ಭಾರತದ ಖನಿಜ ವಲಯ ಆರ್ಥಿಕತೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದೆ. ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ಸ್ವಾವಲಂಬಿ ಭಾರತದ ದಿಟ್ಟ ಹೆಜ್ಜೆಯಲ್ಲಿ ಗಣಿ ಮತ್ತು ಖನಿಜಗಳ ಕಾಯ್ದೆ ತಿದ್ದುಪಡಿ ಕಾಯ್ದೆ ಪ್ರಾಮುಖ್ಯ ಪಡೆದುಕೊಂಡಿದೆ.
ನವದೆಹಲಿ (ಆ.20) ಆತ್ಮನಿರ್ಭರತೆ ಸಾಧಿಸಲು ಸುದೀರ್ಘ ಯೋಜನೆಗಳ ಮೂಲಕ ಸಾಗುತ್ತಿರುವ ಭಾರತ ಹಲವು ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ, ಇ20 ಪೆಟ್ರೋಲ್, ರಕ್ಷಣಾ ವ್ಯವಸ್ಥೆಯಲ್ಲಿ ಸ್ವಾಲಂಬನೆ ಸೇರಿದಂತೆ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಇದೀಗ ಭಾರತದ ಮುಂಬರುವ ದಶಕಗಳ ಆರ್ಥಿಕ ಪ್ರಗತಿ ಗಮನದಲ್ಲಿಟ್ಟುಕೊಂಡು ಖನಿಜ ವಲಯ ಮಹತ್ವದ ಕ್ರಮ ಕೈಗೊಂಡಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ‘ಗಣಿ ಮತ್ತು ಖನಿಜಗಳ ತಿದ್ದುಪಡಿ ವಿಧೇಯಕ (MMDR Reform 2026) ದೇಶದ ರಾಜಕೀಯ, ಕಾನೂನು ಮತ್ತು ಆರ್ಥಿಕ ವಲಯಗಳಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಖನಿಜ ಭದ್ರತೆ ಎಂದರೆ ಆರ್ಥಿಕ ಭದ್ರತೆ
ಭಾರತದ ಖನಿಜ ಭದ್ರತೆಯು ಕೇವಲ ಗಣಿಗಾರಿಕೆ ಕ್ಷೇತ್ರಕ್ಕೆ ಸೀಮಿತವಾದ ವಿಷಯವಲ್ಲ, ಬದಲಿಗೆ ಅದು ದೇಶದ ಒಟ್ಟಾರೆ ಆರ್ಥಿಕ ಭದ್ರತೆಯ ಅಡಿಪಾಯವಾಗಿದೆ. ಮೂಲಸೌಕರ್ಯ, ಉಕ್ಕು, ರಕ್ಷಣೆ, ವಿದ್ಯುತ್ ಚಾಲಿತ ವಾಹನಗಳು (EV), ನವೀಕರಿಸಬಹುದಾದ ಇಂಧನ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳಿಗೆ ಖನಿಜಗಳು ಅತ್ಯಗತ್ಯ. ದೇಶೀಯವಾಗಿ ನಿರ್ಣಾಯಕ ಖನಿಜಗಳ ಪೂರೈಕೆ ಸರಿಯಾಗಿ ಸಿಗದಿದ್ದರೆ, ಆಮದುಗಳ ಮೇಲಿನ ದೇಶದ ಆರ್ಥಿಕ ಮತ್ತು ಆಯಕಟ್ಟಿನ ಅವಲಂಬನೆ ಹೆಚ್ಚಾಗುತ್ತಲೇ ಹೋಗುತ್ತದೆ.
