ಸೆಪ್ಟೆಂಬರ್ 28 ರಿಂದ 30ರ ವರೆಗೆ ಯುಎಫ್‌ಬಿಯು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದ ಗ್ರಾಹಕರಿಗೆ ತೊಂದರೆಯಾಗದಿರಲು ಸೆಪ್ಟೆಂಬರ್ 27ರ ಭಾನುವಾರದಂದು ಎಲ್ಲಾ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಹಕರು ಮುಂಚಿತವಾಗಿ ವಹಿವಾಟುಗಳನ್ನು ಯೋಜಿಸಲು ಬ್ಯಾಂಕುಗಳು ಸಲಹೆ ನೀಡಿವೆ.
ದೆಹಲಿ: ಇದೇ ಸೆಪ್ಟೆಂಬರ್ 28 ರಿಂದ 30ರ ವರೆಗೆ ಬ್ಯಾಂಕ್ ಮುಷ್ಕರ ಇರುವ ಹಿನ್ನೆಲೆಯಲ್ಲಿ, ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಎದುರಾಗಲಿದೆ. ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಪ್ರಸ್ತಾಪಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಇಂಡಿಯನ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಬ್ಯಾಂಕುಗಳು ಪ್ರಸ್ತಾವಿತ ಮುಷ್ಕರಕ್ಕೆ ಮುಂಚಿತವಾಗಿ ಗ್ರಾಹಕರಿಗೆ ಸಲಹೆಗಳನ್ನು ನೀಡಿದ್ದು, ಗ್ರಾಹಕರು ಶಾಖೆ-ಅವಲಂಬಿತ ವಹಿವಾಟುಗಳನ್ನು ಮುಂಚಿತವಾಗಿ ಯೋಜಿಸುವಂತೆ ಕೇಳಿಕೊಂಡಿವೆ.
27ರಂದು ಬ್ಯಾಂಕ್ ಓಪನ್
ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಸೆಪ್ಟೆಂಬರ್ 27 ರ ಭಾನುವಾರದಂದು ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆ ಆದೇಶಿಸಿದೆ. ಈ ಕುರಿತು ಖುದ್ದು ಹಣಕಾಸು ಸಚಿವಾಲಯ ಮಾಹಿತಿ ನೀಡಿದ್ದು, 'ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಈ ತಿಂಗಳ 28 ರಿಂದ 30 ರವರೆಗೆ ಕರೆ ನೀಡಿರುವ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಈ ಮುಷ್ಕರವು ಸೆಪ್ಟೆಂಬರ್ 26 ಮತ್ತು 27 ರ ವಾರಾಂತ್ಯದ ರಜಾದಿನಗಳ ನಂತರವೇ ಆರಂಭವಾಗಲಿದೆ. ಭಾನುವಾರದಂದು ಎಲ್ಲಾ ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂ-ಸಂಪರ್ಕಿತ ಶಾಖೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ ಎಂದು ಅದು ತಿಳಿಸಿದೆ. ಪ್ರಸ್ತಾಪಿತ ಮುಷ್ಕರವನ್ನು ಮುಂದೂಡುವಂತೆ ಸರ್ಕಾರ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳು ಸಂಘಟನೆಗಳಿಗೆ ಮನವಿ ಮಾಡಿವೆ ಹಾಗೂ ಅಗತ್ಯ ಬ್ಯಾಂಕಿಂಗ್ ಸೇವೆಗಳು ಯಾವುದೇ ಅಡಚಣೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡಿವೆ ಎಂದು ಸಚಿವಾಲಯ ಹೇಳಿದೆ.
ಏಳು ಒಕ್ಕೂಟಗಳಿಂದ ನೋಟಿಸ್
ಯುಎಫ್‌ಬಿಯು ನೀಡಿದ ಮುಷ್ಕರ ಸೂಚನೆಯು ಸೆಪ್ಟೆಂಬರ್ 28-30 ಮತ್ತು ಅಕ್ಟೋಬರ್ 26, 2026 ರಿಂದ ನಿರಂತರ ಮುಷ್ಕರವನ್ನು ಒಳಗೊಂಡಿದೆ. ಎಐಬಿಇಎ, ಎಐಬಿಒಸಿ, ಎನ್‌ಸಿಬಿಇ, ಎಐಬಿಒಎ, ಬಿಇಎಫ್‌ಐ, ಐಎನ್‌ಬಿಇಎಫ್ ಮತ್ತು ಐಎನ್‌ಬಿಒಸಿ - ಎಂಬ ಏಳು ಒಕ್ಕೂಟಗಳ ಪರವಾಗಿ ನೋಟಿಸ್ ನೀಡಲಾಗಿದೆ ಎಂದು ಎಸ್‌ಬಿಐನ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ ಮತ್ತು ಮುಷ್ಕರ ನಡೆದರೆ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.


