ಝಾನ್ಸಿಯಲ್ಲಿ 27 ವರ್ಷದ ಶಿವಾನಿ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಘಟನೆಯ ನಂತರ ತಲೆಮರೆಸಿಕೊಂಡಿರುವ ಪತಿ ಯಶ್ ಠಾಕೂರ್ ಮೇಲೆಯೇ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಝಾನ್ಸಿಯ ಸಿಪ್ರಿ ಬಜಾರ್ ಪ್ರದೇಶದಲ್ಲಿ 27 ವರ್ಷದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಈಕೆಯ ಪತಿಯೇ ಕೊಲೆ ಮಾಡಿರಬಹುದು ಅಂತ ಪೊಲೀಸರು ಶಂಕಿಸಿದ್ದಾರೆ. ಸೋಮವಾರ ಬೆಳಗ್ಗೆ ಆವಾಸ್ ವಿಕಾಸ್ ಕಾಲೋನಿಯ ಫೌಜಿ ತಿರಾಹ ಬಳಿಯ ಬಾಡಿಗೆ ಮನೆಯಲ್ಲಿ ಶಿವಾನಿ ಅಲಿಯಾಸ್ ಸುಧಾ ಎಂಬ ಯುವತಿ ಹಾಸಿಗೆಯ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ತಕ್ಷಣ ಆಕೆಯನ್ನು ಝಾನ್ಸಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯ್ತು. ಆದರೆ, ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ವೈದ್ಯರು ಆಕೆಯ ಮರಣೋತ್ತರ ಪರೀಕ್ಷೆ ನಡೆಸಿದಾಗ, ಕತ್ತು ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲ, ಆಕೆಯ ಮುಖದ ಮೇಲೆ ಐದು ಕಡೆ ಗಾಯಗಳಾಗಿರುವುದನ್ನೂ ವೈದ್ಯರು ಗುರುತಿಸಿದ್ದಾರೆ. ಶಿವಾನಿ ಮೂಲತಃ ಮಧ್ಯಪ್ರದೇಶದ ದತಿಯಾ ಜಿಲ್ಲೆಯ ಇಂದರ್‌ಗಢದವಳು. ಕಳೆದ ಮೂರು ತಿಂಗಳಿಂದ ತನ್ನ ಸಹೋದರಿ ಮುಸ್ಕಾನ್ ಮತ್ತು ಸಹೋದರ ಅನಿಕೇತ್ ಜೊತೆ ಝಾನ್ಸಿಯಲ್ಲಿ ವಾಸವಾಗಿದ್ದಳು.

ಪತಿಯ ಮೇಲೆಯೇ ಅನುಮಾನ, ಎಫ್‌ಐಆರ್ ದಾಖಲು

ಶಿವಾನಿಯ ಪತಿ, ಗ್ವಾಲಿಯರ್ ಮೂಲದ ಯಶ್ ಠಾಕೂರ್, ಮದುವೆಯಾದಾಗಿನಿಂದಲೂ ಸಣ್ಣಪುಟ್ಟ ವಿಚಾರಕ್ಕೆ ಆಕೆಯ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಆಗಸ್ಟ್ 31 ರಂದು ದಂಪತಿ ನಡುವೆ ಜಗಳ ನಡೆದ ಬಗ್ಗೆ ತಮಗೆ ಮಾಹಿತಿ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಯಶ್, ಶಿವಾನಿ ಮೇಲೆ ಹಲ್ಲೆ ಮಾಡಿ, ಹೊರಗಿನಿಂದ ರೂಮ್‌ಗೆ ಬೀಗ ಹಾಕಿ ಪರಾರಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಮರುದಿನ ಬೆಳಗ್ಗೆ ಶಿವಾನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈ ಘಟನೆ ನಂತರ ಯಶ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಿವಾನಿ ಕುಟುಂಬದವರು ನೀಡಿದ ದೂರಿನ ಅನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿ ಯಶ್ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಲಾಗಿದೆ. ಈ ಪ್ರಕರಣದಲ್ಲಿ ಯಶ್ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್‌ಪಿ ಸಿಟಿ ಪ್ರೀತಿ ಸಿಂಗ್ ಖಚಿತಪಡಿಸಿದ್ದಾರೆ. ಗ್ವಾಲಿಯರ್‌ಗೆ ತೆರಳಿದ್ದ ಪೊಲೀಸ್ ತಂಡಕ್ಕೆ ಯಶ್ ಪತ್ತೆಯಾಗಿಲ್ಲ. ಅಷ್ಟೇ ಅಲ್ಲ, ಆತನ ಕುಟುಂಬಸ್ಥರು ಕೂಡ ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದಾರೆ.

ಕಾಲ್ ರೆಕಾರ್ಡ್ಸ್ ಪರಿಶೀಲನೆ

ಘಟನೆಯ ಸಂಪೂರ್ಣ ಚಿತ್ರಣ ಪಡೆಯಲು ಯಶ್ ಮತ್ತು ಶಿವಾನಿ ಇಬ್ಬರ ಕಾಲ್ ಡೀಟೇಲ್ ರೆಕಾರ್ಡ್ಸ್ (ಸಿಡಿಆರ್) ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಿಒ ಸಿಟಿ ರಾಮ್‌ವೀರ್ ಸಿಂಗ್ ಹೇಳಿದ್ದಾರೆ. ಯಶ್ ಒಂದು ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಆತನ ಮೇಲೆ ಈ ಹಿಂದೆಯೂ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂಬ ವಿಚಾರ ತನಿಖೆಯಿಂದ ಬಯಲಾಗಿದೆ.

ಯಶ್, ಶಿವಾನಿಯ ಮೊಬೈಲ್ ಫೋನ್ ಸಮೇತ ಪರಾರಿಯಾಗಿದ್ದಾನೆ. ಘಟನೆ ನಡೆದಾಗಿನಿಂದ ಇಬ್ಬರ ಫೋನ್‌ಗಳೂ ಸ್ವಿಚ್ಡ್ ಆಫ್ ಆಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಕಪಕ್ಕದ ರೂಮಿನಲ್ಲೇ ಮಲಗಿದ್ದ ಶಿವಾನಿಯ ತಂಗಿ ಮುಸ್ಕಾನ್‌ಗೆ ಯಾಕೆ ಯಾವುದೇ ಸದ್ದು ಕೇಳಿಸಲಿಲ್ಲ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಾನಿಯ ತಂಗಿ ಮುಸ್ಕಾನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಎರಡು ವರ್ಷಗಳ ಹಿಂದೆ ಶಿವಾನಿಗೆ ಸೋಷಿಯಲ್ ಮೀಡಿಯಾದಲ್ಲಿ ಯಶ್ ಪರಿಚಯವಾಗಿದ್ದ. ಇಬ್ಬರೂ ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು ಎಂದು ತಿಳಿಸಿದ್ದಾಳೆ. ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ಯಶ್‌ಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಶಿವಾನಿಯ ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಚುರುಕುಗೊಂಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಶುರುವಾದ ಪ್ರೀತಿ, ಸಾವಿನಲ್ಲಿ ಕೊನೆಗೊಂಡಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.