ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷದ ಆಂತರಿಕ ಬಂಡಾಯದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಫ್ರೀಜ್ ಮಾಡಿದೆ. ಮಮತಾ ಬ್ಯಾನರ್ಜಿ ಬಣಕ್ಕೆ ದಶಕಗಳ ಕಾಲವಿದ್ದ 'ಜೋಡ ಹುಲ್ಲು-ಹೂವು' ಗುರುತು ಕೈತಪ್ಪಿರುವುದು ಮಮತಾಗೆ ದೊಡ್ಡ ಹಿನ್ನಡೆಯಾಗಿದೆ.
ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಇದೀಗ ಅಭೂತಪೂರ್ವ ತಿರುವು ಸಿಕ್ಕಿದೆ. ದಶಕಗಳ ಕಾಲ ರಾಜ್ಯದಲ್ಲಿ ಏಕಚಕ್ರಾಧಿಪತ್ಯ ಸ್ಥಾಪಿಸಿದ್ದ ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರ ಚುನಾವಣಾ ಆಯೋಗ ಅತ್ಯಂತ ಬಿಗ್ ಶಾಕ್ ನೀಡಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗಿನ ತೀವ್ರ ಆಂತರಿಕ ಸಂಘರ್ಷ ಹಾಗೂ ಇಬ್ಬಗೆಯ ಬಂಡಾಯದ ಹಿನ್ನೆಲೆಯಲ್ಲಿ, ಮೂಲ ಪಕ್ಷದ ಹೆಸರು ಮತ್ತು ಪ್ರಸಿದ್ಧ 'ಜೋಡ ಹುಲ್ಲು-ಹೂವು' (ಜೋರಾ ಘಾಸ್) ಚಿಹ್ನೆಯನ್ನು ಆಯೋಗ ಸಂಪೂರ್ಣವಾಗಿ ಫ್ರೀಜ್ (ಸ್ಥಗಿತ) ಮಾಡಿದೆ. ಈ ಕಠಿಣ ನಿರ್ಧಾರವು ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ-ಏಕನಾಥ್ ಶಿಂಧೆ ಹಾಗೂ ಎನ್‌ಸಿಪಿಯ ಶರದ್ ಪವಾರ್-ಅಜಿತ್ ಪವಾರ್ ನಡುವೆ ನಡೆದ ರಾಜಕೀಯ ಬಿಕ್ಕಟ್ಟನ್ನು ಬೆಂಗಾಲ್‌ನಲ್ಲಿ ಮರುಕಳಿಸುವಂತೆ ಮಾಡಿದೆ.
24 ಗಂಟೆಯಲ್ಲೇ ಆಯೋಗದ ಮಾಸ್ಟರ್‌ಸ್ಟ್ರೋಕ್!
ಪಕ್ಷದ ಹೆಸರು ಮತ್ತು ಗುರುತು ಸ್ಥಗಿತಗೊಂಡ ಬೆನ್ನಲ್ಲೇ, ಸನ್ನಿಹಿತವಾಗಿರುವ ಪಶ್ಚಿಮ ಬಂಗಾಳದ ಉಪಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಕೇವಲ ೨೪ ಗಂಟೆಗಳ ಅವಧಿಯಲ್ಲಿ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ಎರಡೂ ಪ್ರತಿಸ್ಪರ್ಧಿ ಬಣಗಳಿಗೆ ಹೊಸ ಹೆಸರು ಹಾಗೂ ಹೊಸ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಇದರೊಂದಿಗೆ, ಮಮತಾ ಬ್ಯಾನರ್ಜಿ ತಮ್ಮ ಸ್ವಂತ ಕೈಯಿಂದ ಕಟ್ಟಿ ಬೆಳೆಸಿದ 'ಅಖಿಲ ಭಾರತ ತೃಣಮೂಲ ಕಾಂಗ್ರೆಸ್' ಹೆಸರನ್ನಾಗಲಿ, ಜೋಡ ಹುಲ್ಲು-ಹೂವಿನ ಗುರುತನ್ನಾಗಲಿ ಸದ್ಯಕ್ಕೆ ಬಳಸುವಂತಿಲ್ಲ.
ಮಮತಾ ಬಣಕ್ಕೆ ಸಿಕ್ಕ ಹೊಸ ಹೆಸರು, ಹೊಸ ಸಿಂಬಲ್ ಏನು?