35 ವರ್ಷಗಳ ಸುದೀರ್ಘ ಕಾನೂನು ಸಂಘರ್ಷ
ಭಾರತದ ಖನಿಜ ತೆರಿಗೆ ವ್ಯವಸ್ಥೆಯು ಸುಮಾರು 35 ವರ್ಷಗಳಿಂದ ಕಾನೂನು ವಿವಾದದ ಕೇಂದ್ರಬಿಂದುವಾಗಿತ್ತು. 1957ರ ಎಂಎಂಡಿಆರ್ (MMDR) ಕಾಯ್ದೆಯು, ಖನಿಜ ಅಭಿವೃದ್ಧಿಯ ಮೇಲಿನ ಕೇಂದ್ರದ ಅಧಿಕಾರ ಮತ್ತು ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಅಧಿಕಾರದ ನಡುವಿನ ಗಡಿಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿರಲಿಲ್ಲ. ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ನಿರಂತರ ಗೊಂದಲಕ್ಕೆ ಕಾರಣವಾಗಿತ್ತು.
ಸಂವಿಧಾನ ಮತ್ತು ಪರಿಮಿತಿಗಳ ಗೊಂದಲ
ಸಂವಿಧಾನವು ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿದ್ದರೂ, ಖನಿಜ ಅಭಿವೃದ್ಧಿಯ ಹಿತದೃಷ್ಟಿಯಿಂದ ಸಂಸತ್ತು ಆ ಅಧಿಕಾರವನ್ನು ಪರಿಮಿತಿಗೊಳಿಸಬಹುದು. ಆದರೆ 1957ರ ಕಾಯ್ದೆಯಲ್ಲಿ ಈ ಮಿತಿಗಳನ್ನು ಸರಿಯಾಗಿ ವ್ಯಾಖ್ಯಾನಿಸದ ಕಾರಣ, ವಿಭಿನ್ನ ವ್ಯಾಖ್ಯಾನಗಳಿಗೆ ಆಸ್ಪದ ಸಿಕ್ಕು ನ್ಯಾಯಾಲಯಗಳಲ್ಲಿ ನಿರಂತರ ಕಾನೂನು ಹೋರಾಟಕ್ಕೆ ನಾಂದಿ ಹಾಡಿತು.
ಸುಪ್ರೀಂ ಕೋರ್ಟ್‌ನ ಭಿನ್ನ ತೀರ್ಪುಗಳ ಇತಿಹಾಸ
ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ಭಿನ್ನ ನಿಲುವುಗಳನ್ನು ತಳೆದಿತ್ತು. 1989ರ 'ಇಂಡಿಯಾ ಸಿಮೆಂಟ್ಸ್' ಪ್ರಕರಣದಲ್ಲಿ ಏಳು ನ್ಯಾಯಾಧೀಶರ ಪೀಠವು 'ರಾಯಲ್ಟಿ'ಯನ್ನು ತೆರಿಗೆಯೆಂದು ಪರಿಗಣಿಸಿ ರಾಜ್ಯಗಳ ಹೆಚ್ಚುವರಿ ತೆರಿಗೆಗೆ ತಡೆ ಹಾಕಿತ್ತು. ಆದರೆ, 2004ರಲ್ಲಿ ಐದು ನ್ಯಾಯಾಧೀಶರ ಪೀಠವು ಈ 'ರಾಯಲ್ಟಿ ಒಂದು ತೆರಿಗೆ' ಎಂಬ ಪದಪ್ರಯೋಗವೇ ಒಂದು ಮುದ್ರಣ ದೋಷ (Typographical Error) ಎಂದು ಹೇಳಿ, ರಾಯಲ್ಟಿ ಎನ್ನುವುದು ಕಾಂಟ್ರಾಕ್ಟ್ ಪಾವತಿಯೇ ಹೊರತು ತೆರಿಗೆಯಲ್ಲ ಎಂದಿತ್ತು.
2024ರ ಐತಿಹಾಸಿಕ ತೀರ್ಪು
2024ರಲ್ಲಿ 'ಮಿನರಲ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ ವಿ. ಸೈಲ್ (SAIL)' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು ರಾಯಲ್ಟಿ ತೆರಿಗೆಯಲ್ಲ ಎಂದು ಅಂತಿಮ ತೀರ್ಪು ನೀಡಿತು. ಇದರ ಜೊತೆಗೆ, ಖನಿಜ ಹಕ್ಕುಗಳು ಮತ್ತು ಖನಿಜಯುಕ್ತ ಭೂಮಿಯ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು.
