ಹೈದರಾಬಾದ್‌ನಲ್ಲಿ, ಬಥಿನಿ ಕುಟುಂಬವು ನೂರಾರು ವರ್ಷಗಳಿಂದ ಆಸ್ತಮಾ ರೋಗಿಗಳಿಗೆ ವಿಶೇಷ 'ಮೀನಿನ ಪ್ರಸಾದ'ವನ್ನು ವಿತರಿಸುತ್ತಿದೆ. ಪ್ರತಿ ವರ್ಷ ಮೃಗಶಿರ ಕಾರ್ತಿ ಹಬ್ಬದಂದು ನಡೆಯುವ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸಿ, ಗಿಡಮೂಲಿಕೆಗಳೊಂದಿಗೆ ನೀಡಲಾಗುವ ಈ ಜೀವಂತ ಮೀನಿನ ಔಷಧಿಯನ್ನು ಸ್ವೀಕರಿಸಿ ಆರೋಗ್ಯ ಸುಧಾರಿಸಿಕೊಂಡಿದ್ದಾರೆ.
ಕೆಲವೊಮ್ಮೆ ಕೋಟ್ಯಂತರ ರೂಪಾಯಿ ಕೊಟ್ಟು ದೊಡ್ಡ ದೊಡ್ಡ ಡಿಗ್ರಿ ಪಡೆದ ವೈದ್ಯಲೋಕವನ್ನೇ ಅಚ್ಚರಿಗೊಳಿಸುವ ಸಾಂಪ್ರದಾಯಕ ಔಷಧಿಗಳು ನಮ್ಮಲ್ಲಿಯೇ ಸಿಗುವುದು ಇದೆ. ಭಾರತದಲ್ಲಿಯೇ ಹುಟ್ಟಿರುವ ಆಯುರ್ವೇದ ವೈದ್ಯಕೀಯವೇ ಇದಕ್ಕೆ ಸಾಕ್ಷಿಯಾಗಿದೆ. ವಿದೇಶಗಳಲ್ಲಿ ಈ ಪದ್ಧತಿ ಜನಪ್ರಿಯತೆ ಪಡೆದ ಮೇಲೆ ಭಾರತೀಯರು ಇದೀಗ ಅದರತ್ತ ಗಮನ ಹರಿಸುತ್ತಿರುವುದು ಹಾಸ್ಯಾಸ್ಪದವಾಗಿದ್ದರೂ ವಿದೇಶಿ ಮನಸ್ಥಿತಿ ಭಾರತೀಯರಲ್ಲಿ ಎಷ್ಟರಮಟ್ಟಿಗೆ ಮನೆಮಾಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಅದೇ ರೀತಿ ಯೋಗ, ಧ್ಯಾನದ ವಿಷಯದಲ್ಲಿಯೂ ಆಗುತ್ತಿದೆ. ಆಯುರ್ವೇದದ ಹೊರತಾಗಿಯೂ ಕೆಲವೊಂದು ಸಾಂಪ್ರದಾಯಿಕ ಔಷಧ ಪದ್ಧತಿಗಳಿಗೆ ಭಾರತ ಹೆಸರುವಾಸಿಯಾಗಿದ್ದು ಇದೆ.
ಮೀನಿನ ಪ್ರಸಾದ
ಅದರಲ್ಲಿ ಒಂದು ಈ ಮೀನಿನ ಪ್ರಸಾದ. ಪ್ರಸಾದ ಎಂದು ಔಷಧವನ್ನು ತೆಗೆದುಕೊಂಡರೆ ಖಂಡಿತವಾಗಿಯೂ ಅದು ಜಾದೂ ಮಾಡುತ್ತದೆ. ಪ್ರಸಾದ ಎನ್ನುವ ಶಬ್ದಕ್ಕೇ ಅಷ್ಟೊಂದು ಪ್ರಾಮುಖ್ಯತೆ ಇದೆ. ಆದರೆ ಪ್ರಸಾದ ಎನ್ನುವ ವಿಷಯ ಬಂದಾಗ ಅಲ್ಲಿ ಮೀನು, ಮಾಂಸಕ್ಕೆ ಜಾಗವೇ ಇಲ್ಲ. ಆದರೆ ಇಲ್ಲಿ ಹೇಳ್ತಿರೋ ಪ್ರಸಾದವೇ ಬೇರೆ.ಅದು ಮೀನಿನ ಪ್ರಸಾದ. ಈ ಪ್ರಸಾದ ಸೇವನೆಗಾಗಿ ಲಕ್ಷ ಲಕ್ಷ ಮಂದಿ ಸತತ ಎರಡು ದಿನಗಳವರೆಗೆ ನಿದ್ದೆ, ಊಟ ಬಿಟ್ಟು ಕ್ಯೂ ನಿಂತರು ಎಂದರೆ ನಂಬುವಿರಾ? ನಂಬಲೇಬೇಕು. ಇದು ನಡೆದಿರುವುದು ಹೈದರಾಬಾದ್‌ನಲ್ಲಿ.