ಚುನಾವಣಾ ಆಯೋಗದ ಹೊಸ ಆದೇಶದಂತೆ, ಮಮತಾ ಬ್ಯಾನರ್ಜಿ ಅವರ ಅಧಿಕೃತ ಗುಂಪಿಗೆ ಈಗ 'ಮಮತಾ ಅಖಿಲ ಭಾರತ ತೃಣಮೂಲ ಕಾಂಗ್ರೆಸ್' ಎಂದು ಹೊಸದಾಗಿ ಹೆಸರಿಡಲಾಗಿದೆ. ಈ ಬಣಕ್ಕೆ 'ಫುಟ್ಬಾಲ್ ಆಟಗಾರ' (Football Player) ಎಂಬ ಹೊಸ ಚುನಾವಣಾ ಚಿಹ್ನೆಯನ್ನು ಮಂಜೂರು ಮಾಡಲಾಗಿದೆ.
ವಿಭಜಿತ ಗುಂಪಪಿಗೆ ಯಾವ ಸಿಂಬಲ್!
ಇತ್ತ ಮಮತಾ ವಿರುದ್ಧ ಬಂಡಾಯವೆದ್ದು ಪಕ್ಷವನ್ನು ಇಬ್ಬಾಗ ಮಾಡಿದ ಫೂಟೀರ್ (ವಿಭಜಿತ) ಗುಂಪಿಗೆ 'ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್' ಎಂದು ಹೆಸರಿಡಲಾಗಿದ್ದು, ಅವರಿಗೆ 'ಲಕೋಟೆ' (Envelope) ಗುರುತನ್ನು ಸಿಂಬಲ್ ಆಗಿ ನೀಡಲಾಗಿದೆ. ಮುಂಬರುವ ಉಪಚುನಾವಣೆಗಳಲ್ಲಿ ಎರಡೂ ಬಣಗಳು ಈ ಹೊಸ ಹೆಸರು ಮತ್ತು ಹೊಸ ಚಿಹ್ನೆಗಳ ಅಡಿಯಲ್ಲೇ ಚುನಾವಣಾ ಕಣಕ್ಕಿಳಿಯಬೇಕಾಗಿದೆ.
ಫುಟ್ಬಾಲ್ ಮ್ಯಾಜಿಕ್ ವರ್ಕ್ ಆಗುತ್ತಾ?
ಪಶ್ಚಿಮ ಬಂಗಾಳದಲ್ಲಿ ಫುಟ್ಬಾಲ್ ಕೇವಲ ಒಂದು ಕ್ರೀಡೆಯಾಗಿರದೆ, ಪ್ರತಿಯೊಬ್ಬ ಬೆಂಗಾಳಿಯ ಸಾಂಸ್ಕೃತಿಕ ಭಾವನೆಯಾಗಿದೆ. ರಾಜ್ಯದಲ್ಲಿ 'ಖೇಲಾ ಹೋಬೆ' (ಆಟ ಶುರು) ಎಂಬ ಜನಪ್ರಿಯ ರಾಜಕೀಯ ಘೋಷಣೆಯನ್ನೇ ಸೃಷ್ಟಿಸಿದ್ದ ದೀದಿಗೆ, ಈಗ 'ಫುಟ್ಬಾಲ್ ಆಟಗಾರ' ಚಿಹ್ನೆ ಸಿಕ್ಕಿರುವುದು ಆಸಕ್ತಿಕರ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಆದರೆ, ದಶಕಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದ 'ಹುಲ್ಲು-ಹೂವಿನ' ಗುರುತು ಕೈತಪ್ಪಿರುವುದು ಮಮತಾ ಬ್ಯಾನರ್ಜಿಗೆ ಬಹುದೊಡ್ಡ ಹಿನ್ನಡೆಯಾಗಿದೆ.
ಇಡೀ ದೇಶ ಎದುರು ನೋಡುತ್ತಿರುವುದೇನು?
ತಮ್ಮದೇ ಪಕ್ಷದ ನಾಯಕರ ಬಂಡಾಯದಿಂದಾಗಿ ಹೆಸರು-ಚಿಹ್ನೆ ಎರಡನ್ನೂ ಕಳೆದುಕೊಂಡು ಹೀನಾಮಾನ ಸ್ಥಿತಿಗೆ ತಲುಪಿರುವ ಮಮತಾ ಬ್ಯಾನರ್ಜಿಗೆ, ಈ ಹೊಸ 'ಫುಟ್ಬಾಲ್ ಆಟಗಾರ' ಚಿಹ್ನೆ ಮತ್ತು ಹೊಸ ಹೆಸರು ರಾಜಕೀಯವಾಗಿ ಎಷ್ಟು ಮೈಲೇಜ್ ತಂದುಕೊಡಲಿದೆ ಎಂಬುದನ್ನು ಇಡೀ ದೇಶ ಕಾತುರದಿಂದ ವೀಕ್ಷಿಸುತ್ತಿದೆ.


