ರಾಜ್ಯದಲ್ಲಿನ ಮಳೆಯ ತೀವ್ರ ಕೊರತೆ ಮತ್ತು ತಮಿಳುನಾಡಿಗೆ ನೀರು ಹರಿಸುವ ಒತ್ತಡದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಮಳೆಗಾಗಿ ಕೊಡಗಿನ ಪಾಡಿ ಶ್ರೀ ಇಗ್ಗುತ್ತಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದೆ. ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದಲ್ಲಿ ನಡೆದ ರುದ್ರಾಭಿಷೇಕದಲ್ಲಿ, ನಾಡಿನಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿ ಸಮೃದ್ಧಿಯಾಗಲೆಂದು ಪ್ರಾರ್ಥಿಸಲಾಯಿತು.

ಕೊಡಗು: ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಇರುವುದು ಒಂದೆಡೆಯಾದರೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಮಿಳನಾಡಿಗೆ ನಿತ್ಯ ನೀರು ಹರಿಸಬೇಕಾಗಿರುವ ಸಂದಿಗ್ಧ ಪರಿಸ್ಥಿತಿ ಮತ್ತೊಂದೆಡೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಳೆಗಾಗಿ ದೇವರ ಮೊರೆ ಹೋಗಿದೆ. ಮಳೆ ದೇವರೆಂದೇ ಖ್ಯಾತಿಯಾಗಿರುವ ಕೊಡಗಿನ ಕುಲದೇವರು ಪಾಡಿ ಈಶ್ವರ ಇಗ್ಗುತಪ್ಪ ದೇವರ ಮೊರೆ ಹೋಗಿದೆ.

ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ಸರ್ಕಾರದ ಮಹಾಪ್ರಾರ್ಥನೆ!

ಸಿಎಂ ಡಿ.ಕೆ. ಶಿವಕುಮಾರ್ ನಿರ್ದೇಶನದಂತೆ ಮಳೆದೇವರು ಪಾಡಿ ಈಶ್ವರ ಇಗ್ಗುತ್ತಪ್ಪ ದೇವರಿಗೆ ಇಂದು ಕೃಷಿ ಸಚಿವ ನರೇಂದ್ರ ಸ್ವಾಮಿ ಅವರ ನೇತೃತ್ವದಲ್ಲಿ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ ಆರು ಗಂಟೆಗೆ ವಿರಾಜಪೇಟೆ ತಾಲ್ಲೂಕಿನಲ್ಲಿರುವ ಮಲ್ಮ ಬೆಟ್ಟದಲ್ಲಿ ನೆಲೆಸಿರುವ ಪಾಡಿ ಈಶ್ವರ ಇಗ್ಗುತ್ತಪ್ಪ ದೇವಾಲಯಕ್ಕೆ ಆಗಮಿಸಿದ ಕೊಡಗು ಉಸ್ತುವಾರಿ ಸಚಿವರೂ ಆಗಿರುವ ಪಿ.ಎಂ. ನರೇಂದ್ರಸ್ವಾಮಿ ಅವರು ಸಿಎಂ ರಾಜಕೀಯ ಕಾರ್ಯದರ್ಶಿಯೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ಗೌಡರೊಂದಿಗೆ ಆಗಮಿಸಿ ದೇವಾಲಯದ ಪ್ರದಕ್ಷಿಣೆ ಹಾಕಿದರು.

ಬಳಿಕ ಅರ್ಚಕ ಕುಶಾಲ್ ಭಟ್ ಅವರು ರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿದರು. ನಾಡಿನಾದ್ಯಂತ ಹೆಚ್ಚಿನ ಮಳೆಯಿಂದ ಜಲಾಶಯಗಳು ಭರ್ತಿಯಾಗಿ, ಅಧಿಕ ಬೆಳೆಯಾಗಿ ಎಲ್ಲರಲ್ಲಿಯೂ ಸಮೃದ್ಧಿ, ಸಂತಸ ತರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ವತಿಯಿಂದ ಹೆಚ್ಚಿನ ಮಳೆಗಾಗಿ ಪುಣ್ಯಕ್ಷೇತ್ರ ಪಾಡಿ ಶ್ರೀ ಈಶ್ವರ ಇಗ್ಗುತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಲಾಗಿದೆ. ತಾಯಿ ಕಾವೇರಿ ಹಾಗೂ ಪಾಡಿ ಶ್ರೀ ಇಗ್ಗುತಪ್ಪ ಪುಣ್ಯಭೂಮಿಯಲ್ಲಿ ಹೆಚ್ಚಿನ ಮಳೆಯಾದಲ್ಲಿ ನಾಡಿನ ಜಲಾಶಯಗಳು ಭರ್ತಿಯಾಗಿ, ಉತ್ತಮ ಬೆಳೆ ಜತೆಗೆ, ಕುಡಿಯಲು ನೀರು ಸಿಗಲಿದೆ. ಹೀಗಾಗಿ ಕಾವೇರಿ ಮತ್ತು ಇಗ್ಗುತಪ್ಪ ನಾಡಿನಲ್ಲಿ ಮುಂದಿನ ದಿನಗಳಲ್ಲಿಯಾದರೂ ಹೆಚ್ಚಿನ ಮಳೆಯಾಗಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.

ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಅಗತ್ಯ

ನಾಡಿನ ಎಲ್ಲೆಡೆ ಮಳೆ ಸುರಿದು, ಜನ-ಜಾನುವಾರುಗಳಿಗೆ ಕುಡಿಯಲು ನೀರು, ಬೆಳೆ ಮತ್ತು ಮೇವು ದೊರೆಯುವಂತಾಗಿ ಸುಭಿಕ್ಷೆ ತರುವಂತಾಗಲಿ. ಕಾವೇರಿ ನದಿ ಪಾತ್ರದಲ್ಲಿ ಸರಾಸರಿ ಮಳೆ ಆಗುವುದರಿಂದ ಅಂತರಾಜ್ಯ ಜಲ ವಿವಾದಗಳು ಇತ್ಯರ್ಥವಾಗಿ, ಶೇ.90 ರಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.

ಸರ್ಕಾರ ಎಲ್ಲರ ವಿಶ್ವಾಸ ಗಳಿಸಿ, ನಂಬಿಕೆಯಿಂದ ಕಾರ್ಯ ನಿರ್ವಹಿಸುವಲ್ಲಿ ಶುಭ ಹೆಜ್ಜೆ ಇಟ್ಟಿದೆ. ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಅಗತ್ಯ. ಆ ದಿಸೆಯಲ್ಲಿ ದೇವರಲ್ಲಿ ಹೆಚ್ಚಿನ ಮಳೆಗಾಗಿ ಪ್ರಾರ್ಥಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಭಕ್ತ ಜನ ಸಮಿತಿ ಅಧ್ಯಕ್ಷರಾದ ಪರದಂಡ ಸುಮನ್ ಸುಬ್ರಮಣಿ ಅವರು ಮುಂದೆ ನಿಂತು ದೇವರ ವಿವಿಧ ಪೂಜಾ ಕೈಂಕರ್ಯಗಳ ನೆರವೇರಿಸಿದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಇದ್ದರು. (ವರದಿ: ರವಿ. ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)