1.2 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಸಾದ
ಇಲ್ಲಿಯ ನುಮಾಯಿಶ್ ಮೈದಾನದಲ್ಲಿ 1.2 ಲಕ್ಷಕ್ಕೂ ಹೆಚ್ಚು ಜನರು ಮೀನು ಪ್ರಸಾದವನ್ನು ಸ್ವೀಕರಿಸಿದರು. ಜನರ ಕಾಲ್ತುಳಿತ ಆಗದಂತೆ ಭಾರಿ ಪೊಲೀಸ್ ಭದ್ರತೆಯನ್ನೂ ನಿಗದಿ ಪಡಿಸಲಾಗಿತ್ತು. ಮಳೆಯ ಹೊರತಾಗಿಯೂ, ಹೆಚ್ಚಿನ ಜನರು ಹಾಜರಿದ್ದರು. ವಿಶೇಷವಾಗಿ ಹೊರರಾಜ್ಯಗಳಿಗೆ ಭೇಟಿ ನೀಡಿದವರು ಇದ್ದರೆ, ಕೆಲವೊಬ್ಬರು ಬೇರೆ ದೇಶಗಳಿಂದಲೂ ಬಂದಿದ್ದರು. ಅಷ್ಟಕ್ಕೂ ಈ ಮೀನಿನ ಪ್ರಸಾದ ಇರುವುದು ಆಸ್ತಮಾ ರೋಗಕ್ಕೆ. ನೂರಾರು ವರ್ಷಗಳಿಂದ ಆಸ್ತಮಾ ರೋಗಿಗಳಿಗೆ ವರದಾನವಾಗಿದೆ ಈ ಒಂದು ಜಾತಿಯ ಮೀನು. ಅದನ್ನು ಬಾಯಿಗೆ ಹಾಕಲಾಗುವುದು. ಇದರಿಂದ ಹಲವು ವರ್ಷಗಳಿಂದ ಮಾತ್ರೆ ನುಂಗಿ ನುಂಗಿ ಪ್ರಯೋಜನ ಆಗದೇ ಇರುವ ರೋಗಿಗಳು ಕೂಡ ಇಲ್ಲಿಗೆ ಬಂದು ಮೀನಿನ ಪ್ರಸಾದಸೇವಿಸಿ ಹುಷಾರು ಮಾಡಿಕೊಂಡವರಿದ್ದಾರೆ.ಅದೇ ಕಾರಣಕ್ಕೆ ಇಲ್ಲಿ ಪ್ರತಿವರ್ಷವೂ ಜಾತ್ರೆಯೇ ನಡೆಯುತ್ತದೆ.
ಬಥಿನಿ ಕುಟುಂಬ
ಕಳೆದ 80 ವರ್ಷಗಳಿಂದ ಬಥಿನಿ ಕುಟುಂಬದವರು ಇಲ್ಲಿ ಮೀನಿನ ಪ್ರಸಾದ ವಿತರಣೆ ಮಾಡುತ್ತಿದ್ದಾರೆ. ಅಮರನಾಥ್ ಗೌಡ್ ಎನ್ನುವವರು, 'ನಮ್ಮ ಕುಟುಂಬವು ಮೀನು ಪ್ರಸಾದವನ್ನು ನೀಡುತ್ತಿದೆ. ಈ ಮೀನು ಪ್ರಸಾದವನ್ನು ಸೇವಿಸಿದ ನಂತರ, ಶ್ವಾಸನಾಳದ ಕಾಯಿಲೆಗಳಿಂದ ಬಳಲುತ್ತಿರುವವರು ನಿರ್ದಿಷ್ಟ ಆಹಾರವನ್ನು ಅನುಸರಿಸಬೇಕಾಗುತ್ತದೆ. ಮೀನು ಪ್ರಸಾದವನ್ನು ತಯಾರಿಸಲು, ಯುಗಾದಿಗೆ ಮುಂಚಿತವಾಗಿ ನಾವು ದೇಶಾದ್ಯಂತ ಗಿಡಮೂಲಿಕೆಗಳನ್ನು ಪಡೆದುಕೊಳ್ಳುತ್ತೇವೆ' ಎಂದರು. ಮೃಗಶಿರ ಕಾರ್ತಿ ಹಬ್ಬದ ಶುಭ ದಿನದಂದು ಕಳೆದ 180 ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ಮೀನು ಪ್ರಸಾದ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಾಗಿ ಬಥಿನಿ ಕುಟುಂಬ ತಿಳಿಸಿದೆ. "ನಾವು ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದ್ದೇವೆ ಮತ್ತು ಕೊನೆಯ ವ್ಯಕ್ತಿ ಅದನ್ನು ಸ್ವೀಕರಿಸುವವರೆಗೆ ಅಗತ್ಯ ಪ್ರಸಾದವನ್ನು ವ್ಯವಸ್ಥೆ ಮಾಡುತ್ತಿದ್ದೇವೆ" ಎಂದು ಬಥಿನಿ ಶಿವ ಶಂಕರ್ ಗೌಡ್ ಹೇಳಿದರು.


