ವಿಷಕಾರಿ ಧತ್ತೂರಾ ಹಣ್ಣು ಮತ್ತು ಬೀಜಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್ ಕಂಪನಿಗಳ ಆಹಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತಾ ಇಲಾಖೆಯು ಈ ಕಠಿಣ ಕ್ರಮ ಕೈಗೊಂಡಿದೆ.

ಬೆಂಗಳೂರು: ಇ-ಕಾಮರ್ಸ್ ದಿಗ್ಗಜ ಕಂಪನಿಗಳಾದ ಅಮೆಜಾನ್ (Amazon), ಸ್ವಿಗ್ಗಿ ಇನ್‌ಸ್ಟಾಮಾರ್ಟ್ (Swiggy Instamart) ಮತ್ತು ಬಿಗ್‌ಬಾಸ್ಕೆಟ್ (BigBasket) ಸಂಸ್ಥೆಗಳಿಗೆ ಆಹಾರ ಸುರಕ್ಷತಾ ಇಲಾಖೆ ಬಿಗ್ ಶಾಕ್ ನೀಡಿದೆ. ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿಯಾದ ವಿಷಕಾರಿ 'ಧತ್ತೂರಾ' (Dhatura) ಹಣ್ಣು ಮತ್ತು ಬೀಜಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಮೂರೂ ಕಂಪನಿಗಳ ಆಹಾರ ಪರವಾನಗಿಯನ್ನು (Food Licence) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಏನಿದು ಪ್ರಕರಣ?

ಇತ್ತೀಚೆಗೆ ಆಹಾರ ಇಲಾಖೆಯ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಈ ಇ-ಕಾಮರ್ಸ್ ವೇದಿಕೆಗಳ ಮೂಲಕ ಅತ್ಯಂತ ವಿಷಕಾರಿ ಎಂದು ಪರಿಗಣಿಸಲಾದ ಧತ್ತೂರಾ ಹಣ್ಣು ಮತ್ತು ಬೀಜಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ ಈ ಕಂಪನಿಗಳ ಗೋದಾಮುಗಳಲ್ಲಿ ಧತ್ತೂರಾ ಪ್ಯಾಕೆಟ್‌ಗಳನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿತ್ತು. ಅಚ್ಚರಿಯ ವಿಷಯವೆಂದರೆ ಈ ವಿಷಕಾರಿ ಬೀಜಗಳ ಪ್ಯಾಕೆಟ್‌ಗಳ ಮೇಲೆ ಆಹಾರ ಪರವಾನಗಿ/ನೋಂದಣಿ ಸಂಖ್ಯೆಯನ್ನು ಕೂಡ ನಮೂದಿಸಲಾಗಿತ್ತು.

ಕಂಪನಿಗಳ ಸಮಜಾಯಿಷಿ ಏನು?

ಈ ವಿಚಾರವಾಗಿ ವಿವರಣೆ ಕೇಳಿ ನೋಟಿಸ್ ನೀಡಿದ್ದಾಗ ಕಂಪನಿಗಳು ನೀಡಿದ ಉತ್ತರಗಳು ಇಂತಿವೆ.

ಅಮೆಜಾನ್: ಈವರೆಗೆ ಯಾವುದೇ ಅಧಿಕೃತ ಉತ್ತರ ಸಲ್ಲಿಸಿಲ್ಲ.

ಸ್ವಿಗ್ಗಿ ಇನ್‌ಸ್ಟಾಮಾರ್ಟ್: ತಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಯಾವುದೇ ದಾಖಲೆ ನೀಡದೆ, ಕಾಲಾವಕಾಶ ಕೋರಿದೆ.

ಬಿಗ್‌ಬಾಸ್ಕೆಟ್: ಧತ್ತೂರಾ ಮಾರಾಟವಾಗುತ್ತಿರುವುದನ್ನು ಒಪ್ಪಿಕೊಂಡಿದೆ ಮತ್ತು ಸದ್ಯ ಮಾರಾಟ ತಡೆದಿರುವುದಾಗಿ ತಿಳಿಸಿದೆ. ಇದು ಮನುಷ್ಯರ ಬಳಕೆಗೆ ಅಲ್ಲ (Not for human consumption) ಎಂದು ಲೇಬಲಿಂಗ್ ಸರಿಪಡಿಸುವುದಾಗಿ ಹೇಳಿದೆ. ಆದರೆ ಇಲಾಖೆಯು ಈ ಸಮಜಾಯಿಷಿಯನ್ನು ಒಪ್ಪಿಲ್ಲ.

ಆಹಾರ ಇಲಾಖೆಯ ಕಠಿಣ ಆದೇಶ

ಮುಂದಿನ ಆದೇಶದವರೆಗೆ ಈ ಕಂಪನಿಗಳ ಫುಡ್ ಲೈಸೆನ್ಸ್ ಅಮಾನತುಗೊಳಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ಆದೇಶ ಪಾಲಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕಂಪನಿಗಳಿಗೆ ಧತ್ತೂರಾ ಪೂರೈಕೆ ಮಾಡುತ್ತಿದ್ದ ಮಾರಾಟಗಾರರ ಪರವಾನಗಿಯನ್ನೂ ಅಮಾನತುಗೊಳಿಸಲಾಗಿದೆ. ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವ ಇಂತಹ ಅಕ್ರಮಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಧತ್ತೂರಾ ಹಣ್ಣು ಅತ್ಯಂತ ವಿಷಕಾರಿಯಾಗಿದ್ದು, ಇದನ್ನು ಆಹಾರ ಪದಾರ್ಥವಾಗಿ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ ಇ-ಕಾಮರ್ಸ್ ವೇದಿಕೆಗಳ ಮೇಲೆ ಕೈಗೊಂಡಿರುವ ಈ ಕ್ರಮವು ಇಡೀ ಉದ್ಯಮದಲ್ಲಿ ಸಂಚಲನ ಮೂಡಿಸಿದೆ.