ದೇಶದ ರಾಜಧಾನಿ ನವದೆಹಲಿ ಈಗ ಜಾಗತಿಕ ಮಹಾಶಕ್ತಿಗಳ ಸಂಗಮಕ್ಕೆ ಸಾಕ್ಷಿಯಾಗಿದೆ. ಜಾಗತಿಕ ಮಟ್ಟದಲ್ಲಿ ವ್ಯಾಪಾರ ಹಾಗೂ ರಾಜತಾಂತ್ರಿಕ ಬಿಕ್ಕಟ್ಟುಗಳು ಹೆಚ್ಚುತ್ತಿರುವ ನಡುವೆಯೇ, ಭಾರತದ ಆತಿಥ್ಯದಲ್ಲಿ ಶನಿವಾರದಿಂದ (ಸೆಪ್ಟೆಂಬರ್ 12, 2026) ಎರಡು ದಿನಗಳ ಪ್ರತಿಷ್ಠಿತ ‘ಬ್ರಿಕ್ಸ್’ (BRICS) ಶೃಂಗಸಭೆ ಆರಂಭವಾಗುತ್ತಿದೆ. ಈ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

ನವದೆಹಲಿ: ದೇಶದ ರಾಜಧಾನಿ ನವದೆಹಲಿ ಈಗ ಜಾಗತಿಕ ಮಹಾಶಕ್ತಿಗಳ ಸಂಗಮಕ್ಕೆ ಸಾಕ್ಷಿಯಾಗಿದೆ. ಜಾಗತಿಕ ಮಟ್ಟದಲ್ಲಿ ವ್ಯಾಪಾರ ಹಾಗೂ ರಾಜತಾಂತ್ರಿಕ ಬಿಕ್ಕಟ್ಟುಗಳು ಹೆಚ್ಚುತ್ತಿರುವ ನಡುವೆಯೇ, ಭಾರತದ ಆತಿಥ್ಯದಲ್ಲಿ ಶನಿವಾರದಿಂದ (ಸೆಪ್ಟೆಂಬರ್ 12, 2026) ಎರಡು ದಿನಗಳ ಪ್ರತಿಷ್ಠಿತ ‘ಬ್ರಿಕ್ಸ್’ (BRICS) ಶೃಂಗಸಭೆ ಆರಂಭವಾಗುತ್ತಿದೆ.

ದೇಶದ ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ಚುರುಕುಗೊಳಿಸಲು ಭಾರತ ಈ ಸಭೆಯನ್ನು ಸದುಪಯೋಗಪಡಿಸಿಕೊಳ್ಳುತ್ತಿದೆ. ಮುಖ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬೇಕಾದ ಆಹಾರ, ಇಂಧನ ಹಾಗೂ ಸರಕು ಸಾಗಣೆ (ಸಪ್ಲೈ ಚೈನ್) ಭದ್ರತೆಗೆ ಭಾರತ ಹೆಚ್ಚಿನ ಒತ್ತು ನೀಡಲಿದೆ. ವಿಶ್ವದ ಹೊಸ ವ್ಯವಸ್ಥೆ ಹೇಗಿರಬೇಕು ಎಂಬ ಬಗ್ಗೆ ಈ ವೇದಿಕೆಯಲ್ಲಿ ಪ್ರಮುಖ ಚರ್ಚೆಗಳು ನಡೆಯಲಿವೆ.

ದೆಹಲಿಯಲ್ಲಿ ವಿಶ್ವದ ಪ್ರಭಾವಿ ನಾಯಕರ ದಂಡು

  • ವಿಶ್ವದ ಗಮನ ಸೆಳೆಯುತ್ತಿರುವ ಈ ಶೃಂಗಸಭೆಗೆ ಹಲವು ಪ್ರಮುಖ ನಾಯಕರು ಆಗಮಿಸುತ್ತಿದ್ದಾರೆ.
  • ವ್ಲಾಡಿಮಿರ್ ಪುಟಿನ್ - ರಷ್ಯಾ ಅಧ್ಯಕ್ಷರು
  • ಶೀ ಜಿನ್‌ಪಿಂಗ್ - ಚೀನಾ ಅಧ್ಯಕ್ಷರು (ಸುದೀರ್ಘ 7 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ)
  • ಮಸೌದ್ ಪೆಜೆಶ್ಕಿಯನ್ - ಇರಾನ್ ಅಧ್ಯಕ್ಷರು
  • ಸಿರಿಲ್ ರಾಮಫೋಸಾ - ದಕ್ಷಿಣ ಆಫ್ರಿಕಾ ಅಧ್ಯಕ್ಷರು
  • ಪ್ರಬೋವೊ ಸುಬಿಯಾಂಟೊ - ಇಂಡೋನೇಷ್ಯಾ ಅಧ್ಯಕ್ಷರು
  • ಆಂಟೋನಿಯೊ ಗುಟೆರೆಸ್ - ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ
  • ಪ್ರಧಾನಿ ಮೋದಿಯವರ ಮಹತ್ವದ ಸಭೆಗಳ ವೇಳಾಪಟ್ಟಿ ಇಲ್ಲಿದೆ
  • ಶೃಂಗಸಭೆಯ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ಹಲವು ರಾಷ್ಟ್ರಗಳ ನಾಯಕರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಶುಕ್ರವಾರ (ಸೆಪ್ಟೆಂಬರ್ 11, 2026):

