ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರು ತಮ್ಮ ವಾರ್ಷಿಕ ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಹಸು-ಕುರಿಗಳ ಸಂಖ್ಯೆ, ಜಯಂತ್ ಚೌಧರಿ ಅವರ ಕ್ರಿಪ್ಟೋ ಹೂಡಿಕೆ ಹಾಗೂ ಹಳೆಯ ವಾಹನಗಳ ಮೇಲಿನ ಸಚಿವರ ಒಲವು ಬಹಿರಂಗವಾಗಿದೆ.

ನವದೆಹಲಿ (ಸೆ.16): ಕೇಂದ್ರ ಸಚಿವರು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ (PMO) ಮಾರ್ಚ್ 31 ಕ್ಕೆ ಕೊನೆಗೊಂಡಂತೆ ಸಲ್ಲಿಸಿರುವ ವಾರ್ಷಿಕ ಆಸ್ತಿ ಘೋಷಣಾ ವರದಿಯಲ್ಲಿ ಅವರ ಹೊಸ ಆಸ್ತಿ-ಪಾಸ್ತಿಗಳು, ಐಷಾರಾಮಿ ಹಾಗೂ ವಿಶಿಷ್ಟ ವಸ್ತುಗಳ ಸ್ವಾರಸ್ಯಕರ ವಿವರಗಳು ಹೊರಬಿದ್ದಿವೆ. ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ಹಸು ಮತ್ತು ಕುರಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಮಾತ್ರವಲ್ಲದೆ, 2015-26ರಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿಗೆ ಡೈಮಂಡ್‌ ನಕ್ಲೇಸ್‌ ಗಿಫ್ಟ್‌ ಮಾಡಿರುವ ವಿಚಾರವೂ ಹೊರಬಿದ್ದಿದೆ. ಇನ್ನು ಸಚಿವ ಜಯಂತ್ ಚೌಧರಿ ಅವರ ಕ್ರಿಪ್ಟೋ ಹೂಡಿಕೆ ಮೌಲ್ಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದರೆ, ಗಜೇಂದ್ರ ಸಿಂಗ್ ಶೇಖಾವತ್ ತಮ್ಮ ಪತ್ನಿಗೆ ಪಿಸ್ತೂಲ್ ಉಡುಗೊರೆ ನೀಡಿದ್ದಾರೆ. ಸಿ.ಆರ್. ಪಾಟೀಲ್ ಸಚಿವರಾದ ನಾಲ್ಕೇ ತಿಂಗಳಲ್ಲಿ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಪ್ರಧಾನಮಂತ್ರಿ ಹಾಗೂ ಅವರ ಸಂಪುಟದ ಸಚಿವರು, ಅವರ ಪತ್ನಿ ಮತ್ತು ಆಶ್ರಿತರ ಆಸ್ತಿ ವಿವರಗಳನ್ನು ಪ್ರತಿವರ್ಷ ಸಾರ್ವಜನಿಕ ಮಾಹಿತಿಗಾಗಿ ಪಿಎಂಒ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಆಸ್ತಿ ವಿವರ

ಪ್ರಧಾನಿ ನರೇಂದ್ರ ಮೋದಿ ಅವರ ಒಟ್ಟು ಆಸ್ತಿ ಮೌಲ್ಯವು ₹3.43 ಕೋಟಿಯಿಂದ ₹4.01 ಕೋಟಿಗೆ ಏರಿಕೆಯಾಗಿದೆ. ಪ್ರಧಾನಿ ಅವರ ಬ್ಯಾಂಕ್ ಫಿಕ್ಸ್ಡ್ ಡೆಪಾಸಿಟ್‌ಗಳು (FD) ₹3.26 ಕೋಟಿಯಿಂದ ₹3.79 ಕೋಟಿಗೆ ಏರಿಕೆಯಾಗಿರುವುದೇ ಈ ಆಸ್ತಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ತಾವು ದೀರ್ಘಕಾಲದಿಂದ ಧರಿಸುತ್ತಿರುವ 4 ಚಿನ್ನದ ಉಂಗುರಗಳು ತಮ್ಮ ಬಳಿ ಇರುವುದಾಗಿ ಮೋದಿ ಘೋಷಿಸಿದ್ದಾರೆ.

