ಟಾಟಾ ಸನ್ಸ್ ಅನ್ನು ಶೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವಂತೆ ಆರ್‌ಬಿಐ ನೀಡಿದ ಆದೇಶ ಮತ್ತು ಸರ್ ರತನ್ ಟಾಟಾ ಟ್ರಸ್ಟ್ (SRTT) ಮಂಡಳಿ ಸಭೆಗಳ ಮೇಲಿನ ತಡೆಯಾಜ್ಞೆಯಿಂದಾಗಿ ಟಾಟಾ ಸಮೂಹವು ದ್ವಿಮುಖ ಕಾನೂನು ಸವಾಲನ್ನು ಎದುರಿಸುತ್ತಿದೆ. ಈ ಎರಡೂ ವಿಷಯಗಳನ್ನು ಪ್ರಶ್ನಿಸಿ, ಟಾಟಾ ಟ್ರಸ್ಟ್‌ಗಳು ಮತ್ತು ಟಾಟಾ ಸನ್ಸ್ ಬಾಂಬೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಸಜ್ಜಾಗಿವೆ.

ಟಾಟಾ ಸಮೂಹದ ಪ್ರಮುಖ ಅಂಗ ಸಂಸ್ಥೆಯಾದ 'ಟಾಟಾ ಸನ್ಸ್' ಅನ್ನು ನಿಯಂತ್ರಿಸುವ 'ಟಾಟಾ ಟ್ರಸ್ಟ್ಸ್' ಇದೀಗ ಒಂದೇ ಬಾರಿಗೆ ಎರಡು ದೊಡ್ಡ ಕಾನೂನು ಸವಾಲುಗಳನ್ನು ಎದುರಿಸಲು ಸಜ್ಜಾಗಿದೆ. ಒಂದೆಡೆ, ಟಾಟಾ ಸನ್ಸ್ ಸಂಸ್ಥೆಯನ್ನು ತಕ್ಷಣವೇ ಶೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವಂತೆ (IPO) ಸೆಪ್ಟೆಂಬರ್ 11 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಟ್ರಸ್ಟ್ ಮುಂದಾಗಿದೆ. ಮತ್ತೊಂದೆಡೆ, ಟಾಟಾ ಸನ್ಸ್‌ನಲ್ಲಿ ಶೇ. 23.57 ರಷ್ಟು ಪಾಲು ಹೊಂದಿರುವ ಎರಡನೇ ಅತಿದೊಡ್ಡ ಟ್ರಸ್ಟ್ 'ಸರ್ ರತನ್ ಟಾಟಾ ಟ್ರಸ್ಟ್' (SRTT) ತನ್ನ ಮಂಡಳಿ ಸಭೆಗಳನ್ನು ನಡೆಸದಂತೆ ವಿಧಿಸಲಾಗಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ದತ್ತಿ ಆಯುಕ್ತರಿಗೆ ನಿರ್ದೇಶನ ಕೋರಲು ಸಿದ್ಧತೆ ಮಾಡಿದೆ.

ಮಾರ್ಚ್ 2024 ರಲ್ಲಿ ಟಾಟಾ ಸನ್ಸ್ ತನ್ನ 'NBFC-CIC' (ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿ) ಪರವಾನಗಿಯನ್ನು ಹಿಂತಿರುಗಿಸಲು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆರ್‌ಬಿಐ, ಈ ಐಪಿಒ ನಿರ್ದೇಶನ ನೀಡಿದೆ. ಈ ಬೆಳವಣಿಗೆಯು ಟಾಟಾ ಸನ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರನ್ನು ಸಂದಿಗ್ಧ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.

