ನವದೆಹಲಿ(ಏ.11): ದೇಶಾದ್ಯಂತ ಕಿರಾಣಿ ಅಂಗಡಿಗಳಿಗೆ ಅಕ್ಕಿ, ಬೇಳೆ, ಗೋಧಿಹಿಟ್ಟು ಮುಂತಾದ ಅಗತ್ಯ ವಸ್ತುಗಳು ಹಾಗೂ ಬಿಸ್ಕತ್‌, ನೂಡಲ್ಸ್‌ನಂತಹ ಸಿದ್ಧ ಆಹಾರದ ಪೂರೈಕೆಯಲ್ಲಿ ಭಾರಿ ಕೊರತೆ ಉಂಟಾಗಿದೆ. ಬೇಡಿಕೆ ಹೆಚ್ಚಾಗಿರುವುದು ಹಾಗೂ ಉತ್ಪಾದನೆ ಮತ್ತು ಸಾಗಣೆಗೆ ತೊಂದರೆಯಾಗಿರುವುದರಿಂದ ಈ ಸಮಸ್ಯೆ ತಲೆದೋರಿದೆ.

ಕೊರೋನಾ ವೈರಸ್‌ ಭೀತಿಯಿಂದಾಗಿ ಮಿಲ್‌ಗಳು ಹಾಗೂ ಸಿದ್ಧ ಆಹಾರ ತಯಾರಿಕಾ ಘಟಕಗಳ ಕಾರ್ಮಿಕರು ಊರುಗಳಿಗೆ ಮರಳಿದ್ದಾರೆ. ಹೀಗಾಗಿ ಮಿಲ್‌ ಮತ್ತು ಕಾರ್ಖಾನೆಗಳು ತಮ್ಮ ಸಾಮರ್ಥ್ಯದ ಶೇ.20-30ರಷ್ಟುಉತ್ಪನ್ನಗಳನ್ನು ಮಾತ್ರ ತಯಾರಿಸುತ್ತಿವೆ. ಜೊತೆಗೆ ಒಂದೆಡೆಯಿಂದ ಇನ್ನೊಂದೆಡೆಗೆ ಈ ಉತ್ಪನ್ನಗಳ ಸಾಗಣೆಗೂ ತೊಂದರೆಯಾಗಿದೆ. ಹೀಗಾಗಿ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ಅಗತ್ಯ ವಸ್ತುಗಳ ತಯಾರಕರು ಹೇಳಿದ್ದಾರೆ.

ಮೊದಲ ಬಾರಿ ಮಾಸ್ಕ್ ಧರಿಸಿದ ಮೋದಿ, ದೇಶದ ಜನತೆಗೆ ಮಹತ್ವದ ಸಂದೇಶ!

ಅಕ್ಕಿ, ಗೋಧಿ ಇತ್ಯಾದಿ ಧಾನ್ಯಗಳ ಮಿಲ್‌ಗಳಲ್ಲಿ ಕಾರ್ಮಿಕರ ಅಭಾವವಿದೆ. ಬಿಸ್ಕತ್‌, ಮ್ಯಾಗಿ, ಇತರ ಸ್ನಾಕ್ಸ್‌ ಹಾಗೂ ಸಿದ್ಧ ಆಹಾರಗಳ ಕಾರ್ಖಾನೆಗಳಲ್ಲೂ ಕಾರ್ಮಿಕರ ಕೊರತೆಯಿದೆ. ಹೀಗಾಗಿ ಉತ್ಪಾದನೆ ಸಾಕಷ್ಟುಆಗುತ್ತಿಲ್ಲ. ಆದರೆ, ಲಾಕ್‌ಡೌನ್‌ ಮುಂದುವರಿಕೆ ಭೀತಿಯಿಂದ ಜನರು ಇವುಗಳ ಖರೀದಿಯನ್ನು ಹೆಚ್ಚಿಸಿದ್ದಾರೆ. ಹೀಗಾಗಿ ದೇಶಾದ್ಯಂತ ಕಿರಾಣಿ ಅಂಗಡಿಗಳಲ್ಲಿ ಇವುಗಳ ಕೊರತೆ ಕಾಣಿಸಿಕೊಂಡಿದೆ.

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ಶೇ.75ರಷ್ಟುಗಿರಣಿಗಳು ಬಂದ್‌ ಆಗಿವೆ. ಬ್ರಿಟಾನಿಯಾ, ಐಟಿಸಿ, ಪೆಪ್ಸಿಕೋ, ಪಾರ್ಲೆ, ನೆಸ್ಲೆ ಮುಂತಾದ ಘಟಕಗಳಲ್ಲಿ ಶೇ.20-30ರಷ್ಟುಮಾತ್ರ ಉತ್ಪಾದನೆ ಸಾಧ್ಯವಾಗುತ್ತಿದೆ. ಇನ್ನು, ಅಗತ್ಯ ವಸ್ತುಗಳ ಸಾಗಣೆಗೆ ಕೇಂದ್ರ ಸರ್ಕಾರ ಲಾಕ್‌ಡೌನ್‌ನಿಂದ ವಿನಾಯ್ತಿ ನೀಡಿದ್ದರೂ ಹಲವು ರಾಜ್ಯಗಳಲ್ಲಿ ಪೊಲೀಸರು ಈ ವಸ್ತುಗಳ ಸಾಗಣೆಗೂ ನಿರ್ಬಂಧ ಹೇರುತ್ತಿದ್ದಾರೆ. ಹೀಗಾಗಿ ಸಮಸ್ಯೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.