ಎಂಎಂಡಿಆರ್ ತಿದ್ದುಪಡಿ ವಿಧೇಯಕ 2026 ರ ಪ್ರವೇಶ
ಲೋಕಸಭೆಯಲ್ಲಿ ಆಗಸ್ಟ್ 12, 2026 ರಂದು ಹಾಗೂ ಮರುದಿನ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಎಂಎಂಡಿಆರ್ ತಿದ್ದುಪಡಿ ವಿಧೇಯಕ 2026, ಈ ಎಲ್ಲಾ ಕಾನೂನು ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿದೆ. ಈ ಹೊಸ ಕಾಯ್ದೆಯು ಖನಿಜ ತೆರಿಗೆಯಲ್ಲಿ ಏಕರೂಪತೆ, ಮುನ್ಸೂಚನೆ ಸಾಮರ್ಥ್ಯ ಮತ್ತು ಹೂಡಿಕೆ ಸ್ನೇಹಿ ವಾತಾವರಣವನ್ನು ನಿರ್ಮಿಸುವ ಗುರಿ ಹೊಂದಿದೆ.
ರಾಜ್ಯಗಳ ಹೆಚ್ಚುವರಿ ತೆರಿಗೆಗೆ ಶಾಸನಾತ್ಮಕ ಮಿತಿ
ಸುಪ್ರೀಂ ಕೋರ್ಟ್ ಗುರುತಿಸಿದ ಸಂಸತ್ತಿನ ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಈ ತಿದ್ದುಪಡಿಯನ್ನು ತಂದಿದೆ. ಖನಿಜ ಹಕ್ಕುಗಳು ಹಾಗೂ ಖನಿಜಯುಕ್ತ ಭೂಮಿಯ ಮೇಲೆ ರಾಜ್ಯಗಳು ವಿಧಿಸುವ ಹೆಚ್ಚುವರಿ ತೆರಿಗೆಗಳು, ಸೆಸ್ ಮತ್ತು ಶುಲ್ಕಗಳಿಗೆ ಸ್ಪಷ್ಟ ಶಾಸನಾತ್ಮಕ ಮಿತಿಯನ್ನು (Limits) ನಿಗದಿಪಡಿಸುವುದು ಈ ವಿಧೇಯಕದ ಮುಖ್ಯ ಉದ್ದೇಶವಾಗಿದೆ.
ಹೂಡಿಕೆದಾರರಿಗೆ ಏಕರೂಪ ತೆರಿಗೆ ವಾತಾವರಣ
ಒಂದು ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುವ ಗಣಿಗಾರಿಕೆ ಕಂಪನಿಯು ಕೇವಲ ಖನಿಜವು ಆ ರಾಜ್ಯದಲ್ಲಿದೆ ಎಂಬ ಕಾರಣಕ್ಕೆ ವಿಪರೀತ ತೆರಿಗೆ ಹೊರೆಯನ್ನು ಹೊರಬಾರದು. ಪ್ರಸ್ತಾಪಿತ ಚೌಕಟ್ಟು ರಾಷ್ಟ್ರಮಟ್ಟದಲ್ಲಿ ತೆರಿಗೆ ಏಕರೂಪತೆಯನ್ನು ತರುತ್ತದೆ, ಇದರಿಂದ ಅನಿರೀಕ್ಷಿತ ರಾಜ್ಯಮಟ್ಟದ ಶುಲ್ಕಗಳಿಂದಾಗಿ ಖನಿಜದ ಬೆಲೆಗಳು ಮತ್ತು ಹೂಡಿಕೆ ನಿರ್ಧಾರಗಳು ಏರುಪೇರಾಗುವುದು ತಪ್ಪುತ್ತದೆ.
