2006ರ ಉಪ ಚುನಾವಣೆಯಲ್ಲಿ ಸಣ್ಣ ತಪ್ಪುಗಳಿಂದ ಸೋಲಾಯಿತು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಮರಿಸಿಕೊಂಡರು. ಜೆಡಿಎಸ್ ಪಕ್ಷವು ಇಡೀ ರಾಜ್ಯದಲ್ಲಿ ಸುಭದ್ರವಾಗಿದ್ದು, ಪಕ್ಷವನ್ನು ರಾಜ್ಯವ್ಯಾಪಿ ಕಟ್ಟಲು ಶ್ರಮಿಸುತ್ತಿರುವುದಾಗಿ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಮೈಸೂರು: 2006ರ ಉಪ ಚುನಾವಣೆಯಲ್ಲಿ ನಮ್ಮ ನಾಯಕರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಇಂದು ಕರ್ನಾಟಕ ಈ ಪರಿಸ್ಥಿತಿಗೆ ಬರುತ್ತಿರಲಿಲ್ಲ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯ, ತಪ್ಪುಗಳಿಂದ ಅಂದು ಸೋಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಆದರೆ, ಅಂದಿನಿಂದ ಅವಿನಾಭಾವ ಸಂಬಂಧ ಈ ಕ್ಷೇತ್ರದ ಮೇಲಿದೆ. ನಿಮ್ಮ ಕುಟುಂಬದ ಮಗನೋ, ಅಣ್ಣನೋ, ತಮ್ಮನೋ ಎಂಬಂತೆ ನನ್ನನ್ನು ಕಾಪಾಡಿದ್ದೀರಿ. ನಿಮ್ಮ ಶಕ್ತಿಯನ್ನು ನಿಮಗೆ ಧಾರೆ ಎರೆಯುವ ಕೆಲಸ ಮಾಡಿದ್ದೇನೆ. ಮುಂದೆಯೂ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ ಎಂದು ತಿಳಿಸಿದರು.

ಈ ಕ್ಷೇತ್ರ ವ್ಯಕ್ತಿಯಿಂದ ಗೆದ್ದಿಲ್ಲ. ಈ ಗೆಲುವು ನಿಮಗೆ ಸೇರಬೇಕು. 2028ರ ಚುನಾವಣೆಯಲ್ಲಿಯೂ ಕೂಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮ ಆಶೀರ್ವಾದದಿಂದ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಜಿ.ಡಿ.ಹರೀಶ್‌ಗೌಡ ಅವರು ಪಕ್ಷ ಸಂಘಟಿಸುತ್ತಿದ್ದಾರೆ. ಸಾ.ರಾ.ಮಹೇಶ್ ಮಾರ್ಗದರ್ಶನದಲ್ಲಿ ಗೊಂದಲದ ಅಗತ್ಯವಿಲ್ಲ. ಎಲ್ಲಿ ಏನು ತೀರ್ಮಾನಿಸಬೇಕೆಂದು ನನಗೆ ಗೊತ್ತಿದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ನಂಜನಗೂಡು ಕ್ಷೇತ್ರವನ್ನು ಹೊರತುಪಡಿಸಿ ಬೇರೆ ಎಲ್ಲಾ ಕ್ಷೇತ್ರದಲ್ಲಿಯೂ ಜನರೊಂದಿಗೆ ಜನತಾದಳ ಕಾರ್ಯಕ್ರಮ ಮಾಡಿದ್ದೇವೆ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆಶೀರ್ವಾದ ಮಾಡಿದರೆ, ನನಗೆ ಚಾಮುಂಡೇಶ್ವರಿ ಕ್ಷೇತ್ರದ ಜನರ ಆಶೀರ್ವಾದ ಇದೆ. ನಾನು ಉದ್ಬೂರು, ರಮ್ಮನಹಳ್ಳಿ ಜನರನ್ನು ನೆನಪಿಸಿಕೊಳ್ಳುತ್ತೇನೆ. 2006ರ ಉಪ ಚುನಾವಣೆ ಸ್ಮರಣೀಯ. ಅದನ್ನು ನಾವು ನಡೆಸಿದ್ದಲ್ಲ, ಕಾರ್ಯಕರ್ತರು ನಡೆಸಿದ್ದು ಎಂದು ಅವರು ಹೇಳಿದರು.
