ಭಾರತೀಯ ರೈಲ್ವೆಯು ರೈಲ್ವೆ ನಿಲ್ದಾಣ, ರೈಲು ಮತ್ತು ಆವರಣದಲ್ಲಿ ನೈರ್ಮಲ್ಯ ನಿಯಮಗಳನ್ನು ಬಿಗಿಗೊಳಿಸಿದೆ. ಹೊಸ ತಿದ್ದುಪಡಿಯ ಪ್ರಕಾರ, ಗಲೀಜು ಮಾಡುವುದು, ಉಗುಳುವುದು ಸೇರಿದಂತೆ ಹಲವು ಕೃತ್ಯಗಳಿಗೆ ವಿಧಿಸುವ ದಂಡವನ್ನು ₹500 ರಿಂದ ₹1000 ಕ್ಕೆ ಹೆಚ್ಚಿಸಲಾಗಿದೆ.
ನವದೆಹಲಿ (ಆ.27): ಭಾರತೀಯ ರೈಲ್ವೆಯು ನೈರ್ಮಲ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಗೊಳಿಸಿದ್ದು, ಗಲೀಜು ಮಾಡುವುದು ಸೇರಿದಂತೆ ಹಲವು ಕೃತ್ಯಗಳಿಗೆ ದಂಡದ ಮೊತ್ತವನ್ನು ದ್ವಿಗುಣ ಮಾಡಿದೆ. ಈ ದಂಡವನ್ನು ಪಾವತಿಸದಿದ್ದರೆ ಆರೋಪಿಯನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಈಗ ರೈಲ್ವೆ ಆವರಣದಲ್ಲಿ ಗಲೀಜು ಅಥವಾ ಅಸೌಚ ಮಾಡಿದರೆ ಕನಿಷ್ಠ 1 ಸಾವಿರ ರೂಪಾಯಿ ದಂಡ ವಿಧಿಸಬಹುದು. ಈ ಮೊದಲು ಈ ಮೊತ್ತ 500 ರೂಪಾಯಿ ಆಗಿತ್ತು. ರೈಲ್ವೆ ಸಚಿವಾಲಯವು ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯ ಪ್ರಕಾರ, Indian Railways (Penalties for Activities Affecting Cleanliness at Railway Premises) Rules, 2012 ಕಾಯ್ದೆಗೆ ರೈಲ್ವೆಯು ತಿದ್ದುಪಡಿ ತಂದಿದೆ. ಹೊಸ ನಿಯಮಗಳು ಗೆಜೆಟ್‌ನಲ್ಲಿ ಪ್ರಕಟಗೊಂಡಿದ್ದು, ಅವುಗಳನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದೆ.
ತಿದ್ದುಪಡಿ ಮಾಡಿದ ನಿಯಮದಂತೆ ರೈಲ್ವೆ ಆವರಣದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದರೆ ಈಗ 1 ಸಾವಿರ ರೂಪಾಯಿಯವರೆಗೆ ದಂಡ ವಿಧಿಸಬಹುದು. ಒಂದು ವೇಳೆ ವ್ಯಕ್ತಿಯು ದಂಡ ಪಾವತಿಸಲು ನಿರಾಕರಿಸಿದರೆ, ಆತನನ್ನು ಸಂಬಂಧಪಟ್ಟ ಅಧಿಕಾರ ವ್ಯಾಪ್ತಿಯ ಸಕ್ಷಮ ನ್ಯಾಯಾಲಯದ (ಕೋರ್ಟ್) ಮುಂದೆ ಹಾಜರುಪಡಿಸಬಹುದು. ನ್ಯಾಯಾಲಯವು ಅಂತಹ ಪ್ರಕರಣಗಳಲ್ಲಿ ಎರಡು ಸಾವಿರ ರೂಪಾಯಿ ದಂಡವನ್ನು ವಿಧಿಸಬಹುದು.
ಯಾವ ಕೃತ್ಯಗಳಿಗೆ ದಂಡ?
ರೈಲ್ವೆಯ ಸ್ವಚ್ಛತಾ ನಿಯಮದಂತೆ ನಿಲ್ದಾಣ, ರೈಲು ಅಥವಾ ರೈಲ್ವೆ ಆವರಣದಲ್ಲಿ ಹಲವು ಕೃತ್ಯಗಳನ್ನು ನಿಷೇಧಿಸಲಾಗಿದೆ. ಅವುಗಳಲ್ಲಿ ಕೆಳಗಿನ ವಿಷಯಗಳು ಸೇರಿವೆ:
- ನಿಗದಿತ ಸ್ಥಳವನ್ನು ಹೊರತುಪಡಿಸಿ ಬೇರೆಲ್ಲಾದರೂ ಕಸ ಹಾಕುವುದು ಅಥವಾ ಚೆಲ್ಲುವುದು.
- ರೈಲ್ವೆ ಆವರಣದಲ್ಲಿ ಅಡುಗೆ ಮಾಡುವುದು.
- ರೈಲ್ವೆ ಆವರಣದಲ್ಲಿ ಸ್ನಾನ ಮಾಡುವುದು ಅಥವಾ ಬಟ್ಟೆ ತೊಳೆಯುವುದು.
- ರೈಲ್ವೆ ಆವರಣದಲ್ಲಿ ಉಗುಳುವುದು.