ಖನಿಜಯುಕ್ತ ಭೂಮಿ ಮೇಲಿನ ನಿಯಂತ್ರಣ
ಈ ತಿದ್ದುಪಡಿಯು ಕೇಂದ್ರದ ಚೌಕಟ್ಟನ್ನು 'ಖನಿಜಯುಕ್ತ ಭೂಮಿ'ಗೂ ವಿಸ್ತರಿಸಿದೆ. 2024ರ ಸುಪ್ರೀಂ ಕೋರ್ಟ್ ತೀರ್ಪು ಖನಿಜ ಹಕ್ಕುಗಳು ಮತ್ತು ಭೂಮಿ ತೆರಿಗೆಯ ನಡುವೆ ವ್ಯತ್ಯಾಸ ಗುರುತಿಸಿದ್ದರಿಂದ, ರಾಜ್ಯಗಳು ಭೂ ತೆರಿಗೆಯ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಿಧಿಸುವ ಹಾದಿ ತೆರೆದುಕೊಂಡಿತ್ತು. ಹೊಸ ತಿದ್ದುಪಡಿ ಈ ಹಾದಿಯನ್ನು ನಿಯಂತ್ರಿಸುತ್ತದೆ.
ಹೆಸರನ್ನು ಬದಲಾಯಿಸಿ ವಿಧಿಸುವ ತೆರಿಗೆಗೆ ತಡೆ
ರಾಜ್ಯ ಸರ್ಕಾರಗಳು ಖನಿಜ ತೆರಿಗೆಯ ಮೇಲಿನ ನಿರ್ಬಂಧಗಳನ್ನು ತಪ್ಪಿಸಲು, ಅದೇ ತೆರಿಗೆಯನ್ನು 'ಖನಿಜ ಭೂಮಿಯ ಮೇಲಿನ ಸೆಸ್' ಎಂದು ಹೆಸರು ಬದಲಾಯಿಸಿ ವಿಧಿಸುವುದನ್ನು ತಡೆಯುವುದು ಈ ಕಾನೂನಿನ ಉದ್ದೇಶವಾಗಿದೆ. ಇದು ಖನಿಜ ಹಕ್ಕು ಮತ್ತು ಭೂಮಿ ಎರಡನ್ನೂ ಸ್ಪಷ್ಟ ರಾಷ್ಟ್ರೀಯ ಚೌಕಟ್ಟಿನಡಿಗೆ ತರುತ್ತದೆ.
ಪೂರ್ವಾನ್ವಯ ತೆರಿಗೆ ಭೀತಿಗೆ ಮುಕ್ತಿ
ಗಣಿಗಾರಿಕೆ ಕಂಪನಿಗಳಿಗೆ ಇಂದಿನ ತೆರಿಗೆಯಷ್ಟೇ ಅಲ್ಲದೆ, ಹೂಡಿಕೆ ಮಾಡಿದ ಹಲವು ವರ್ಷಗಳ ನಂತರ ಹೊಸ ತೆರಿಗೆ ಹೇರಬಹುದೇ ಎಂಬ ಆತಂಕವಿರುತ್ತದೆ. ಪೂರ್ವಾನ್ವಯವಾಗಿ ತೆರಿಗೆ ಬೇಡಿಕೆ ಇಡುವುದು ಕಂಪನಿಗಳ ಮೇಲೆ ತೀವ್ರ ಹಣಕಾಸಿನ ಒತ್ತಡ ಹೇರುತ್ತದೆ ಮತ್ತು ಉತ್ತಮ ಯೋಜನೆಯನ್ನೂ ನಷ್ಟಕ್ಕೆ ತಳ್ಳುತ್ತದೆ.
ಕೋಟ್ಯಂತರ ರೂಪಾಯಿ ಬಾಕಿ ತೆರಿಗೆಯ ಭೀತಿ
2024ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ರಾಜ್ಯಗಳು 2004 ಮತ್ತು 2005ರಿಂದ ಪೂರ್ವಾನ್ವಯವಾಗುವಂತೆ ಬಾಕಿ ತೆರಿಗೆಯನ್ನು ವಸೂಲಿ ಮಾಡಲು ಅರ್ಹತೆ ಪಡೆದಿದ್ದವು. ಇದರಿಂದ ಗಣಿಗಾರಿಕೆ ಕಂಪನಿಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ದಂಡ ಅಥವಾ ಬಾಕಿ ಪಾವತಿಸುವ ಭೀತಿ ಎದುರಾಗಿತ್ತು.
