ಓವರ್ ಡೋಸ್ ಅಂದಾಗ ನಮಗೆ ನೆನಪಾಗೋದು ಡೆಗ್ಸ್. ಆದ್ರೆ ಡ್ರಗ್ಸ್ ಬದಲು ನೀವು ಮಾತ್ರೆಗಳನ್ನು ಅತಿಯಾಗಿ ತೆಗೆದುಕೊಂಡಾಗ್ಲೂ ಸಮಸ್ಯೆ ಕಾಡುತ್ತದೆ. ಓವರ್ ಡೋಸ್ ಗೆ ಕಾರಣವಾಗುವ ಮಾತ್ರೆಗಳ ವಿವರ ಇಲ್ಲಿದೆ.
ಓವರ್ಡೋಸ್ ಎಂಬ ಪದ ಕೇಳ್ತಿದ್ದಂತೆ ಡ್ರಗ್ಸ್ ಇಲ್ಲ ನಶೆಗೆ ನಾವು ಲಿಂಕ್ ಮಾಡ್ತೇವೆ. ಆದ್ರೆ ಓವರ್ಡೋಸ್ ಕೇವಲ ನಶೆ ಪದಾರ್ಥಕ್ಕೆ ಸೀಮಿತವಾಗಿಲ್ಲ. ನಾವು ದಿನನಿತ್ಯ ಬಳಸುವ ಕೆಲವು ಸಾಮಾನ್ಯ ಔಷಧಿಗಳನ್ನು ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಂಡರೂ ಅದು ಅಪಾಯಕಾರಿಯಾಗಬಹುದು.
ಓವರ್ ಡೋಸ್ ಅವೇರ್ ನೆಸ್ ಡೇ
ಪ್ರತಿ ವರ್ಷ ಆಗಸ್ಟ್ 31ರಂದು ಇಂಟರ್ನ್ಯಾಷನಲ್ ಓವರ್ಡೋಸ್ ಅವೇರ್ನೆಸ್ ಡೇ ಆಚರಿಸಲಾಗುತ್ತದೆ. ಔಷಧಿಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ. ತಲೆನೋವು ಬಂದರೆ ಒಂದು ಮಾತ್ರೆ, ಜ್ವರ ಬಂದರೆ ಮತ್ತೊಂದು ಮಾತ್ರೆ ಎಂದು ಕೆಲವರು ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಬೇಗ ಗುಣವಾಗಲಿ ಅಂತ ಡಾಕ್ಟರ್ ಹೇಳಿದ್ದಕ್ಕಿಂತ ಹೆಚ್ಚು ಮಾತ್ರೆಗಳನ್ನು ಸೇವಿಸ್ತಾರೆ. ಈ ಅಭ್ಯಾಸ ಕೆಲ ಸಂದರ್ಭಗಳಲ್ಲಿ ಗಂಭೀರ ಸಮಸ್ಯೆಗೆ ಕಾರಣವಾಗುತ್ತೆ.
ಯಾವ ಮಾತ್ರೆ ಹೆಚ್ಚು ತೆಗೆದುಕೊಂಡ್ರೆ ಅಪಾಯಕಾರಿ
ಪ್ಯಾರಾಸಿಟಮಾಲ್
ಜ್ವರ ಮತ್ತು ದೇಹದ ನೋವಿಗೆ ಸಾಮಾನ್ಯವಾಗಿ ಬಳಸುವ ಔಷಧಿ ಪ್ಯಾರಾಸಿಟಮಾಲ್. ಆದರೆ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇದನ್ನು ತೆಗೆದುಕೊಂಡರೆ ಲಿವರ್ಗೆ ಗಂಭೀರ ಹಾನಿಯಾಗಬಹುದು. ಹೆಚ್ಚು ಪ್ರಮಾಣದ ಸೇವನೆ ಜೀವಕ್ಕೂ ಅಪಾಯ ಉಂಟುಮಾಡಬಹುದು.