  • ಮಧ್ಯಾಹ್ನ 3:30ಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಚರ್ಚೆ.
  • ಸಂಜೆ 6:15ಕ್ಕೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರೊಂದಿಗೆ ಮಾತುಕತೆ.
  • ಶನಿವಾರ (ಸೆಪ್ಟೆಂಬರ್ 13, 2026):
  • ಸಂಜೆ 6:00 ಗಂಟೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮುಖಾಮುಖಿ ಭೇಟಿ.
  • ಕ್ಸಿ ಜಿನ್‌ಪಿಂಗ್ ಜೊತೆ 400 ಅಧಿಕಾರಿಗಳ ನಿಯೋಗ: ಗಡಿ ಶಾಂತಿಗೆ ಮೊದಲ ಆದ್ಯತೆ

ರಾಯಿಟರ್ಸ್ ವರದಿಯ ಪ್ರಕಾರ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸುಮಾರು 400 ಹಿರಿಯ ಅಧಿಕಾರಿಗಳ ಬೃಹತ್ ನಿಯೋಗವೇ ಭಾರತಕ್ಕೆ ಆಗಮಿಸುತ್ತಿದೆ. 2019 ರಲ್ಲಿ ಭಾರತಕ್ಕೆ ಬಂದಿದ್ದ ನಿಯೋಗಕ್ಕಿಂತ ಇದು ದುಪ್ಪಟ್ಟು ದೊಡ್ಡದಾಗಿದೆ.

ಸಭೆಯಲ್ಲಿ ಚರ್ಚೆಯಾಗುವ ಮುಖ್ಯ ವಿಚಾರಗಳು

  • ಭಾರತ ಮತ್ತು ಚೀನಾ ನಡುವಿನ ವಾಸ್ತವ ನಿಯಂತ್ರಣ ರೇಖೆಯ (LAC) ಗಡಿ ಪರಿಸ್ಥಿತಿಯ ಪರಿಶೀಲನೆ.
  • ಗಡಿಯಲ್ಲಿ ಶಾಂತಿ ನೆಲೆಸಿದರೆ ಮಾತ್ರ ಉಭಯ ದೇಶಗಳ ಬಾಂಧವ್ಯ ಸುಧಾರಿಸಲು ಸಾಧ್ಯ ಎಂಬ ಭಾರತದ ಸ್ಪಷ್ಟ ಸಂದೇಶ.
  • ಪರಸ್ಪರ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ ಬಗ್ಗೆ ಸಮಾಲೋಚನೆ.

(ವಿಶೇಷವೆಂದರೆ, ಆಗಸ್ಟ್ 2025 ಮತ್ತು ಆಗಸ್ಟ್ 2026 ರಲ್ಲಿ ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ ಮಾತುಕತೆಯ ನಂತರ ಗಡಿಯಲ್ಲಿ ಪ್ರಮುಖ ಬೆಳವಣಿಗೆಗಳು ನಡೆದಿವೆ. ಈ ತಿಂಗಳ ಆರಂಭದಲ್ಲಿ LAC ಉದ್ದಕ್ಕೂ ಸೇನಾ ಕಮಾಂಡರ್ ಮಟ್ಟದ ಧ್ವಜ ಸಭೆಗಳು ನಡೆದಿವೆ. ಸೆಪ್ಟೆಂಬರ್ 6 ರಂದು ಅರುಣಾಚಲ ಪ್ರದೇಶದ ಭಾರತದ ಕಡೆಯ ವಾಚಾದಲ್ಲಿ ಮತ್ತು ಸೆಪ್ಟೆಂಬರ್ 7 ರಂದು ಚೀನಾದ ಕಡೆಯ ದಮೈನಲ್ಲಿ ಯಶಸ್ವಿ ಸಭೆಗಳು ಪೂರ್ಣಗೊಂಡಿವೆ).