ಬಾಕಿ ತೆರಿಗೆ ಗೊಂದಲಗಳಿಗೆ ಸ್ಪಷ್ಟ ಪರಿಹಾರ
ಹೊಸ ತಿದ್ದುಪಡಿಯ ಪ್ರಕಾರ, ಹೊಸ ಕಾನೂನು ಜಾರಿಗೆ ಬರುವ ಮೊದಲು ವಿಧಿಸಲಾದ ಮತ್ತು ಪಾವತಿಸದೆ ಬಾಕಿ ಇರುವ ರಾಜ್ಯಗಳ ತೆರಿಗೆ ಬೇಡಿಕೆಗಳನ್ನು ಅಮಾನ್ಯಗೊಳಿಸಲಾಗುತ್ತದೆ. ಆದರೆ ಈಗಾಗಲೇ ಸರ್ಕಾರಕ್ಕೆ ಪಾವತಿಸಿದ ಹಣವನ್ನು ವಾಪಸ್ ನೀಡಲಾಗುವುದಿಲ್ಲ. ಇದು ಹಳೆಯ ತೆರಿಗೆ ವ್ಯಾಜ್ಯಗಳನ್ನು ಶಾಶ್ವತವಾಗಿ ಮುಕ್ತಾಯಗೊಳಿಸುತ್ತದೆ.
ಈಸ್ ಆಫ್ ಬ್ಯೂಸಿನೆಸ್
ನಿಯಮಗಳು ಸ್ಪಷ್ಟವಾಗಿದ್ದಾಗ ಮಾತ್ರ ಹೂಡಿಕೆದಾರರು ಯೋಜನೆ ರೂಪಿಸಲು ಸಾಧ್ಯ. ಯೋಜನೆ ಅನುಮೋದನೆಯಾಗಿ ಹೂಡಿಕೆ ಮಾಡಿದ ನಂತರ ಹೊಸ ತೆರಿಗೆ ವಿಧಿಸಿದರೆ ಗೊಂದಲ ಉಂಟಾಗುತ್ತದೆ. ಪ್ರಸ್ತುತ ಪಾರದರ್ಶಕ ಚೌಕಟ್ಟಿನಿಂದ ಕಂಪನಿಗಳು ವೆಚ್ಚವನ್ನು ಸರಿಯಾಗಿ ಅಂದಾಜಿಸಿ ದೀರ್ಘಾವಧಿ ಹೂಡಿಕೆ ಮಾಡಲು ಧೈರ್ಯ ಸಿಗುತ್ತದೆ.
ಖನಿಜ ಉತ್ಪಾದನಾ ವೆಚ್ಚ ಕಡಿತ
ವಿವಿಧ ಹಂತಗಳಲ್ಲಿ ಹತ್ತಾರು ತೆರಿಗೆ, ಸೆಸ್ ಮತ್ತು ಶುಲ್ಕಗಳನ್ನು ವಿಧಿಸಿದಾಗ ಖನಿಜ ತೆಗೆಯುವ ಒಟ್ಟಾರೆ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ದೇಶೀಯ ಖನಿಜಗಳ ಬೆಲೆ ಹೆಚ್ಚಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನಗಳು ಸ್ಪರ್ಧಾತ್ಮಕತೆ ಕಳೆದುಕೊಳ್ಳುತ್ತವೆ. ಹೊಸ ತಿದ್ದುಪಡಿ ಈ ವೆಚ್ಚವನ್ನು ನಿಯಂತ್ರಿಸುತ್ತದೆ.
ಮಾರುಕಟ್ಟೆ ವಿಭಜನೆಗೆ ಬ್ರೇಕ್
ಒಂದೇ ರೀತಿಯ ಖನಿಜಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ತೆರಿಗೆ ದರಗಳಿದ್ದರೆ ಮಾರುಕಟ್ಟೆಯಲ್ಲಿ ಅಸಮಾನತೆ ಸೃಷ್ಟಿಯಾಗುತ್ತದೆ. ಗಣಿ ಎಲ್ಲಿದೆ ಎಂಬುದರ ಆಧಾರದ ಮೇಲೆ ಖನಿಜದ ಮೌಲ್ಯ ನಿರ್ಧಾರವಾಗಬಾರದು, ಬದಲಿಗೆ ದೇಶಾದ್ಯಂತ ಒಂದೇ ರೀತಿಯ ಸ್ಥಿರತೆ ಇರಬೇಕು ಎಂಬುದು ಈ ತಿದ್ದುಪಡಿಯ ಆಶಯ.
ಗಂಭೀರ ಸ್ವರೂಪದ ನಿರ್ಣಾಯಕ ಖನಿಜಗಳ ಪೂರೈಕೆ
ಇವಿ (EV), ಬ್ಯಾಟರಿ, ಸೌರಶಕ್ತಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳ ವಿಸ್ತರಣೆಯಿಂದಾಗಿ ಭಾರತದಲ್ಲಿ ಲಿಥಿಯಂ (Lithium), ಕೋಬಾಲ್ಟ್ (Cobalt), ನಿಕಲ್ (Nickel) ಮತ್ತು ಅಪರೂಪದ ಭೂಖನಿಜಗಳ (REE) ಬೇಡಿಕೆ ಹೆಚ್ಚುತ್ತಿದೆ. ದೇಶೀಯವಾಗಿ ಇವುಗಳನ್ನು ತೆಗೆಯುವುದು ಕಷ್ಟವಾದರೆ ಭಾರತ ಮತ್ತೆ ವಿದೇಶಗಳ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಆಮದು ಅವಲಂಬನೆ ತಗ್ಗಿಸುವ ತಂತ್ರಖನಿಜ ಸಂಪತ್ತು ನಮ್ಮ ಭೂಮಿಯಲ್ಲಿದ್ದರೂ, ಸಂಕೀರ್ಣ ನಿಯಮಗಳು ಮತ್ತು ತೆರಿಗೆ ಅನಿಶ್ಚಿತತೆಯಿಂದಾಗಿ ಅವುಗಳನ್ನು ಬಳಸಿಕೊಳ್ಳದಿದ್ದರೆ, ನಾವು ಆಮದಿನ ಮೇಲೆಯೇ ಬದುಕಬೇಕಾಗುತ್ತದೆ. ಆಂತರಿಕ ಗಣಿಗಾರಿಕೆಯನ್ನು ಸುಲಭಗೊಳಿಸುವುದರಿಂದ ಆಮದು ವೆಚ್ಚ ಅಪಾರ ಪ್ರಮಾಣದಲ್ಲಿ ಉಳಿತಾಯವಾಗಲಿದೆ.
ಫೆಡರಲ್ ವ್ಯವಸ್ಥೆ ಮತ್ತು ರಾಜ್ಯಗಳ ಆತಂಕ
ಸಂವಿಧಾನಾತ್ಮಕವಾಗಿ ತೆರಿಗೆ ವಿಧಿಸುವ ಹಕ್ಕನ್ನು ಹೊಂದಿರುವ ರಾಜ್ಯಗಳ ಅಧಿಕಾರಕ್ಕೆ ಈ ತಿದ್ದುಪಡಿ ಧಕ್ಕೆ ತರುತ್ತದೆ ಎಂಬ ವಿಮರ್ಶೆಯೂ ಇದೆ. ರಾಜ್ಯಗಳ ಆದಾಯ ಮತ್ತು ಹಣಕಾಸಿನ ಸ್ವಾಯತ್ತತೆ ಕಡಿಮೆಯಾಗುತ್ತದೆ ಎಂಬುದು ಟೀಕಾಕಾರರ ವಾದ. ಆದರೆ, ಖನಿಜ ಅಭಿವೃದ್ಧಿಯ ರಾಷ್ಟ್ರೀಯ ಹಿತದೃಷ್ಟಿಯಿಂದ ಮಿತಿ ಹೇರಲು ಸಂಸತ್ತಿಗೆ ಸಾಂವಿಧಾನಿಕ ಹಕ್ಕಿದೆ ಎಂಬುದು ಕೇಂದ್ರದ ಸ್ಪಷ್ಟನೆ.
ರಾಜಕೀಯ ಸಂಘರ್ಷಕ್ಕಿಂತ ಮೀರಿದ ಸಾಂವಿಧಾನಿಕ ಸಂಸದೀಯ ಅಧಿಕಾರ
ಇದು ಕೇವಲ ಕೇಂದ್ರ-ರಾಜ್ಯಗಳ ನಡುವಿನ ಆದಾಯದ ಜಗಳವಲ್ಲ. ಸಂವಿಧಾನವು ಸಂಸತ್ತಿಗೆ ಗಣಿ ಮತ್ತು ಖನಿಜ ಅಭಿವೃದ್ಧಿಯ ನಿಯಂತ್ರಣ ಅಧಿಕಾರ ನೀಡಿದ್ದರೆ, ರಾಜ್ಯಗಳಿಗೆ ಸಂಸತ್ತಿನ ಮಿತಿಗೊಳಪಟ್ಟ ತೆರಿಗೆ ಅಧಿಕಾರ ನೀಡಿದೆ. 2026ರ ಈ ಸುಧಾರಣೆಯು ಸಂವಿಧಾನದ ಚೌಕಟ್ಟಿನಲ್ಲೇ ಏಕರೂಪದ ಆರ್ಥಿಕ ವ್ಯವಸ್ಥೆಯನ್ನು ತರುತ್ತಿದೆ.
ರಾಯಲ್ಟಿ ಮತ್ತು ಹರಾಜು ಆದಾಯಕ್ಕೆ ಯಾವುದೇ ಧಕ್ಕೆಯಿಲ್ಲ!
ಈ ತಿದ್ದುಪಡಿಯಿಂದ ರಾಜ್ಯಗಳಿಗೆ ಸಿಗುವ ರಾಯಲ್ಟಿ (Royalty) ಹಾಗೂ ಹರಾಜು ಪ್ರೀಮಿಯಂ (Auction Premiums) ಆದಾಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ರಾಜ್ಯಗಳು ಎಂದಿನಂತೆ ರಾಯಲ್ಟಿ ಹಣವನ್ನು ಪಡೆಯಲಿವೆ. ಕೇಂದ್ರ ಸರ್ಕಾರ ಕೇವಲ ಅನಿಯಂತ್ರಿತ 'ಹೆಚ್ಚುವರಿ ತೆರಿಗೆ ಮತ್ತು ಸೆಸ್'ಗಳ ಮೇಲೆ ಮಾತ್ರ ಮಿತಿ ಹೇರಿದೆ.
ಕೇಂದ್ರ ಸರ್ಕಾರ ಗಣಿ ವಲಯವನ್ನು ಕಬಳಿಸುತ್ತಿಲ್ಲ
ಕೇಂದ್ರ ಸರ್ಕಾರ ಇಡೀ ಗಣಿಗಾರಿಕೆ ವಲಯವನ್ನು ತನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಕರೆಯುವುದು ತಪ್ಪಾಗುತ್ತದೆ. ರಾಜ್ಯಗಳಿಗೆ ಸಿಗಬೇಕಾದ ಮೂಲ ಆದಾಯವನ್ನು ಉಳಿಸಿಕೊಂಡೇ, ಹೂಡಿಕೆದಾರರನ್ನು ಹೆದರಿಸುವ ಹೆಚ್ಚುವರಿ ಅನಿಶ್ಚಿತ ತೆರಿಗೆಗಳನ್ನು ನಿಯಂತ್ರಿಸುವುದು ಇದರ ಮುಖ್ಯ ಗುರಿಯಾಗಿದೆ.
2015ರಿಂದ ಆರಂಭವಾದ ಗಣಿ ವಲಯದ ಕ್ರಾಂತಿ
ಕೇಂದ್ರ ಸರ್ಕಾರ 2015ರಿಂದಲೇ ಗಣಿ ವಲಯದಲ್ಲಿ ಪಾರದರ್ಶಕ ಹರಾಜು, ಪರಿಶೋಧನೆ ಮತ್ತು ವೇಗದ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. 2023 ಮತ್ತು 2025ರ ತಿದ್ದುಪಡಿಗಳು ಕಾರ್ಯತಂತ್ರದ ಖನಿಜಗಳ ಶೋಧನೆಗೆ ಖಾಸಗಿ ವಲಯಕ್ಕೂ ಬಾಗಿಲು ತೆರೆದು ದೇಶದ ಗಣಿ ರಂಗಕ್ಕೆ ಹೊಸ ಜೀವ ನೀಡಿದ್ದವು.
ಇನ್ಶೂರೆನ್ಸ್ ಶೂರಿಟಿ ಬಾಂಡ್ ಹಾಗೂ ಹೊಸ ಹರಾಜು ನಿಯಮಗಳು
ಕಲ್ಲಿದ್ದಲು ಗಣಿಗಾರಿಕೆಗೆ ಬ್ಯಾಂಕ್ ಗ್ಯಾರಂಟಿ ಬದಲಾಗಿ 'ಇನ್ಶೂರೆನ್ಸ್ ಶೂರಿಟಿ ಬಾಂಡ್' (Insurance Surety Bonds) ತರಲಾಗಿದೆ. ಜೊತೆಗೆ ಹೊಸ ಹರಾಜು ನಿಯಮಗಳು ಗಣಿ ಕಾರ್ಯಾಚರಣೆಯನ್ನು ತಕ್ಷಣವೇ ಆರಂಭಿಸಲು ಮತ್ತು ಹಣಕಾಸು ನೆರವು ಪಡೆಯಲು ಸುಲಭವಾಗುವಂತೆ ಮಾಡಿವೆ.
ಕ್ರಿಟಿಕಲ್ ಮಿನರಲ್ ಪಟ್ಟಿಗೆ ಕಲ್ಲಿದ್ದಲು ಸೇರ್ಪಡೆ
ಭಾರತದ ಉಕ್ಕು ಉದ್ಯಮಕ್ಕೆ ಅತ್ಯಗತ್ಯವಾಗಿರುವ ಕಲ್ಲಿದ್ದಲ್ಲು (Coking Coal) ಅನ್ನು 'ಸ್ಟ್ರಾಟೆಜಿಕ್ ಅಂಡ್ ಕ್ರಿಟಿಕಲ್ ಮಿನರಲ್' ಎಂದು ಘೋಷಿಸಲಾಗಿದೆ. ಇದು ಕೇವಲ ಗಣಿ ಆದಾಯಕ್ಕೆ ಸೀಮಿತವಾಗದೆ, ದೇಶದ ಕೈಗಾರಿಕಾ ಸಾಮರ್ಥ್ಯ ಮತ್ತು ರಾಷ್ಟ್ರೀಯ ಪೂರೈಕೆ ಭದ್ರತೆಗೆ ಸರಕಾರ ನೀಡುತ್ತಿರುವ ಆದ್ಯತೆಯನ್ನು ತೋರಿಸುತ್ತದೆ.
ವಿಕಸಿತ ಭಾರತ 2047' ಕನಸಿಗೆ ಗಣಿ ವಲಯದ ಶಕ್ತಿ
ಒಟ್ಟಾರೆಯಾಗಿ, ಖನಿಜ ಶೋಧನೆಯನ್ನು ಹೆಚ್ಚಿಸುವುದು, ಗಣಿಗಳನ್ನು ಶೀಘ್ರವಾಗಿ ಉತ್ಪಾದನೆಗೆ ತರುವುದು ಮತ್ತು ಅನಗತ್ಯ ವೆಚ್ಚಗಳನ್ನು ತಗ್ಗಿಸುವುದು ಈ ಸುಧಾರಣೆಯ ಅಂತಿಮ ಗುರಿ. 'ಆತ್ಮನಿರ್ಭರ ಭಾರತ' ಮತ್ತು 'ವಿಕಸಿತ ಭಾರತ 2047' ಗುರಿಯನ್ನು ತಲುಪಲು ಖನಿಜ ಅಡಿಪಾಯವನ್ನು ಗಟ್ಟಿಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.