ಐಬುಪ್ರೊಫೆನ್
ನೋವು ಮತ್ತು ಊತ ಕಡಿಮೆ ಮಾಡಲು ಬಳಸುವ ಈ ಔಷಧಿಯನ್ನು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡರೆ ಹೊಟ್ಟೆಯಲ್ಲಿ ಉರಿ, ಅಲ್ಸರ್ ಮತ್ತು ಒಳ ರಕ್ತಸ್ರಾವದಂತಹ ಸಮಸ್ಯೆಗಳು ಉಂಟಾಗಬಹುದು. ಹೆಚ್ಚಿನ ಪ್ರಮಾಣವನ್ನು ದೀರ್ಘಕಾಲ ತೆಗೆದುಕೊಂಡರೆ ಕಿಡ್ನಿಗೂ ಹಾನಿಯಾಗುವ ಸಾಧ್ಯತೆ ಇದೆ.
ಕೆಮ್ಮು ಮತ್ತು ನೆಗಡಿ ಸಿರಪ್ಗಳು
ಕೆಲವು ಕಫ್ ಸಿರಪ್ಗಳಲ್ಲಿ ನರಮಂಡಲದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ತಲೆಸುತ್ತು, ಅತಿಯಾದ ನಿದ್ದೆ ಮತ್ತು ಉಸಿರಾಟದ ತೊಂದರೆ ಉಂಟಾಗಬಹುದು. ಮಕ್ಕಳಿಗೆ ಇಂತಹ ಔಷಧಿಗಳನ್ನು ನೀಡುವಾಗ ವಿಶೇಷ ಎಚ್ಚರಿಕೆ ಅಗತ್ಯ.
ಆಸ್ಪಿರಿನ್
ನೋವು ಕಡಿಮೆ ಮಾಡಲು ಮತ್ತು ಕೆಲವು ಹೃದಯ ಸಂಬಂಧಿ ಸಮಸ್ಯೆಗಳಲ್ಲಿ ಬಳಸುವ ಆಸ್ಪಿರಿನ್ ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆಯಲ್ಲಿ ರಕ್ತಸ್ರಾವ ಸೇರಿದಂತೆ ಗಂಭೀರ ಸಮಸ್ಯೆಗಳು ಉಂಟಾಗಬಹುದು.
ನಿದ್ದೆ - ಒತ್ತಡ ಕಡಿಮೆ ಮಾಡುವ ಮಾತ್ರೆ
ನಿದ್ದೆ ಬರಲು ಅಥವಾ ಒತ್ತಡ ಕಡಿಮೆ ಮಾಡಲು ಬಳಸುವ ಕೆಲವು ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೇ ತೆಗೆದುಕೊಳ್ಳುವುದು ಅಪಾಯಕಾರಿ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ನರಮಂಡಲದ ಚಟುವಟಿಕೆ ತುಂಬಾ ನಿಧಾನವಾಗಬಹುದು. ತೀವ್ರ ನಿದ್ದೆ, ಪ್ರಜ್ಞೆ ತಪ್ಪುವುದು ಮತ್ತು ಉಸಿರಾಟದ ಸಮಸ್ಯೆಯೂ ಉಂಟಾಗಬಹುದು.
ರಕ್ತದೊತ್ತಡದ ಔಷಧಿಗಳು
ಬಿಪಿ ಕಡಿಮೆ ಮಾಡಲು ನೀಡುವ ಔಷಧಿಗಳನ್ನು ವೈದ್ಯರು ಸೂಚಿಸಿದ ಪ್ರಮಾಣದಲ್ಲೇ ತೆಗೆದುಕೊಳ್ಳಬೇಕು. ತಪ್ಪಾಗಿ ಹೆಚ್ಚುವರಿ ಮಾತ್ರೆ ತೆಗೆದುಕೊಂಡರೆ ರಕ್ತದೊತ್ತಡ ತುಂಬಾ ಕಡಿಮೆಯಾಗಬಹುದು. ಇದರಿಂದ ತಲೆಸುತ್ತು, ಪ್ರಜ್ಞೆ ತಪ್ಪುವುದು ಮತ್ತು ಹೃದಯದ ಬಡಿತದಲ್ಲಿ ಬದಲಾವಣೆ ಉಂಟಾಗಬಹುದು.
