ಮುಂದಿನ ಎರಡು ವರ್ಷಗಳಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಮೆಟ್ರೋ ರೈಲು ಜಾಲ ಹೊಂದುವತ್ತ ಸಾಗುತ್ತಿದೆ. 2014ರಲ್ಲಿ ಕೇವಲ 245 ಕಿ.ಮೀ. ಇದ್ದ ಮೆಟ್ರೋ ಜಾಲವು ಇದೀಗ 26 ನಗರಗಳಲ್ಲಿ 1,170 ಕಿ.ಮೀ.ಗೆ ವಿಸ್ತರಿಸಿದ್ದು, ದೇಶದ ನಗರ ಸಾರಿಗೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ.

ಮುಂದಿನ ಎರಡು ವರ್ಷಗಳಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ಮೆಟ್ರೋ ರೈಲು ಜಾಲ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದು ಅಮೆರಿಕವನ್ನು ಹಿಂದಿಕ್ಕುವ ಸಾಧ್ಯತೆಯಿದೆ.

ಹೌದು ಇಂದೋರ್‌ನಲ್ಲಿ ನಡೆದ ವಿಸ್ತೃತ ಮೆಟ್ರೋ ಮಾರ್ಗ ಉದ್ಘಾಟನೆ ಬಳಿಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಅವರು ಈ ಮಹತ್ವದ ಬೆಳವಣಿಗೆಯನ್ನ ಘೋಷಿಸಿದ್ದಾರೆ. ಇದು ಭಾರತದಲ್ಲಿನ ನಗರ ಸಾರಿಗೆ ವಿಸ್ತರಣೆ ಅದ್ಭುತ ವೇಗವನ್ನು ಪಡೆದಿರುವುದನ್ನು ತೋರಿಸಿದೆ.

26 ನಗರಗಳಲ್ಲಿ 1,170 ಕಿ.ಮೀ. ಮೆಟ್ರೋ ಜಾಲ

2014ರಲ್ಲಿ ಭಾರತದಲ್ಲಿ ಕೇವಲ 5 ನಗರಗಳಲ್ಲಿ 245 ಕಿ.ಮೀ. ಮೆಟ್ರೋ ಜಾಲವಿತ್ತು. ಇದೀಗ ಕೆಲವೇ ವರ್ಷಗಳಲ್ಲಿ ಅದು 1,170 ಕಿ.ಮೀ.ಗೆ ವಿಸ್ತರಿಸಿರುವುದು ದೇಶದ ನಗರ ಸಾರಿಗೆ ಮೂಲಸೌಕರ್ಯದ ವೇಗದ ಬೆಳವಣಿಗೆಯನ್ನು ತೋರಿಸುತ್ತದೆ. ಅಂದರೆ ಭಾರತೀಯ ಮೆಟ್ರೋ ಮಾರ್ಗವು ಈಗ ಅಮೆರಿಕದ ಒಟ್ಟು ಮೆಟ್ರೋ ಮಾರ್ಗ ಉದ್ದ 1,386 ಕಿಲೋಮೀಟರ್‌ಗಳಿಗಿಂತ ಕೇವಲ 216 ಕಿಲೋಮೀಟರ್‌ಗಳಷ್ಟು ಕಡಿಮೆಯಾಗಿದೆ. ಇದು ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕವನ್ನೂ ಮೀರಿಸಲಿದೆ

ದೇಶಾದ್ಯಂತ ಸುಮಾರು 900 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣ ಅಥವಾ ಮುಂದುವರಿದ ಯೋಜನೆಗಳ ಹಂತದಲ್ಲಿದೆ. ಈ ಪೈಕಿ ಒಂದು ಭಾಗದ ಮಾರ್ಗಗಳು ಕಾರ್ಯಾರಂಭ ಮಾಡಿದರೂ ಭಾರತವು ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿರುವ ದೇಶವಾಗಲಿದೆ. ಸದ್ಯ ಚೀನಾ ಮೊದಲ ಸ್ಥಾನದಲ್ಲಿದೆ.

ಇಂದೋರ್ ಮೆಟ್ರೋ ವಿಸ್ತರಣೆ

ಇಂದೋರ್‌ನಲ್ಲಿ ಇತ್ತೀಚೆಗೆ ಮೆಟ್ರೋ ಮಾರ್ಗವನ್ನು ವಿಸ್ತರಿಸಲಾಗಿದ್ದು, ಕಾರ್ಯಾಚರಣೆಯಲ್ಲಿರುವ ಮಾರ್ಗದ ಉದ್ದ 6.3 ಕಿ.ಮೀ.ನಿಂದ 17.5 ಕಿ.ಮೀ.ಗೆ ಏರಿಕೆಯಾಗಿದೆ. ಗಾಂಧಿ ನಗರದಿಂದ ಮಾಳವೀಯ ನಗರ ಚೌಕದವರೆಗೆ ವಿಸ್ತರಿಸಲಾದ ಈ ಮಾರ್ಗವು ಪ್ರಮುಖ ವಸತಿ ಪ್ರದೇಶಗಳು, ವ್ಯಾಪಾರ ವಲಯಗಳು ಮತ್ತು ಪ್ರಮುಖ ರಸ್ತೆಗಳನ್ನು ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿ ಮೆಟ್ರೋ ರೈಲುಗಳು 15 ನಿಮಿಷಗಳ ಅಂತರದಲ್ಲಿ ಸಂಚರಿಸಲಿದ್ದು, ಪ್ರತಿದಿನ 80ಕ್ಕೂ ಹೆಚ್ಚು ಟ್ರಿಪ್‌ಗಳನ್ನು ನಡೆಸಲಾಗುತ್ತದೆ.

ನಗರ ಸಾರಿಗೆಯಲ್ಲಿ ದೊಡ್ಡ ಬದಲಾವಣೆ

ದೇಶದಲ್ಲಿ ಮೆಟ್ರೋ ಜಾಲದ ವೇಗದ ವಿಸ್ತರಣೆ ನಗರ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ. ಮೆಟ್ರೋದಿಂದ ರಸ್ತೆ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಇದರಿಂದ ವಾಯುಮಾಲಿನ್ಯ ತಗ್ಗಿಸಲು ಸಹಾಯವಾಗಲಿದೆ. ಪ್ರಾದೇಶಿಕ ಸಂಪರ್ಕ ಮತ್ತು ಕೊನೆಯ ಹಂತದ ಸಾರಿಗೆ ವ್ಯವಸ್ಥೆಯೊಂದಿಗೆ ಮೆಟ್ರೋವನ್ನು ಸಂಯೋಜಿಸುವ ಮೂಲಕ ಭಾರತದ ನಗರ ಸಾರಿಗೆ ವ್ಯವಸ್ಥೆ ವೇಗವಾಗಿ ಬದಲಾಗುತ್ತಿದೆ. ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿ ದೊಡ್ಡ ಮೆಟ್ರೋ ರೈಲು ಜಾಲ ಹೊಂದಿರುವ ದೇಶವಾಗುವುದು ಭಾರತದ ನಗರ ಸಾರಿಗೆ ಮೂಲಸೌಕರ್ಯಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ.