ಬೆಂಗಳೂರಿನಲ್ಲಿ ಗಣೇಶ ಹಬ್ಬದ ಆಚರಣೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವಾಗಿದ್ದು, ಡಿಜೆ ಬಳಕೆ ನಿಷೇಧ, ಸ್ವಯಂಸೇವಕರ ಪಟ್ಟಿ ಸಲ್ಲಿಕೆ ಸೇರಿದಂತೆ ಹಲವು ನಿಯಮಗಳನ್ನು ಆಯೋಜಕರು ಪಾಲಿಸಬೇಕಿದೆ. ಈ ನಿಯಮಗಳು ಹಬ್ಬವನ್ನು ಸುರಕ್ಷಿತವಾಗಿ ಮತ್ತು ಸಂಭ್ರಮದಿಂದ ಆಚರಿಸಲು ಸಹಕಾರಿಯಾಗಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಗಣೇಶ ಹಬ್ಬದ ಸಂಭ್ರಮ ಶುರುವಾಗಿದೆ. ಇದೇ ತಿಂಗಳ 14ರಂದು ಹಬ್ಬಕ್ಕೆ ಸಿದ್ಧತೆ ಆರಂಭವಾಗಿದ್ದು, ಗಣೇಶ ಮೂರ್ತಿ ಖರೀದಿ, ಮಂಡಪ ನಿರ್ಮಾಣ ಅನುಮತಿ ತೆಗೆದುಕೊಳ್ಳಲು ಗಣೇಶ ಮಂಡಳಿಗಳು ಸಿದ್ಧವಾಗಿದೆ. ಏಕೆಂದರೆ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸರ ಅನುಮತಿ ಪಡೆಯುವುದು ಕಡ್ಡಯವಾಗಿದೆ.
ಆಯೋಜಕರದ್ದೇ ಸಂಪೂರ್ಣ ಜವಾಬ್ದಾರಿ!
ಇದರೊಂದಿಗೆ ಬೆಂಗಳೂರಿನಲ್ಲಿ ವಿನಾಯಕನ ಹಬ್ಬಕ್ಕೆ ಅನುಮತಿ ನೀಡುವ ಕುರಿತು ಪೊಲೀಸರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಗಣೇಶ ಮೂರ್ತಿ ಏರ್ಪಾಡು ಮಾಡುವ ಆಯೋಜಕರೇ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ.
ಡಿಜೆ ನಿಷೇಧ, ಸ್ವಯಂ ಸೇವಕರ ಲಿಸ್ಟ್!
ಗಣೇಶ ಹಬ್ಬಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದ್ದು, ಯಾವುದೇ ಕಾರಣಕ್ಕೂ ಪೊಲೀಸ್ ಇಲಾಖೆ ನಿಗದಿ ಮಾಡಿದ ಸಮಯ ಮೀರುವಂತೆ ಇಲ್ಲ. ಸುಪ್ರೀ ಕೋರ್ಟ್ ಆದೇಶದಂತೆ ಯಾವುದೇ ಡಿಜೆ ಬಳಕೆ ಮಾಡಲು ಅವಕಾಶ ಇಲ್ಲ. ನಿಗದಿತ ಡಿಸಿಬಲ್ ಸೌಂಡ್ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಆಯೋಜಕ ಬಳಿ ಪೊಲೀಸರು ಸ್ವಯಂ ಸೇವಕರ ಲಿಸ್ಟ್ ಕೂಡ ಕೇಳಿದ್ದಾರೆ. ಗಣೇಶ ಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಮಾರ್ಗದ ಕುರಿತು ಮೊದಲೇ ಪೊಲೀಸರಿಗೆ ತಿಳಿಸಬೇಕು, ಯಾವುದೇ ಕಾರಣಕ್ಕೂ ಒಮ್ಮೆ ನೀಡಿದ ಮಾರ್ಗದಲ್ಲಿ ಭದ್ರತೆಯ ಕಾರಣ ಬದಲಾವಣೆ ಮಾಡಲು ಪೊಲೀಸರಿಗೆ ಅನುಮತಿ ನೀಡಲಾಗಿದೆ.