ಜಂಟಿ ಹೇಳಿಕೆಗೆ ಸವಾಲು

ಸದ್ಯ ವಿಶ್ವದಲ್ಲಿ ರಷ್ಯಾ-ಉಕ್ರೇನ್ ಯುದ್ಧ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಹಾರ್ಮುಜ್ ಜಲಸಂಧಿಯ ದಿಗ್ಬಂಧನ ಮತ್ತು ಅಮೆರಿಕದಲ್ಲಿ ಟ್ರಂಪ್ ಅವರ ಸುಂಕ ನೀತಿಗಳಿಂದಾಗಿ ಜಾಗತಿಕ ಆರ್ಥಿಕತೆ ಒತ್ತಡದಲ್ಲಿದೆ. ಬ್ರಿಕ್ಸ್ ಕೂಟದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೂ ಎಲ್ಲ ದೇಶಗಳ ಒಮ್ಮತ ಮುಖ್ಯ. ಆದರೆ ಮಧ್ಯಪ್ರಾಚ್ಯದ ಬಿಕ್ಕಟ್ಟಿನ ವಿಚಾರದಲ್ಲಿ ಇರಾನ್ ಮತ್ತು ಯುಎಇ (UAE) ನಡುವೆ ಭಿನ್ನಾಭಿಪ್ರಾಯಗಳಿರುವುದರಿಂದ, ಶೃಂಗಸಭೆಯ ಕೊನೆಯಲ್ಲಿ ಎಲ್ಲ ದೇಶಗಳು ಒಪ್ಪುವ ‘ಜಂಟಿ ಹೇಳಿಕೆ’ ಹೊರಬರುತ್ತದೆಯೇ ಎಂಬ ಕುತೂಹಲ ಮೂಡಿದೆ.

ಬ್ರಿಕ್ಸ್ ಸಂಘಟನೆಯ ಬಲವೆಷ್ಟು?

ಮೊದಲು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (BRICS) ಮಾತ್ರ ಇದ್ದ ಈ ಕೂಟಕ್ಕೆ 2024 ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ ಮತ್ತು ಸೌದಿ ಅರೇಬಿಯಾ ಸೇರಿದವು. 2025 ರಲ್ಲಿ ಇಂಡೋನೇಷ್ಯಾ ಕೂಡ ಸದಸ್ಯತ್ವ ಪಡೆಯಿತು. ಇದಲ್ಲದೆ ಕಳೆದ ವರ್ಷ ಬೆಲಾರಸ್, ಬೊಲಿವಿಯಾ, ಕಝಾಕಿಸ್ತಾನ್, ಕ್ಯೂಬಾ, ಮಲೇಷ್ಯಾ, ನೈಜೀರಿಯಾ, ಥೈಲ್ಯಾಂಡ್, ಉಗಾಂಡಾ, ಉಜ್ಬೇಕಿಸ್ತಾನ್ ಮತ್ತು ವಿಯೆಟ್ನಾಂ ದೇಶಗಳು ಬ್ರಿಕ್ಸ್‌ನ ಪಾಲುದಾರ ರಾಷ್ಟ್ರಗಳಾಗಿವೆ.

ವಿಶ್ವದ ಒಟ್ಟು ಜನಸಂಖ್ಯೆಯ ಶೇಕಡಾ 49.5% ರಷ್ಟು ಜನರು ಈ ದೇಶಗಳಲ್ಲಿದ್ದಾರೆ. ಜಾಗತಿಕ ಜಿಡಿಪಿಯ ಸುಮಾರು ಶೇಕಡಾ 40% ಪಾಲು ಈ ದೇಶಗಳದ್ದಾಗಿದೆ. ಜಾಗತಿಕ ವ್ಯಾಪಾರದ ಶೇಕಡಾ 26% ವಹಿವಾಟು ಈ ಕೂಟದ ಮೂಲಕವೇ ನಡೆಯುತ್ತದೆ. ವಿಶ್ವ ನಾಯಕರನ್ನು ಸ್ವಾಗತಿಸಲು ನವದೆಹಲಿಯ ‘ಭಾರತ್ ಮಂಟಪ’ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಸಿದ್ಧತೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಇನ್‌ಸ್ಟಾಗ್ರಾಮ್ ಮತ್ತು 'ಎಕ್ಸ್' (ಟ್ವಿಟರ್) ಖಾತೆಗಳಲ್ಲಿ 30 ಸೆಕೆಂಡುಗಳ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ "ಬ್ರಿಕ್ಸ್ 2026 ಕ್ಕೆ ಎಲ್ಲವೂ ಸಿದ್ಧವಾಗಿದೆ" ಎಂದು ಕ್ಯಾಪ್ಷನ್ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಗಳಿಸುತ್ತಿದೆ.