಮ್‌ಗಳು ಮತ್ತು ನಗರ ಸೌಂದರ್ಯೀಕರಣದಂತಹ ಇತರ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಬೆಳಗಾವಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ನಿರ್ಮಿಸುವ ಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಕಣಬರ್ಗಿ ಸ್ಕೀಮ್-61ರ 24 ಎಕರೆ ಪ್ರದೇಶದಲ್ಲಿ 7 ಟವರ್‌ಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯವಾಗಿ ಉದ್ಯೋಗಾವಕಾಶಗಳ ಕೊರತೆಯಿಂದ ಬೆಳಗಾವಿಯ ಯುವಕರು ಉದ್ಯೋಗ ಅರಸಿ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ತೆರಳುವ ಪರಿಸ್ಥಿತಿ ಇದೆ. ನಗರದಲ್ಲಿಯೇ ಐಟಿ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಐಟಿ ಪಾರ್ಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಐಟಿ ಪಾರ್ಕ್‌ಗೆ ಅಗತ್ಯವಿರುವ ಭೂಮಿ, ಮೂಲಸೌಕರ್ಯ ಹಾಗೂ ಇತರ ಸೌಲಭ್ಯಗಳ ಕುರಿತು ಸಮಗ್ರ ರೂಪುರೇಷೆ ಸಿದ್ಧಪಡಿಸಿ, ಮುಂದಿನ ಹಂತದ ಕಾಮಗಾರಿಗಳಿಗೆ ವೇಗ ನೀಡುವಂತೆ ಬುಡಾ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಮೂರು ಹಂತದಲ್ಲಿ ಐಟಿ ಪಾರ್ಕ್
ಕಣಬರ್ಗಿ ಸ್ಕೀಮ್-61ರ 24 ಎಕರೆ ಪ್ರದೇಶದಲ್ಲಿ ಏಳು ಟವರ್‌ಗಳ ಐಟಿ ಪಾರ್ಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 3 ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶವಿದ್ದು, ಮೊದಲ ಹಂತದಲ್ಲಿ 1.8 ಲಕ್ಷ ಚದರ ಅಡಿ ನಿರ್ಮಾಣಕ್ಕೆ ₹75 ಕೋಟಿ, ಎರಡನೇ ಹಂತದಲ್ಲಿ 14.29 ಲಕ್ಷ ಚದರ ಅಡಿಗೆ ₹600 ಕೋಟಿ ಹಾಗೂ ಮೂರನೇ ಹಂತದಲ್ಲಿ 13.77 ಲಕ್ಷ ಚದರ ಅಡಿಗೆ ₹548 ಕೋಟಿ ವೆಚ್ಚ ಅಂದಾಜಿಸಲಾಗಿದೆ.
3 ಹಂತಗಳ ಒಟ್ಟು ಅಂದಾಜು ವೆಚ್ಚ ₹1,223 ಕೋಟಿ ಆಗಲಿದೆ. ಯೋಜನೆ ಪೂರ್ಣಗೊಂಡರೆ ಬೆಳಗಾವಿಯಲ್ಲಿ ಐಟಿ ಹಾಗೂ ಸಂಬಂಧಿತ ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚುವ ನಿರೀಕ್ಷೆಯಿದೆ. ಬೆಳಗಾವಿ ನಗರ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಸತೀಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಸೌಂದರ್ಯೀಕರಣ ಹಾಗೂ ಸಂಚಾರ ವ್ಯವಸ್ಥೆ ಸುಧಾರಣೆಗೆ ಪ್ರಮುಖ ವೃತ್ತಗಳನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ನಗರದ ವಿವಿಧ ಭಾಗಗಳಲ್ಲಿ ಸ್ಮಾರ್ಟ್ ವೃತ್ತಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ವೃತ್ತಗಳ ಅಭಿವೃದ್ಧಿ ಸಂದರ್ಭದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ಸಾರ್ವಜನಿಕರ ಅನುಕೂಲ ಹಾಗೂ ನಗರದ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ನಿರ್ದೇಶನ ನೀಡಿದರು.