ಎಲ್ಲಾ ಇಲಾಖೆಗಳ ಅನುಮತಿ ಪಡೆದುಕೊಳ್ಳುವುದ ಕಡ್ಡಾಯ
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಗೌರಿ ಗಣೇಶ ಹಬ್ಬಕ್ಕೆ ಪಿಒಪಿ ಗಣೇಶ ಬಳಕೆ ಅವಕಾಶ ಇಲ್ಲ. ಆಯೋಜಕರಿಗೆ ಮನವಿ ಮಾಡುತ್ತಿದ್ದು, ಈಗಾಗಲೇ ನಿಗದಿ ಮಾಡಿರುವ ಸಮಯವನ್ನು ಪಾಲನೆ ಮಾಡಬೇಕು. ರೂಟ್ ಕ್ಲಿಯರೆನ್ಸ್ ಮಾರ್ಗದ ಮೂಲಕವೇ ಸಾಗಬೇಕು. ಬೇರೆ ಬೇರೆ ಇಲಾಖೆಗಳು ನೀಡುವ ಎಲ್ಲಾ ಅನುಮತಿಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಪ್ರತಿ ವರ್ಷ ಸೌಂಡ್ ಬಗ್ಗೆ ಸಮಸ್ಯೆ ಬರುತ್ತದೆ, ಆದ್ದರಿಂದ ಕಾನೂನಿನ ಚೌಕಟ್ಟಿನಲ್ಲಿ ಅನುಮತಿ ನೀಡಿರುವ ಸೌಂಡ್ ಮಾತ್ರ ಬಳಕೆ ಮಾಡಿ. ಈ ಬಾರಿ ವಿಶೇಷವಾಗಿ ಸ್ವಯಂ ಸೇವಕರ ಪಟ್ಟಿಯನ್ನು ಪೊಲೀಸರಿಗೆ ನೀಡಬೇಕು. ಹಬ್ಬ ಶುರುವಾಗಿ, ಮುಕ್ತಾಯ ಆಗುವವರೆಗೂ ಸ್ವಯಂ ಸೇವಕರೊಂದಿಗೆ ಪೊಲೀಸರು ಸಂಪರ್ಕದಲ್ಲಿ ಇರ್ತಾರೆ. ಇಬ್ಬರ ನಡುವೆ ಒಂದು ಉತ್ತಮ ಸಂವಹನ ನಡೆಯಲು ಇದು ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ.
ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು
ಬೆಂಗಳೂರಿನ ಜನರು ವಿನಾಯಕ ನವರಾತ್ರಿ ಹಬ್ಬವನ್ನು ಸುರಕ್ಷಿತವಾಗಿ ಮತ್ತು ಸಂಭ್ರಮದಿಂದ ಆಚರಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪೊಲೀಸರು ಹೊರಡಿಸಿದ್ದು, ಈ ಹಿಂದೆ ನಿಗದಿಪಡಿಸಿದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರಿದ್ದಾರೆ.
ಹಬ್ಬದ ಸಮಿತಿಯ ಸದಸ್ಯರು ವಿನಾಯಕನ ವಿಗ್ರಹಗಳ ವಿವರಗಳು, ಪೆಂಡಾಲ್‌ಗಳು, ಧ್ವನಿವರ್ಧಕ ವ್ಯವಸ್ಥೆಗಳು ಹಾಗೂ ಫ್ಲೆಕ್ಸ್ ಬ್ಯಾನರ್‌ಗಳ ಮಾಹಿತಿಯ ಜೊತೆಗೆ, ವಿಗ್ರಹಗಳ ಎತ್ತರ ಮತ್ತು ಆಚರಣೆಯ ಅವಧಿಯಂತಹ ವಿವರಗಳನ್ನು ಪೊಲೀಸರಿಗೆ ಒದಗಿಸಬೇಕಾಗುತ್ತದೆ. ಅಲ್ಲದೆ, ವಿಗ್ರಹ ವಿಸರ್ಜನೆಯ ದಿನಾಂಕ, ಸಮಯ ಮತ್ತು ಮೆರವಣಿಗೆಯ ಮಾರ್ಗದ ಕುರಿತಾದ ಮಾಹಿತಿಯನ್ನೂ ಸಲ್ಲಿಸುವುದು ಕಡ್ಡಾಯವಾಗಿದೆ.
ಗಣೇಶ ಪೆಂಡಾಲ್‌ಗಳಲ್ಲಿ ಅಶ್ಲೀಲ ಪ್ರದರ್ಶನಗಳು ಇರಬಾರದು ಮತ್ತು ವಿಸರ್ಜನಾ ಮೆರವಣಿಗೆಗೆ ಯಾರೂ ಮದ್ಯಪಾನ ಮಾಡಿ ಬರಬಾರದು. ಪೆಂಡಾಲ್‌ಗಳಲ್ಲಿ ಅಥವಾ ಮೆರವಣಿಗೆಯ ಸಮಯದಲ್ಲಿ ಡಿಜೆ ಬಳಕೆಗೆ ಅನುಮತಿಯಿಲ್ಲ. ಉತ್ಸವ ಸಮಿತಿಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.



