ಕೇರಳದ ಗ್ರ್ಯಾಂಡ್ ಮುಫ್ತಿ ಶೇಕ್ ಅಬೂಬಕರ್ ಅಹ್ಮದ್ ಅವರು, ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬಂದರೆ ಮಹಾ ವಿನಾಶಕ್ಕೆ ಕಾರಣವಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಿಳೆಯರನ್ನು ಚಿನ್ನದ ಆಭರಣಕ್ಕೆ ಹೋಲಿಸಿದ ಅವರು, ಇಸ್ಲಾಂ ಅವರಿಗೆ ಮನೆಯಲ್ಲೇ ಇರಲು ಮತ್ತು ಪರ್ದಾ ಪಾಲಿಸಲು ಸೂಚಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ತಿರುವನಂತಪುರಂ (ಆ.31): ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬಂದರೆ ಮಹಾ ವಿನಾಶಕ್ಕೆ ಕಾರಣವಾಗುತ್ತದೆ, ಆದ್ದರಿಂದ ಇಸ್ಲಾಂ ಅವರಿಗೆ ಮನೆಯಲ್ಲೇ ಇರಲು ಮತ್ತು ಪರ್ದಾ ಪಾಲಿಸಲು ಸೂಚಿಸಿದೆ ಎಂದು ಹೇಳುವ ಮೂಲಕ ಕೇರಳದ ಗ್ರ್ಯಾಂಡ್ ಮುಫ್ತಿ ಶೇಕ್ ಅಬೂಬಕರ್ ಅಹ್ಮದ್ (Sheikh Abubakr Ahmad) ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.

ಕೊಚ್ಚಿಯಲ್ಲಿ ನಡೆದ 'ಹುಬ್ಬುಲ್ ರಸೂಲ್' ಸಮಾವೇಶದಲ್ಲಿ ಮಾತನಾಡಿದ ಅವರು, ಮಹಿಳೆಯರು ಸಾರ್ವಜನಿಕ ರಂಗಕ್ಕೆ ಪ್ರವೇಶಿಸದೆ ತಮ್ಮ ಮನೆಗಳಲ್ಲೇ ಇರಬೇಕು ಹಾಗೂ ಪರ್ದಾ ವ್ಯವಸ್ಥೆಯನ್ನು ಪಾಲಿಸಬೇಕು ಎಂದು ಹೇಳುವ ಉದ್ದೇಶದಿಂದ ಮಹಿಳೆಯರನ್ನು ಬೆಲೆಬಾಳುವ ಚಿನ್ನದ ಆಭರಣಗಳಿಗೆ ಹೋಲಿಸಿ ಈ ಹೇಳಿಕೆ ನೀಡಿದ್ದಾರೆ.

ಚಿನ್ನದ ಪೆಟ್ಟಿಗೆಯ ಉದಾಹರಣೆ:

'ಆಭರಣದ ಅಂಗಡಿಯಲ್ಲಿ ಚಿನ್ನದ ಹಾರವನ್ನು ಸುರಕ್ಷಿತವಾಗಿ ಪೆಟ್ಟಿಗೆಯಲ್ಲಿ ಮತ್ತು ಬಟ್ಟೆಯಲ್ಲಿ ಸುತ್ತಿ ಇಡಲಾಗುತ್ತದೆ. ಹಾಗಿದ್ದಾಗ ಮಾತ್ರ ಅದರ ಸೌಂದರ್ಯ ಮತ್ತು ಮೌಲ್ಯ ಉಳಿಯುತ್ತದೆ. ರಸ್ತೆ ಬದಿಯಲ್ಲಿಡುವ ಬೀಸುವ ಕಲ್ಲಿನಂತೆ ಚಿನ್ನವನ್ನು ಹೊರಗಿಟ್ಟರೆ ಪ್ರತಿಯೊಬ್ಬರೂ ಅದನ್ನು ಮುಟ್ಟಿ ಹಾಳುಮಾಡುತ್ತಾರೆ' ಎಂದು ಕಾಂತಪುರಂ ಹೇಳಿದ್ದಾರೆ. ಅದೇ ರೀತಿ ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬಂದರೆ ಮಹಾ ವಿನಾಶಕ್ಕೆ ಕಾರಣವಾಗುತ್ತದೆ, ಆದ್ದರಿಂದ ಇಸ್ಲಾಂ ಅವರಿಗೆ ಮನೆಯಲ್ಲೇ ಇರಲು ಮತ್ತು ಪರ್ದಾ ಪಾಲಿಸಲು ಸೂಚಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪವಿತ್ರ ಕುರಾನ್ ಉಲ್ಲೇಖ:

ಮಹಿಳೆಯರು ಮನೆಯೊಳಗೆ ಇರಬೇಕೆಂದು ಪವಿತ್ರ ಕುರಾನ್ ಹೇಳುತ್ತದೆ ಎಂದು ತಿಳಿಸಿದ ಅವರು, 'ಈ ನಿಯಮವು ಮಹಿಳೆಯರನ್ನು ಕೀಳಾಗಿ ಕಾಣಲು ಅಲ್ಲ, ಬದಲಿಗೆ ಅವರಿಗೆ ಗೌರವ ಮತ್ತು ರಕ್ಷಣೆ ನೀಡಲು ರೂಪಿಸಲಾಗಿದೆ' ಎಂದಿದ್ದಾರೆ. ಕಳೆದ 100 ವರ್ಷಗಳಿಂದ ಸಮಸ್ತ ಕೇರಳ ಜಮ್ಮಿಯತುಲ್ ಉಲಮಾ ಸಂಘಟನೆಯ ಧರ್ಮಗುರುಗಳು ಈ ನಿಲುವನ್ನು ಬೋಧಿಸುತ್ತಾ ಬಂದಿದ್ದು, ಇದರಿಂದಾಗಿ ದೇಶದ ಮಹಿಳೆಯರು ತಮ್ಮ ಗೌರವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇದೇ ವೇಳೆ, ಇಸ್ಲಾಂ ಧರ್ಮವು ಮಹಿಳೆಯರಿಗೆ ಆಸ್ತಿ ಹಕ್ಕು ಮತ್ತು ಪರಂಪರೆಯ ಹಕ್ಕುಗಳನ್ನು ನೀಡುವ ಮೂಲಕ ಅವರ ಸ್ಥಾನಮಾನವನ್ನು ಎತ್ತಿಹಿಡಿದಿದೆ ಎಂದ ಅವರು, ಇಸ್ಲಾಮಿಕ್ ವಿದ್ವಾಂಸರಾಗಿ ಧರ್ಮದ ತತ್ವಗಳನ್ನು ಹೇಳುವುದು ತಮ್ಮ ಕರ್ತವ್ಯವಾಗಿದ್ದು, ಯಾರೂ ತಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಸಮಸ್ತ ಸಂಘಟನೆಯು "ಮಹಿಳೆಯರು ಸಾರ್ವಜನಿಕ ವೇದಿಕೆಗಳಲ್ಲಿ ಮತ್ತು ಪುರುಷರೊಂದಿಗಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು" ಎಂದು ಹೊರಡಿಸಿದ್ದ ಸುತ್ತೋಲೆಯ ಬೆನ್ನಲ್ಲೇ ಧರ್ಮಗುರುಗಳಿಂದ ಈ ಹೇಳಿಕೆ ಬಂದಿದ್ದು, ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.