ಮಂಡಳಿ ಸಭೆಗೆ ತಡೆಯಾಜ್ಞೆ

SRTT ಮಂಡಳಿ ಸಭೆಗಳ ಮೇಲಿನ ತಡೆಯಾಜ್ಞೆ ತೆರವುಗೊಳ್ಳದ ಹೊರತು, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಉತ್ತರಾಧಿಕಾರದ ಆಯ್ಕೆ ಹಾಗೂ ಪ್ರಸ್ತಾವಿತ ಐಪಿಒ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಟಾಟಾ ಸನ್ಸ್‌ನ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ಮಂಡಳಿ ನಿರ್ಧಾರವೂ ಸರ್ವಾನುಮತದಿಂದಲೇ ಆಗಬೇಕು. ಸೆಪ್ಟೆಂಬರ್ 17 ರಂದು ಟಾಟಾ ಸನ್ಸ್ ಮಂಡಳಿಯ ನಿರ್ಣಾಯಕ ಸಭೆ ನಡೆಯಲಿದ್ದು, ಒಂದೇ ಬಾರಿಗೆ ಮೂರು ಪ್ರಮುಖ ಸವಾಲುಗಳು ಎದುರಾಗಿವೆ. ಆರ್‌ಬಿಐ ನೀಡಿದ ಐಪಿಒ , ಚಂದ್ರಶೇಖರನ್ ಅವರ ನಂತರದ ಉತ್ತರದಾಯಿತ್ವ ಯಾರಿಗೆ ಎಂಬ ಅನಿಶ್ಚಿತತೆ, SRTT ಯಲ್ಲಿ ಮುಂದುವರಿದಿರುವ ಆಡಳಿತ ಬಿಕ್ಕಟ್ಟು.

ಬಾಂಬೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಸಾಧ್ಯತೆ

ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ತುರ್ತಾಗಿ ಕಾನೂನು ಹೋರಾಟ ನಡೆಸುವುದು ಒಂದೇ ಪರಿಹಾರ ಎಂದು ತೀರ್ಮಾನಿಸಿದ್ದು, ಟ್ರಸ್ಟ್‌ಗಳು ಹಾಗೂ ಟಾಟಾ ಸನ್ಸ್ ನ್ಯಾಯಾಲಯದ ಮೊರೆ ಹೋಗುವುದು ಪಕ್ಕಾ ಆಗಿದೆ. ಆರ್‌ಬಿಐ ನೀಡಿದ ಐಪಿಒ ಆದೇಶವನ್ನು ರದ್ದುಗೊಳಿಸಲು ಜಂಟಿ ರಿಟ್ ಅರ್ಜಿ ಮತ್ತು ಟ್ರಸ್ಟ್‌ಗಳ ಪರವಾಗಿ ಮತ್ತೊಂದು ಅರ್ಜಿಯನ್ನು ಈ ವಾರದ ಕೊನೆಯಲ್ಲಿ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆಯಿದೆ. ತಿದ್ದುಪಡಿ ಮಾಡಿದ ನಿಯಮಗಳನ್ನು ಪೂರ್ವಾಪರ ಅನ್ವಯವಾಗುವಂತೆ ಜಾರಿಗೆ ತರುತ್ತಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಬಲ್ಲ ಮೂಲಗಳು ತಿಳಿಸಿವೆ.

ಟ್ರಸ್ಟ್ ಮೇಲಿನ ತಡೆಯಾಜ್ಞೆಗೆ ಕಾರಣವೇನು?

ಸಾರ್ವಜನಿಕ ದತ್ತಿ ಟ್ರಸ್ಟ್‌ಗಳನ್ನು ನಿಯಂತ್ರಿಸುವ ತಿದ್ದುಪಡಿ ನಿಯಮಗಳ ಪ್ರಕಾರ, ಟ್ರಸ್ಟಿಗಳಲ್ಲಿ ಕೇವಲ ಕಾಲು ಭಾಗದಷ್ಟು (ಶೇ. 25) ಜನರು ಮಾತ್ರ ಅಜೀವ ಸದಸ್ಯರಾಗಿರಬೇಕು. ಆದರೆ, SRTT ಯ ಒಟ್ಟು ಆರು ಟ್ರಸ್ಟಿಗಳಲ್ಲಿ ಅರ್ಧದಷ್ಟು (ಶೇ. 50) ಜನರು ಜೀವಿತಾವಧಿ ಸದಸ್ಯರಾಗಿದ್ದಾರೆ. ನೋಯೆಲ್ ಟಾಟಾ, ಜಿಮ್ಮಿ ಟಾಟಾ ಮತ್ತು ಜೆಹಾಂಗೀರ್ ಎಚ್.ಸಿ. ಜಹಾಂಗೀರ್ ಅವರು ಈ ನಿಯಮ ಜಾರಿಗೆ ಬರುವ ಹಲವು ವರ್ಷಗಳ ಮೊದಲೇ ಜೀವಿತಾವಧಿ ಟ್ರಸ್ಟಿಗಳಾಗಿ ನೇಮಕಗೊಂಡಿದ್ದರು. ಈ ಆಧಾರದ ಮೇಲೆ ವಕೀಲರೊಬ್ಬರು ದೂರು ನೀಡಿದ್ದರಿಂದ ಮೇ ಆರಂಭದಲ್ಲಿ ದತ್ತಿ ಆಯುಕ್ತರು SRTT ಸಭೆಗಳ ಮೇಲೆ ತಡೆಯಾಜ್ಞೆ ತಂದಿದ್ದರು.