ರಸ್ತೆ, ವೃತ್ತ, ಉದ್ಯಾನಗಳು ಸೇರಿದಂತೆ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಬೆಳಗಾವಿಯನ್ನು ಮತ್ತಷ್ಟು ಸುಂದರ, ಸುಸಜ್ಜಿತ ಹಾಗೂ ವ್ಯವಸ್ಥಿತ ನಗರವನ್ನಾಗಿ ರೂಪಿಸಬೇಕು. ಅಭಿವೃದ್ಧಿ ಯೋಜನೆಗಳು ಭವಿಷ್ಯದ ಅಗತ್ಯಗಳಿಗೆ ಪೂರಕವಾಗಿರಬೇಕು ಎಂದರು.
ಬುಡಾ ಅಧ್ಯಕ್ಷ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಐಟಿ ಪಾರ್ಕ್ ಜತೆಗೆ ನಗರದ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಆದ್ಯತೆ ನೀಡಲು ತೀರ್ಮಾನಿಸಲಾಯಿತು.
₹3 ಕೋಟಿ ವೆಚ್ಚದಲ್ಲಿ ಮಹಿಳಾ ಜಿಮ್
ಕುಮಾರಸ್ವಾಮಿ ಲೇಔಟ್‌ನ 18 ಗುಂಟೆ ಜಾಗದಲ್ಲಿ ₹25 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಮತೀರ್ಥ ನಗರದಲ್ಲಿ 12 ಗುಂಟೆ ಪ್ರದೇಶದಲ್ಲಿ ₹7 ಕೋಟಿ ವೆಚ್ಚದಲ್ಲಿ ಜಿ+2 ಮಾದರಿಯ ಕಲ್ಯಾಣ ಮಂಟಪ ಹಾಗೂ 6 ಗುಂಟೆ ಜಾಗದಲ್ಲಿ ₹3 ಕೋಟಿ ವೆಚ್ಚದಲ್ಲಿ ಒಂಬತ್ತು ಅಂಗಡಿಗಳ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.
ನಗರದ ವಿವಿಧ ಭಾಗಗಳಲ್ಲಿ 3 ವಿಶೇಷ ಮಹಿಳಾ ಜಿಮ್‌ಗಳನ್ನು ₹3 ಕೋಟಿ ವೆಚ್ಚದಲ್ಲಿ ಹಾಗೂ 10 ಪ್ರಮುಖ ಜಂಕ್ಷನ್‌ಗಳ ಸುಧಾರಣಾ ಕಾಮಗಾರಿಗಳನ್ನು ₹4 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಸಹ್ಯಾದ್ರಿ ನಗರ ಹಾಗೂ ಮುತ್ಯಾನಟ್ಟಿ ಕೆರೆಗಳ ಅಭಿವೃದ್ಧಿಗೆ ₹11 ಕೋಟಿ ವೆಚ್ಚದ ಯೋಜನೆಯನ್ನೂ ರೂಪಿಸಲಾಗಿದೆ.
ಸಭೆಯಲ್ಲಿ ದಕ್ಷಿಣ ಶಾಸಕ ಅಭಯ್ ಪಾಟೀಲ್, ಬುಡಾ ನಾಮನಿರ್ದೇಶಿತ ಸದಸ್ಯರಾದ ಉಪಮೇಯರ್ ಹನುಮಂತ ಕೊಂಗಾಲಿ, ಸಮೀವುಲ್ಲಾ ಮಾಡಿವಾಲೆ, ಪುಷ್ಪಾ ಪರ್ವತರಾವ್, ಬುಡಾ ಆಯುಕ್ತ ಶಕೀಲ್ ಅಹ್ಮದ್ ಸೇರಿದಂತೆ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.