ಖಿನ್ನತೆ ಕಡಿಮೆ ಮಾಡುವ ಔಷಧಿಗಳು
ಡಿಪ್ರೆಶನ್ ಅಥವಾ ಇತರ ಮಾನಸಿಕ ಸಮಸ್ಯೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳ ಪ್ರಮಾಣವನ್ನು ವೈದ್ಯರು ನಿರ್ಧರಿಸುತ್ತಾರೆ. ಸ್ವಂತವಾಗಿ ಡೋಸ್ ಹೆಚ್ಚಿಸಿಕೊಂಡರೆ ಹೃದಯದ ಬಡಿತ ಮತ್ತು ಮೆದುಳಿನ ಕಾರ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಯಾರಿಗೆ ಹೆಚ್ಚು ಅಪಾಯ?
ಮಕ್ಕಳು, ವಯಸ್ಸಾದವರು, ಲಿವರ್ ಅಥವಾ ಕಿಡ್ನಿ ಸಮಸ್ಯೆ ಇರುವವರು ಮತ್ತು ಒಂದೇ ಸಮಯದಲ್ಲಿ ಹಲವು ಔಷಧಿಗಳನ್ನು ತೆಗೆದುಕೊಳ್ಳುವವರಿಗೆ ಔಷಧಿಗಳ ಓವರ್ಡೋಸ್ ಅಪಾಯಕಾರಿ.
• ಔಷಧಿ ತೆಗೆದುಕೊಂಡ ನಂತರ ಅತಿಯಾದ ನಿದ್ದೆ, ವಾಂತಿ, ತಲೆಸುತ್ತು, ಗೊಂದಲ, ಉಸಿರಾಟದ ತೊಂದರೆ ಅಥವಾ ಪ್ರಜ್ಞೆ ತಪ್ಪುವುದು ಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ.
• ಉಸಿರಾಟ ತುಂಬಾ ನಿಧಾನವಾಗುವುದು, ತುಟಿ ಅಥವಾ ಉಗುರುಗಳು ನೀಲಿ ಬಣ್ಣಕ್ಕೆ ತಿರುಗುವುದು, ನಾಡಿ ತುಂಬಾ ವೇಗವಾಗಿ ಅಥವಾ ನಿಧಾನವಾಗಿ ಬಡಿಯುವುದು ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಹಾಯ ಪಡೆಯಬೇಕು.
ಓವರ್ಡೋಸ್ ತಪ್ಪಿಸಲು ಏನು ಮಾಡಬೇಕು?
ಯಾವುದೇ ಔಷಧಿಯನ್ನು ವೈದ್ಯರು ಅಥವಾ ಫಾರ್ಮಸಿಸ್ಟ್ ಸೂಚಿಸಿದ ಪ್ರಮಾಣದಲ್ಲೇ ತೆಗೆದುಕೊಳ್ಳಿ. ಒಂದೇ ಸಮಸ್ಯೆಗೆ ಬೇರೆ ಬೇರೆ ಬ್ರ್ಯಾಂಡ್ ಹೆಸರಿನ ಎರಡು ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ಅವುಗಳಲ್ಲಿ ಒಂದೇ ರೀತಿಯ ಔಷಧಿ ಅಂಶವಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಮಕ್ಕಳ ಕೈಗೆ ಸಿಗದಂತೆ ಔಷಧಿಗಳನ್ನು ಸುರಕ್ಷಿತವಾಗಿ ಇಡಿ. ಹಳೆಯ ಪ್ರಿಸ್ಕ್ರಿಪ್ಷನ್ ನೋಡಿ, ತಿಂಗಳುಗಳ ನಂತರ ಅದೇ ಔಷಧಿಯನ್ನು ಸ್ವಂತವಾಗಿ ಮತ್ತೆ ತೆಗೆದುಕೊಳ್ಳಬೇಡಿ.