ಜೆಡಿಎಸ್ ಇಡೀ ರಾಜ್ಯದಲ್ಲಿ ಸುಭದ್ರ: ನಿಖಿಲ್ ಸ್ಪಷ್ಟನೆ
ಜೆಡಿಎಸ್ ಪಕ್ಷ ಹಳೇ ಮೈಸೂರು ಭಾಗಕ್ಕೆ ಸೀಮಿತವಾಗಿಲ್ಲ. ಇಡೀ ರಾಜ್ಯದಲ್ಲಿ ಜನತಾದಳ ಸುಭದ್ರವಾಗಿದೆ. ರಾಜ್ಯದ ಜನರ ಒಲವು ಜೆಡಿಎಸ್ ಪಕ್ಷದ ಮೇಲಿದೆ ಎಂದು ರಾಜ್ಯ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ನಮ್ಮ ಪಕ್ಷ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಇದೆ. ರಾಜ್ಯದ ಜನರ ಒಲವು ಜೆಡಿಎಸ್ ಪಕ್ಷದ ಮೇಲಿದೆ ಎಂದ ಅವರು, 2023ರ ಚುನಾವಣೆಯಲ್ಲಿ ಜನತಾದಳಕ್ಕೆ 19 ಸ್ಥಾನ ಲಭಿಸಿದೆ. ಪಂಚರತ್ನ ಕಾರ್ಯಕ್ರಮಗಳ ಮೂಲಕ ಕುಮಾರಸ್ವಾಮಿ ಅವರು ಸಾಕಷ್ಟು ಪ್ರಯತ್ನ ಮಾಡಿದರೂ ಅದಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ. ನಾನು ಇಡೀ ರಾಜ್ಯವ್ಯಾಪಿ ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಹಗಲಿರುಳು ಶ್ರಮ ವಹಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
2028ರ ಚುನಾವಣಾ ಫಲಿತಾಂಶದ ಬಳಿಕ ಯಾರು ಸಿಎಂ ಆಗಬೇಕು ಎನ್ನುವುದನ್ನು ನಾನು ಈಗ ಹೇಳುವುದಿಲ್ಲ. ಕುಮಾರಸ್ವಾಮಿ ಅವರು ಅಲ್ಪಾವಧಿ ಸಿಎಂ ಆಗಿದ್ದಾಗ ಕೊಟ್ಟ ಆಡಳಿತವನ್ನು ಇಂದಿಗೂ ಜನ ನೆನೆಸಿಕೊಳ್ಳುತ್ತಾರೆ. ಹಾಗಾಗಿ ಸಿಎಂ ಕುರ್ಚಿ ಮುಖ್ಯವಲ್ಲ, ನಾಡಿನ ಅಭಿವೃದ್ಧಿ ಮುಖ್ಯ ಎಂದು ನಿಖಿಲ್ ತಿಳಿಸಿದರು.
ಅನಿರೀಕ್ಷಿತ ಬೆಳವಣಿಗೆಯಿಂದ ಕುಮಾರಸ್ವಾಮಿ ಅವರು ಲೋಕಸಭೆಗೆ ಹೋಗಬೇಕಾಯಿತು. ಅಧಿಕಾರ ಇರಲಿ, ಇಲ್ಲದಿರಲಿ ಕುಮಾರಸ್ವಾಮಿ ಅವರು ಯಾವಾಗಲೂ ರೈತ, ದೀನ ದಲಿತರ ಪರವಾಗಿರುತ್ತಾರೆ. ಅವರನ್ನು ಪ್ರತಿನಿತ್ಯ ಕಾಣುವವರು ರೈತ, ಮಧ್ಯಮ ವರ್ಗದ ಜನ. ಈ ಕಾರಣದಿಂದಲೇ ಕುಮಾರಸ್ವಾಮಿ ಅವರು ಬಂದಾಗ ನೀವು ತೋರಿಸುವ ಪ್ರೀತಿ ಏನು ಎನ್ನುವುದು ಗೊತ್ತಾಗುತ್ತದೆ ಎಂದು ನಿಖಿಲ್ ಹೇಳಿದರು.