ಆರ್‌ಬಿಐ ವಿರುದ್ಧ ಟಾಟಾ ಸಮೂಹದ ಪ್ರಮುಖ ವಾದಗಳು

  • ಸಂವಿಧಾನದ ವಿಧಿ 226 ರ ಅಡಿಯಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಟಾಟಾ ಸಮೂಹ ಸಿದ್ಧತೆ ನಡೆಸುತ್ತಿದ್ದು, ಆರ್‌ಬಿಐ ವಿರುದ್ಧ ಹಲವು ನಿಲುವುಗಳನ್ನು ವ್ಯಕ್ತಪಡಿಸಿದೆ.
  • ಮಾರ್ಚ್ 2024 ರಿಂದ ಟಾಟಾ ಸನ್ಸ್ ಯಾವುದೇ ಬಾಕಿ ಸಾಲವನ್ನು ಹೊಂದಿಲ್ಲ.
  • ಗ್ರೂಪ್ ಕಂಪನಿಗಳು ಪಡೆದ ಸಾಲಕ್ಕೆ ಕಾರ್ಪೊರೇಟ್ ಗ್ಯಾರಂಟಿ ನೀಡುವುದನ್ನೂ ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಮೇಲ್ಮಟ್ಟದ ಎನ್‌ಬಿಎಫ್‌ಸಿ (NBFC) ನಿಯಂತ್ರಿಸುವ ಹೊಸ ಆರ್‌ಬಿಐ ಮಾನದಂಡಗಳನ್ನು ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಸಮಾನವಾಗಿ ಅನ್ವಯಿಸುತ್ತಿಲ್ಲ. ಸರ್ಕಾರಿ ಎನ್‌ಬಿಎಫ್‌ಸಿಗಳಿಗೆ ಐಪಿಒ ಕಡ್ಡಾಯಗೊಳಿಸದೆ, ಖಾಸಗಿ ಸಂಸ್ಥೆಗಳಿಗೆ ಮಾತ್ರ ಒತ್ತಡ ಹೇರುವುದು ಅಸಮಾನತೆಯಿಂದ ಕೂಡಿದೆ.

ಆರ್‌ಬಿಐಗೆ ಸವಾಲೆಸೆದ ಎರಡನೇ ಘಟನೆ

ಒಂದು ವೇಳೆ ಟಾಟಾ ಸಮೂಹವು ಕೋರ್ಟ್ ಮೆಟ್ಟಿಲೇರಿದರೆ, ಇತ್ತೀಚಿನ ವರ್ಷಗಳಲ್ಲಿ ಆರ್‌ಬಿಐ ನಿರ್ದೇಶನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿರುವ ಎರಡನೇ ಪ್ರಕರಣ ಇದಾಗಲಿದೆ. ಈ ಹಿಂದೆ ಡಿಸೆಂಬರ್ 2018 ರಲ್ಲಿ, ಉದಯ ಕೊಟಕ್ ನೇತೃತ್ವದ ಕೊಟಕ್ ಮಹೀಂದ್ರಾ ಬ್ಯಾಂಕ್, ಈಕ್ವಿಟಿ ಶೇರುಗಳನ್ನು ಹಿಂತೆಗೆದುಕೊಳ್ಳುವ ಆರ್‌ಬಿಐ ಆದೇಶವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಆ ಪ್ರಕರಣವು ನಂತರ ನ್ಯಾಯಾಲಯದ ಹೊರಗೆ ಇತ್ಯರ್ಥವಾಗಿ, ಕೊಟಕ್ ತಮ್ಮ ಮತದಾನದ ಹಕ್ಕನ್ನು ಶೇ. 15 ಕ್ಕೆ ಮಿತಿಗೊಳಿಸಿ, ಬ್ಯಾಂಕಿನಲ್ಲಿ ಶೇ. 26 ರಷ್ಟು ಪಾಲು ಹೊಂದಲು ಆರ್‌ಬಿಐ ಅನುಮತಿ ನೀಡಿತ್ತು.