35 ವರ್ಷಗಳಿಂದ ಕುಟುಂಬದ ಸಂಪರ್ಕ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬನನ್ನ SIR ಒಂದು ಮಾಡಿದೆ. ಅಣ್ಣ ಸತ್ತಿದ್ದಾನೆ ಅಂದ್ಕೊಂಡಿದ್ದ ತಮ್ಮನಿಗೆ ಈಗ ಹೊಸ ಶಕ್ತಿ ಸಿಕ್ಕಿದೆ. ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಘಟನೆಯ ವಿವರ ಇಲ್ಲಿದೆ.
ಜಿಂದ್ (ಹರಿಯಾಣ): ವಿಧಿ ಆಟ ಬಲ್ಲವರ್ಯಾರು? ಕೆಲವು ಘಟನೆಗಳು ಸಿನಿಮಾಗಿಂತಲೂ ಅಚ್ಚರಿಯಾಗಿರುತ್ತವೆ. ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. ಸುಮಾರು 35 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿ, ಕುಟುಂಬದವರಿಂದ ಸತ್ತಿದ್ದಾನೆ ಎಂದೇ ಭಾವಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬರು ಮತದಾರರ ಪಟ್ಟಿಯ ಪರಿಶೀಲನೆಯ (SIR Process) ವೇಳೆ ಸಿಕ್ಕಿಬಿದ್ದಿದ್ದಾರೆ. ಮೂರು ದಶಕಗಳ ಬಳಿಕ ಅಣ್ಣ-ತಮ್ಮಂದಿರು ಪರಸ್ಪರ ತಬ್ಬಿಕೊಂಡು ಕಣ್ಣೀರಿಟ್ಟ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ.
ಒಂದು ಫೋನ್ ಕಾಲ್ ಬದಲಿಸಿದ ಹಣೆಬರಹ
ಇದು ಆರಂಭವಾಗಿದ್ದು ಸಣ್ಣದೊಂದು ಅಧಿಕೃತ ಕೆಲಸದಿಂದ. ಸೀತಾ ರಾಮ್ ಎಂಬುವವರು ತಮ್ಮ ಹಳೆಯ ಶಾಲಾ ವರ್ಗಾವಣೆ ಪತ್ರ (Leaving Certificate) ಪಡೆಯಲು ಹರಿಯಾಣದ ಮನೋಹರ್‌ಪುರದ ಸರ್ಕಾರಿ ಶಾಲೆಗೆ ಬಂದಿದ್ದರು. ಅಲ್ಲಿ ಮತದಾರರ ಪಟ್ಟಿ ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದ ಬಿಎಲ್‌ಒ (BLO) ಕೃಷ್ಣ ಕುಮಾರ್ ಅವರು ಸೀತಾ ರಾಮ್ ಅವರ ವಿಳಾಸ ಮತ್ತು ಕುಟುಂಬದ ಬಗ್ಗೆ ಕೇಳಿದರು. ಈ ವೇಳೆ ಸೀತಾ ರಾಮ್ ತಮ್ಮ ತಮ್ಮನ ಹೆಸರು 'ಬಲ್ಬೀರ್' ಎಂದು ಹೇಳಿದರು. ತಕ್ಷಣವೇ ಬಿಎಲ್‌ಒ ಅವರು ತಮ್ಮ ದಾಖಲೆಗಳಲ್ಲಿದ್ದ ಬಲ್ಬೀರ್ ಎಂಬುವವರಿಗೆ ಫೋನ್ ಮಾಡಿದರು.
ಕರೆ ಸ್ವೀಕರಿಸಿದ ಬಲ್ಬೀರ್‌ಗೆ ಅಣ್ಣನ ಹೆಸರನ್ನು ಕೇಳಿದೊಡನೆ ಅಚ್ಚರಿಯಾಯಿತು. ಹೌದು ಅವನು ನನ್ನ ಅಣ್ಣ, 35 ವರ್ಷಗಳಿಂದ ನಾನು ಅವನಿಗಾಗಿ ಹುಡುಕುತ್ತಿದ್ದೇನೆ ಎಂದು ಬಲ್ಬೀರ್ ಕಣ್ಣೀರು ಹಾಕಿದರು. ಈ ಮಧ್ಯೆ ಸೀತಾ ರಾಮ್‌ಗೆ ಕಾಲುಗಳಲ್ಲಿ ಅಂಗವೈಕಲ್ಯವಿದೆಯೇ ಎಂದು ಬಲ್ಬೀರ್ ವಿಚಾರಿಸಿದರು. ಅದು ಸರಿ ಎಂದು ದೃಢಪಟ್ಟಾಗ ಬಲ್ಬೀರ್ ಓಡೋಡಿ ಶಾಲೆಗೆ ಬಂದರು. 35 ವರ್ಷಗಳ ಹಿಂದೆ ದೂರವಾಗಿದ್ದ ಅಣ್ಣನನ್ನು ಕಂಡೊಡನೆ ಬಲ್ಬೀರ್ ಗೊಳೋ ಎಂದು ಅಳುತ್ತಾ ಅಪ್ಪಿಕೊಂಡರು. ಸೀತಾ ರಾಮ್ ಕೂಡ ತಮ್ಮನನ್ನು ನೋಡಿ ಕಣ್ಣೀರು ಹಾಕಿದರು. ಸೀತಾ ರಾಮ್ ಸತ್ತೇ ಹೋಗಿದ್ದಾರೆ ಎಂದು ಭಾವಿಸಿದ್ದ ಇಡೀ ಕುಟುಂಬಕ್ಕೆ ಇದು ಪವಾಡದಂತೆ ಕಂಡಿತು.
ಪಂಜಾಬ್‌ನಲ್ಲಿ ನೆಲೆಸಿದ್ದ ಅಣ್ಣ
ಅಂದಹಾಗೆ ಮನೆಬಿಟ್ಟಿದ್ದ ಸೀತಾ ರಾಮ್ ಇಷ್ಟು ವರ್ಷ ಪಂಜಾಬ್‌ನಲ್ಲಿ ನೆಲೆಸಿದ್ದರು. ಅಲ್ಲಿ ಸರ್ಕಾರಿ ಕೆಲಸದಲ್ಲಿದ್ದ ಅವರು ಈಗ ನಿವೃತ್ತರಾಗಿದ್ದಾರೆ. ಶಾಲಾ ದಾಖಲೆಗಾಗಿ ಬಂದಾಗ ಅನಿರೀಕ್ಷಿತವಾಗಿ ತಮ್ಮನ ಭೇಟಿಯಾಗಿದೆ. ಇದೊಂದು ಕೇವಲ ಮತದಾರರ ಪಟ್ಟಿ ಪರಿಶೀಲನೆಯ ಕೆಲಸವಾಗಿರಲಿಲ್ಲ, ಎರಡು ಒಡೆದ ಹೃದಯಗಳನ್ನು ಒಂದು ಮಾಡುವ ಸುದೈವ ನನಗೊದಗಿಬಂತು ಎಂದು ಅಧಿಕಾರಿ ಕೃಷ್ಣ ಕುಮಾರ್ ಭಾವುಕರಾಗಿ ನುಡಿದಿದ್ದಾರೆ.