ಹಳೆಯ ವಾಹನಗಳ ಮೇಲಿನ ಪ್ರೀತಿ & ನೂತನ ಕಾರುಗಳು

ಆಸ್ತಿ ವರದಿಯ ವಿಶ್ಲೇಷಣೆಯ ಪ್ರಕಾರ, ಕೆಲ ಸಚಿವರು ತಮ್ಮ ದಶಕಗಳಷ್ಟು ಹಳೆಯ ವಾಹನಗಳನ್ನು ಮಾರಾಟ ಮಾಡಲು ಮನಸ್ಸು ಮಾಡಿಲ್ಲ. ನಿತಿನ್ ಗಡ್ಕರಿ ಅವರ ಬಳಿ 1994 ರ ಮಾಡೆಲ್ ಅಂಬಾಸಿಡರ್ ಕಾರು ಇಂದಿಗೂ ಇದ್ದರೆ, ಶಿವರಾಜ್ ಸಿಂಗ್ ಚೌಹಾಣ್ 2000 ರ ಮಾಡೆಲ್ ಕಾರನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಇನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 18 ವರ್ಷಗಳಷ್ಟು ಹಳೆಯ ಬಜಾಜ್ ಚೇತಕ್ ಸ್ಕೂಟರ್ ಹೊಂದಿದ್ದಾರೆ. ವೀರೇಂದ್ರ ಕುಮಾರ್ 37 ವರ್ಷಗಳಷ್ಟು ಹಳೆಯ ಸ್ಕೂಟರ್ ಒಡೆಯರಾಗಿದ್ದಾರೆ. ಜಿ. ಕಿಶನ್ ರೆಡ್ಡಿ 1995 ರ ಮಾಡೆಲ್ ಮಾರುತಿ 800 ಕಾರು ಹೊಂದಿದ್ದಾರೆ. ಜುಯಲ್ ಓರಾಮ್ 1986 ರ ವೆಸ್ಪಾ ಸ್ಕೂಟರ್ ಮತ್ತು 1991 ರ ಜೀಪ್ ಕಾರನ್ನು ಕಾಯ್ದುಕೊಂಡಿದ್ದಾರೆ. ನಟ ಹಾಗೂ ಸಚಿವ ಸುರೇಶ್ ಗೋಪಿ ಮತ್ತು ಇವರ ಪತ್ನಿ ಜಂಟಿಯಾಗಿ ₹3.26 ಕೋಟಿ ಮೌಲ್ಯದ 11 ವಾಹನಗಳನ್ನು ಹೊಂದಿದ್ದು, ಇದರಲ್ಲಿ ತಮಿಳುನಾಡಿನಲ್ಲಿ ನೋಂದಾಯಿತ 1999 ರ ಮಾಡೆಲ್ ಟ್ರ್ಯಾಕ್ಟರ್ ಕೂಡ ಸೇರಿದೆ.

ಸಿ.ಆರ್. ಪಾಟೀಲ್ 2024 ರ ಅಕ್ಟೋಬರ್ 2 ರಂದು ₹2.95 ಕೋಟಿ ಮೌಲ್ಯದ ರೇಂಜ್ ರೋವರ್ ಕಾರನ್ನು ಖರೀದಿಸಿದ್ದಾರೆ. ಇವರ ಬಳಿ ಸ್ಪೋರ್ಟ್ಸ್‌ ಕಾರ್‌ ಮತ್ತು ಟ್ರ್ಯಾಕ್ಟರ್ ಕೂಡ ಇದೆ.

ಕುಮಾರಸ್ವಾಮಿ, ಮಾಂಝಿ, ರೈ ಬಳಿ ಇರುವ ರಾಸುಗಳ ಪಟ್ಟಿ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಆಸ್ತಿ ಪಟ್ಟಿಯಲ್ಲಿ ಜಾನುವಾರುಗಳ (Livestock) ವಿವರವನ್ನು ಉಲ್ಲೇಖಿಸಿದ್ದಾರೆ. ಕುಮಾರಸ್ವಾಮಿ ಅವರ ಬಳಿ ಇದ್ದ ಹಸುಗಳ ಸಂಖ್ಯೆ 20 ರಿಂದ 34 ಕ್ಕೆ ಹಾಗೂ ಕುರಿಗಳ ಸಂಖ್ಯೆ 52 ರಿಂದ 273 ಕ್ಕೆ ಏರಿಕೆಯಾಗಿದೆ. 2025-26 ರಲ್ಲಿ ಇವುಗಳ ಒಟ್ಟು ಮೌಲ್ಯ ಸುಮಾರು ₹12.54 ಲಕ್ಷ ಆಗಿದೆ. ಇದರ ಹೊರತಾಗಿ ಇವರ ಬಳಿ ಟ್ರೆಡ್‌ಮಿಲ್ (Treadmill) ಇದ್ದು, ಪತ್ನಿ ಅನಿತಾ ಅವರಿಗೆ 2025-26 ರಲ್ಲಿ ವಜ್ರದ ಹಾರ ಉಡುಗೊರೆಯಾಗಿ ಸಿಕ್ಕಿದೆ. ಜಿತನ್ ರಾಮ್ ಮಾಂಝಿ ಇವರ ಬಳಿ ಯಾವುದೇ ಬದಲಾವಣೆಯಿಲ್ಲದೆ 4 ಹಸುಗಳು ಮತ್ತು 3 ಕರುಗಳಿವೆ.

