ರಾಜಕೀಯ ಕೋಲಾಹಗಳು ಸೃಷ್ಟಿಯಾಗಿದೆ. ಒಂದೇ ಬಾರಿ 8 ಶಾಸಕರು ಬಿಜೆಪಿ ಸೇರಿಕೊಂಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಪ್ರಮುಖ ಭರವಸೆ ನೀಡಿದ್ದಾರೆ. ಕಿರಣ್ ರಿಜಿಜು ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ನವದೆಹಲಿ (ಸೆ.23) ವಿಧಾನಸಭೆ ಚುನಾವಣೆ ಸೇರಿದಂತೆ ಹಲವು ಚುನಾವಣಗೆಳು ಸಮೀಪಿಸುತ್ತಿದೆ. ಒಂದೆಡೆ ಬಿಜೆಪಿ ಮತ್ತಷ್ಟು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಬಯಸಿದರೆ, ಇತ್ತ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಸಂಘಟನೆ ಬಲಪಡಿಸಿಕೊಳ್ಳಲು ಮುಂದಾಗಿದೆ. ಇದರ ನಡುವೆ ಅಸಮಾಧಾನಗಳಿಂದ ನಾಯಕರ ರಾಜೀನಾಮೆಗಳು ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆಯಲ್ಲಿ 8 ಶಾಸಕರು ಬಿಜೆಪಿ ಸೇರಿಕೊಂಡಿದ್ದಾರೆ. ಹೌದು ಮೆಘಾಲಯದ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ(ಯುಡಿಪಿ) 12 ಶಾಸಕರ ಪೈಕಿ 8 ಶಾಸಕರು ಮೆಘಾಲಯ ಬಿಜೆಪಿ ಸೇರಿಕೊಂಡಿದ್ದಾರೆ.

ಬಿಜೆಪಿ ಅಭಿವೃದ್ಧಿಗೆ ಮನಸೋತ ನಾಯಕರು

ಖೈರಮನ್ ಶೈಲಾ ನಾಯಕತ್ವದ ಯುಡಿಪಿ ಪಕ್ಷದ 8 ಶಾಸಕರು ಬಿಜೆಪಿ ಸೇರಿಕೊಂಡಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಮೂಲಭೂತ ಸೌಕರ್ಯಗಳಿಂದ ಪ್ರೇರಣೆಗೊಂಡಿರುವ ಯುಡಿಪಿ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಇದೇ ವೇಳೆ ನಾಯಕರು ತಮ್ಮ ಕೆಲ ಬೇಡಿಕೆಗಳನ್ನು ಈಡೇರಿಸುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ. ಕಲ್ಲಿದ್ದಲು , ಖಾಸಿ ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ಸೇರಿದಂತೆ ಕೆಲ ಬೇಡಿಕೆಗಳನ್ನು ಅಮಿತ್ ಶಾ ಮುಂದಿಟ್ಟಿದ್ದಾರೆ.

ಯುಡಿಪಿ ಪಾರ್ಟಿಯ 12 ಶಾಸಕರ ಪೈಕಿ ಇದೀಗ 8 ಮಂದಿ ಬಿಜೆಪಿ ಸೇರಿಕೊಂಡಿದ್ದಾರೆ. ಸೆಪ್ಟೆಂಬರ್ 12 ರಂದು ಯುಡಿಪಿಯ ಮಾಜಿ ಶಾಸಕ ಡಾ.ಜೆಮಿನೋ ಮಾವ್ಥೋ ಬಿಜೆಪಿ ಸೇರಿಕೊಂಡಿದ್ದರು. ಇದೀಗ 8 ಮಂದಿ ಸೇರಿಕೊಂಡಿದ್ದಾರೆ. ಪರಿಣಾಮ ಮೆಘಾಲಯದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠಗೊಂಡಿದೆ. ಈ ಕುರಿತು ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ಬಿಜೆಪಿ ನಾಯಕ ಸಂಬಿತ್ ಪಾತ್ರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಬಿಜೆಪಿ ಸಂಖ್ಯಾಬಲ 10ಕ್ಕೆ ಏರಿಕೆ

ಯುಡಿಪಿಯ 8 ಶಾಸಕರು ಬಿಜೆಪಿ ಸೇರಿಕೊಂಡಿರುವುದು ಉತ್ತಮ ರಾಜಕೀಯ ಬೆಳವಣಿಗೆ. ಈ ಬೆಳವಣಿಗೆ ಕೇವಲ ಮೆಘಾಲಯ ಮಾತ್ರವಲ್ಲ ದೇಶದ ರಾಜಕೀಯದಲ್ಲೂ ಮಹತ್ವದ ಬೆಳವಣಿಗೆ, ಈಶಾನ್ಯ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಅವಿರತ ಪ್ರಯತ್ನಿಸುತ್ತಿದೆ. ಇದೀಗ 8 ಯುಡಿಪಿ ಶಾಸಕರು ಬಿಜೆಪಿ ಸೇರ್ಪಡೆಗೊಂಡಿರುವುದು ಬಿಜೆಪಿ ಬಲ ಹೆಚ್ಚಿಸಿದೆ ಎಂದು ಕಿರಣ್ ರಿಜಿಜು ಹೇಳಿದ್ದಾರೆ. 8 ಶಾಸಕರ ಸೇರ್ಪಡೆಯಿಂದ ಮೆಘಾಲಯದ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲವನ್ನು 10ಕ್ಕೆ ಏರಿಸಿದೆ.

ಮೆಘಾಲಯ ಸೇರಿದಂತೆ ಈಶಾನ್ಯ ರಾಜ್ಯದಲ್ಲಿ ತೀವ್ರಗತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಡೆಯುತ್ತಿದೆ. ಬಿಜೆಪಿಯ ಅಭಿವೃದ್ಧಿ ಆಡಳಿತದಿಂದ ನಾಯಕರು ಬಿಜೆಪಿಯತ್ತ ಬರುತ್ತಿದ್ದಾರೆ. ಬಿಜೆಪಿಯ ಅಭಿವೃದ್ಧಿ ಆಡಳಿತ ನೋಡಿ ಪಕ್ಷಕ್ಕೆ ಆಗಮಿಸುವ ನಾಯಕರಿಗೆ ಸ್ವಾಗತ ಎಂದು ಕಿರಣ್ ರಿಜಿಜು ಹೇಳಿದ್ದಾರೆ.