- ಬಯಲಿನಲ್ಲಿ ಮೂತ್ರ ವಿಸರ್ಜನೆ ಅಥವಾ ಶೌಚ ಮಾಡುವುದು.
- ರೈಲ್ವೆ ಆವರಣದಲ್ಲಿ ಪ್ರಾಣಿಗಳಿಗೆ ಅಥವಾ ಪಕ್ಷಿಗಳಿಗೆ ಆಹಾರ ನೀಡುವುದು.
- ರೈಲ್ವೆ ಆವರಣದಲ್ಲಿ ವಾಹನಗಳನ್ನು ತೊಳೆಯುವುದು.
- ರೈಲ್ವೆ ಗಡಿಯಲ್ಲಿ/ಆವರಣದಲ್ಲಿ ಬಟ್ಟೆ ಅಥವಾ ಪಾತ್ರೆಗಳನ್ನು ತೊಳೆಯುವುದು.
- ರೈಲ್ವೆ ಆವರಣದಲ್ಲಿ ಅನಧಿಕೃತವಾಗಿ ಸಾಮಗ್ರಿಗಳನ್ನು ಇಡುವುದು.
- ರೈಲ್ವೆ ಆವರಣದಲ್ಲಿ ಪೋಸ್ಟರ್‌ಗಳನ್ನು ಅಂಟಿಸುವುದು.
ಕ್ರಮಗಳ ವ್ಯಾಪ್ತಿ ಹೆಚ್ಚಳ
ಹೊಸ ನಿಯಮಗಳು ಕೇವಲ ಕಸ ಹಾಕುವುದರ ಮೇಲಿನ ಕ್ರಮಕ್ಕೆ ಮಾತ್ರ ಸೀಮಿತವಾಗಿಲ್ಲ. ರೈಲು ಕೋಚ್ ಅಥವಾ ಇತರ ರೈಲ್ವೆ ಆಸ್ತಿಯ ಮೇಲೆ ಅನುಮತಿಯಿಲ್ಲದೆ ಪೋಸ್ಟರ್ ಅಂಟಿಸುವುದು, ಬರೆಯುವುದು ಅಥವಾ ಚಿತ್ರ ಬಿಡಿಸುವುದನ್ನು ಸಹ ನಿಷೇಧಿಸಲಾಗಿದೆ. ರೈಲ್ವೆ ಆಸ್ತಿಗೆ ಹಾನಿ ಉಂಟುಮಾಡುವುದು ಅಥವಾ ಅದನ್ನು ಹಾಳುಗೆಡವುವ ಕೃತ್ಯಗಳಿಗೆ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದು.
ರೈಲ್ವೆ ಆವರಣದಲ್ಲಿ ಕೆಲಸ ಮಾಡುವ ಅಧಿಕೃತ ವೆಂಡರ್‌ಗಳು (ಮಾರಾಟಗಾರರು) ಮತ್ತು ಹಾಕರ್ಸ್‌ಗಳಿಗೂ ಈ ಸ್ವಚ್ಛತಾ ನಿಯಮಗಳು ಅನ್ವಯವಾಗಲಿವೆ. ಅವರು ಕಸ ಸಂಗ್ರಹಿಸಲು ಡಸ್ಟ್‌ಬಿನ್ (ಡಬ್ಬಿ) ಅಥವಾ ಸೂಕ್ತ ವ್ಯವಸ್ಥೆ ಮಾಡುವುದು ಕಡ್ಡಾಯವಾಗಿದೆ. ಹಾಗೆಯೇ ಸಂಗ್ರಹವಾದ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಜವಾಬ್ದಾರಿ ಕೂಡ ಅವರದ್ದೇ ಆಗಿರುತ್ತದೆ.
ದಂಡ ವಸೂಲಿ ಮಾಡುವವರು ಯಾರು?
ರೈಲ್ವೆ ನಿಯಮಗಳ ಪ್ರಕಾರ, ಕೆಲವು ಅಧಿಕಾರಿಗಳಿಗೆ ಈ ನಿಬಂಧನೆಗಳ ಅಡಿಯಲ್ಲಿ ದಂಡ ವಿಧಿಸಲು ಮತ್ತು ಅದನ್ನು ವಸೂಲಿ ಮಾಡಲು ಅಧಿಕಾರ ನೀಡಲಾಗಿದೆ. ಇದರಲ್ಲಿ ಸ್ಟೇಷನ್ ಮಾಸ್ಟರ್ ಅಥವಾ ಸ್ಟೇಷನ್ ಮ್ಯಾನೇಜರ್, ವಾಣಿಜ್ಯ ವಿಭಾಗದ ಟಿಕೆಟ್ ಕಲೆಕ್ಟರ್ ಮತ್ತು ಆಪರೇಟಿಂಗ್ ವಿಭಾಗದ ಸಮಾನ ಶ್ರೇಣಿಯ ಅಧಿಕಾರಿಗಳು ಸೇರಿದ್ದಾರೆ. ಇದಲ್ಲದೆ ರೈಲ್ವೆ ಆಡಳಿತದ ಪರವಾಗಿ ಅಧಿಕಾರ ಪಡೆದ ಇತರ ಅಧಿಕಾರಿಗಳು ಸಹ ನಿಯಮಗಳ ಉಲ್ಲಂಘನೆಯಾದಾಗ ದಂಡ ವಸೂಲಿ ಮಾಡಬಹುದು.