ನಿತ್ಯಾನಂದ್ ರೈ ಅವರ ಬಳಿ 14 ಹಸು, 10 ಕರು, 12 ಎಮ್ಮೆ ಹಾಗೂ 9 ಎಮ್ಮೆ ಕರುಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ಇವರ ಬಳಿ ₹2.31 ಕೋಟಿ ಮೌಲ್ಯದ 4,638 ಶ್ರೀಗಂಧ, ಮರಮಟ್ಟು, ಮಾವು, ಲಿಚಿ ಮತ್ತು ಇತರ ಮರಗಳಿವೆ. ಆರು ವರ್ಷಗಳ ಹಿಂದೆ ಇವರ ಬಳಿ ₹2.94 ಕೋಟಿ ಮೌಲ್ಯದ 6,293 ಮರಗಳಿದ್ದವು.

ಕ್ರಿಪ್ಟೋ, ಕಲಾಕೃತಿ, ಗ್ಲೈಡರ್ ಹಾಗೂ ಶಸ್ತ್ರಾಸ್ತ್ರಗಳ ಭಂಡಾರ!

ಜಯಂತ್ ಚೌಧರಿ ಹಾಗೂ ಇವರ ಪತ್ನಿ ಚಾರು ಸಿಂಗ್ ಅವರ ಕ್ರಿಪ್ಟೋಕರೆನ್ಸಿ (Cryptocurrency) ಹೂಡಿಕೆ ಮೌಲ್ಯವು ₹43.46 ಲಕ್ಷದಿಂದ ₹45.62 ಲಕ್ಷಕ್ಕೆ ಏರಿಕೆಯಾಗಿದೆ. ಇವರ ಬಳಿ ₹2.39 ಕೋಟಿ ಮೌಲ್ಯದ ಚಿತ್ರಕಲೆ ಹಾಗೂ ಅಪರೂಪದ ಕಲಾಕೃತಿಗಳಿವೆ.

ಕೀರ್ತಿವರ್ಧನ್ ಸಿಂಗ್ ಬಳಿ ₹18.48 ಲಕ್ಷ ಮೌಲ್ಯದ ಪವರ್ಡ್ ಹ್ಯಾಂಗ್ ಗ್ಲೈಡರ್ (Powered hang glider) ಜೊತೆಗೆ ಪಿಸ್ತೂಲ್ ಮತ್ತು ರೈಫಲ್ ಇದೆ. ಜಿತೇನ್ ಪ್ರಸಾದ್ ಬಳಿ ₹25,000 ಮೌಲ್ಯದ ಶಿಕಾರಿ ಚಾಕು (Hunting dagger) ಹಾಗೂ ಪತ್ನಿಯೊಂದಿಗೆ ಜಂಟಿಯಾಗಿ ಪಿಸ್ತೂಲ್, ಗನ್ ಮತ್ತು ರೈಫಲ್ ಇದೆ.

ಗಜೇಂದ್ರ ಸಿಂಗ್ ಶೇಖಾವತ್ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಮೂರು ವರ್ಷಗಳ ಹಿಂದೆ ತಮ್ಮ ಪತ್ನಿಗೆ ಪಿಸ್ತೂಲ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಉಳಿದಂತೆ ರಾಜೀವ್ ರಂಜನ್ 'ಲಲನ್' ಸಿಂಗ್, ಅನ್ನಪೂರ್ಣ ದೇವಿ, ಕಿಶನ್ ಪಾಲ್, ಸಾವಿತ್ರಿ ಠಾಕೂರ್, ನಿತ್ಯಾನಂದ್ ರೈ, ಎಸ್.ಪಿ. ಸಿಂಗ್ ಬಘೇಲ್ ಮತ್ತು ಬಿ.ಎಲ್. ವರ್ಮಾ ಅವರ ಬಳಿ ಡಬಲ್ ಬ್ಯಾರಲ್ ಗನ್ ಸೇರಿದಂತೆ ವಿವಿಧ ಅಸ್ತ್ರಗಳು ಇವೆ.